More

    ಅಂತರಂಗದಲ್ಲಿರುವ ಅಜ್ಞಾನದ ಕಗ್ಗಂಟು ಹೃದಯಗ್ರಂಥಿ

    ಅಂತರಂಗದಲ್ಲಿರುವ ಅಜ್ಞಾನದ ಕಗ್ಗಂಟು ಹೃದಯಗ್ರಂಥಿಬಂಧನದಿಂದ ಮುಕ್ತಿ ಪಡೆಯಲು ಇರುವುದೇ ಆತ್ಮಸಾಕ್ಷಾತ್ಕಾರದ ದಾರಿ. ಈ ದಾರಿಯಲ್ಲಿ ನಡೆಯಬೇಕೆಂಬ ಆಕಾಂಕ್ಷೆ ಬೆಳೆಸಿಕೊಳ್ಳಲು ಬೇಕು ಆತ್ಮಜ್ಞಾನಿಗಳ ಸಂಗ ಹಾಗೂ ಸಾನ್ನಿಧ್ಯ. ಆದ್ದರಿಂದಲೇ ಇಂತಹ ಜ್ಞಾನಿಗಳ ಸಹವಾಸ ಮಾನವ ಜೀವನದಲ್ಲಿ ಅಮೂಲ್ಯ ಭಾಗ್ಯವೆಂದು ಶಾಸ್ತ್ರಗಳು ಸಾರುತ್ತವೆ.

     

    ಮಾನವ ಜೀವನದ ನಿಜವಾದ ಹಾಗೂ ಏಕೈಕ ಉದ್ದೇಶ ಆತ್ಮಸಾಕ್ಷಾತ್ಕಾರವೆಂದು ಸನಾತನ ಧರ್ಮ ಹೇಳಿದೆ. ಈ ಉದ್ದೇಶ ಸಾಧನೆಗಾಗಿ ಯಾವುದೇ ಪ್ರಯತ್ನವಿಲ್ಲದ ಜೀವನ ದುರ್ಲಭವಾದ ಮಾನವ ಜನ್ಮದ ದುರುಪಯೋಗವಾಗುತ್ತದೆ. ಮಾನವ ಜನ್ಮ ಪಡೆದ ಮೇಲೆ ಆತ್ಮಸಾಕ್ಷಾತ್ಕಾರಕ್ಕಾಗಿ ತೀವ್ರ ಆಕಾಂಕ್ಷೆ (ಮುಮುಕ್ಷತ್ವ) ಬೆಳೆಸಿಕೊಳ್ಳುವುದು ಹಾಗೂ ಆತ್ಮಜ್ಞಾನಿಯಾದ ಮಹಾಪುರುಷನ ಸಾನ್ನಿಧ್ಯ-ಮಾರ್ಗದರ್ಶನ ಅರಸುವುದು ಬಹಳ ಮುಖ್ಯ. ಇವುಗಳನ್ನು ಪಡೆದು ಅದೃಷ್ಟವಂತನಾದ ವ್ಯಕ್ತಿ ಕ್ರಮೇಣ ವಿವೇಕ, ವೈರಾಗ್ಯ ಹಾಗೂ ಶಮದಮಾದಿ ಷಟ್-ಸಂಪತ್ತಿಗಳನ್ನು ಬೆಳೆಸಿಕೊಂಡು ಆತ್ಮಜ್ಞಾನದ ಪಥದಲ್ಲಿ ನಡೆದು ಜನ್ಮಸಾಫಲ್ಯ ಪಡೆಯುತ್ತಾನೆ. ಇದನ್ನು ನಾವು ಹಿಂದಿನ ಲೇಖನದಲ್ಲಿ ವಿವರವಾಗಿ ತಿಳಿದುಕೊಂಡಿದ್ದೇವೆ.

    ಹೆಚ್ಚಿನ ಮಾನವರು ಏಕೆ ಮೋಕ್ಷದಾಯಕವಾದ ಆತ್ಮಸಾಕ್ಷಾತ್ಕಾರಕ್ಕಾಗಿ ಪ್ರಯತ್ನಪಡುವುದಿಲ್ಲ? ಮೋಕ್ಷಕ್ಕಾಗಿ ತೀವ್ರ ಆಕಾಂಕ್ಷೆ ಏಕೆ ಬೆಳೆಸಿಕೊಳ್ಳುವುದಿಲ್ಲ? ಸನಾತನಧರ್ಮದ ಶಾಸ್ತ್ರಗಳು ಇದಕ್ಕೆ ಮೂರು ಕಾರಣ ತಿಳಿಸುತ್ತವೆ. ಮೊದಲನೆಯದು ಅವಿದ್ಯೆ ಅಥವಾ ಅಜ್ಞಾನ, ಎರಡನೆಯದು ಲೌಕಿಕ ಕಾಮನೆಗಳು (ಕಾಮ), ಮೂರನೆಯದು ಈ ಕಾಮನೆಗಳ ಬೆನ್ನು ಹತ್ತಿ ಮಾಡುವ ಕರ್ಮಗಳು. ಆಳವಾಗಿ ಯೋಚಿಸಿದಾಗ ಕೊನೆಯ ಎರಡು ವಿಷಯಗಳಿಗೆ ಮೂಲ ಕಾರಣ ಮೊದಲನೆಯದಾದ ಅಜ್ಞಾನವೇ ಎಂದು ತಿಳಿಯುತ್ತದೆ.

    ಯಾವುದೇ ವಸ್ತುವಿನ ಅಸ್ತಿತ್ವದ ಬಗ್ಗೆ ತಿಳಿದಿರುವ ವ್ಯಕ್ತಿ ಮಾತ್ರ ಆ ವಸ್ತುವನ್ನು ಹೊಂದಬೇಕೆಂಬ ಆಸೆ ಬೆಳೆಸಿಕೊಳ್ಳುತ್ತಾನೆ. ಉದಾಹರಣೆಗೆ, ಒಬ್ಬ ವ್ಯಕ್ತಿ ತನಗೆ ಇಷ್ಟವಾದ ಹೊಸ ಫೋನು ಅಥವಾ ಕಾರು ಮಾರುಕಟ್ಟೆಯಲ್ಲಿ ಬಂದಿದೆ ಎಂಬ ಮಾಹಿತಿ ತಿಳಿದಾಗ ಮಾತ್ರವೇ ಆತ ಅವುಗಳನ್ನು ಪಡೆಯಬೇಕೆಂಬ ಆಸೆ ಬೆಳೆಸಿಕೊಳ್ಳುತ್ತಾನೆ. ಹಾಗೆಯೇ ಯಾವುದಾದರೂ ವಿಷಯವನ್ನು ತಿಳಿಯಬೇಕೆಂಬ ಆಕಾಂಕ್ಷೆ ಉತ್ಪನ್ನವಾಗಬೇಕಾದರೆ, ಅದು ಅಸ್ತಿತ್ವದಲ್ಲಿದೆಯೆಂಬ ಅರಿವನ್ನು ಮನುಷ್ಯನು ಹೊಂದಿರಬೇಕು. ಆದ್ದರಿಂದ, ಆತ್ಮಸಾಕ್ಷಾತ್ಕಾರ ಎಂಬುದರ ಅಸ್ತಿತ್ವದ ಅರಿವಿಲ್ಲದಿರುವುದೇ ಮನುಷ್ಯನಲ್ಲಿ ಆತ್ಮಸಾಕ್ಷಾತ್ಕಾರ ಪಡೆಯಬೇಕೆಂಬ ಆಕಾಂಕ್ಷೆ ಇಲ್ಲದಿರುವುದಕ್ಕೆ ಮೂಲ ಕಾರಣ. ಸದಾಕಾಲ ಇದೇ ರೀತಿಯ ಅಜ್ಞಾನಿಗಳ ಸಹವಾಸದಲ್ಲಿಯೇ ಇರುವುದರಿಂದ ಈ ಅಜ್ಞಾನ ಹಾಗೆಯೇ ಮುಂದುವರಿಯುತ್ತದೆ. ಇದನ್ನೇ ‘ಅವಿದ್ಯೆ’ ಎಂದು ಹೇಳಿದ್ದಾರೆ. ಹೀಗೆ ಆತ್ಮಸಾಕ್ಷಾತ್ಕಾರದ ಕುರಿತು ಅಜ್ಞಾನ ಒಂದೆಡೆಯಾದರೆ, ಇನ್ನೊಂದು ಕಡೆ ಮನಸ್ಸು ಹಾಗೂ ದೇಹಗಳ ಮೂಲಕ ಅನುಭವಿಸುವ ಈ ಪ್ರಪಂಚ ಶಾಶ್ವತ ಎಂಬ ತಪ್ಪು ತಿಳುವಳಿಕೆ. ಭಗವಾನ್ ಶ್ರೀ ಕೃಷ್ಣ ಈ ಪ್ರಪಂಚದ ಬಗ್ಗೆ ಭಗವದ್ಗೀತೆಯಲ್ಲಿ, ‘ಅನಿತ್ಯಂ ಅಸುಖಂ ಲೋಕಂ’ ಎಂದು ಹೇಳಿದ್ದಾನೆ. ಅಂದರೆ, ಈ ಪ್ರಪಂಚ ಅಶಾಶ್ವತ ಹಾಗೂ ದುಃಖದಿಂದ ಕೂಡಿರುವಂತಹುದು. ಆದರೆ, ಇದನ್ನು ತಿಳಿಯದ ಜನರು ಪ್ರಪಂಚದಲ್ಲಿ ಮಿನುಗುವ ಆಕರ್ಷಕ ಭೋಗಲಾಲಸೆಗಳಿಗೆ ಮಾರುಹೋಗಿ, ಆತ್ಮಜ್ಞಾನ ಪಡೆಯಬೇಕೆಂಬ ಆಕಾಂಕ್ಷೆಯನ್ನು ಮರೆತೇ ಬಿಡುತ್ತಾರೆ. ಮುಸ್ಸಂಜೆ ಮಬ್ಬಿನಲ್ಲಿ ಹಗ್ಗವನ್ನು ನೋಡಿ ಹಾವು ಎಂಬ ಭ್ರಮೆಗೆ ಒಳಗಾದಂತೆ, ಮನುಷ್ಯರು ಈ ಪ್ರಪಂಚದ ಬಗ್ಗೆ ತಪ್ಪುಕಲ್ಪನೆಯೊಂದಿಗೇ ಜೀವನ ಕಳೆಯುತ್ತಾರೆ. ಹಾಗೆಯೇ ಈ ಪ್ರಾಪಂಚಿಕ ಸುಖ-ಭೋಗಗಳು ಶಾಶ್ವತ ಎಂಬಂತೆ ಕಾಣುತ್ತಾರೆ ಹೊರತು, ನಿಜವಾಗಿ ಅವು ಶಾಶ್ವತವಲ್ಲ. ಶಾಶ್ವತವಾದ ಆನಂದ ಲಭಿಸುವುದು ಆತ್ಮಸಾಕ್ಷಾತ್ಕಾರ ಪಡೆದಾಗ ಮಾತ್ರ. ದುರದೃಷ್ಟವಶಾತ್ ಈ ಸತ್ಯದ ಅರಿವಿಲ್ಲದೆ ಮನುಷ್ಯರು ಆತ್ಮಸಾಕ್ಷಾತ್ಕಾರ ಪಡೆಯಬೇಕೆಂಬ ತೀವ್ರ ಆಕಾಂಕ್ಷೆ ಎಂದೂ ಹೊಂದುವುದೇ ಇಲ್ಲ.

    ಅವಿದ್ಯೆಯಿಂದ ಮನುಷ್ಯನಲ್ಲಿ ಈ ಪ್ರಪಂಚದ ಸುಖ-ಭೋಗಗಳ ಬಗ್ಗೆ ಅಸೀಮಿತವಾದ ‘ಕಾಮನೆ’ (ಕಾಮ) ಗಳು ಉದ್ಭವಿಸುತ್ತವೆ. ಈ ಕಾಮನೆಗಳ ಬೆನ್ನು ಹತ್ತಿದ ಅವನು ಆತ್ಮಸಾಕ್ಷಾತ್ಕಾರದ ಬಗ್ಗೆ ಚಿಂತಿಸುವುದೇ ಇಲ್ಲ. ಒಂದುವೇಳೆ ಕೆಲವು ವರ್ಷಗಳ ನಂತರ ಅವನಿಗೆ ಯಾವುದೋ ಸನ್ನಿವೇಶದಲ್ಲಿ ಆತ್ಮಸಾಕ್ಷಾತ್ಕಾರದ ಯೋಚನೆ ಬಂದರೂ, ಆ ಪಥದಲ್ಲಿ ನಡೆಯಲು ಬೇಕಾದ ಶ್ರದ್ಧೆ ಬರುವುದಿಲ್ಲ ಮತ್ತು ಅದಕ್ಕೆ ಬೇಕಾದ ಶಕ್ತಿ-ಸಾಮರ್ಥ್ಯ ಉಳಿದಿರುವುದಿಲ್ಲ. ಅದು ಹೇಗೆಂದರೆ, ಒಬ್ಬ ವ್ಯಕ್ತಿ ಒಂದು ನಿಶ್ಚಿತ ಸ್ಥಳವನ್ನು ತಲುಪಲು ಮನೆಯಿಂದ ಹೊರಡುತ್ತಾನೆ. ಆದರೆ ದಾರಿಯಲ್ಲಿ ಪ್ರಿಯ ಸ್ನೇಹಿತನನ್ನು ಕಂಡು ಅಲ್ಲಿಯೇ ನಿಂತು ಸರಸ-ಸಲ್ಲಾಪದಲ್ಲಿ ತೊಡಗುತ್ತಾನೆ. ಅದರಲ್ಲಿ ತಾನು ಎಲ್ಲಿಗೆ ಹೋಗಬೇಕೆಂಬ ತನ್ನ ನಿಜವಾದ ಉದ್ದೇಶವನ್ನೇ ಮರೆತುಬಿಡುತ್ತಾನೆ. ಇದಕ್ಕೆ ಇನ್ನೊಂದು ನಿದರ್ಶನವೇನೆಂದರೆ, ಒಬ್ಬ ವಿದ್ಯಾರ್ಥಿ ಮರುದಿನ ಪರೀಕ್ಷೆಗಾಗಿ ಓದಲು ಕುಳಿತಾಗ, ಅಲ್ಲಿಯೇ ಪಕ್ಕದಲ್ಲಿರುವ ಮೊಬೈಲ್ ಫೋನನ್ನು ಕೈಗೆತ್ತಿಕೊಂಡು ಅದರಲ್ಲಿ ಆಟವಾಡುವುದರಲ್ಲಿಯೇ ಮಗ್ನನಾಗಿ ಓದುವುದನ್ನೇ ಮರೆತು ಹೋಗುತ್ತಾನೆ. ಮತ್ತೊಂದು ನಿದರ್ಶನ: ಒಬ್ಬ ಸ್ಥೂಲಕಾಯದ ವ್ಯಕ್ತಿ ತನ್ನ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕೆಂದು ಮೊದಲು ಸಂಕಲ್ಪಿಸುತ್ತಾನೆ. ಆದರೆ, ರುಚಿಕರವಾದ ಆಹಾರದ ಆಕರ್ಷಣೆ ಹಾಗೂ ವ್ಯಾಯಾಮ ಮಾಡಲು ಅಡ್ಡಿಬರುವ ಆಲಸ್ಯಗಳಿಂದಾಗಿ ಅವನ ಸಂಕಲ್ಪ ಯಾವತ್ತೂ ಈಡೇರುವುದೇ ಇಲ್ಲ. ಹಾಗೆಯೇ ಆತ್ಮಸಾಕ್ಷಾತ್ಕಾರದ ಪಥದಲ್ಲಿ ನಡೆಯಬೇಕೆಂದುಕೊಳ್ಳುವ ವ್ಯಕ್ತಿಗೆ ಪ್ರಾಪಂಚಿಕ ಸುಖ-ಭೋಗಗಳ ಕಾಮನೆಗಳು ಅಡ್ಡಿಯನ್ನುಂಟು ಮಾಡುತ್ತವೆ.

    ಕಾಮನೆಗಳನ್ನು ಈಡೇರಿಸಿಕೊಳ್ಳಲು ಮನುಷ್ಯನು ಅನೇಕ ರೀತಿಯ ಕರ್ಮಗಳಲ್ಲಿ ಅವಿರತವಾಗಿ ತೊಡಗುತ್ತಾನೆ. ಯಾವುದೇ ಆಸೆ ಪೂರೈಸಲು ಯಾರಾದರೂ ಅದಕ್ಕಾಗಿ ಕೆಲಸ ಮಾಡಬೇಕಷ್ಟೇ. ಇಂತಹ ಆಸೆ ಬಹಳ ಉತ್ಕಟವಾದಾಗ ಅದಕ್ಕಾಗಿ ತಾನು ಮಾಡಬೇಕಾದ ಕರ್ಮ ಧರ್ಮಬದ್ಧವಾಗಿದೆಯೇ ಅಥವಾ ಅಧಾರ್ವಿುಕವಾಗಿದೆಯೇ ಎಂಬುದರ ವಿವೇಚನೆ ಮನುಷ್ಯನು ಸುಲಭವಾಗಿ ಕಳೆದುಕೊಳ್ಳುತ್ತಾನೆ. ನ್ಯೂಟನ್ನನ ಮೂರನೆಯ ಚಲನ ಸಿದ್ಧಾಂತಕ್ಕೆ ಅನುಗುಣವಾಗಿ- ‘ಪ್ರತಿಯೊಂದು ಕ್ರಿಯೆಗೂ ಅದಕ್ಕೆ ಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಬಂದೇ ಬರುತ್ತದೆ’. ಈ ಸಿದ್ಧಾಂತ ಮನುಷ್ಯ ಮಾಡುವ ಕರ್ಮಗಳಿಗೂ ಅನ್ವಯಿಸುತ್ತದೆ. ಧರ್ಮಬದ್ಧವಾದ ಕರ್ಮಗಳಿಗೆ ಒಳ್ಳೆಯ ಪ್ರತಿಫಲ ಬರುವಂತೆಯೇ, ಅಧಾರ್ವಿುಕ ಕರ್ಮಗಳಿಗೆ ಕೆಟ್ಟ ಪ್ರತಿಫಲ. ಇವುಗಳನ್ನು ಪ್ರತಿಯೊಬ್ಬರೂ ತಪ್ಪದೆ ಅನುಭವಿಸಲೇ ಬೇಕಾಗುತ್ತದೆ. ಇದನ್ನೇ ‘ಕರ್ಮ ಪ್ರಭಾವ’ವೆಂದು ಹೇಳುತ್ತಾರೆ. ಹೀಗೆ ಒಂದು ಕರ್ಮದ ಪ್ರಭಾವ ಇನ್ನೊಂದು ಕರ್ಮಕ್ಕೆ ಎಡೆಮಾಡಿಕೊಡುತ್ತದೆ; ಅದು ಮತ್ತೊಂದು ಕರ್ಮಕ್ಕೆ ದಾರಿಮಾಡುತ್ತದೆ. ಈ ರೀತಿಯಲ್ಲಿ ಕರ್ಮಗಳ ಸರಪಳಿ ನಿರಂತರವಾಗಿ ಬೆಳೆಯುತ್ತ ಮನುಷ್ಯ ಅದರಲ್ಲಿಯೇ ಸಿಕ್ಕಿಬೀಳುತ್ತಾನೆ. ಉದಾಹರಣೆಗೆ, ಒಬ್ಬ ವ್ಯಕ್ತಿ ಅಂಗಡಿಯಲ್ಲಿ ಹೊಸ ಕೈಗಡಿಯಾರ ನೋಡಿ ಅದನ್ನು ಕೊಂಡುಕೊಳ್ಳಲು ಆಶಿಸುತ್ತಾನೆ. ಆದರೆ ಅದರ ಬೆಲೆ ತುಂಬ ಹೆಚ್ಚಾಗಿದ್ದರೆ, ಅದಕ್ಕೆ ಬೇಕಾದ ಹಣ ತನ್ನಲ್ಲಿ ಇರದಿದ್ದರೂ, ಆ ಆಸೆ ಗೆಲ್ಲಲು ಸಾಧ್ಯವಾಗದೆ, ಅದಕ್ಕಾಗಿ ಸಾಲ ಮಾಡಲು ಮುಂದಾಗುತ್ತಾನೆ. ಮಾಡಿದ ಸಾಲ ತೀರಿಸಲು ಆತನು ಹೆಚ್ಚಿನ ಕೆಲಸ ಮಾಡಬೇಕಾಗಿ ಬರುತ್ತದೆ ಹಾಗೂ ತನ್ನ ವಿರಾಮದ ಸಮಯವನ್ನು ಕಳೆದುಕೊಳ್ಳಬೇಕಾಗಿ ಬರುತ್ತದೆ. ಇದರಿಂದ ಆತ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾನೆ ಹಾಗೂ ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ತನಗೆ ಇಷ್ಟವಾದ ಕೈಗಡಿಯಾರ ಪಡೆದಿರುವೆನೆಂಬ ಸಂತೋಷ ಕೆಲ ಸಮಯ ಮಾತ್ರ ಇರುತ್ತದೆ. ಆದರೆ, ಅದು ಮಿತಿಯಿಲ್ಲದ ಕಷ್ಟಕ್ಕೆ ಅವನನ್ನು ಗುರಿಮಾಡುತ್ತದೆ. ಹೀಗೆ ಯಾವುದೇ ಆಸೆ ಹತ್ತಿಕ್ಕಲು ಶಕ್ತಿಯಿಲ್ಲದ ಮನುಷ್ಯ ಕರ್ಮ ಹಾಗೂ ಅದರ ಪ್ರತಿಫಲಗಳ ಸುಳಿಗೆ ಸಿಕ್ಕುತ್ತಾನೆ. ಇದಕ್ಕೆ ಅಂತ್ಯವೇ ಇರುವುದಿಲ್ಲ. ಇಂತಹ ವ್ಯಕ್ತಿಯಲ್ಲಿ ಆತ್ಮಸಾಕ್ಷಾತ್ಕಾರದ ಆಕಾಂಕ್ಷೆ ಎಲ್ಲಿಂದ ಬರುತ್ತದೆ? ಒಂದುವೇಳೆ ಬಂದರೂ ಅದಕ್ಕಾಗಿ ಸಾಧನೆ ಮಾಡಲು ಬೇಕಾದ ಸಮಯ ಹಾಗೂ ವ್ಯವಧಾನಗಳು ಆತನಿಗೆ ಇರುವುದಿಲ್ಲ. ಇಂತಹ ವ್ಯಕ್ತಿಯ ಜೀವನವು ಕರ್ಮಗಳ ವಿಷವರ್ತಲದಲ್ಲಿಯೇ ಅಂತ್ಯವಾಗುತ್ತದೆ. ಆತ್ಮಸಾಕ್ಷಾತ್ಕಾರದ ಮಾತಂತೂ ದೂರವೇ ಉಳಿಯುತ್ತದೆ.

    ಈ ರೀತಿಯಲ್ಲಿ ಮನುಷ್ಯನ ಜೀವನದಲ್ಲಿ ಅವಿದ್ಯೆ, ಕಾಮನೆ ಹಾಗೂ ಕರ್ಮಗಳು ಸೃಷ್ಟಿಸುವ ಅಜ್ಞಾನದ ಕಗ್ಗಂಟನ್ನು ನಮ್ಮ ಶಾಸ್ತ್ರಗಳು ‘ಹೃದಯಗ್ರಂಥಿ’ ಎಂದು ಕರೆಯುತ್ತವೆ. ಈ ಹೃದಯಗ್ರಂಥಿ ಮಾನವನು ಅಜ್ಞಾನ ಹಾಗೂ ಕರ್ಮಗಳ ನಿರಂತರ ಬಂಧನಕ್ಕೆ ಸಿಲುಕಲು ಮೂಲ ಕಾರಣ. ಇಂತಹ ಬಂಧನದಿಂದ ಮುಕ್ತಿ ಪಡೆಯಲು ಮನುಷ್ಯನಿಗೆ ಒಂದೇ ಒಂದು ದಾರಿಯಿದೆ. ಅದುವೇ ಆತ್ಮಸಾಕ್ಷಾತ್ಕಾರದ ದಾರಿ. ಈ ದಾರಿಯಲ್ಲಿ ನಡೆಯಬೇಕೆಂಬ ಆಕಾಂಕ್ಷೆ ಬೆಳೆಸಿಕೊಳ್ಳಲು ಇರುವ ದಾರಿಯೂ ಒಂದೇ. ಅದುವೇ ಆತ್ಮಜ್ಞಾನಿಗಳ ಸಂಗ ಹಾಗೂ ಸಾನ್ನಿಧ್ಯ. ಆದ್ದರಿಂದಲೇ ಇಂತಹ ಜ್ಞಾನಿಗಳ ಸಹವಾಸ ಮಾನವ ಜೀವನದಲ್ಲಿ ಅಮೂಲ್ಯ ಭಾಗ್ಯವೆಂದು ಶಾಸ್ತ್ರಗಳು ಸಾರುತ್ತವೆ. ಏಕೆಂದರೆ, ಈ ಭಾಗ್ಯವನ್ನು ಪಡೆಯದೆ ಯಾರಲ್ಲಿಯೂ ಆತ್ಮಸಾಕ್ಷಾತ್ಕಾರದ ಬಗ್ಗೆ ತೀವ್ರ ಆಕಾಂಕ್ಷೆ ಉಂಟಾಗುವುದಿಲ್ಲ. ಇಂತಹ ಆಕಾಂಕ್ಷೆ ಪಡೆದವನಿಗೆ ಮಾತ್ರ ಆತ್ಮದರ್ಶನವಾಗುತ್ತದೆಯೆಂದು ಮುಂಡಕೋಪನಿಷತ್ತು ತಿಳಿಸುತ್ತದೆ. ಈ ಉಪನಿಷತ್ತಿನಲ್ಲಿ ‘ಭಿದ್ಯತೇ ಹೃದಯಗ್ರಂಥಿಃ, ಛಿಂದ್ಯಂತೇ ಸರ್ವ ಸಂಶಯಾಃ, ಕ್ಷೀಯಂತೇ ಚಾಸ್ಯಕರ್ವಣೀ, ತಸ್ಮಿನ್ ದೃಷ್ಟೀ ಪರಾವರೇ’ ಎಂಬ ಉದ್ಭೋದಕ ಶ್ಲೋಕವಿದೆ. ಆತ್ಮದರ್ಶನ ಮಾಡಿದವನ ಹೃದಯಗ್ರಂಥಿ ಬೇಧಿಸಲ್ಪಡುತ್ತದೆ, ಅವನ ಎಲ್ಲ ಸಂಶಯಗಳೂ ನಶಿಸಿ ಹೋಗುತ್ತವೆ ಹಾಗೂ ಅವನು ಕರ್ಮ ಬಂಧನದಿಂದ ವಿಮುಕ್ತನಾಗುತ್ತಾನೆ. ಆತ್ಮದರ್ಶನ ಮಾಡಿದ ವ್ಯಕ್ತಿಯ ಸ್ಥಿತಿ ಹೇಗಿರುತ್ತದೆ? ಆತ ಪಡೆಯುವ ಶಾಂತಿ-ಆನಂದಗಳ ಅನುಭವ ಹೇಗಿರುತ್ತದೆ? ಎಂಬುದನ್ನು ಮುಂದಿನ ಲೇಖನದಲ್ಲಿ ತಿಳಿಯೋಣ.

    (ಲೇಖಕರು ವಿದ್ವಾಂಸರು, ಸಂಸ್ಕೃತಿ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts