More

    ಪುರಾತನ ಅಡವಿ ಕಲ್ಲಪ್ಪಜ್ಜ ದೇಗುಲ ಪತ್ತೆ

    ಕಲಘಟಗಿ: ಅರೆಮಲೆನಾಡು ಎಂದು ಕರೆಸಿಕೊಳ್ಳುವ ಕಲಘಟಗಿ ತಾಲೂಕಿನಲ್ಲಿ ಒಂದು ಪುರಾತನ ಅಡವಿ ಕಲ್ಲಪ್ಪಜ್ಜನ ದೇವಾಲಯ ಪತ್ತೆಯಾಗಿದೆ.

    ಕಲಘಟಗಿ ಕ್ಷೇತ್ರ ಅಂದಾಜು 12,000 ಹೆಕ್ಟೇರ್ ಅರಣ್ಯ ಪ್ರದೇಶ ಹೊಂದಿದೆ. ದೇವಿಕೊಪ್ಪ, ಸಂಕಟಿಕೊಪ್ಪ, ತಂಬೂರು, ಕೂಡಲಗಿ ಸೇರಿ ಸುತ್ತಲಿನ ಹತ್ತಾರು ಗ್ರಾಮಗಳು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ಈ ಭಾಗಗಳಲ್ಲಿ ಅಲ್ಲದೆ, ತಾಲೂಕಿನ ಅರಣ್ಯ ಪ್ರದೇಶಗಳಲ್ಲಿ ಪುರಾತನ ದೇವಾಲಯ ಹಾಗೂ ಜಕಣಾಚಾರಿಯ ಶಿಲ್ಪಕಲೆಗಳು ಅವಿತುಕೊಂಡು ಕುಳಿತಿವೆ ಎಂದು ಇತಿಹಾಸ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

    11ನೇ ಶತಮಾನದ ಆವಶೇಷ: ಕಲಘಟಗಿಯಿಂದ 18 ಕಿ.ಮೀ ದೂರದಲ್ಲಿರುವ ಬೆಂಡಲಗಟ್ಟಿ ಗ್ರಾಮದ ಅರಣ್ಯ ಪ್ರದೇಶದಲ್ಲಿ 11ನೇ ಶತಮಾನದ ಚಾಲುಕ್ಯ ದೊರೆ 6ನೇ ವಿಕ್ರಮಾದಿತ್ಯನ ಕಾಲದ ದೇವಸ್ಥಾನದ ಅವಶೇಷಗಳು ಪತ್ತೆಯಾಗಿವೆ. ಈ ಪ್ರದೇಶದಲ್ಲಿ ಪ್ರಾಚೀನ ಕಾಲದ ಶ್ರೀ ಕಲ್ಮೇಶ್ವರ ದೇವಸ್ಥಾನ, ಛರಿಕಲ್ಲಿನ ಗೋಡೆ, ಸ್ಥಾವರಲಿಂಗ ಪೀಠ, ಹಳೆಗನ್ನಡ ಲಿಪಿ, ಕಲ್ಯಾಣ ಚಾಲುಕ್ಯರ ಕಾಲದ, ಗೋಶಾಸನ, ನಂದಿ ವಿಗ್ರಹ ಸೇರಿ ಹತ್ತಾರು ಪುರಾವೆಗಳು ಪತ್ತೆಯಾಗಿವೆ.

    ಅಡವಿ ಕಲ್ಲಪ್ಪಜ್ಜ ಎಂದೇ ಹೆಸರಾದ ದೇವಾಲಯ: ತಾಲೂಕಿನ ಬೆಂಡಲಗಟ್ಟಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಪುರಾತನ ಕಾಲದ ಶ್ರೀ ಕಲ್ಮೇಶ್ವರ ದೇವಸ್ಥಾನವು ಗ್ರಾಮದಾದ್ಯಂತ ಅಡವಿ ಕಲ್ಲಪ್ಪಜ್ಜ ಎಂದೇ ಪ್ರಖ್ಯಾತಿ ಪಡೆದಿದೆ. ಈ ದೇವಸ್ಥಾನಕ್ಕೆ ಸರಿಯಾದ ರಸ್ತೆ ಇಲ್ಲದಿರುವುದರಿಂದ ವರ್ಷಕ್ಕೊಂದು ಸಾರಿ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ದಶಕಗಳಿಂದ ಇದೊಂದು ಅಡವಿಯಜ್ಜನ ದೇವಸ್ಥಾನ ಎಂದುಕೊಂಡಿದ್ದ ಗ್ರಾಮಸ್ಥರಾದ ರಾಮಪ್ಪ ಹೊಸಳ್ಳಿ, ಶೇಖಪ್ಪ ಅಂಗಡಿ, ಅರುಣ ಹೊಸಳ್ಳಿ, ಗದಗಯ್ಯ ಹಿರೇಮಠ, ಹುಲೆಪ್ಪ ಕರತಂಗಿ, ಸಿದ್ದಪ್ಪ ವಡ್ಡರ, ಉಮೇಶ ಕಡಿ, ಕಲ್ಲಪ್ಪ ಕುಂಕೂರ, ಅರಣ್ಯ ರಕ್ಷಕರಾದ ಮಂಜುನಾಥ ಬಾರಕೇರ, ಚಂದ್ರಯ್ಯ ಕ್ವಾಟಿ ಹಾಗೂ ಇತರರ ಸಹಕಾರದಿಂದ ಸಂಶೋಧಕರ ಅಧ್ಯಯನದಿಂದ ಇದೊಂದು ಪುರಾತನ ದೇವಾಲಯ ಎಂದು ತಿಳಿದುಬಂದಿದೆ.

    ಬೆಂಡಲಗಟ್ಟಿ ಅರಣ್ಯ ಪ್ರದೇಶದಲ್ಲಿ ಸಂಶೋಧನೆ ಮಾಡಲಾಗಿದೆ. ಈ ಗ್ರಾಮ ಒಂದೇ ಅಲ್ಲದೆ, ತಾಲೂಕಿನ ಇನ್ನೂ ಹತ್ತಾರು ಗ್ರಾಮಗಳಲ್ಲಿ ಪುರಾತನ ದೇವಾಲಯಗಳು, ಶಾಸನಗಳು, ಶಿಲ್ಪಕಲೆಗಳು ಕಾಣಸಿಗುತ್ತವೆ. ಇಂತಹ ಪುರಾತನ ಕುರುಹಿನ ದೇವಾಲಯಗಳ ಜೀಣೋದ್ಧಾರಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು.

    | ಪೊ›. ಕೆ.ಸಿ. ಮಲ್ಲಿಗವಾಡ

    ಇತಿಹಾಸ ಸಂಶೋಧಕ

    ಈ ದೇವಸ್ಥಾನ ಚಾಲುಕ್ಯರ ಕಾಲದ ದೇವಸ್ಥಾನ ಎಂದು ಸಂಶೋಧಕರು ತಿಳಿಸಿದ್ದಾರೆ. ಭಕ್ತರ ಬೇಡಿಕೆ ಈಡೇರಿಸುವ ಈ ಪುರಾತನ ದೇವಸ್ಥಾನಕ್ಕೆ ಪುನಶ್ಚೇತನ ಭಾಗ್ಯವನ್ನು ಶಾಸಕರು ಹಾಗೂ ಸರ್ಕಾರ ಕರುಣಿಸಬೇಕು. ಆ ಮೂಲಕ ಐತಿಹಾಸಿಕ ಸ್ಥಳ ಮತ್ತು ಪ್ರವಾಸಿ ತಾಣವನ್ನಾಗಿಸಬೇಕು.

    | ಪುಂಡಲೀಕ ದಡೇದ

    ಬೆಂಡಲಗಟ್ಟಿ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts