More

    ದೆಹಲಿಗೆ ತೆರಳುವ ಮುನ್ನ ಬಿಎಸ್ ವೈ‌ ನಿವಾಸದಲ್ಲಿ ಮಹತ್ವದ ಸಭೆ

    ಬೆಂಗಳೂರು: ವರಿಷ್ಠರು ಕರೆದಿರುವ ಸಭೆಯಲ್ಲಿ ಪಾಲ್ಗೊಳ್ಳಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಂಗಳವಾರ ದೆಹಲಿಗೆ ತೆರಳುವ ಮುನ್ನ ಯಡಿಯೂರಪ್ಪ ಅವರ ಡಾಲರ್ಸ್ ಕಾಲೊನಿ ನಿವಾಸದಲ್ಲಿ ಮಹತ್ವದ ಚರ್ಚೆಯಾಗಿದೆ.

    ಮೈತ್ರಿ ವಿಚಾರದಲ್ಲಿ ಬಿಜೆಪಿ ವರಿಷ್ಠರ ಧೋರಣೆಯ ಬಗ್ಗೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅಸಹನೆ, ಕೆ.ಎಸ್.ಈಶ್ವರಪ್ಪ ಬಂಡಾಯ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಬೇಸರ, ಐದು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ, ಬೆಳಗಾವಿಯಲ್ಲಿ ಜಗದೀಶ ಶೆಟ್ಟರ್ ಉಮೇದುವಾರಿಕೆಗೆ ಅಪಸ್ವರ, ಸುರಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ, ಪ್ರಧಾನಿ ಮೋದಿಯವರ ಎರಡು ಕಾರ್ಯಕ್ರಮಗಳ ಪರಿಣಾಮ ಇತ್ಯಾದಿ ಹೈವೋಲ್ಟೇಜ್ ಮೀಟಿಂಗ್ ನ ವಿಷಯಗಳಾಗಿದ್ದವು.

    ಪಕ್ಷದ ಲೋಕಸಭೆ ಚುನಾವಣೆ ರಾಜ್ಯ ಉಸ್ತುವಾರಿ ಡಾ.ರಾಧಾ ಮೋಹನ್ ದಾಸ್ ಅಗರ್ವಾಲ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಘಟನಾ‌ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಭಾಗಿಯಾಗಿದ್ದರು. ನಂತರ ಮಾಜಿ ಸಚಿವ ಗೋವಿಂದ ಕಾರಜೋಳ, ಸುರಪುರ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ರಾಜೂಗೌಡ ಬಿಎಸ್ ವೈ ಗೆ  ಭೇಟಿ ಮಾಡಿ ಮಾತುಕತೆ ನಡೆಸಿದರು.

    ಚಿತ್ರದುರ್ಗ ಕ್ಷೇತ್ರಕ್ಕೆ ಹಾಲಿ ಸಂಸದ ಎ.ನಾರಾಯಣಸ್ವಾಮಿ ಅವರನ್ನೇ ಮುಂದುವರಿಸಲು ಕಾರಜೋಳ ಮನವಿ ಮಾಡಿದ್ದಾರೆ. ಈ ಕ್ಷೇತ್ರಕ್ಕೆ ಮಾಜಿ ಸಂಸದ ಜನಾರ್ದನಸ್ವಾಮಿ ಜತೆಗೆ ಕಾರಜೋಳ ಹೆಸರುಗಳು ಪರಿಗಣನೆಯಲ್ಲಿವೆ ಎಂದು ಮೂಲಗಳು ತಿಳಿಸಿವೆ.

    ವರಿಷ್ಠರು ಕೇಳಿದರೆ ಮಾಹಿತಿ ನೀಡಬಹುದು ಎಂಬ ಕಾರಣಕ್ಕೆ ಜೆಡಿಎಸ್ ನಾಯಕರ ಅಸಮಾಧಾನದ ಕಾರಣ, ಪ್ರಾರಂಭಿಕ ಗೊಂದಲ ನಿವಾರಣೆ, ಕ್ಷೇತ್ರಗಳ ಹಂಚಿಕೆ‌ ಬಗ್ಗೆ ಚರ್ಚಿಸಿ, ಬಿಎಸ್ ವೈ ಹಾಗೂ ವಿಜಯೇಂದ್ರ ಪೂರ್ವ ತಯಾರಿ ಮಾಡಿಕೊಂಡು ದೆಹಲಿಗೆ ಪ್ರಯಾಣ ಬೆಳೆಸಿದರು.

    ಗೊಂದಲದಲ್ಲಿ ಡಿವಿಎಸ್

    ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಸ್ಪಷ್ಟ ತೀರ್ಮಾನಕ್ಕೆ ಬರಲಾಗದೆ ಗೊಂದಲದ ಮಡುವಿಗೆ ಬಿದ್ದಂತಿದೆ. ಮಂಗಳವಾರ ಬೆಳಗ್ಗೆ 10.30ಕ್ಕೆ ಸುದ್ದಿಗೋಷ್ಠಿ ಕರೆದು ನನ್ನ ನಿರ್ಧಾರ ಪ್ರಕಟಿಸುವೆ ಎಂದು ಸೋಮವಾರ ಹೇಳಿದ್ದರು. ಆದರೆ ಸುದ್ದಿಗೋಷ್ಠಿಯನ್ನು ಹಠಾತ್ತನೆ ಮಧ್ಯಾಹ್ನಕ್ಕೆ ಮುಂದೂಡಿದರು.

    ಒಕ್ಕಲಿಗರ ಸಂಘದ ಪ್ರಮುಖರು ಕರೆದ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದರು. ಕುಟುಂಬ ಸದಸ್ಯರೊಂದಿಗೆ ಈಗಾಗಲೇ ಚರ್ಚಿಸಿದ್ದಾರೆ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸಾಧಕ-ಬಾಧಕ ಪರಾಮರ್ಶೆ ಸೂಕ್ತ. ತಾತ್ಪೂರ್ತಿಕ, ಪರಿಸ್ಥಿತಿಯ ಒತ್ತಡಕ್ಕೆ ಸಿಲುಕುವುದು ಬೇಡವೆಂದು ನಿಕಟವರ್ತಿಗಳು ಸಲಹೆ ನೀಡಿದ್ದಾರೆ. ಈ ಕಾರಣಕ್ಕೆ ಒಕ್ಕಲಿಗರ ಸಂಘದ ಮುಖಂಡರು ಜತೆಗೂ ಚರ್ಚಿಸಿ ಗೊಂದಲ, ದ್ವಂದ್ವ ನಿವಾರಿಸಿಕೊಳ್ಳಲು ಡಿ.ವಿ.ಸದಾನಂದಗೌಡ ಯೋಚಿಸಿದ್ದಾರೆ ಎಂದು ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts