More

    ಸನಾತನ ಸಂಸ್ಕೃತಿಯಿಂದ ಸನ್ಮಾರ್ಗ

    ಹುಕ್ಕೇರಿ: ಯುವ ಜನಾಂಗ ಧಾರ್ಮಿಕ ಕಾರ್ಯಗಳಿಂದ ವಿಮುಖರಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇದರಿಂದ ಗುರು-ಹಿರಿಯರನ್ನು ಗೌರವಿಸುವುದು ಮತ್ತು ಧರ್ಮದ ಕುರಿತು ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಪಾಲಕರು ಶ್ರಮಿಸಬೇಕು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಂಸದ ರಮೇಶ ಕತ್ತಿ ಹೇಳಿದ್ದಾರೆ.

    ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶ್ರೀ ಕಾಳಿಕಾದೇವಿ ಸಮುದಾಯ ಭವನ ನಿರ್ಮಾಣಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಪ್ರಭಾವದಿಂದ ನಮ್ಮ ಹಿರಿಯರು ಪಾಲಿಸಿಕೊಂಡು ಬಂದ ಆಚಾರ, ವಿಚಾರ ಮತ್ತು ಸಂಸ್ಕೃತಿ ಮರೆತು ಪಾಶ್ಚಿಮಾತ್ಯ ಜೀವನದತ್ತ ವಾಲುತ್ತಿದ್ದಾರೆ. ಅದಕ್ಕಾಗಿ ಯುವ ಜನಾಂಗವನ್ನು ಸನ್ಮಾರ್ಗದತ್ತ ತೆಗೆದುಕೊಂಡು ಹೋಗಲು ನಮ್ಮ ಸನಾತನ ಸಂಸ್ಕೃತಿ ಪರಿಚಯಿಸುವ ಕೆಲಸವಾಗಬೇಕು. ಆ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲು, ಧಾರ್ಮಿಕ ತತ್ವಗಳನ್ನು ಪ್ರಚಾರಪಡಿಸಲು ಮುಂದಾಗಬೇಕು ಎಂದು ತಿಳಿಸಿದರು. ಶ್ರೀ ಕಾಳಿಕಾದೇವಿ ವಿಶ್ವಸ್ಥ ಮಂಡಳಿ ವತಿಯಿಂದ ರಮೇಶ ಕತ್ತಿ ಅವರನ್ನು ಸತ್ಕರಿಸಲಾಯಿತು. ನಂತರ ಗ್ರಾಮದ ಹುಚ್ಚಣ್ಣವರ ಮತ್ತು ಪೋತದಾರ ತೋಟದಲ್ಲಿ ಅಳವಡಿಸಲಾದ ನೂತನ ಹೆಚ್ಚುವರಿ ವಿದ್ಯುತ್ ಪರಿವರ್ತಕಗಳನ್ನು ರಮೇಶ ಕತ್ತಿ ಉದ್ಘಾಟಿಸಿದರು.

    ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಮರಡಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಪ್ಪ ನಾಯಿಕ, ಬಿಜೆಪಿ ಮಂಡಲ ಮತ್ತು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಾಚಯ್ಯ ಹಿರೇಮಠ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಾಜ್ಯ ನಿರ್ದೇಶಕ ಪ್ರಶಾಂತ ಪಾಟೀಲ, ಕಾಳಿಕಾದೇವಿ ವಿಶ್ವಸ್ಥ ಮಂಡಳಿ ಅಧ್ಯಕ್ಷ ಕಿಟ್ಟಪ್ಪ ಬಡಿಗೇರ, ಸಿದರಾಯಿ ಪೋತದಾರ, ಮುಖಂಡರಾದ ಕಲಗೌಡ ಪಾಟೀಲ, ಶಿವಗೌಡ ಪಾಟೀಲ, ಚಂದ್ರಯ್ಯ ಮಠಪತಿ, ಪಿಕೆಪಿಎಸ್ ಅಧ್ಯಕ್ಷ ಅಲಗೌಡ ಪಾಟೀಲ, ಉಪಾಧ್ಯಕ್ಷೆ ಸಂಗೀತಾ ಜನ್ಮಟ್ಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts