More

    ಮನರಂಜಿಸುವ ಬಾಳೆಹಣ್ಣು ಜೋಕಾಲಿ

    ಗುಳೇದಗುಡ್ಡ: ನಾಗರಪಂಚಮಿ ಹಬ್ಬ ಗ್ರಾಮೀಣರ ಪಾಲಿಗೆ ಅತ್ಯಂತ ಮಹತ್ವದ್ದು. ನಾಗದೇವನಿಗೆ ಹಾಲೆರೆಯುವುದು, ಬಗೆಬಗೆಯ ಉಂಡಿಗಳ ಸೇವೆನೆ ಜತೆಗೆ ಜೋಕಾಲಿ ಜೀಕುವುದು ಹಬ್ಬದ ವಿಶೇಷ. ಈ ಹಬ್ಬದಲ್ಲಿ ಸಾಮಾನ್ಯವಾಗಿ ಜನರು ಮನೆ, ಮನೆಯಂಗಳದಲ್ಲಿ, ದೊಡ್ಡ ಮರಗಳ ರೆಂಬೆಗಳಿಗೆ ಹಗ್ಗದ ಜೋಕಾಲಿ ಕಟ್ಟಿ ಜೀಕಿ ಸಂಭ್ರಮಿಸುತ್ತಾರೆ. ಆದರೆ, ಗುಳೇದಗುಡ್ಡದ ಬನ್ನಿಕಟ್ಟಿ ಹತ್ತಿರದ ಶ್ರೀ ತ್ರೆಯಂಬಕೇಶ್ವರ ದೇವಾಲಯ ಸಮೀಪ ನಾಗರಪಂಚಮಿಯಂದು ಅಪರೂಪದ ಜೋಕಾಲಿಗಳನ್ನು ಕಟ್ಟಲಾಗುತ್ತದೆ. ಮರಕ್ಕೆ ಕಟ್ಟಿ ಜೀಕುವ ಸಾಮಾನ್ಯ ಜೋಕಾಲಿ, ಮಂಗನಂತೆ ಏಣಿ ಹತ್ತುವ ಮಂಗನ ಜೋಕಾಲಿ, ತಮ್ಮ ಭಾರ ತಾವೇ ಹೊತ್ತು ಮೇಲೇರುವ ಜೋಕಾಲಿ, ಗಿರಿಗಿರಿ ತಿರುಗುವ ಗಾಣದ ಜೋಕಾಲಿ….ಹೀಗೆ ಮನರಂಜನೆ ಜತೆಗೆ ದೇಹಕ್ಕೆ ವ್ಯಾಯಾಮ ನೀಡುವ ಅಪರೂಪದ ಜೋಕಾಲಿಗಳು ಇಲ್ಲಿರುವುದರಿಂದ ಹಬ್ಬಕ್ಕೆ ಮತ್ತಷ್ಟು ಕಳೆ ತುಂಬುತ್ತವೆ. ನಾಗರಪಂಚಮಿ ದಿನದಿಂದ ನಾಲ್ಕಾರು ದಿನಗಳವರೆಗೆ ಜೋಕಾಲಿ ಆಡುವ, ನೋಡಿ ಮನರಂಜನೆ ಪಡುವ ಜನರ ಹಿಂಡು ತುಂಬಿರುತ್ತದೆ. ಒಂದೊಂದು ಜೋಕಾಲಿ ಒಂದೊಂದು ರೀತಿ ಮನರಂಜನೆ ನೀಡುತ್ತದೆ. ಏಣಿಯಂತೆ ಕಾಣುವ ಮಂಗನ ಜೋಕಾಲಿ ಏರಲು ಬ್ಯಾಲನ್ಸ್ ಅವಶ್ಯ. ಸ್ವಲ್ಪವೇ ಬ್ಯಾಲನ್ಸ್ ತಪ್ಪಿದರೂ ಜೋಕಾಲಿ ಏರಿದವರನ್ನು ಲಗಾಟಿ ಹೊಡೆಸುತ್ತದೆ. ಇದು ವಿಶೇಷವಾಗಿ ಮಕ್ಕಳನ್ನು ಆಕರ್ಷಿಸುತ್ತದೆ. ತಮ್ಮ ಭಾರವನ್ನು ತಾವೇ ಹೊತ್ತು ಮೇಲೇರುವ ಗಡಗಡಿ ಜೋಕಾಲಿ ಮೇಲೆರಲು ಶಕ್ತಿಯ ಜತೆಗೆ ಹಿಡಿತವೂ ಮುಖ್ಯ. ಗಿಡದಿಂದ ಜೋತು ಬಿಟ್ಟ ಹಗ್ಗಕ್ಕೆ ಕಟ್ಟಿದ ಗೇಣುದ್ದದ ಕಟ್ಟಿಗೆಯ ಮೇಲೆ ಕುಳಿತು ಹಗ್ಗದ ಇನ್ನೊಂದು ತುದಿ ಹಿಡಿದು ಜಗ್ಗುತ್ತ ಮೇಲೇರಬೇಕು. ಹಗ್ಗದ ಹಿಡಿತ ಸ್ವಲ್ಪವೇ ತಪ್ಪಿದರೂ ಸಾಕು ಕುಳಿತವರನ್ನು ಕೆಳಗೆ ಬೀಳಿಸುತ್ತದೆ. ಹೀಗೆ ಬೀಳುವವರಗೆ ಪೆಟ್ಟಾಗದಂತೆ ಕೆಳಗೆ ಮರಳು ಹಾಕಲಾಗಿರುತ್ತದೆ. ಈ ಜೋಕಾಲಿಯನ್ನು ಏರಲು ಹೋಗಿ ಕೆಳಗೆ ಬೀಳುವವರನ್ನು ನೋಡಿ ಮನರಂಜನೆ ಪಡೆಯವ ಜನರು ಜೋಕಾಲಿ ಸುತ್ತಲೂ ನೆರೆದಿರುತ್ತಾರೆ. ಇದನ್ನೇ ಬಾಳೆಹಣ್ಣು ಜೋಕಾಲಿ ಎಂದು ಹೇಳುವರು. ಈ ಜೋಕಾಲಿ ಏರುವವರಿಗಿಂತ ನೋಡುವವರಿಗೆ ಹೆಚ್ಚಿನ ಮನರಂಜನೆ ನೀಡುತ್ತದೆ. ಗಾಣದಂತೆ ಕಂಬವನ್ನು ನೆಟ್ಟು, ಇದಕ್ಕೆ ಎರಡು ಸಣ್ಣ ಜೋಕಾಲಿ ಕಟ್ಟಿ ಅದರೊಳಗೆ ಕುಳಿತು ಗಿರಗಿರನೆ ತಿರುವುಗುವ ಜೋಕಾಲಿ ಮಕ್ಕಳಿಗೆ ಅಚ್ಚುಮೆಚ್ಚು. ಇನ್ನು ಮರಕ್ಕೆ ಕಟ್ಟಿದ ಜೋಕಾಲಿ ಯುವಕರು, ಯುವತಿಯರು, ದೊಡ್ಡವರನ್ನು ಸೆಳೆಯುತ್ತದೆ. ಹೀಗೆ ನಾಲ್ಕಾರು ದಿನಗಳವರೆಗೆ ಜೋಕಾಲಿ ಆಡುವ, ನೋಡಿ ಮನರಂಜನೆ ಅನುಭವಿಸುವ ಜನರಿಂದ ಬನ್ನಿಕಟ್ಟಿ ಪ್ರದೇಶ ತುಂಬಿರುತ್ತದೆ. ಜೋಕಾಲಿಗಳು ಅಪರೂಪವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಬಗೆಬಗೆಯ ಜೋಕಾಲಿಗಳನ್ನು ಕಟ್ಟುವ ಮೂಲಕ ಹಿಂದಿನ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿರುವ ತ್ರೆಯಂಬಕೇಶ್ವರ ದೇವಸ್ಥಾನ ಸಮಿತಿಯ ಕಾರ್ಯ ಶ್ಲಾಘನಿಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts