More

    ಆಂಧ್ರಪ್ರದೇಶಕ್ಕೆ ಬಮುಲ್ ಮೆಗಾಡೇರಿಯಿಂದ ವಿಜಯ ವಜ್ರ ಹಾಲು ಪೂರೈಕೆ

    ಕನಕಪುರ: ತಾಲೂಕಿನ ಶಿವನಹಳ್ಳಿ ಸಮೀಪದ ಬಮುಲ್ ಮೆಗಾ ಡೇರಿಯಿಂದ ವಿಜಯ ವಜ್ರ ಹಾಲನ್ನು ಆಂಧ್ರಪ್ರದೇಶಕ್ಕೆ ಸರಬರಾಜು ಮಾಡುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಲಾಯಿತು.

    ಹಾಲು ಸರಬರಾಜು ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಬೆಂಗಳೂರು ಡೇರಿ (ಬಮುಲ್) ಅಧ್ಯಕ್ಷ ನರಸಿಂಹಮೂರ್ತಿ, ಕರೊನಾ ಹಿನ್ನೆಲೆಯಲ್ಲಿ ಬಡ ಕುಟುಂಬಗಳಿಗೆ ರಾಜ್ಯ ಸರ್ಕಾರ ಉಚಿತವಾಗಿ ಹಾಲು ವಿತರಿಸುವ ಯೋಜನೆಯಂತೆ ಆಂಧ್ರಪ್ರದೇಶದಲ್ಲಿಯೂ ವಿತರಣೆಯಾಗುತ್ತಿದೆ. ಅಲ್ಲಿನ ಬೇಡಿಕೆಯಂತೆ ಮೆಗಾ ಡೇರಿಯಿಂದ ವಿಜಯ ವಜ್ರ ಹೆಸರಿನಲ್ಲಿ ಹಾಲು ತಯಾರಿಸಿ ಸರಬರಾಜು ಮಾಡಲಾಗುತ್ತಿದೆ. ಬೆಂಗಳೂರು ಡೇರಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಹಾಲನ್ನು ಖರೀದಿಸಿ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದರು.

    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್‌ರವರ ಸಹಕಾರದಿಂದ ಕರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾದ ಜನರಿಗೆ 2 ಲಕ್ಷ ಲೀಟರ್ ಹಾಲು ಖರೀದಿಸಿ ಉಚಿತವಾಗಿ ನೀಡಲಾಗುತ್ತಿದೆ. ಇದು ರೈತರ ಸಂಕಷ್ಟ ನಿವಾರಣೆಗೆ ಸಹಕಾರಿಯಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.

    40 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೇರಿ ಘಟಕದಲ್ಲಿ ಬೆಣ್ಣೆ ಮತ್ತು ಹಾಲಿನ ಪೌಡರ್ ಸಂಸ್ಕರಣಾ ಗೋದಾಮು ನಿರ್ಮಾಣ ಮಾಡಲಾಗುತ್ತಿದೆ. ಕಳೆದ ವರ್ಷ 18 ಲಕ್ಷ ಲೀಟರ್ ಹಾಲು ಸರಬರಾಜಾಗಿದ್ದು, ಈ ವರ್ಷ 20 ಲಕ್ಷ ಲೀಟರ್ ತಲುಪುವ ಗುರಿ ಹೊಂದಲಾಗಿದೆ.

    ಬಮುಲ್ ನಿರ್ದೇಶಕ ಎಚ್.ಎಸ್.ಹರೀಶ್‌ಕುಮಾರ್ ಮಾತನಾಡಿ, ಬೆಂಗಳೂರು ನಗರದಲ್ಲಿ ಈಗಾಗಲೇ ಗುಣಮಟ್ಟದ ತೃಪ್ತಿ ಫ್ಲೆಕ್ಸ್ ಪ್ಯಾಕೆಟ್ 10 ಸಾವಿರ ಲೀಟರ್ ಸರಬರಾಜಾಗುತ್ತಿದ್ದು, ಘಟಕದಲ್ಲಿ 30 ಕೋಟಿ ರೂ. ವೆಚ್ಚದ ಯಂತ್ರಗಳನ್ನು ಅಳವಡಿಸಿದ್ದು, ಮುಂದಿನ ದಿನಗಳಲ್ಲಿ 25 ಸಾವಿರ ಲೀಟರ್ ಸರಬರಾಜು ಮಾಡಲು ಗುರಿ ಹೊಂದಲಾಗಿದೆ ಎಂದರು.

    ಬೆಂಗಳೂರು ಡೇರಿ ವ್ಯವಸ್ಥಾಪಕ ಡಾ. ಕೆ.ಸ್ವಾಮಿ, ನಿರ್ದೇಶಕ ಎಚ್.ಪಿ.ರಾಜ್‌ಕುಮಾರ್, ಜಂಟಿ ನಿರ್ದೇಶಕ ಕೆ. ಮಂಜುನಾಥ, ಜಿ.ರಾಯ್ಕರ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts