More

    ಎಲ್ಹೋದರೂ ನೋ… ನೆಟ್​ವರ್ಕ್

    ಗಿರೀಶ ಪಾಟೀಲ ಜೊಯಿಡಾ
    ಆನ್​ಲೈನ್ ಕ್ಲಾಸ್ ಕೇಳಲು ಈ ಗ್ರಾಮದ ಮಕ್ಕಳು ಮನೆ ಹತ್ತಿರದಲ್ಲಿ ಇರುವ ಬೆಟ್ಟ ಏರಿ ಹೋಗಬೇಕು. ಏಕೆಂದರೆ, ಮನೆಯಲ್ಲಿ ಮೊಬೈಲ್ ನೆಟ್​ವರ್ಕ್ ಬಾರದು. ಬೆಟ್ಟವೇರಲು ಮಕ್ಕಳು ಸಿದ್ಧರಿದ್ದರೂ ಮಳೆ ಅಡ್ಡಿ ಪಡಿಸುತ್ತಿದೆ. ಇದರೊಟ್ಟಿಗೆ ಕಾಡು ಪ್ರಾಣಿ, ಉಂಬಳಗಳ ಕಾಟ. ಪರಿಣಾಮ ಬಹುಪಾಲು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
    ಜೊಯಿಡಾ ತಾಲೂಕಿನ ಅವೇಡಾ ಗ್ರಾಮದಲ್ಲಿ ಮಕ್ಕಳು ಆನ್​ಲೈನ್ ಶಿಕ್ಷಣ ಪಡೆಯಲು ಹರಸಾಹಸ ಪಡುವಂತಾಗಿದೆ. ಅನನುಕೂಲ ಪರಿಸ್ಥಿತಿಯ ಮಧ್ಯೆಯೂ ಮಕ್ಕಳು ಬೆಟ್ಟ ಏರುತ್ತಿದ್ದಾರೆ. ಮಳೆಯಿಂದ ರಕ್ಷಿಸಿಕೊಳ್ಳಲು ಛತ್ರಿ ಹಿಡಿದುಕೊಂಡೇ ಆನ್​ಲೈನ್ ಕ್ಲಾಸ್​ಗೆ ಹಾಜರಾಗುತ್ತಿದ್ದಾರೆ. ಕೆಲವೊಮ್ಮೆ ಬೆಟ್ಟ ಏರಿದರೂ ನೆಟ್​ವರ್ಕ್ ಬಾರದಿರುವುದರಿಂದ ಮಕ್ಕಳಿಗೆ ಅಂದಿನ ಪಾಠ ತಪ್ಪಿ ಹೋಗುತ್ತದೆ.
    ಸಾವಿರ ಗ್ರಾಹಕರು: ಗ್ರಾಮದಲ್ಲಿ 200ಕ್ಕೂ ಹೆಚ್ಚು ಮನೆಗಳಿವೆ. 1000ಕ್ಕೂ ಹೆಚ್ಚು ಮೊಬೈಲ್ ಗ್ರಾಹಕರಿದ್ದಾರೆ. ಹಾಗಂತ ನೆಟ್​ವರ್ಕ್ ಸರಿಯಾಗಿ ಇಲ್ಲ. ಕೂಡು ಕುಟುಂಬದಲ್ಲಿನ ಕೆಲವರು ಉದ್ಯೋಗ ಅರಸಿ ಬೇರೆ ಕಡೆಗೆ ತೆರಳಿದ್ದಾರೆ. ಅವರು ಹೇಗಿದ್ದಾರೆ ಎಂದು ವಿಚಾರಿಸಲೂ ನೆಟ್​ವರ್ಕ್ ಸಮಸ್ಯೆ ಎದುರಾಗುತ್ತಿದೆ. ಈ ಮಧ್ಯೆ ಕರೊನಾ ಹಿನ್ನೆಲೆಯಲ್ಲಿ ಸರ್ಕಾರ ಆನ್​ಲೈನ್ ಪಾಠಕ್ಕೆ ವ್ಯವಸ್ಥೆ ಮಾಡಿದೆ. ಆದರೆ, ನೆಟ್​ವರ್ಕ್ ಸಮಸ್ಯೆಯಿಂದ ಮಕ್ಕಳು ಹೈರಾಣಾಗಿದ್ದಾರೆ.
    ಸೌಲಭ್ಯ ವಂಚಿತ ಗ್ರಾಮ
    ಅವೇಡಾ ಊರಿನಲ್ಲಿ ಯಾವುದೇ ಆಸ್ಪತ್ರೆಗಳು ಇಲ್ಲ. ತಾಲೂಕು ಆಸ್ಪತ್ರೆಗೆ ಹೋಗಬೇಕೆಂದರೂ 30 ಕಿ.ಮೀ. ದೂರ. ಅಪಘಾತ, ಹೃದಯಾಘಾತ ಅಥವಾ ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾದರೆ ತುರ್ತು ವಾಹನಕ್ಕೆ ಕರೆ ಮಾಡಲು ಆಗಂದತಹ ಸ್ಥಿತಿ ಇಲ್ಲಿನ ಗ್ರಾಮಸ್ಥರದು. ನೆಟ್​ವರ್ಕ್ ಸಮಸ್ಯೆ ಪರಿಹರಿಸುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.


    ಅವೇಡಾದಲ್ಲಿ ಮೊಬೈಲ್ ನೆಟ್​ವರ್ಕ್ ಸಮಸ್ಯೆ ಇರುವ ಬಗ್ಗೆ ಬಿಎಸ್​ಎನ್​ಎಲ್​ನ ಕಾರವಾರದ ಅಧಿಕಾರಿಗಳ ಜತೆ ಮಾತನಾಡಲಾಗಿದೆ. ಸದ್ಯ ನೆಟ್​ವರ್ಕ್ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. | ಸಂಜಯ ಕಾಂಬಳೆ ಜೊಯಿಡಾ ತಹಸೀಲ್ದಾರ್


    ಇಲ್ಲಿನ ಶಾಲಾ, ಕಾಲೇಜು ಮಕ್ಕಳು ಆನ್​ಲೈನ್ ಕ್ಲಾಸ್​ನಿಂದ ವಂಚಿತ ರಾಗುತ್ತಿದ್ದಾರೆ. ಕಾಡು ಪ್ರಾಣಿಗಳ ಭಯದಲ್ಲೇ ಅನಿವಾರ್ಯವಾಗಿ ಕಾಡಿನ ಎತ್ತರದ ಪ್ರದೇಶಕ್ಕೆ ಹೋಗಿ ಪಾಠ ಕೇಳುವಂತಾಗಿದೆ. ಕೂಡಲೆ ಅವೇಡಾ ಊರಿಗೆ ಯಾವುದಾದರೂ ಮೊಬೈಲ್ ಸೇವೆ ಕಲ್ಪಿಸುವಂತಾಗಬೇಕು.
    | ಅರುಣಕುಮಾರ
    ಗ್ರಾ.ಪಂ. ಸದಸ್ಯ ಅವೇಡಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts