More

    ರೆಗ್ಯುಲರ್ ಕೋರ್ಸಲ್ಲೂ ಅರ್ಧಕ್ಕರ್ಧ ಆನ್​ಲೈನ್; ವಿವಿ, ಉನ್ನತ ಶಿಕ್ಷಣ ಸಂಸ್ಥೆ, ಕಾಲೇಜುಗಳಲ್ಲಿನ್ನು ಸ್ವಯಂಬೋಧನೆ

    ‘ಮಕ್ಕಳಿಸ್ಕೂಲು ಮನೇಲಲ್ವೇ’ ಎನ್ನುವುದು ಇನ್ನು ಮುಂದೆ ಕಾಲೇಜು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೂ ಅನ್ವಯವಾಗಲಿದೆ. ಕಾಲೇಜುಗಳಲ್ಲಿ ಇನ್ನು ಮುಂದೆ ಯಾವುದೇ ಕೋರ್ಸ್​ನ ಶೇ. 40ರಷ್ಟು ಪಠ್ಯಕ್ರಮವನ್ನು ಸರ್ಕಾರವೇ ರೂಪಿಸಿರುವ ಆನ್​ಲೈನ್ ಇ- ಕಲಿಕಾ ವೇದಿಕೆ ‘ಸ್ವಯಂ’ ಪೋರ್ಟಲ್ ಮೂಲಕ ಬೋಧಿಸಲು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಅವಕಾಶ ಕಲ್ಪಿಸಿದೆ.

    | ರಮೇಶ್ ಮೈಸೂರು

    ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಿಗೆ ದೂರಶಿಕ್ಷಣ ಹಾಗೂ ಆನ್​ಲೈನ್ ಕೋರ್ಸ್ ನಡೆಸಲು ಅನುಮತಿ ನೀಡಿದ ಬೆನ್ನಲ್ಲೇ ಯುಜಿಸಿ ಮತ್ತೊಂದು ಮಹತ್ವದ ಕ್ರಮ ಕೈಗೊಂಡಿದೆ. ಸಾಮಾನ್ಯ ಹಾಗೂ ಸಾಂಪ್ರದಾಯಿಕ ಶಿಕ್ಷಣವನ್ನು ಆನ್​ಲೈನ್ ಮೂಲಕ ನೀಡಲು ಅವಕಾಶ ಕಲ್ಪಿಸಿದೆ. ರೆಗ್ಯುಲರ್ ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳು ಇನ್ನು ಮುಂದೆ ಕೋರ್ಸ್​ನ ಶೇ. 40ರಷ್ಟು ಪಠ್ಯಕ್ರಮವನ್ನು ಆನ್​ಲೈನ್ ಮೂಲಕವೇ ಕಲಿಸಬೇಕಿದೆ. ಇದು ಪ್ರತಿ ಸೆಮಿಸ್ಟರ್​ಗೂ ಅನ್ವಯವಾಗಲಿದೆ. ಇದರಿಂದಾಗಿ ಬಹುತೇಕ ಅರ್ಧ ಶಿಕ್ಷಣ ಕಾಲೇಜಿನಲ್ಲಾದರೆ, ಇನ್ನರ್ಧ ಕಲಿಕೆ ಆನ್​ಲೈನ್ ಮೂಲಕವೇ ನಡೆಯುವಂತಾಗಲಿದೆ. ಅಧಿಸೂಚನೆ ವಿಚಾರವಾಗಿ ಕಾಲೇಜುಗಳ ಪ್ರಾಂಶುಪಾಲರು, ವಿವಿಗಳ ಕುಲಪತಿಗಳಿಗೆ ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ಪತ್ರ ಬರೆದು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. ಯುಜಿಸಿಯ ಕ್ರೆಡಿಟ್ ಫ್ರೇಮ್ರ್ಕ್ ಫಾರ್ ಆನ್​ಲೈನ್ ಲರ್ನಿಂಗ್ ಥ್ರೂ ಸ್ವಯಂ ನಿಯಮಾವಳಿಗಳು-2021ರ ಅನ್ವಯ ಹೊರಡಿಸಲಾಗಿರುವ ಅಧಿಸೂಚನೆಯಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ.

    ಏನಿದು ಸ್ವಯಂ?: ‘ಸ್ಟಡಿ ವೆಬ್ಸ್ ಆಫ್ ಆಕ್ಟಿವ್ ಲರ್ನಿಂಗ್ ಫಾರ್ ಯಂಗ್ ಆಸ್ಪೈರಿಂಗ್ ಮೈಂಡ್ಸ್’ ಎಂಬುದು ‘ಸ್ವಯಂ’ನ ವಿಸ್ತೃತ ರೂಪ. ಇದು ಭಾರತದ ಬೃಹತ್ ಪ್ರಮಾಣದ ಮುಕ್ತ ಆನ್​ಲೈನ್ ಕೋರ್ಸ್ (ಎಂಒಒಸಿ) ಆಗಿದೆ. ಇದರ ತಾಂತ್ರಿಕೇತರ ಸ್ನಾತಕೋತ್ತರ ಕೋರ್ಸ್​ಗಳ ರಾಷ್ಟ್ರೀಯ ಸಂಚಾಲಕ ಸ್ಥಾನದಲ್ಲಿ ಯುಜಿಸಿ ಇದೆ. ತಾಂತ್ರಿಕ ವಿಷಯಗಳ ಕೋರ್ಸ್​ಗಳಿಗೆ ಸಂಬಂಧಿಸಿದ ವಿಚಾರವನ್ನು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ನೋಡಿಕೊಳ್ಳುತ್ತದೆ. ಯುಜಿಸಿ ಸದ್ಯ ಒಟ್ಟು 145 ಕೋರ್ಸ್​ಗಳನ್ನು ಎಂಒಒಸಿ ಮೂಲಕ ಹಾಗೂ 208 ಕೋರ್ಸ್​ಗಳನ್ನು ‘ಸ್ವಯಂ’ ಪೋರ್ಟಲ್ ಮೂಲಕ ಒದಗಿಸುತ್ತಿದೆ.

    ಆಫ್​ಲೈನ್- ಆನ್​ಲೈನ್ ಸಮ್ಮಿಲನ: ದೇಶಾದ್ಯಂತ ಉನ್ನತ ಶಿಕ್ಷಣ ವಲಯದಲ್ಲಿ 50 ಸಾವಿರಕ್ಕೂ ಅಧಿಕ ಕಾಲೇಜು ಹಾಗೂ ವಿವಿಗಳಿವೆ. ಯುಜಿಸಿ ಕ್ರಮದಿಂದಾಗಿ ಆನ್​ಲೈನ್- ಆಫ್​ಲೈನ್ ಮೋಡ್​ಗಳ ಸಮ್ಮಿಲನವಾಗಲಿದೆ. ಈ ಮೊದಲು ಶೇ. 20ರಷ್ಟು ಆನ್​ಲೈನ್ ಬೋಧನೆಗೆ ಅವಕಾಶ ನೀಡಲಾಗಿತ್ತು. ಆದರೆ, ಕೋವಿಡ್ ಕಾರಣಕ್ಕೆ ಶಿಕ್ಷಣ ಸಂಸ್ಥೆಗಳಲ್ಲಿ ಭೌತಿಕ ತರಗತಿಗಳನ್ನು ನಡೆಸುವುದು ಕಷ್ಟವಾಗಿದೆ. ಆನ್​ಲೈನ್ ಶಿಕ್ಷಣ ಅನಿವಾರ್ಯವಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ರೂಪಿಸಿದ ಯೋಜನೆ ಇದು. ತಾಂತ್ರಿಕವಾಗಿ ಮುಂದುವರಿದ ಸೌಲಭ್ಯಗಳನ್ನು ಹೊಂದಿರುವ ಕಾಲೇಜುಗಳಲ್ಲಿ ಸಹಜವಾಗಿಯೇ ಆನ್​ಲೈನ್ ಶಿಕ್ಷಣ ನೀಡಲಾಗುತ್ತಿದೆ. ಸಾಂಪ್ರದಾಯಿಕ ಕಾಲೇಜುಗಳು ಹಾಗೂ ವಿವಿಗಳು ಹಿಂದುಳಿಯದಿರಲಿ ಎಂಬ ಉದ್ದೇಶವೂ ಇದರ ಹಿಂದಿದೆ.

    ಮೂಲಸೌಕರ್ಯ ಅಗತ್ಯ: ಆನ್​ಲೈನ್ ಬೋಧನೆ ಪಡೆಯುವುದು ವಿದ್ಯಾರ್ಥಿಗಳ ಹೊಣೆ ಎಂದು ಶಿಕ್ಷಣ ಸಂಸ್ಥೆಗಳು ಜಾರಿಕೊಳ್ಳುವಂತಿಲ್ಲ. ಅದಕ್ಕೆ ಕಂಪ್ಯೂಟರ್, ಗ್ರಂಥಾಲಯ ಮೊದಲಾದವುಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲ್ಪಿಸಬೇಕೆಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಕ್ರೆಡಿಟ್ ಕೋರ್ಸ್ ನೋಂದಣಿಯಿಂದ ಆರಂಭಿಸಿ ಮುಗಿಯುವವರೆಗೆ ಮಾರ್ಗದರ್ಶನ ನೀಡಲು ಪ್ರಾಧ್ಯಾಪಕರೊಬ್ಬರನ್ನು ನೇಮಿಸಬೇಕೆಂದು ಯುಜಿಸಿ ತಿಳಿಸಿದೆ.

    ಆನ್​ಲೈನ್ ಪರೀಕ್ಷೆಗೆ ಆದ್ಯತೆ: ಈ ಕೋರ್ಸ್​ಗಳಿಗೂ ಆಂತರಿಕ ಮೌಲ್ಯಮಾಪನ ಹಾಗೂ ಸೆಮಿಸ್ಟರ್ ಅಂತ್ಯದ ಪರೀಕ್ಷೆ ಇರಲಿದೆ. ಆಂತರಿಕ ಮೌಲ್ಯಮಾಪನಕ್ಕೆ ಗರಿಷ್ಠ ಅಂಕಗಳ ಶೇ. 30 ಮಾತ್ರ ಪರಿಗಣಿಸಬೇಕು. ಚರ್ಚೆ, ರಸಪ್ರಶ್ನೆ, ಅಸೈನ್​ವೆುಂಟ್, ಸಂದರ್ಭಾನುಸಾರ ಪರೀಕ್ಷೆ ಮೊದಲಾದವುಗಳನ್ನು ನಡೆಸಬೇಕು. ಇದರ ಸ್ವರೂಪ ಹೇಗಿರುತ್ತದೆ ಎಂಬುದನ್ನು ಕೋರ್ಸ್​ನ ಆರಂಭದಲ್ಲಿಯೇ ಪ್ರಚುರಪಡಿಸಬೇಕು. ಇನ್ನು ಸೆಮಿಸ್ಟರ್ ಅಂತ್ಯದ ಪರೀಕ್ಷೆಗಾಗಿ ಆನ್​ಲೈನ್ ಮೋಡ್​ಗೆ ಆದ್ಯತೆ ಇರಲಿ ಎಂದು ಯುಜಿಸಿ ತಿಳಿಸಿದೆ. ಆದರೆ, ಈ ಬಗ್ಗೆ ಅಂತಿಮವಾಗಿ ಕೋರ್ಸ್- ಸಮನ್ವಯಕಾರರೇ ನಿರ್ಧಾರ ಕೈಗೊಳ್ಳಲಿದ್ದಾರೆ.

    ಕ್ರೆಡಿಟ್ ತಿರಸ್ಕರಿಸುವಂತಿಲ್ಲ: ಆನ್​ಲೈನ್ ಕಲಿಕೆ ಮೂಲಕ ಪಡೆಯಲಾಗುವ ಅಂಕ ಅಥವಾ ಕ್ರೆಡಿಟ್​ಗಳನ್ನು ಕೋರ್ಸ್​ನ ಅಂತ್ಯದಲ್ಲಿ ನೀಡಲಾಗುವ ಅಂಕಪಟ್ಟಿಯಲ್ಲಿ ನಮೂದಿಸಬೇಕು. ಸಾಮಾನ್ಯ ಶಿಕ್ಷಣದ ಮೂಲಕ ಗಳಿಸುವ ಶೈಕ್ಷಣಿಕ ಅರ್ಹತೆಯಷ್ಟೇ ಪ್ರಾಧಾನ್ಯತೆಯನ್ನು ಇವುಗಳಿಗೂ ನೀಡಬೇಕು. ವಿದ್ಯಾರ್ಥಿಯು ಸ್ವಯಂ ಮೂಲಕ ಗಳಿಸಿದ ಕೋರ್ಸ್​ಗಳ ಕ್ರೆಡಿಟ್ ಮೊಬಿಲಿಟಿಯನ್ನು ಯಾವುದೇ ವಿಶ್ವವಿದ್ಯಾಲಯಗಳು, ಕಾಲೇಜುಗಳು ತಿರಸ್ಕರಿಸುವಂತಿಲ್ಲ ಎಂದು ಯುಜಿಸಿ ಸ್ಪಷ್ಟಪಡಿಸಿದೆ.

    ಪರೀಕ್ಷೆಗೆ ಪ್ರತ್ಯೇಕ ವ್ಯವಸ್ಥೆ: ಸ್ವಯಂ ಆಧಾರಿತ ಕ್ರೆಡಿಟ್ ಕೋರ್ಸ್​ಗಳ ಪರೀಕ್ಷೆಯನ್ನು ಸ್ವಯಂ ಮಂಡಳಿ ಅಥವಾ ಕೇಂದ್ರ ಶಿಕ್ಷಣ ಸಚಿವಾಲಯದಿಂದ ನೇಮಿಸಲ್ಪಟ್ಟ ಸಂಸ್ಥೆ ನಡೆಸಲಿದೆ. ಪರೀಕ್ಷೆ ಹಾಗೂ ಮೌಲ್ಯಮಾಪನದ ಬಳಿಕ ಕೋರ್ಸ್ ಕೋಆರ್ಡಿನೇಟರ್​ಗಳು ಅಂಕ ಅಥವಾ ಗ್ರೇಡ್ ಪ್ರಕಟಿಸಲಿದ್ದಾರೆ. ರಾಷ್ಟ್ರಿಯ ಕೋರ್ಸ್ ಸಮನ್ವಯಕಾರರ ಅಂಕಿತವಿರುವ ಅಂಕಪಟ್ಟಿಯನ್ನು ನಾಲ್ಕು ವಾರಗಳೊಳಗೆ ಸ್ವಯಂ ಪೋರ್ಟಲ್​ನಲ್ಲಿ ಪ್ರಕಟಿಸಬೇಕು.

    ಕನ್ನಡದಲ್ಲೂ ಪಠ್ಯಕ್ರಮ: ‘ಸ್ವಯಂ’ನಲ್ಲಿ ಈಗಾಗಲೇ ಪ್ರಾದೇಶಿಕ ಭಾಷೆಗಳಲ್ಲೂ ಪಠ್ಯಕ್ರಮವನ್ನು ಪ್ರಕಟಿಸಲಾಗಿದೆ. ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ಕನ್ನಡ, ಬಂಗಾಲಿ, ಗುಜರಾತಿ, ಮಲಯಾಳಂ, ಮರಾಠಿ, ತೆಲುಗು, ಹಿಂದಿ ಭಾಷೆಗಳಿಗೆ ಪಠ್ಯಗಳನ್ನು ಭಾಷಾಂತರ ಮಾಡಲಾಗುತ್ತಿದೆ. ಸ್ವಯಂ ಕೋರ್ಸ್ ಗಳನ್ನು ಕೂಡ ಬಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ ಹಾಗೂ ತೆಲುಗು ಭಾಷೆಗಳಲ್ಲಿ ಪಡೆಯಬಹುದು.

    ಟಾಪ್ 100 ಸಂಸ್ಥೆಗಳಿಂದ ಆನ್​ಲೈನ್ ಶಿಕ್ಷಣ: ಪೂರ್ಣ ಆನ್​ಲೈನ್ ಶಿಕ್ಷಣ ಕೋರ್ಸ್​ಗಳಿಗೂ ಇದಕ್ಕೂ ಸಂಬಂಧವಿಲ್ಲ. ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್ ಫ್ರೇಮ್ರ್ಕ್​ನಲ್ಲಿ (ಎನ್​ಐಆರ್​ಎಫ್) ಅಗ್ರ 100ರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಶಿಕ್ಷಣ ಸಂಸ್ಥೆಗಳಿಗೆ ಪೂರ್ವಾನುಮತಿಯ ಅವಶ್ಯಕತೆ ಇಲ್ಲದೆ ಪೂರ್ಣ ಪ್ರಮಾಣದ ಆನ್​ಲೈನ್ ಕೋರ್ಸ್ ಆರಂಭಿಸಲು ಈಗಾಗಲೇ ಅನುಮತಿ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts