More

    ಡಂಪಿಂಗ್ ಯಾರ್ಡ್ ಸುತ್ತಲಿನ ಹಳ್ಳಿಗಳಿಗೆ ಸೌಕರ್ಯ: ಬಿಬಿಎಂಪಿಯಿಂದ 43 ಕೋಟಿ ರೂ. ಮೊತ್ತದ ಟೆಂಡರ್

    ಬೆಂಗಳೂರು: ನಗರದ ಹೊರವಲಯಗಳಲ್ಲಿರುವ ಡಂಪಿಂಗ್ ಯಾರ್ಡ್ ಸುತ್ತಲಿನ ಗ್ರಾಮಗಳಲ್ಲಿ ವಿವಿಧ ಮೂಲಸೌಕರ್ಯ ಒದಗಿಸಲು ಪಾಲಿಕೆಯು 43.82 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಆಹ್ವಾನಿಸಿದೆ.

    ಮಹಾನಗರದಲ್ಲಿ ಉತ್ಪತ್ತಿಯಾಗುವ ಬಹುತೇಕ ತ್ಯಾಜ್ಯವು ಪಾಲಿಕೆ ಹೊರಗಿರುವ ಡಂಪಿಂಗ್ ಯಾರ್ಡ್‌ಗಳಲ್ಲಿ (ಭೂಭರ್ತಿ ಕೇಂದ್ರ) ಸುರಿಯುತ್ತಿರುವ ಕಾರಣ ಅಲ್ಲಿನ ಗ್ರಾಮಗಳು ಅನೈರ್ಮಲ್ಯಕ್ಕೆ ಒಳಗಾಗಿವೆ. ದುರ್ವಾಸನೆ ಬೀರುವ ಸ್ಥಿತಿಯಲ್ಲೇ ದಿನದೂಡಬೇಕಾದ ಅನಿವಾರ್ಯತೆ ಇದೆ. ಜತೆಗೆ ಭೂಭರ್ತಿ ಕೇಂದ್ರದಿಂದ ಹೊರಹೋಗುವ ವಿಷಕಾರಿ ಅಂಶಗಳು ಗ್ರಾಮದ ಸುತ್ತಲಿನ ಅಂತರ್ಜಲ ಸೇರುತ್ತಿದೆ. ಇದರಿಂದ ರೋಗ-ರುಜಿನಕ್ಕೆ ಆಸ್ಪದ ನೀಡಿವೆ. ಈ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಆ ಭಾಗದ ಶಾಸಕರು ಪಾಲಿಕೆ ಹಾಗೂ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ.

    ಕೆಲ ವರ್ಷಗಳಿಂದ ಮಹದೇವಪುರ, ಬ್ಯಾಟರಾಯನಪುರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಡಂಪಿಂಗ್ ಯಾರ್ಡ್‌ಗಳಿಂದ ಸಮಸ್ಯೆ ಆಗಿದ್ದಕ್ಕೆ ಸ್ಥಳೀಯರು ಕೋರ್ಟ್ ಮೆಟ್ಟಿಲು ಹತ್ತಿದ್ದರು. ಇದನ್ನು ಗಮನಿಸಿ ಪಾಲಿಕೆಯು ಅಂತಹ ಗ್ರಾಮಗಳನ್ನು ಗುರುತಿಸಿ ಮೂಲಸೌಕರ್ಯ ಒದಗಿಸಲು ಅನುದಾನ ನೀಡಿತ್ತು. ಇದರಿಂದ ಅಲ್ಪಸ್ವಲ್ಪ ಅಭಿವೃದ್ಧಿ ಕಂಡಿದ್ದರೂ, ಇನ್ನೂ ಸಾಕಷ್ಟು ಸಮಸ್ಯೆ ಹಾಗೆಯೇ ಉಳಿದಿವೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯ 2023-24ನೇ ಸಾಲಿನ ಬಜೆಟ್‌ನಲ್ಲಿ ಒಂದಿಷ್ಟು ಅನುದಾನ ಮೀಸಲಿಡಲಾಗಿತ್ತು. ಇದೇ ಹಣವನ್ನು ಬಳಸಿಕೊಂಡು ಮತ್ತೊಮ್ಮೆ ಸಮಸ್ಯಾತ್ಮಕ ಹಳ್ಳಿಗಳಲ್ಲಿ ಮೂಲಸೌಕರ್ಯ ಕಲ್ಪಿಸಿ ಹಳ್ಳಿಗರ ನೆರವಿಗೆ ಧಾವಿಸಲು 8 ಪ್ಯಾಕೇಜ್‌ಗಳಲ್ಲಿ ಟೆಂಡರ್ ಆಹ್ವಾನಿಸಲಾಗಿದೆ

    ದೊಡ್ಡಬಳ್ಳಾಪುರ ಕೇಂದ್ರಕ್ಕೂ ಅನುದಾನ

    ಭೂಭರ್ತಿ ಕೇಂದ್ರಗಳ ಸುತ್ತಲಿನ ಹಳ್ಳಿಗಳಿಗೆ ಮೂಲಸೌಕರ್ಯ ಒದಗಿಸುವ 8 ಸ್ಥಳಗಳಲ್ಲಿ ಏಳು ಪಾಲಿಕೆ ವ್ಯಾಪ್ತಿಯಲ್ಲಿವೆ. ಇನ್ನುಳಿದ ಒಂದು ಕೇಂದ್ರ ದೊಡ್ಡಬಳ್ಳಾಪುರ ತಾಲೂಕಿನಲ್ಲಿದ್ದು, ಅಲ್ಲಿನ ಎಂಎಸ್‌ಜಿಪಿ ಸಂಸರಣಾ ಘಟಕದ ಸುತ್ತಲಿನ ಗ್ರಾಮಗಳ ಅಭಿವೃದ್ಧಿಗೂ 1.59 ಕೋಟಿ ರೂ. ಟೆಂಡರ್ ಕರೆಯಲಾಗಿದೆ. ಈ ಕೇಂದ್ರವು ಸೇರಿ ಬೊಮ್ಮನಹಳ್ಳಿ ಕೇಂದ್ರದ ಪ್ಯಾಕೇಜ್ ಜಾರಿ ಮೂರು ತಿಂಗಳು ಕಾಲಾವಕಾಶ ನಿಗದಿಯಾಗಿದೆ. ಉನ್ನುಳಿದ ಆರು ಕೇಂದ್ರಗಳಿಗೆ ಸಂಬಂಧಿಸಿದ ಕಾಮಗಾರಿಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಲು ಗಡುವು ವಿಧಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

    ಭೂಭರ್ತಿ ಸುತ್ತಲಿನ ಹಳ್ಳಿಗೆ ಸೌಕರ್ಯದ ಟೆಂಡರ್ ವಿವರ:
    ಡಂಪಿಂಗ್ ಯಾರ್ಡ್ ಹೆಸರು ಮತಕ್ಷೇತ್ರ ಟೆಂಡರ್ ಮೊತ್ತ
    ಬಿಂಗಿಪುರ, ಲಕ್ಷ್ಮೀಪುರ ಬೆಂಗಳೂರು ದಕ್ಷಿಣ 8.06 ಕೋಟಿ ರೂ.
    ಹುಲ್ಲಹಳ್ಳಿ, ಲಕ್ಷ್ಮೀಪುರ ಬೆಂಗಳೂರು ದಕ್ಷಿಣ 8.06 ಕೋಟಿ ರೂ.
    ಕೋಗಿಲು ಹಾಗೂ ಇತರ ಬ್ಯಾಟರಾಯನಪುರ 6.39 ಕೋಟಿ ರೂ.
    ವಾರ್ಡ್ 10, 11, 13 ಬ್ಯಾಟರಾಯನಪುರ 6.39 ಕೋಟಿ ರೂ.
    ಕಣ್ಣೂರು ಕೇಂದ್ರ ಮಹದೇವಪುರ 6.16 ಕೋಟಿ ರೂ.
    ಮಿಟ್ಟಗಾನಹಳ್ಳಿ ಮಹದೇವಪುರ 5.57 ಕೋಟಿ ರೂ.
    ಕೆಸಿಡಿಸಿ ಘಟಕ ಬೊಮ್ಮನಹಳ್ಳಿ 1.59 ಕೋಟಿ ರೂ.
    ಎಂಎಸ್‌ಜಿಪಿ ದೊಡ್ಡಬಳ್ಳಾಪುರ 1.59 ಕೋಟಿ ರೂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts