More

    ‘ಇಂದು ಅಮಾವಾಸ್ಯೆ ಇದೆ, ಸಭೆ ನಡೆಸೋದು ಬೇಡ ಮುಂದೂಡಿ’- ಹಾವೇರಿ ನಗರಸಭೆಯಲ್ಲಿ ಹೀಗೊಂದು ಬೇಡಿಕೆ !!!

    ಹಾವೇರಿ: ಸ್ಥಳೀಯ ನಗರಸಭೆ ಗ್ರಹಚಾರವೇ ಸರಿ ಇದ್ದಂತಿಲ್ಲ. ಹಳೇ ಕಟ್ಟಡದ ವಾಸ್ತು ಸರಿಯಿಲ್ಲ. ಹೀಗಾಗಿ ನಗರದ ಅಭಿವೃದ್ಧಿಯಾಗುತ್ತಿಲ್ಲ ಎಂದು ಜರಿಯುತ್ತಿದ್ದ ಜನ, ಹೊಸ ಕಟ್ಟಡ ನಿರ್ವಿುಸಿದರೆ ನಗರಸಭೆ ಆಡಳಿತ ಸುಧಾರಿಸಬಹುದು ಎಂಬ ನಿರೀಕ್ಷೆ ಹೊಂದಿದ್ದರು. ಹೊಸ ಕಟ್ಟಡದ ಕನಸು ಸಾಕಾರಗೊಂಡಿದೆ. ಆದರೂ, ಹೊಸ ಕಟ್ಟಡದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ನಗರಸಭೆ ಆಡಳಿತ ಮಂಡಳಿಯ ಮೊದಲ ಸಾಮಾನ್ಯ ಸಭೆ ಮಾತ್ರ ಸುಸೂತ್ರವಾಗಿ ನಡೆಯುತ್ತಿಲ್ಲ.

    ನಗರಸಭೆ ಆಡಳಿತ ಮಂಡಳಿಗೆ ಚುನಾವಣೆ ನಡೆದು 28 ತಿಂಗಳಾದ ಬಳಿಕ ಅಂದರೆ, ಕಳೆದ ಅ. 31ರಂದು ಅಧ್ಯಕ್ಷ, ಉಪಾಧ್ಯಕ್ಷರಾಯ್ಕೆ ನಡೆದಿತ್ತು. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರಾಯ್ಕೆ ವಿಚಾರ ನ್ಯಾಯಾಲಯದಲ್ಲಿದೆ ಎಂದು ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರಿಂದ ನ. 24ರಂದು ಕರೆದಿದ್ದ ಸಾಮಾನ್ಯ ಸಭೆಯೂ ಮುಂದೂಡಲ್ಪಟ್ಟಿತ್ತು. ಆದರೆ, ಮತ್ತೆ ಸೋಮವಾರ ಕರೆದಿದ್ದ ಸಭೆಗೂ ಅಮಾವಾಸ್ಯೆ ವಿಘ್ನ ಕಾಡಿತು.

    ಸೋಮವಾರ ಸಭೆ ಆರಂಭಿಸುತ್ತಲೇ ವಿಪಕ್ಷ ಬಿಜೆಪಿ ಸದಸ್ಯರು, ಇಂದು ಅಮಾವಾಸ್ಯೆ ಇದೆ, ಸಭೆ ನಡೆಸೋದು ಬೇಡ. ನೋಟಿಸ್​ನಲ್ಲಿ ಮುಂದುವರಿದ ಸಾಮಾನ್ಯ ಸಭೆ ಎಂದಿದೆ. ಇದು ಮುಂದುವರಿದ ಸಾಮಾನ್ಯ ಸಭೆಯಲ್ಲ. ಸಾಮಾನ್ಯ ಸಭೆ ಅಷ್ಟೇ. ಸಭೆ ಮುಂದೂಡಿ ಎಂದು ಒತ್ತಾಯಿಸಿದರು. ಇದರಿಂದ ಆಡಳಿತ-ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು.

    ಸಭೆ ಆರಂಭದಲ್ಲಿ ಅಧ್ಯಕ್ಷರು 10 ನಿಮಿಷ ಮುಂದೂಡುವುದಾಗಿ ಹೇಳಿದ್ದಾರೆ. ಒಮ್ಮೆ ಮುಂದೂಡಿದ ಸಭೆಯನ್ನು ಅಂದೇ ಮತ್ತೆ ಆರಂಭಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಮತ್ತೊಮ್ಮೆ ನೋಟಿಸ್ ಕೊಟ್ಟು ಸಭೆ ನಡೆಸುವಂತೆ ಬಸವರಾಜ ಬೆಳವಡಿ, ಜಗದೀಶ ಮಲಗೋಡ, ಗಿರೀಶ ತುಪ್ಪದ ಪಟ್ಟು ಹಿಡಿದರು.

    ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಸಭೆಯನ್ನೇ ಆರಂಭಿಸಿಲ್ಲ. ಸ್ವಾಗತಿಸಿಲ್ಲ, ಹಾಜರಿ ಪುಸ್ತಕಕ್ಕೂ ಸಹಿ ಮಾಡಿಲ್ಲ. ಹೀಗಿದ್ದಾಗ ಸಭೆ ಮುಂದೂಡುವುದು ಹೇಗೆ? ಮೊದಲು ಸಭೆ ಆರಂಭಿಸೋಣ ಎಂದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ದನಿಗೂಡಿಸಿದರು. ಮುಂದೂಡಿದ ಸಭೆ ಮತ್ತೆ ನಡೆಸಲು ಬರುತ್ತದೆ ಎಂಬುದನ್ನು ಬರೆದುಕೊಟ್ಟು ಸಭೆ ನಡೆಸಿ ಎಂದು ಬಿಜೆಪಿಗರು ಪೌರಾಯುಕ್ತರನ್ನು ಆಗ್ರಹಿಸಿದರು.

    ಕಾಂಗ್ರೆಸ್​ನ ಐ.ಯು. ಪಠಾಣ ಮಾತನಾಡಿ, ನೋಟಿಸ್ ಕೊಟ್ಟು ಸಭೆಗೆ ಆಹ್ವಾನಿಸಿರುವ ಪೌರಾಯುಕ್ತರು, ನಾವು ಸಭೆಗೆ ಬಂದ ತಕ್ಷಣ ಸಹಿ ಮಾಡಿಸಿಕೊಳ್ಳಬೇಕಿತ್ತು. ಸಿಬ್ಬಂದಿ ಸಹಿ ಮಾಡಿಸಿಕೊಂಡಿಲ್ಲ. ಬೇಕಿದ್ದರೆ ಪರಿಶೀಲಿಸಿ ಎಂದರು.

    ಆಗ ಪೌರಾಯುಕ್ತ ಪಿ.ಎಸ್. ಚಲವಾದಿ ಅವರು ಹಾಜರಿ ಪುಸ್ತಕ ನೋಡುತ್ತಿದ್ದಂತೆ ಬಿಜೆಪಿಯ ಶಿವರಾಜ ಮತ್ತಿಹಳ್ಳಿ ಹಾಜರಿ ಪುಸ್ತಕ ಕಿತ್ತುಕೊಂಡು ತಮ್ಮ ಬಳಿ ಇಟ್ಟುಕೊಂಡರು. ಇದರಿಂದ ಗರಂ ಆದ ಅಧ್ಯಕ್ಷರು, ಹಾಜರಿ ಪುಸ್ತಕ ಕಿತ್ತುಕೊಂಡರೆ ಹೇಗೆ. ನೀವು ಉದ್ದೇಶಪೂರ್ವಕವಾಗಿ ಸಭೆ ನಡೆಸಲು ಬಿಡುತ್ತಿಲ್ಲ ಎಂದರು. ಆಗ ಬಸವರಾಜ ಬೆಳವಡಿ, ನಿಮ್ಮ ದೌರ್ಜನ್ಯ ಹೆಚ್ಚಾಗಿದೆ. ಹೀಗಾಗಿ ಹಾಜರಿ ಪುಸ್ತಕ ಕಿತ್ತುಕೊಂಡಿದ್ದೇವೆ ಎಂದರು. ಆಗ ಸಭೆಯಲ್ಲಿ ತೀವ್ರ ಗದ್ದಲ ಏರ್ಪಟ್ಟಿತ್ತು. ಸಭಾಂಗಣದಲ್ಲಿ ಸಿಸಿ ಕ್ಯಾಮರಾ ಹಾಕಿಸಲಾಗಿದೆ. ಅದನ್ನು ತೆಗೆಸಿ ನೋಡಿ ಯಾರ ದೌರ್ಜನ್ಯ ಹೆಚ್ಚಾಗಿದೆ ಎಂದು ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದರು.

    ಕಾಂಗ್ರೆಸ್​ನ ಲಿಂಗರಾಜ ಶಿವಣ್ಣನವರ ಮಾತನಾಡಿ, ನಾನು ಮೊದಲ ಬಾರಿಗೆ ಸದಸ್ಯನಾಗಿದ್ದೇನೆ. ನಾಮನಿರ್ದೇಶಿತ ಸದಸ್ಯರ ಹೊಣೆಗಾರಿಕೆ ಏನೆಂಬುದನ್ನು ಪೌರಾಯುಕ್ತರು ತಿಳಿಸಬೇಕು ಎಂದರು.

    ಆಗ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ಗದ್ದಲ ಜೋರಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ನಾವು ಜನರಿಂದ ಆಯ್ಕೆಯಾಗಿದ್ದೇವೆ. ಜನ ಸಮಸ್ಯೆಗಳ ಕುರಿತು ನಮ್ಮನ್ನು ಕೇಳುತ್ತಾರೆ. ಸಭೆ ನಡೆಸಿ ಎಂದು ಕೈ ಸದಸ್ಯರು ಒತ್ತಾಯಿಸಿದರೆ, ನೀವು ಒಂದು ವಾರ್ಡ್​ಗೆ ಸದಸ್ಯರಾದರೆ ನಾವು ಎಲ್ಲ ವಾರ್ಡ್​ಗೂ ಸದಸ್ಯರು, ನಮ್ಮ ಹೊಣೆಗಾರಿಕೆ ಬಗ್ಗೆ ಪುಸ್ತಕದಲ್ಲಿ ಓದಿಕೊಳ್ಳಿ ಎಂದು ನಾಮನಿರ್ದೇಶಿತ ಸದಸ್ಯರು ತಿರುಗೇಟು ನೀಡಿದರು.

    ಸಭೆಯ ಆರಂಭದಿಂದಲೂ ಮೌನಕ್ಕೆ ಶರಣಾಗಿದ್ದ ಶಾಸಕ ನೆಹರು ಓಲೇಕಾರ ಮಧ್ಯಾಹ್ನದ ಹೊತ್ತಿಗೆ ಬಿಜೆಪಿ, ಕಾಂಗ್ರೆಸ್ ಸದಸ್ಯರನ್ನು ಸಮಾಧಾನಿಸಿ, ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಹಿಂದಿನ ಸಭೆ ರದ್ದುಗೊಳಿಸಿತ್ತು. ಇಂದು ಮುಂದುವರಿದ ಸಭೆ ಎನ್ನುವುದಕ್ಕಿಂತ ಸಾಮಾನ್ಯ ಸಭೆ ಎಂದು ನಮೂದಿಸಲು ಏನು ಸಮಸ್ಯೆ ಎಂದು ಕಾಂಗ್ರೆಸ್ ಸದಸ್ಯರನ್ನು ಪ್ರಶ್ನಿಸಿದರು.

    ಆಗ ಐ.ಯು. ಪಠಾಣ, ಸಮಸ್ಯೆ ಏನಿಲ್ಲ. ಹಿಂದಿನ ಸಭೆಯ ವಿಷಯ ಪಟ್ಟಿಯ ಕುರಿತು ಇಂದಿನ ಸಭೆಯಲ್ಲಿ ರ್ಚಚಿಸೋಣ ಎಂದರು. ಅದಕ್ಕೆ ಸಮ್ಮತಿಸಿದ ಶಾಸಕರು, ಹಳೆಯ ವಿಷಯಗಳನ್ನೇ ಇಂದಿನ ಸಭೆಯಲ್ಲಿ ರ್ಚಚಿಸೋಣ. ಊಟದ ಬಳಿಕ ಸಭೆ ಮುಂದುವರಿಸೋಣ ಎಂದರು. ನಂತರ ಕೆಲ ವಿಷಯಗಳ ಕುರಿತು ಚರ್ಚೆ ನಡೆಯಿತು.

    ಉಪಾಧ್ಯಕ್ಷೆ ಜಾಹೀದಾಬಾನು ಜಮಾದಾರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts