More

    ಮತದಾರರ ಗುರುತಿನಚೀಟಿಯಲ್ಲಿ ತಿದ್ದುಪಡಿಗೆ ಅವಕಾಶ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

    ಬೆಂಗಳೂರು: ನಗರದಲ್ಲಿ ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ರ ವಿಶೇಷ ಅಭಿಯಾನ ನಡೆಯುತ್ತಿದ್ದು, ಮತದಾರರ ಗುರುತಿನಚೀಟಿಯಲ್ಲಿ ಯಾವುದೇ ಬದಲಾವಣೆ ಅಥವಾ ತಿದ್ದುಪಡಿ ಅಗತ್ಯವಿದ್ದಲ್ಲಿ ನಾಗರಿಕರುಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

    ಶನಿವಾರ ಆರಂಭವಾದ ಎರಡು ದಿನಗಳ ಅಭಿಯಾನದ ವೇಳೆ ಪಾಲಿಕೆ ವ್ಯಾಪ್ತಿಯ ವಿವಿಧ ನೋಂದಣಿ ಕೇಂದ್ರಗಳಿಗೆ ಭೇಟಿ ನೀಡಿ ಮಾತನಾಡಿದರು.

    ಮತದಾರರ ಪಟ್ಟಿಯಲ್ಲಿ 18 ವರ್ಷ ದಾಟಿದ ಪ್ರತಿಯೊಬ್ಬ ನಾಗರಿಕನು ತನ್ನ ಹೆಸರನ್ನು ನೋಂದಣಿ ಮಾಡಿಸಬೇಕು. ಇದಕ್ಕಾಗಿ ಆಯಾ ವಾರ್ಡ್ ಹಾಗೂ ಪಾಲಿಕೆಯ ಇತರ ಕಚೇರಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ವಾರಾಂತ್ಯ ಹಾಗೂ ಡಿಸೆಂಬರ್ ಮೊದಲ ವಾರಾಂತ್ಯದ ಎರಡು ದಿನ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಇನ್ನೂ ಹೆಸರು ಸೇರಿಸದ ಸಾರ್ವಜನಿಕರು ಮತಪಟ್ಟಿಗೆ ಸೇರಬಹುದು. ಜತೆಗೆ ಮತದಾರರ ಗುರುತಿನ ಚೀಟಿಯಲ್ಲಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಈಗಲೇ ಅಗತ್ಯ ನಮೂನೆ ಭರ್ತಿ ಮಾಡಿ ಮತಪಟ್ಟಿಯಲ್ಲಿರುವ ಮಾಹಿತಿಯನ್ನು ಸರಿಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

    ನೋಂದಣಿ ಕೇಂದ್ರಗಳಲ್ಲಿ ಪರಿಶೀಲನೆ:

    ಬಿಬಿಎಂಪಿ ಕೇಂದ್ರ ಕಚೇರಿ ಬಳಿಯಿರುವ ಯುನೈಟೆಡ್ ಮಿಷನ್ ಹೈಸ್ಕೂಲ್, ಬ್ರಿಗೇಡ್ ರಸ್ತೆಯ ಸೇಂಟ್ ಜೋಸ್ಸೆ ಕಾಮರ್ಸ್ ಕಾಲೇಜ್, ವಿಕ್ಟೋರಿಯಾ ರಸ್ತೆಯ ಕೇಂದ್ರೀಯ ವಿದ್ಯಾಲಯ ಸೇರಿದಂತೆ 5 ಸ್ಥಳಗಳಿಗೆ ತೆರಳಿ ನೋಂದಣಿ ಕಾರ್ಯವನ್ನು ಪರಿಶೀಲಿಸಿದರು. ಅಭಿಯಾನದ ಕೇಂದ್ರಗಳಿಗೆ ಎಷ್ಟು ಮಂದಿ ಭೇಟಿ ನೀಡಿದ್ದಾರೆ, ಎಷ್ಟು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂಬುದನ್ನು ಬೂತ್ ಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಯಾವುದೇ ಗೊಂದಲ ಅಥವಾ ತಪ್ಪುಗಳು ಆಗದಂತೆ ನಾಗರಿಕರಿಗೆ ಮಾಹಿತಿ ನೀಡಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ನೋಂದಣಿ ಸಿಬ್ಬಂದಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದರು.

    ನಾಗರಿಕರು ಅಭಿಯಾನ ಬೆಂಬಲಿಸಲಿ:
    ವಿಶೇಷ ನೋಂದಣಿ ಅಭಿಯಾನವು ಬಿಬಿಎಂಪಿಯ ಎಲ್ಲ ವಾರ್ಡ್‌ಗಳಲ್ಲಿ ಹಾಗೂ ಬೂತ್ ಮಟ್ಟದಲ್ಲಿ ನಡೆಯುತ್ತಿದೆ. ಪಾಲಿಕೆ ಅಧಿಕಾರಿಗಳು ಹೆಚ್ಚು ಜನನಿಬಿಡ ಸ್ಥಳಗಳಲ್ಲಿ ಅಭಿಯಾನ ಆಯೋಜಿಸಿ ಅತ್ಯಧಿಕ ಸಂಖ್ಯೆಯ ನೋಂದಣಿ ಕಾರ್ಯದ ಮೇಲೆ ನಿಗಾ ಇಡಲಿದ್ದಾರೆ. ಸಾರ್ವಜನಿಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಜತೆಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಆನ್‌ಲೈನ್ ಮೂಲಕವೂ ಸ್ವಯಂಪ್ರೇರಿತವಾಗಿ ನೋಂದಾಯಿಸಿಕೊಳ್ಳಬೇಕು ಎಂದು ತುಷಾರ್ ಗಿರಿನಾಥ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts