More

    ನಲವತ್ತು ವರ್ಷಗಳ ಹಿಂದೆ ನಮ್ಮ ಎಲೆಕ್ಷನ್ ಪ್ರಚಾರ ಹೇಗಿತ್ತು ಗೊತ್ತಾ?!

    ಬೆಂಗಳೂರು: ಈಗಿನ ಎಲೆಕ್ಷನ್‌ಗೂ ಹಿಂದೆ ನಡೆಯುತ್ತಿದ್ದ ಎಲೆಕ್ಷನ್ ಗೂ ಅಜಗಜಾಂತರ. ಆಗೆಲ್ಲ ಅಭ್ಯರ್ಥಿಗಳು ಹೆಚ್ಚು ಮನೆ ಮನೆಗೆ ಹೋಗಿ ಪ್ರಚಾರ ಮಾಡುತ್ತಿದ್ದುದೇ ಹೆಚ್ಚು. ಈಗಿನಂತೆ ಪ್ರಚಾರದ ಅಬ್ಬರ ಆಗ ಇರಲಿಲ್ಲ. ಹಾಗಾದರೆ ಹೇಗಿತ್ತು ಆ ಕಾಲದ ಪ್ರಚಾರ? ಬೈಲಹೊಂಗಲದ ಮಾಜಿ ಶಾಸಕ ಶಿವಾನಂದ ಕೌಜಲಗಿ ತಮ್ಮ ಆಗಿನ ನೆನಪುಗಳನ್ನು ಇಲ್ಲಿ ಮೆಲುಕು ಹಾಕಿದ್ದಾರೆ.

    ‘‘ನಾನು 1985ರಲ್ಲಿ ಕಾಂಗ್ರೆಸ್ (ಓ) ಪಕ್ಷದಿಂದ ಶಾಸಕನಾಗಿ ಚುನಾಯಿತನಾಗಿದ್ದೆ. ನನಗೀಗ 83 ವರ್ಷ ವಯಸ್ಸು. ಈಗಿರುವಷ್ಟು ಚುನಾವಣೆ ಭರಾಟೆ ಆಗ ಇರಲಿಲ್ಲ. ಮೆರಿಟ್ ಆಧಾರದಲ್ಲಿ ಅಂದು ಚುನಾವಣೆಗಳು ನಡೆಯುತ್ತಿದ್ದವು. ಮೆರಿಟ್ ಅಂದರೆ ಅಭಿವೃದ್ಧಿ ಕಾರ್ಯದ ಮೇಲೆ ಜನರೇ ನಮ್ಮನ್ನು ಆರಿಸುತ್ತಿದ್ದರು. 1985ರಲ್ಲಿ ಕಾಂಗ್ರೆಸ್ (ಓ) ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಎಚ್.ಡಿ. ದೇವೇಗೌಡರು ನಾನು ಟಿಕೆಟ್ ಬಯಸದಿದ್ದರೂ ನನಗೆ ಪಕ್ಷದ ಬಿ-ಫಾರ್ಮ್ ನೀಡಿದರು. ನನ್ನೊಂದಿಗೆ ಲೀಲಾದೇವಿ ಆರ್. ಪ್ರಸಾದ್, ದೇವಿರೆಡ್ಡಿ ಸೇರಿ ನಾಲ್ವರಿಗೆ ಒತ್ತಾಯದಿಂದ ಟಿಕೆಟ್ ಕೊಟ್ಟಿದ್ದರು. ಅಂಬಾಸಿಡರ್ ಕಾರಿನಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಪ್ರಚಾರ ಮಾಡುತ್ತಿದ್ದೆವು. ಹಣ, ಹೆಂಡ ಹಂಚುವುದು ಗೊತ್ತೇ ಇರಲಿಲ್ಲ. ಪ್ರಚಾರಕ್ಕೆ ಹೋದಾಗ ಊರಿನ ಹಿರಿಯರೇ ನಮಗೆ ಚಹಾ, ಚುರುಮುರಿ, ಊಟ ಕೊಡುತ್ತಿದ್ದರು.

    ಆ ಚುನಾವಣೆಯಲ್ಲಿ ನಾನು 30 ಸಾವಿರ ರೂ. ಖರ್ಚು ಮಾಡಿದ್ದು ನೆನಪಿದೆ. ನಮ್ಮ ತಂದೆ ಹೇಮಣ್ಣ ಕೌಜಲಗಿ ಅವರು ಎಂಪಿ ಚುನಾವಣೆಗೆ ನಿಂತಾಗ 18 ಸಾವಿರ ರೂ. ಖರ್ಚು ಮಾಡಿದ್ದರು. ಆ ಸಂದರ್ಭದಲ್ಲಿ ವೀರೇಂದ್ರ ಪಾಟೀಲರು ಬಹಳ ಜನಪ್ರಿಯರಾಗಿದ್ದರು. ಅವರು ಯಾವುದಾದರೂ ಕ್ಷೇತ್ರಕ್ಕೆ ಬಂದು ಒಮ್ಮೆ ಭಾಷಣ ಮಾಡಿ ಹೋದರೆ ಆ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದರು. ಈಗಿರುವಷ್ಟು ಚುನಾವಣೆ Rallyಗಳು ಅಂದು ಇರಲಿಲ್ಲ. ಗೀಗಿಪದ ಹಾಡುವ ಮೂಲಕ ಪ್ರಚಾರ ಕೈಗೊಳ್ಳುತ್ತಿದ್ದೆವು. ಗೀಗಿಪದಕ್ಕೆ ಜನ ಹೆಚ್ಚು ಸೇರುತ್ತಿದ್ದರು. ಮೂರು ಬಾರಿಯೂ ಸತತವಾಗಿ ಐದಾರು ಸಾವಿರ ಮತಗಳ ಅಂತರದಿಂದ ಜಯ ಗಳಿಸಿದ್ದೇನೆ. ನಮ್ಮ ತಂದೆ ಹೇಮಣ್ಣ ಕೌಜಲಗಿ ಎಂಪಿ ಆದ ಬಳಿಕ ಶಾಸಕರಾಗಿ, ಸಚಿವರೂ ಆಗಿದ್ದರು. ಮಲಪ್ರಭಾ ಯೋಜನೆ ಮಾಡಿದ್ದೇ ನಮ್ಮ ತಂದೆ. ಆ ಕಾಲದಲ್ಲಿ ಚುನಾವಣಾ ಅಕ್ರಮಗಳು, ಗಲಾಟೆಗಳು ಆಗಿರುವುದು ನಮಗೆ ಕಂಡುಬಂದಿಲ್ಲ. ಮತದಾನ ಆರಂಭವಾಗುವುದಕ್ಕೂ ಮುನ್ನ ಮತಪೆಟ್ಟಿಗೆಗಳಿಗೆ ಪೂಜೆ ಮಾಡಲಾಗುತ್ತಿತ್ತು. ಕುರುಬರಿಂದಲೇ ಮತಪೆಟ್ಟಿಗೆಗೆ ಪೂಜೆ ಮಾಡಿಸಲಾಗುತ್ತಿತ್ತು. ಅವರೇ ಪ್ರಥಮ ಮತದಾನ ಮಾಡುತ್ತಿದ್ದರು. ಆ ಬಳಿಕ ಉಳಿದೆಲ್ಲರ ಮತ ಚಲಾವಣೆ ನಡೆಯುತ್ತಿತ್ತು’’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts