More

    ಸಮ ಸಮಾಜಕ್ಕೆ ಸಂವಿಧಾನದಲ್ಲಿ ಮೂರ್ತ ರೂಪ

    ಮೈಸೂರು: ಅಂಬೇಡ್ಕರ್ ಕೇವಲ ಭಾರತ ಸಂವಿಧಾನ ಶಿಲ್ಪಿ ಅಷ್ಟೇ ಅಲ್ಲ. ವಿಶ್ವದ ವಿವಿಧ ದೇಶಗಳ ಸಂವಿಧಾನಗಳ ಶಿಲ್ಪಿಯೂ ಹೌದು ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಬಸವರಾಜು ಅಭಿಪ್ರಾಯಪಟ್ಟರು.


    ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ವತಿಯಿಂದ ಮುಕ್ತಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಜ್ಞಾನ, ಪಾಂಡಿತ್ಯಕ್ಕೆ ಜಾಗತಿಕ ಮನ್ನಣೆ ಪಡೆದಿರುವ ಅಂಬೇಡ್ಕರ್ ಶ್ರೇಷ್ಠ ಕಾನೂನು ತಜ್ಞರು. ಭಾರತ ಸಂವಿಧಾನ, ಅದರ ರಚನೆ ವೇಳೆ ನಡೆದ ಚರ್ಚೆಗಳು, ಅವರ ವಿಚಾರಧಾರೆ, ಚಿಂತನೆ, ಸಂಶೋಧನೆಯ ಆಧಾರದ ಮೇಲೆ ವಿವಿಧ ದೇಶಗಳ ಸಂವಿಧಾನ ರಚನೆಗೆ ಇವರು ಮೂಲ ಜ್ಞಾನವಾಗಿದ್ದಾರೆ. ಅವುಗಳಿಗೆ ಸ್ಫೂರ್ತಿ ಸೆಲೆಯೂ ಆಗಿದ್ದಾರೆ. ಜಾಗತಿಕ ಮಟ್ಟದಲ್ಲೂ ಕಾನೂನು ಅರಿವು ಮೂಡಿಸಿದ ಮೇದಾವಿ ಎಂದರು.


    ಪ್ರತಿಷ್ಠಿತ ಕೊಲಂಬಿಯಾ ವಿಶ್ವವಿದ್ಯಾಲಯವು ಅಂಬೇಡ್ಕರ್ ಅವರನ್ನು ಪ್ರತಿಭಾವಂತ ಕಾನೂನು ವಿದ್ಯಾರ್ಥಿ ಎಂದು ಘೋಷಿಸಿತ್ತು. ಅಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ಅವರ ಪ್ರತಿಭೆ, ಕೌಶಲ ಗುರುತಿಸಿ ಈ ಸ್ಥಾನಮಾನ ನೀಡಿದೆ. ಅಂಬೇಡ್ಕರ್ ಅವರಲ್ಲಿದ್ದ ಪಾಂಡಿತ್ಯ ಬೇರೆಯವರಲ್ಲಿ ಕಾಣಲು ಈವರೆಗೂ ಸಾಧ್ಯವಾಗಿಲ್ಲ ಎಂದರು.


    ಶೂನ್ಯದಿಂದ ಶಿಖರಕ್ಕೇರಿದ ವ್ಯಕ್ತಿ ಅಂಬೇಡ್ಕರ್. ಯಾವುದೇ ಹಿನ್ನೆಲೆ ಇಲ್ಲದೆ ತಳಸ್ತರದಿಂದ ಬಂದ ವ್ಯಕ್ತಿ ವಿಶ್ವಕ್ಕೆ ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ. ಭಾರತದ ಸಂವಿಧಾನಕ್ಕೆ ಒಂದು ಮೌಲ್ಯ ತಂದುಕೊಟ್ಟರು. ಬರೀ ದೇಶಕ್ಕೆ ಮಾತ್ರ ಸ್ವಾತಂತ್ರೃ ಸಾಲದು. ಅನ್ಯಾಯ, ತುಳಿತಕ್ಕೆ ಒಳಗಾದ ಸಮುದಾಯವರಿಗೂ ಸ್ವಾತಂತ್ರೃಬೇಕು. ಇಲ್ಲವಾದರೆ ಕೆಲ ಸಮುದಾಯಕ್ಕೆ ದೊರೆಯುವ ಸ್ವಾತಂತ್ರೃಕ್ಕೆ ಯಾವುದೇ ಅರ್ಥವಿಲ್ಲ. ಅಂತಹ ದೇಶ ಚುಕ್ಕಾಣಿಯಿಲ್ಲದ ಹಡಗಿನಂತಾಗಲಿದೆ ಎಂದು ಅಂಬೇಡ್ಕರ್ ಅವರು ಲಂಡನ್‌ನಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ಪ್ರತಿಪಾದಿಸಿದ್ದರು ಎಂದು ಹೇಳಿದರು.


    ಸಾಮಾಜಿಕ, ಆರ್ಥಿಕ, ರಾಜಕೀಯ ಚಿಂತನೆಯನ್ನು ಸ್ವಾತಂತ್ರೃ ಭಾರತದಲ್ಲಿ ಹೇಗೆ ತರಬೇಕು, ಕಾನೂನು ಚೌಕಟ್ಟಿನಲ್ಲಿ ಎಲ್ಲರನ್ನೂ ಹೇಗೆ ಸೇರಿಸಬೇಕು. ಸಮ ಸಮಾಜ ಹೇಗೆ ಸ್ಥಾಪಿಸಬೇಕು ಎಂಬುದು ಅಂಬೇಡ್ಕರ್ ಚಿಂತನೆಯಾಗಿತ್ತು. ಸಂವಿಧಾನದಲ್ಲಿ ಇದಕ್ಕೆ ಮೂರ್ತ ರೂಪವನ್ನೂ ಕೊಟ್ಟರು ಎಂದರು.


    ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ(ಆಡಳಿತ) ಪ್ರೊ.ಕೆ.ಬಿ.ಪ್ರವೀಣ್, ಪರೀಕ್ಷಾಂಗ ಕುಲಸಚಿವ ಡಾ.ಎಚ್.ವಿಶ್ವನಾಥ್, ಡೀನ್(ಶೈಕ್ಷಣಿಕ) ಪ್ರೊ.ಎನ್.ಲಕ್ಷ್ಮೀ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಡಾ.ಶಿವಕುಮಾರಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts