More

    ಕಾಶ್ಮೀರದಲ್ಲಿ ಪುನರ್ನಿರ್ಮಾಣವಾದ ಶಾರದಾ ಮಂದಿರ ಲೋಕಾರ್ಪಣೆ ಮಾಡಿದ ಅಮಿತ್ ಷಾ

    ತೀತ್ವಾಲ್ (ಜಮ್ಮು-ಕಾಶ್ಮೀರ): ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಪುನರ್ ನಿರ್ಮಾಣಗೊಂಡ ಶಾರದಾ ಮಂದಿರವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ, ವರ್ಚುವಲ್ ಕಾರ್ಯಕ್ರಮದ ಮೂಲಕ ಲೋಕಾರ್ಪಣೆಗೊಳಿಸಿದರು.

    1948ರಲ್ಲಿ ಪಾಕಿಸ್ತಾನಿ ಮೂಲಭೂತವಾದಿಗಳ ಆಕ್ರಮಣದಿಂದ ಸಂಪೂರ್ಣ ಹಾನಿಗೊಳಗಾಗಿದ್ದ ಶಾರದಾ ಮಂದಿರವನ್ನು ಆರ್ಟಿಕಲ್ 370 ರದ್ದತಿ ನಂತರ ಪುನರ್‌ ನಿರ್ಮಾಣಗೊಳಿಸಿ ಯುಗಾದಿಯ ಶುಭ ದಿನದಂದು ಲೋಕಾರ್ಪಣೆಗೊಳಿಸಲಾಗಿದೆ. ಕರ್ನಾಟಕದ ಬಿಡದಿಯಿಂದ ತೆಗೆದುಕೊಂಡು ಹೋದ ಗ್ರಾನೈಟ್ ಬಳಸಿ ಈ ಮಂದಿರವನ್ನು ಮರುನಿರ್ಮಾಣ ಮಾಡಲಾಗಿದೆ. ಶೃಂಗೇರಿ ಶಾರದಾ ಮಠದಿಂದ ಪಂಚಲೋಹದ ಶಾರದಾ ಮೂರ್ತಿಯನ್ನು ಇತ್ತೀಚೆಗೆ ಪೂರ್ಣ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಳುಹಿಸಲಾಗಿತ್ತು. ಈ ವಿಗ್ರಹ ಜನವರಿ 24ರಿಂದ ದೇಶಾದ್ಯಂತ ಸಂಚರಿಸಿ ತೀತ್ವಾಲ್ ತಲುಪಿತ್ತು.

    ಇದನ್ನೂ ಓದಿ: ರಾಮಮಂದಿರ ರಾಷ್ಟ್ರ ಭಕ್ತಿ, ಸ್ವಾಭಿಮಾನದ ಪ್ರತೀಕ

    ಮಂದಿರ ಲೋಕಾರ್ಪಣೆ ಮಾಡಿ ಮಾತನಾಡಿದ ಅಮಿತ್ ಷಾ, ಒಂದು ಕಾಲದಲ್ಲಿ ಉತ್ಕೃಷ್ಟ ಜ್ಞಾನದ ಕೇಂದ್ರವೆಂದು ಪರಿಗಣಿಸಲಾಗುತ್ತಿದ್ದ ಶಾರದಾ ಪೀಠಕ್ಕೆ ಭರತ ಖಂಡದ ಸಮಸ್ತ ಭಾಗಗಳಿಂದ ಜ್ಞಾನಾರ್ಜನೆಗಾಗಿ ಪಂಡಿತರು ಆಗಮಿಸುತ್ತಿದ್ದರು. ಆದ್ದರಿಂದ ಇದು ಮಹಾಶಕ್ತಿ ಪೀಠವೆಂದು ಕೂಡ ಕರೆಯಲ್ಪಡುತ್ತಿತ್ತು. ಆದಿ ಶಂಕರರು ಇಲ್ಲಿ ತಾಯಿ ಶಾರದೆ ಕುರಿತಾಗಿ ಅನೇಕ ಸ್ತುತಿಗಳನ್ನು ರಚಿಸಿದ್ದರು ಎಂದು ಸ್ಮರಿಸಿದರು.

    ಆರ್ಟಿಕಲ್ 370 ರದ್ದತಿ ನಂತರ ಇಡೀ ಕಾಶ್ಮೀರ ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ಸನಾತನ, ಸಾಂಸ್ಕೃತಿಕ ಪುನರುತ್ಥಾನ ಕೂಡ ಇಲ್ಲಿ ನಡೆಯುತ್ತಿದೆ. ಈ ದೇಗುಲದ ಮರುನಿರ್ಮಾಣ ಕೂಡ ಹೊಸ ಅಧ್ಯಾಯವೊಂದಕ್ಕೆ ಸಾಕ್ಷಿಯಾಗುತ್ತಿರುವುದು ಗಮನಾರ್ಹ. ಶಾರದಾ ಮಂದಿರಕ್ಕೆ ಆದಿ ಶಂಕರರ ಕಾಲದಲ್ಲಿದ್ದ ಭವ್ಯತೆಯನ್ನು ಮತ್ತೆ ತಂದುಕೊಡುವ ನಿಟ್ಟಿನಲ್ಲಿ ಇದು ಒಂದು ಪ್ರಯತ್ನ. ನಾನ್‌ಕಾನಾ ಸಾಹಿಬ್ ಭೇಟಿಗೆ ಕರ್ತಾರ್‌ಪುರ ಕಾರಿಡಾರ್ ಆರಂಭಿಸಿದಂತೆ, ಶಾರದಾ ಪೀಠಕ್ಕೆ ಕೂಡ ವಾರ್ಷಿಕ ತೀರ್ಥಯಾತ್ರೆ ಆಯೋಜನೆ ಕುರಿತು ಪರಿಶೀಲನೆ ನಡೆಸುವುದಾಗಿ ಅಮಿತ್ ಷಾ ಭರವಸೆ ನೀಡಿದರು.

    ಇದನ್ನೂ ಓದಿ: ಶಾರದಾಂಬೆ ರಥಯಾತ್ರೆ ಕಾಶ್ಮೀರದತ್ತ

    ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಜಮ್ಮು-ಕಾಶ್ಮೀರದ ಕಿಶನ್ ಗಂಗಾ ನದಿಯ ದಡದಲ್ಲಿ ಇಂದು ಶಾರದಾ ಮಂದಿರವು ಲೋಕಾರ್ಪಣೆಗೊಂಡಿದ್ದು, ನಮ್ಮ ಶೃಂಗೇರಿ ಶಂಕರಾಚಾರ್ಯರ ಆಶೀರ್ವಾದವಿದೆ. 1 ಸಾವಿರ ವರ್ಷದ ಹಿಂದೆ ಸನಾತನ ಪರಂಪರೆಯ ಪುನರುತ್ಥಾನದ ಉದ್ದೇಶದಿಂದ ದೇಶದ ನಾಲ್ಕೂ ಭಾಗಗಳಲ್ಲಿ ಶಾರದಾ ಪೀಠ ಸ್ಥಾಪನೆ ಮಾಡಿ ‘ಏಕ್ ಭಾರತ್, ಶ್ರೇಷ್ಠ ಭಾರತ್’ ಪರಿಕಲ್ಪನೆಗೆ ಬುನಾದಿ ಹಾಕಿದ್ದು, ಇಂದು ಕರ್ನಾಟಕದ ತುಂಗಾ ತೀರದಿಂದ ಕಾಶ್ಮೀರದ ಕಿಶನ್ ಗಂಗಾ ನದಿ ದಡದವರೆಗೆ ಮತ್ತೊಮ್ಮೆ ತಾಯಿ ಶಾರದಾಂಬೆಯ ಪುನರುಜ್ಜೀವನ, ಪುನರುತ್ಥಾನ ಕಾರ್ಯ ನಡೆಯುತ್ತಿದೆ. ಇದರಿಂದ ಪ್ರವಾಸೋದ್ಯಮ, ತೀರ್ಥಯಾತ್ರೆಯ ಕಾರಣಗಳಿಗಾಗಿ ಹೆಚ್ಚಿನ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ ಎಂದರು.

    ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಜಮ್ಮು ಕಾಶ್ಮೀರ ಬಿಜೆಪಿ ಘಟಕದ ಅಧ್ಯಕ್ಷ ರವೀಂದ್ರ ರೈನಾ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts