More

    ಆಸೀಸ್ ಪ್ರವಾಸದಲ್ಲಿ ಮಿಂಚಿದ 6 ಕ್ರಿಕೆಟಿಗರಿಗೆ ಭರ್ಜರಿ ಗಿಫ್ಟ್​ ಕೊಟ್ಟ ಮಹೀಂದ್ರಾ

    ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಮೋಘ ನಿರ್ವಹಣೆ ತೋರಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ ಭಾರತ ತಂಡದ ಆರು ಯುವ ಕ್ರಿಕೆಟಿಗರಿಗೆ ಹೊಸ ಆವೃತ್ತಿಯ ಮಹೀಂದ್ರಾ ಥಾರ್-ಎಸ್‌ಯುವಿ ಉಡುಗೊರೆ ನೀಡುವುದಾಗಿ ಉದ್ಯಮಿ ಆನಂದ್ ಮಹೀಂದ್ರಾ ಘೋಷಿಸಿದ್ದಾರೆ. ಆನಂದ್ ಮಹೀಂದ್ರಾ ಅವರು ಟ್ವಿಟರ್‌ನಲ್ಲಿ ಈ ಬಗ್ಗೆ ಪ್ರಕಟಿಸಿದ್ದಾರೆ. ಆಸೀಸ್ ವಿರುದ್ಧ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮೊಹಮದ್ ಸಿರಾಜ್, ಶುಭಮಾನ್ ಗಿಲ್, ವಾಷಿಂಗ್ಟನ್ ಸುಂದರ್, ನವದೀಪ್​ ಸೈನಿ, ಟಿ. ನಟರಾಜನ್ ಮತ್ತು ಸರಣಿಗೆ ಮುನ್ನ ಕೇವಲ 1 ಟೆಸ್ಟ್ ಆಡಿ 10 ಎಸೆತಗಳನ್ನಷ್ಟೇ ಎಸೆದಿದ್ದ ವೇಗಿ ಶಾರ್ದೂಲ್ ಠಾಕೂರ್ ವಿಶೇಷ ಉಡುಗೊರೆ ಪಡೆಯುತ್ತಿರುವ ಆರು ಕ್ರಿಕೆಟಿಗರಾಗಿದ್ದಾರೆ.

    ‘ಇವರೆಲ್ಲರ ಬೆಳವಣಿಗೆ ನಿಜಕ್ಕೂ ಅಮೋಘವಾದುದು. ಎಲ್ಲ ಅಡೆತಡೆಗಳನ್ನು ಮೀರಿ ಅವರು ಅದ್ಭುತ ನಿರ್ವಹಣೆ ತೋರಿದ್ದಾರೆ. ಅವರ ಎಲ್ಲರ ಜೀವನಕ್ಕೂ ಸ್ಫೂರ್ತಿ ತುಂಬಿದ್ದಾರೆ. ಈ ಆರು ಆಟಗಾರರು ಭಾರತದ ಯುವಕರಿಗೆ ಕನಸು ಕಾಣುವ ಮತ್ತು ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಸ್ಫೂರ್ತಿ ತುಂಬಿದ್ದಾರೆ. ಅವರೆಲ್ಲರಿಗೂ ಹೊಸ ಥಾರ್ ಎಸ್‌ಯುವಿ ಉಡುಗೊರೆ ನೀಡುವುದು ನನಗೆ ವೈಯಕ್ತಿಕವಾಗಿ ಅತ್ಯುತ್ತಮ ಸಂತೋಷ ನೀಡುತ್ತಿದೆ. ಕಂಪನಿಯ ಹಣದಲ್ಲಲ್ಲ, ನನ್ನ ವೈಯಕ್ತಿಕ ಖಾತೆಯಿಂದ ಈ ಉಡುಗೊರೆಗಳನ್ನು ನೀಡಲಿದ್ದೇನೆ’ ಎಂದು ಮಹೀಂದ್ರಾ ಗ್ರೂಪ್ ಕಂಪನಿಯ ಚೇರ್ಮನ್ ಆನಂದ್ ಮಹೀಂದ್ರಾ ತಿಳಿಸಿದ್ದಾರೆ.

    ಇದನ್ನೂ ಓದಿ: ಅದ್ದೂರಿ ಸ್ವಾಗತದ ಬಳಿಕ ಅಜಿಂಕ್ಯ ರಹಾನೆ ಕೇಕ್ ಕತ್ತರಿಸಲು ನಿರಾಕರಿಸಿದ್ದು ಯಾಕೆ ಗೊತ್ತೇ?

    ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಧಿಕೃತವಾಗಿ ಅನಾವರಣಗೊಂಡಿರುವ ಹೊಸ ಮಹೀಂದ್ರಾ ಥಾರ್ 10ರಿಂದ 14.5 ಲಕ್ಷ ರೂ. ಮೌಲ್ಯದ ರೇಂಜ್ ಹೊಂದಿದೆ. ಈ ಮುನ್ನ ಬಿಸಿಸಿಐ, ಐತಿಹಾಸಿಕ ಸಾಧನೆ ತೋರಿದ ಭಾರತ ತಂಡದ ಎಲ್ಲ ಸದಸ್ಯರಿಗೆ ಒಟ್ಟು 5 ಕೋಟಿ ರೂ. ಬಹುಮಾನ ಪ್ರಕಟಿಸಿತ್ತು. ಮಹೀಂದ್ರಾ ಅವರು ಕ್ರೀಡಾಪಟುಗಳ ಸಾಧನೆಗೆ ಕಾರು ಉಡುಗೊರೆ ನೀಡುತ್ತಿರುವುದು ಇದೇ ಮೊದಲಲ್ಲ. 2017ರಲ್ಲಿ ಸೂಪರ್ ಸಿರೀಸ್ ಪ್ರಶಸ್ತಿ ಜಯಿಸಿದ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ಅವರಿಗೆ ಟಿಯುವಿ 300 ಕಾರು ಉಡುಗೊರೆ ನೀಡಿದ್ದರು.

    ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಮೊಹಮದ್ ಸಿರಾಜ್ ಭಾರತ ಪರ ಗರಿಷ್ಠ 13 ವಿಕೆಟ್ ಕಬಳಿಸಿದ್ದರು. ಟಿ. ನಟರಾಜನ್ 1 ಟೆಸ್ಟ್‌ನಲ್ಲಿ 3 ವಿಕೆಟ್ ಕಬಳಿಸಿದ್ದಲ್ಲದೆ, ಪ್ರವಾಸದಲ್ಲಿ ಮೂರೂ ಪ್ರಕಾರದಲ್ಲಿ ಪದಾರ್ಪಣೆ ಮಾಡಿದ ವಿಶೇಷ ಸಾಧನೆ ಮಾಡಿದ್ದರು. ನವದೀಪ್ ಸೈನಿ ಗಾಯದ ನಡುವೆ 2 ಟೆಸ್ಟ್ ಆಡಿ 4 ವಿಕೆಟ್ ಪಡೆದಿದ್ದರು. ಶುಭಮಾನ್ ಗಿಲ್ 3 ಟೆಸ್ಟ್‌ಗಳಲ್ಲಿ 259 ರನ್ ಗಳಿಸಿದ್ದರು. ಶಾರ್ದೂಲ್ ಠಾಕೂರ್ (69 ರನ್, 7 ವಿಕೆಟ್) ಮತ್ತು ವಾಷಿಂಗ್ಟನ್ ಸುಂದರ್ (84 ರನ್, 4 ವಿಕೆಟ್) ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಆಲ್ರೌಂಡ್ ನಿರ್ವಹಣೆಯಿಂದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

    ಟೀಮ್ ಇಂಡಿಯಾ ಐತಿಹಾಸಿಕ ಸಾಧನೆ, ಜೋಶಿಗೂ ಸಲ್ಲಲಿ ಅಭಿನಂದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts