More

    ಕರೊನಾ ಭೀತಿ ನಡುವೆ ತುಮಕೂರು ಜಿಲ್ಲೆಯಲ್ಲಿ ಜನಜೀವನ ಸಹಜ

    ತುಮಕೂರು: ಜಿಲ್ಲೆಯಾದ್ಯಂತ ಕರೊನಾ ಭೀತಿಯ ನಡುವೆಯೂ ಶನಿವಾರ ಜನಜೀವನ ಸ್ಥಿತಿ ಸಹಜವಾಗೇ ಇತ್ತು.!
    ಮಹಾಮಾರಿಯ ಭೀತಿ ಹಿನ್ನೆಲೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

    ನಗರದ ಬೀದಿಬದಿ ವ್ಯಾಪಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ, ಕತ್ತರಿಸಿದ ಹಣ್ಣುಗಳ ಮಾರಾಟ, ಮಾಂಸಾಹಾರಿ ಖಾದ್ಯ ತಯಾರಕರು, ಮಾರಾಟಗಾರರು, ತೆರೆದ ಸ್ಥಳಗಳಲ್ಲಿ ಆಹಾರ ತಯಾರಿಸಿ ಮಾರಾಟ ಮಾಡುವುದಕ್ಕೂ ಪಾಲಿಕೆ ನಿರ್ಬಂಧ ಹೇರಿದೆ, ಈ ಹಿನ್ನೆಲೆಯಲ್ಲಿ ಬೀದಿಬದಿ ವ್ಯಾಪಾರ ಚಟುವಟಿಕೆ ಬಂದ್ ಆಗಿತ್ತು. ಎಂದಿನಂತೆ ನಗರದ ಹೋಟೆಲ್‌ಗಳು ಕಾರ್ಯನಿರ್ವಹಿಸಿದವು.

    ರೈಲ್ವೆ, ಬಸ್ ನಿಲ್ದಾಣ ಖಾಲಿ: ತುಮಕೂರು ರೈಲ್ವೆ ಹಾಗೂ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ರಾಜಧಾನಿ ಬೆಂಗಳೂರಿನತ್ತ ತೆರಳುತ್ತಿದ್ದ ಬಸ್‌ಗಳು ಬಹುತೇಕ ಖಾಲಿಯಿದ್ದವು. ನಗರ ಸಾರಿಗೆ ಬಸ್‌ಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿತ್ತು. ಶಾಲಾ-ಕಾಲೇಜುಗಳ ರಜೆ ಹಿನ್ನೆಲೆಯಲ್ಲಿ ತುಮಕೂರಿನಿಂದ ಸ್ವಂತ ಊರುಗಳಿಗೆ ತೆರಳುತ್ತಿದ್ದವರ ಸಂಖ್ಯೆ ಹೆಚ್ಚಿತ್ತು. ತುಮಕೂರು ವಿವಿ ಸೇರಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ದ್ವಿತೀಯ ಪಿಯು ಪರೀಕ್ಷೆಗಳು ನಿರಾತಂಕವಾಗಿ ನಡೆದವು. ಸಿನಿಮಾ ಮಂದಿರಗಳು ಬಂದ್ ಆಗಿದ್ದವು. ಅಂಗಡಿ- ಮುಗ್ಗಂಟುಗಳು ತೆರೆದಿದ್ದ ವಾದರೂ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ವ್ಯಾಪಾರ- ವಹಿವಾಟು ಕ್ಷೀಣಿಸಿತ್ತು.

    ವದಂತಿಗೆ ಕಟ್ಟುನಿಟ್ಟಿನ ಕ್ರಮ: ಜಿಲ್ಲೆಯಲ್ಲಿ ವೈರಸ್ ಕುರಿತು ಸುಳ್ಳು ಸುದ್ದಿ ಹಾಗೂ ವದಂತಿಗಳನ್ನು ಹಬ್ಬಿಸುವವರ ವಿರುದ್ಧ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಮುಂದಾಗಿದೆ. ಸಾಮಾಜಿಕ ಜಾಲಾತಾಣಗಳ ಮೂಲಕ ಸುಳ್ಳುಸುದ್ದಿ ಹಾಗೂ ವದಂತಿಗಳನ್ನು ಹಬ್ಬಿಸುತ್ತಿದ್ದು ಸಾರ್ವಜನಿಕರು ಈ ವದಂತಿಗಳಿಗೆ ಕಿವಿಗೊಡಬಾರದು. ವೈರಸ್ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಮುಂಜಾಗ್ರತಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ ಹೇಳಿದರು.

    ಊರುಗಳಿಗೆ ತೆರಳಿದ ಮಠದ ಮಕ್ಕಳು : 1-6ನೇ ತರಗತಿ ಪರೀಕ್ಷೆಗಳು ಮುಗಿದ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠದ ಮಕ್ಕಳು ತಮ್ಮ ಊರುಗಳಿಗೆ ಶುಕ್ರವಾರ ಸಂಜೆ ತೆರಳಿದ್ದರು. ಶನಿವಾರ 8ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಮುಗಿದಿದ್ದು ಇನ್ನಷ್ಟು ಮಕ್ಕಳು ಮನೆಗೆ ತೆರಳಿದರು. ಇನ್ನು 7ನೇ ತರಗತಿ ಪರೀಕ್ಷೆ ಸೋಮವಾರ ಆರಂಭವಾಗಲಿದ್ದು, ಶನಿವಾರ ಮುಗಿಯಲಿದೆ. 9ನೇ ತರಗತಿ ಪರೀಕ್ಷೆ ಗುರುವಾರ ಮುಗಿಯಲಿದ್ದು ಮುಂದಿನ ವಾರದ ಹೊತ್ತಿಗೆ 10ನೇ ಹಾಗೂ ಪದವಿ ವಿದ್ಯಾರ್ಥಿಗಳು ಹೊರತುಪಡಿಸಿ ಮಠ ಬಹುತೇಕ ಖಾಲಿಯಾಗಲಿದೆ.

    ಪಿಜಿ , ಕೋಚಿಂಗ್ ಸೆಂಟರ್ ಬಂದ್ : ಪಿಜಿ, ಕೋಚಿಂಗ್ ಸೆಂಟರ್, ಜಿಮ್ ಸೆಂಟರ್‌ಗಳಲ್ಲದೆ ಈಜುಕೊಳಗಳನ್ನು ಬಂದ್ ಮಾಡುವಂತೆ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿನ ಬಹುತೇಕ ಪಿಜಿಗಳಲ್ಲಿ ವಿದ್ಯಾರ್ಥಿಗಳು ಊರುಗಳಿಗೆ ತೆರಳುತ್ತಿದ್ದ ದೃಶ್ಯ ಕಂಡುಬಂತು.

    ಕಲ್ಯಾಣ ಮಂಟಪಗಳಿಗೆ ನೋಟಿಸ್: ಕಲ್ಯಾಣ ಮಂಟಪಗಳಲ್ಲಿ ಮದುವೆ ಸಮಾರಂಭ ಸಂದರ್ಭದಲ್ಲಿ 100ಕ್ಕಿಂತ ಹೆಚ್ಚು ಜನದಟ್ಟಣೆ ಸೇರುವಂತಿಲ್ಲ ಎಂಬ ನೋಟಿಸ್‌ಗಳನ್ನು ಕಲ್ಯಾಣ ಮಂಟಪಗಳಿಗೆ ನೀಡಲಾಗಿದೆ. ಹಾಗಾಗಿ, ಮದುವೆ ಸಮಾರಂಭ, ಸಣ್ಣಪುಟ್ಟ ಕನ್ವೆನ್ಷನ್ ಹಾಲ್‌ಗಳಲ್ಲಿನ ಬರ್ತಡೇ, ನಿಶ್ಚಿತಾರ್ಥ, ನಾಮಕರಣ ಸಮಾರಂಭಗಳಿಗೂ ಬ್ರೇಕ್ ಬಿದ್ದಂತಾಗಿದೆ. ಇನ್ನು ತರಕಾರಿ ಅಂಗಡಿಗಳಿಗೆ, ಹೋಟೆಲ್, ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಶುಚಿತ್ವ ಕಾಪಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

    ಲಾಡ್ಜ್‌ಗಳು ಖಾಲಿ: ನಗರದ ಪ್ರಮುಖ ಲಾಡ್ಜ್‌ಗಳತ್ತ ಪ್ರವಾಸಿಗರು, ಹೊರಗಿನಿಂದ ಬರುವರ ಸಂಖ್ಯೆ ಪೂರ್ಣವಾಗಿ ಕ್ಷೀಣಿಸಿತ್ತು. ಬಹುತೇಕ ಲಾಡ್ಜ್‌ಗಳು ಖಾಲಿ, ಖಾಲಿ. ಒಂದು ವಾರ ಬ್ಯುಸಿನೆಸ್‌ಗೆ ಹೊಡೆತಬೀಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts