More

    ನಿರೀಕ್ಷೆ ಅಪಾರ, ದಾರಿ ಕ್ಲಿಷ್ಟಕರ; ಸಮತೋಲಿತ ಬಜೆಟ್ ಮಂಡಿಸುವ ಸವಾಲು

    ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದೆ. ಹೀಗಾಗಿ, ಈ ಫೆ.1ರಂದು ಮಂಡಿಸುವುದೇ ಈ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಲಿದೆ. ಚುನಾವಣೆ ಬಜೆಟ್​ನಲ್ಲಿ ಜನಪ್ರಿಯ ಘೋಷಣೆಗಳ ನಿರೀಕ್ಷೆ ಸಹಜ. ಇದೇ ವೇಳೆ ಜಾಗತಿಕ ಆರ್ಥಿಕ ಮಂದಗತಿ, ಸೀಮಿತ ಜಿಡಿಪಿ ಬೆಳವಣಿಗೆ ಸಾಧ್ಯತೆಯಿಂದಾಗಿ ತೆರಿಗೆ ಸಂಗ್ರಹ ನಿರೀಕ್ಷೆಗಿಂತ ಕುಸಿತ ಕಾಣಬಹುದಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಪಾರ ಅಪೇಕ್ಷೆ -ಹಲವು ಅಡಚಣೆಗಳ ನಡುವೆ ಸಮತೋಲಿತ ಬಜೆಟ್ ಮಂಡಿಸುವ ಸವಾಲು ಎದುರಿಸುತ್ತಿದ್ದಾರೆ.

    | ಜಗದೀಶ ಬುರ್ಲಬಡ್ಡಿ

    ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್​ಗೆ ಏರಿಸುವ ದೊಡ್ಡ ಗುರಿಯನ್ನು (2024-25ನೇ ಸಾಲಿನಲ್ಲಿ) ಪ್ರಧಾನಿ ನರೇಂದ್ರ ಮೋದಿ ಹಾಕಿಕೊಂಡಿದ್ದಾರೆ. ಅಂದರೆ, ನಮ್ಮ ಜಿಡಿಪಿಯನ್ನು 408 ಲಕ್ಷ ಕೋಟಿ ರೂಪಾಯಿಗೆ ತಲುಪಿಸುವ ಹೆಬ್ಬಯಕೆ. 2022-23ನೇ ಹಣಕಾಸು ವರ್ಷದಲ್ಲಿ ಒಟ್ಟು ದೇಶಿಯ ಉತ್ಪನ್ನವು (ಜಿಡಿಪಿ) ಶೇ. 15.4ರಷ್ಟು ಬೆಳವಣಿಯಾಗಿ ಒಟ್ಟು ಮೊತ್ತ 273.08 ಲಕ್ಷ ಕೋಟಿ ರೂಪಾಯಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. 2021-22ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 19.5ರಷ್ಟು ಬೆಳವಣಿಗೆ ಕಂಡು 236.65 ಲಕ್ಷ ಕೋಟಿ ರೂಪಾಯಿಗೆ ತಲುಪಿತ್ತು. ಆದರೆ, 2023-24ನೇ ಸಾಲಿನಲ್ಲಿ ಜಿಡಿಪಿ ಬೆಳವಣಿಗೆ ದರ ಶೇ. 6.6ಕ್ಕೆ ತಗ್ಗಬಹುದಾಗಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ. ಜಾಗತಿಕ ಆರ್ಥಿಕ ಮಂದಗತಿ, ರಫ್ತು ಕುಸಿತ, ಬೆಲೆಯೇರಿಕೆ, ಗ್ರಾಹಕರ ಖರೀದಿ ಸಾಮರ್ಥ್ಯ ಇಳಿಮುಖ ಮುಂತಾದ ಪ್ರತಿಕೂಲ ವಾತಾವರಣದಿಂದಾಗಿ ಜಿಡಿಪಿ ನಿರೀಕ್ಷೆಗಿಂತ ಕಡಿಮೆಯಾಗುವ ಸಾಧ್ಯತೆಯೂ ಇದೆ. ಇದೆಲ್ಲದರ ಪರಿಣಾಮವಾಗಿ ತೆರಿಗೆ ಸಂಗ್ರಹ ಕಡಿಮೆಯಾಗಿ ಸರ್ಕಾರಕ್ಕೆ ವೆಚ್ಚ ಮಾಡಲು ಸಂಪನ್ಮೂಲ ಕೊರತೆ ಉಂಟಾಗಬಹುದಾಗಿದೆ.

    ಜಾಗತಿಕ ಆರ್ಥಿಕ ಸ್ಥಿತಿಗತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕತೆ ಬೆಳವಣಿಗೆ ಕುರಿತಂತೆ ನಕಾರಾತ್ಮಕ ಸಾಧ್ಯತೆಗಳನ್ನು ತಜ್ಞರು ಕಂಡುಕೊಂಡಿದ್ದಾರೆ. 2024ರ ಮೇ-ಜೂನ್ ತಿಂಗಳಲ್ಲಿ ಲೋಕಸಭೆ ಚುನಾವಣೆ ಜರುಗಲಿದೆ. ಹೀಗಾಗಿ, ಈ ಚುನಾವಣೆಗೆ ಮುಂಚಿನ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿರಲಿದೆ. ಚುನಾವಣೆ ಗಮನದಲ್ಲಿಟ್ಟುಕೊಂಡು ಕೆಲವೊಂದು ಜನಪ್ರಿಯ ಘೋಷಣೆ, ನಿರ್ಧಾರಗಳನ್ನು ಬಜೆಟ್​ನಲ್ಲಿ ಕೈಗೊಳ್ಳಬೇಕಾದ ಒತ್ತಡ ಇದ್ದರೂ ಭಾರತವನ್ನು ಆರ್ಥಿಕವಾಗಿ ಬಲವರ್ಧನೆಗೊಳಿಸುವ ಹೊಣೆಗಾರಿಕೆ ಕೂಡ ಇದೆ.

    ವಿತ್ತೀಯ ಕೊರತೆ: ಒಟ್ಟು ದೇಶಿಯ ಉತ್ಪನ್ನದಲ್ಲಿ (ಜಿಡಿಪಿ) ತಕ್ಕಮಟ್ಟಿನ ಬೆಳವಣಿಗೆಯಿಂದಾಗಿ 2022-23ನೇ ಹಣಕಾಸು ವರ್ಷದಲ್ಲಿ ಭಾರತವು ತಾನು ಹಾಕಿಕೊಂಡಿರುವ ಶೆ. 6.4 ರಷ್ಟು ವಿತ್ತೀಯ ಕೊರತೆ ದಾಟದಿರುವ ಗುರಿ ತಲುಪುವ ಹಾದಿಯಲ್ಲಿದೆ. ವಿತ್ತೀಯ ಕೊರತೆ ಎಂದರೆ ಸರ್ಕಾರದ ಆದಾಯ ಮತ್ತು ಖರ್ಚಿನ ನಡುವಿನ ಕೊರತೆ. ಈ ಕೊರತೆ ಜಿಡಿಪಿಯ ಶೇ. 6.4ಕ್ಕಿಂತ ಹೆಚ್ಚಾಗಬಾರದು ಎಂಬುದು ಸರ್ಕಾರದ ಗುರಿ. ಆದರೆ, ರಫ್ತು ಮತ್ತು ತೆರಿಗೆ ಸಂಗ್ರಹಣೆಯಲ್ಲಿನ ಅಡೆತಡೆಗಳ ಜತೆಗೆ ನಿಧಾನವಾದ ಆರ್ಥಿಕ ಬೆಳವಣಿಗೆಯಿಂದಾಗಿ 2023-24ನೇ ಹಣಕಾಸು ವರ್ಷದಲ್ಲಿ ಈ ಸನ್ನಿವೇಶವು ತೀವ್ರವಾಗಿ ಬದಲಾಗಬಹುದು. ಮುಂಬರುವ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯ ಗುರಿಯನ್ನು ಹಣಕಾಸು ಸಚಿವರು ಶೇ. 5.8 – 6ಕ್ಕೆ ಸೀಮಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಜ್ಞರು ಅಂದಾಜಿಸಿದ್ದಾರೆ.

    ಹಣದುಬ್ಬರ ತಲೆನೋವು: ಮುಂದಿನ ದಿನಗಳಲ್ಲಿ ಭಾರತ ಮತ್ತು ಜಗತ್ತಿನಾದ್ಯಂತ ಹಣದುಬ್ಬರ ಉತ್ತುಂಗಕ್ಕೇರಬಹುದು. ಅಲ್ಲದೆ, ಇದು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಡಿಮೆ ಮತ್ತು ಮಧ್ಯಮ ಆದಾಯದ ಗುಂಪುಗಳಿಗೆ ‘ಜೀವನ ವೆಚ್ಚ’ ಬಿಕ್ಕಟ್ಟನ್ನು ಉಂಟು ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ಪ್ರಸ್ತುತವಾಗಿ ಆಹಾರ ಬೆಲೆಗಳ ಇಳಿಕೆಯ ಕಾರಣದಿಂದಾಗಿ ಭಾರತದ ಹಣದುಬ್ಬರ ಕೆಳಮುಖದ ಹಾದಿಯಲ್ಲಿದೆ. ಆದರೆ, ಆಹಾರ ಮತ್ತು ಇಂಧನ ಬೆಲೆಗಳನ್ನು ಹೊರತುಪಡಿಸಿದ ಪ್ರಮುಖ ಹಣದುಬ್ಬರ ಏರಿಕೆಯ ಹಾದಿಯಲ್ಲೇ ಇದೆ. ಆರ್ಥಿಕ ಸ್ಥಿತಿಗತಿ ಪರವಾಗಿಲ್ಲ ಎನಿಸಬೇಕಾದರೆ, ಹಣದುಬ್ಬರ ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷಿಸುವಂತೆ 2-6 ಪ್ರತಿಶತದೊಳಗೆ ಇರಬೇಕಾಗುತ್ತದೆ.

    ಮಂದಗತಿಯ ಬೆಳವಣಿಗೆ: ಪ್ರಸ್ತುತ ಪರಿಸ್ಥಿತಿಯಲ್ಲಿ ಬಜೆಟ್​ನಲ್ಲಿ ವೆಚ್ಚ ಕಡಿತಗೊಳಿಸುವುದನ್ನು ಬಿಟ್ಟು ಸರ್ಕಾರಕ್ಕೆ ಬೇರೆ ಆಯ್ಕೆಯಿಲ್ಲ. ಇದೇ ವೇಳೆ, ಇಂತಹ ಕ್ರಮ ಮುಂದಿನ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದಾಗಿದೆ ಎಂದು ತಜ್ಞರು ಹೇಳಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹದಗೆಡುತ್ತಿರುವ ಆರ್ಥಿಕ ವಾತಾವರಣದ ಹಿನ್ನೆಲೆಯಲ್ಲಿ 2023-24ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ತಗ್ಗಬಹುದಾಗಿದೆ. ಆದ್ದರಿಂದ, ಬೆಳವಣಿಗೆ ಮತ್ತು ಹಣಕಾಸಿನ ಬಲವರ್ಧನೆಯನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಯೋಜನೆ ರೂಪಿಸಬೇಕಾಗಿದೆ. ಕೆಲವು ಪ್ರಮುಖ ವಿಭಾಗಗಳಲ್ಲಿ ಹೆಚ್ಚಿನ ವೆಚ್ಚವನ್ನು ಸರಿದೂಗಿಸಲು ಸರ್ಕಾರವು ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಮುಂದುವರಿಸಿದ ಹಲವಾರು ಸಬ್ಸಿಡಿಗಳನ್ನು ಕಡಿತ ಮಾಡಬಹುದಾಗಿದೆ. ಹಣದುಬ್ಬರದ ಒತ್ತಡದ ಹಿನ್ನೆಲೆಯಲ್ಲಿ ಈ ಸಬ್ಸಿಡಿಗಳ ಮೇಲೆ ಅವಲಂಬಿತರಾದ ಕಡಿಮೆ ಆದಾಯದ ಗುಂಪುಗಳ ಮೇಲೆ ಇದು ನಕಾರಾತ್ಮಕ ಪ್ರಭಾವ ಬೀರಬಹುದಾಗಿದೆ. ಜಾಗತಿಕ ಮಂದಗತಿಯನ್ನು ನಿವಾರಿಸುವುದು ಕಷ್ಟಕರವಾಗಿದ್ದರೂ, ಗ್ರಾಹಕ ಬಳಕೆಯನ್ನು ಹೆಚ್ಚಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ಒಂದಿಷ್ಟು ಸ್ಥಿರತೆ ಒದಗಿಸಲು ಸರ್ಕಾರವು ಕೆಲವು ಕ್ರಮಗಳನ್ನು ಘೊಷಿಸಬಹುದು.

    ದೂರ ಅಂತರ ಕ್ರಮಿಸಬೇಕಾದ ಸೈಕ್ಲಿಸ್ಟ್​ನಂತೆ ಯೋಚಿಸಿ, ಅಂತಿಮ ಗೆರೆಯನ್ನು ತಲುಪಲು ಕಷ್ಟಪಟ್ಟು ಪೆಡ್ಲಿಂಗ್ ಮಾಡಬೇಕಾಗಿದೆ. ಇದ್ದಕ್ಕಿದ್ದಂತೆ ನಿಂತರೆ ಬೀಳುವ ಅಪಾಯವಿದೆ. ವಿಶೇಷವಾಗಿ ಅನಿಶ್ಚಿತ ಜಾಗತಿಕ ಪರಿಸರದಲ್ಲಿ ಕಡಿಮೆ ವಿತ್ತೀಯ ಕೊರತೆಯನ್ನು ಕಾಪಾಡಿಕೊಳ್ಳುವುದು ಭಾರತದ ಸ್ಥೂಲ ಆರ್ಥಿಕ ಸ್ಥಿರತೆಗೆ ಪ್ರಮುಖವಾಗಿದೆ.

    | ಪ್ರಂಜುಲ್ ಭಂಡಾರಿ ಎಚ್​ಎಸ್​ಬಿಸಿ ಕಂಪನಿಯ ಭಾರತದ ಮುಖ್ಯ ಅರ್ಥಶಾಸ್ತ್ರಜ್ಞ

    ಹೆಚ್ಚುತ್ತಿರುವ ವ್ಯಾಪಾರ ಕೊರತೆ: ಭಾರತವು 2022ರ ಡಿಸೆಂಬರ್​ನಲ್ಲಿ 34.48 ಶತಕೋಟಿ ಡಾಲರ್ (2,80,547 ಕೋಟಿ ರೂಪಾಯಿ) ಮೌಲ್ಯದ ಸರಕು ರಫ್ತು ಮಾಡಿದೆ. ಇದು ನವೆಂಬರ್ ತಿಂಗಳಲ್ಲಿ ಮಾಡಲಾದ 32 ಶತಕೋಟಿ ಡಾಲರ್ (2,60,368 ಕೋಟಿ ರೂಪಾಯಿ) ಮೊತ್ತದ ರಫ್ತಿಗಿಂತ ಹೆಚ್ಚಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 12.2ರಷ್ಟು ಕುಸಿತವಾಗಿದೆ. ಇದರಿಂದಾಗಿ ವ್ಯಾಪಾರ ಕೊರತೆ ಹೆಚ್ಚುವಂತಾಗಿದೆ. ಚಾಲ್ತಿ ಖಾತೆ ಕೊರತೆ 2021-22ರ ಮೊದಲ ಆರು ತಿಂಗಳಲ್ಲಿ 3.1 ಶತಕೋಟಿ ಡಾಲರ್ (25,249 ಸಾವಿರ ಕೋಟಿ ರೂಪಾಯಿ) ಇತ್ತು. ಆದರೆ, 2022-23ರ ಮೊದಲಾರ್ಧದಲ್ಲಿ ಈ ಕೊರತೆ 54.5 ಶತಕೋಟಿ ಡಾಲರ್ (4,43,889 ಕೋಟಿ ರೂಪಾಯಿ) ಆಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 17 ಪಟ್ಟು ಹೆಚ್ಚಳವಾಗಿದೆ. ಕೋವಿಡ್ ಸಾಂಕ್ರಾಮಿಕ ನಂತರದಲ್ಲಿ 2021-22ನೇ ಹಣಕಾಸು ವರ್ಷದಲ್ಲಿ ಜಾಗತಿಕ ಕೈಗಾರಿಕಾ ಪುನರುತ್ಥಾನದಿಂದ ಅಗಾಧವಾಗಿ ಲಾಭ ಗಳಿಸಿದ್ದ ಭಾರತೀಯ ರಫ್ತುದಾರರಿಗೆ ಪ್ರಸ್ತುತ ಪರಿಸ್ಥಿತಿ ಪ್ರತಿಕೂಲವಾಗಿದೆ. ಜಾಗತಿಕ ಹಿಂಜರಿಕೆಯು ರಫ್ತಿನ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಎಂದು ಸರ್ಕಾರ ಕೂಡ ಒಪ್ಪಿಕೊಂಡಿದೆ. ರಫ್ತುಗಳನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಬೇಕಿದೆ.

    ಗ್ರಾಹಕ ಬಳಕೆ ಇಳಿಕೆ: ಜಿಡಿಪಿ ಬೆಳವಣಿಗೆ ಕುಸಿತ ಮತ್ತು ಸರಕುಗಳ ಬೆಲೆ ಹೆಚ್ಚಳ ಹಿನ್ನೆಲೆಯಲ್ಲಿ ಮುಂದಿನ ಹಣಕಾಸು ವರ್ಷದಲ್ಲಿ ಖಾಸಗಿ ಬಳಕೆ ನಿಧಾನವಾಗುವ, ಅಂದರೆ ಗ್ರಾಹಕರ ಖರೀದಿ ಸಾಮರ್ಥ್ಯ ಕುಸಿಯುವ ಸಾಧ್ಯತೆಯಿದೆ. ರಫ್ತು ಮತ್ತು ಖಾಸಗಿ ಹೂಡಿಕೆಗಳು ಇಳಿಮುಖವಾಗುವ ಸಾಧ್ಯತೆ ಇರುವುದರಿಂದ ಆರ್ಥಿಕತೆ ಸುರಕ್ಷಿತವಾಗಿರಬೇಕಾದರೆ ಸ್ಥಳೀಯ ಉತ್ಪಾದನೆಯ ಜತೆಗೆ ಖಾಸಗಿ ಬಳಕೆಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

    ಗರಿಷ್ಠ ಸಾಲದ ಹೊರೆ: 2023-24ನೇ ಸಾಲಿನಲ್ಲಿ ಭಾರತ ಸರ್ಕಾರದ ಸಾಲ ಹೊರೆ ಇದುವರೆಗಿನ ಗರಿಷ್ಠ ಪ್ರಮಾಣವಾದ 16 ಲಕ್ಷ ಕೋಟಿ ರೂಪಾಯಿಗೆ ತಲುಪುವ ನಿರೀಕ್ಷೆ ಇದೆ. ಕೋವಿಡ್ ಕಾರಣ ತಲೆದೋರಿದ ಆರ್ಥಿಕ ಸಂಕಷ್ಟ ನಿಭಾಯಿಸಲು, ಬಡವರಿಗೆ ನೆರವಾಗಲು ಮೋದಿ ಸರ್ಕಾರ ಅಪಾರ ಖರ್ಚು ಮಾಡಿರುವುದರಿಂದ ಕಳೆದ 4 ವರ್ಷಗಳಲ್ಲಿ ಸರ್ಕಾರದ ಸಾಲ 2 ಪಟ್ಟು ಹೆಚ್ಚಾಗಿದೆ. ಬಿಜೆಪಿ ಸರ್ಕಾರ 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ 5.92 ಲಕ್ಷ ಕೋಟಿ ರೂಪಾಯಿಯ ಸಾಲ ಹೊರೆ ಇತ್ತು. ಆದರೆ, 2023-24ನೇ ಸಾಲಿನಲ್ಲಿ ಸಾಲ ಮರುಪಾವತಿಗಾಗಿಯೇ 4.4 ಲಕ್ಷ ಕೋಟಿ ರೂಪಾಯಿ ವ್ಯಯಿಸಬೇಕಾಗಿದೆ.

    ನಮ್ಮಲ್ಲೇ ಮೊದಲು: ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ-ತಂತ್ರಜ್ಞಾನ ಬಳಸಿ ಬರೆದ ಸುದ್ದಿ; ಇದು ಸಮಸ್ತ ಹಿರಿಯ ನಾಗರಿಕರಿಗೆ ಅರ್ಪಣೆ

    ಶಾಲೆಯಲ್ಲೇ ಹೃದಯಾಘಾತಕ್ಕೀಡಾಗಿ ಮೃತಪಟ್ಟ ಹದಿಹರೆಯದ ವಿದ್ಯಾರ್ಥಿನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts