More

    ನಾಲೆಗಳಲ್ಲಿ ಸಮರ್ಪಕ ನೀರು ಹರಿಸಲು ಆಗ್ರಹ

    ಮಳವಳ್ಳಿ: ವಿಶ್ವೇಶ್ವರ ನಾಲೆ ಮೂಲಕ ನೀರು ಹರಿಸುವಾಗ ಅಧಿಕಾರಿಗಳು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಗುರುವಾರ ತಾಲೂಕಿನ ಟಿ.ಕಾಗೇಪುರದಲ್ಲಿರುವ ಕಾವೇರಿ ನೀರಾವರಿ ನಿಗಮದ ಉಪವಿಭಾಗ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.

    ರೈತಪರ ಹೋರಾಟಗಾರ ಟಿ.ಎಲ್.ಕೃಷ್ಣೇಗೌಡ ಮಾತನಾಡಿ, ವಿಸಿ ನಾಲೆ ಮೂಲಕ ಮದ್ದೂರು ತಾಲೂಕಿನ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುತ್ತಿರುವ ಅಧಿಕಾರಿಗಳು ಮಳವಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕೆಲವು ನಾಲೆಗಳಿಷ್ಟೇ ನೀರು ಹರಿಸುವ ಮೂಲಕ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    ತೀವ್ರ ಬರದಿಂದ ಗ್ರಾಮೀಣ ಭಾಗಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮದ್ದೂರು ಕ್ಷೇತ್ರದ ಶಾಸರು ಅಧಿಕಾರ ಬಳಸಿಕೊಂಡು ತಮ್ಮ ಕ್ಷೇತ್ರದ ಎಲ್ಲಾ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಮೂಲಕ ಯಶಸ್ವಿಯಾಗಿದ್ದಾರೆ. ಆದರೆ ನಮ್ಮ ತಾಲೂಕಿನಲ್ಲಿ ರೈತರ ಕಾಯಲು ಇಲ್ಲಿನ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ ಎಂದು ದೂರಿದರು.

    ಪ್ರಭಾವಿಗಳ ಒತ್ತಡಕ್ಕೆ ಮಣಿದು ವಿಶ್ವೇಶ್ವರಯ್ಯ ನಾಲೆಗಳ ಕೆಲವು ಉಪನಾಲೆಗಳಿಗೆ ಮಾತ್ರ ನೀರು ಹರಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಆದ್ದರಿಂದ ನಿಗಮದ ಅಧಿಕಾರಿಗಳು ಮುತುವರ್ಜಿ ವಹಿಸಿ ಸವಡೆಗಳೊಡನೆ ಚರ್ಚಿಸಿ ಮುಖ್ಯನಾಲೆಯ ತುರಗನೂರು ಶಾಖೆಯ ಉಪನಾಲೆಗಳಿಗೆ ಮೂರು ದಿನ ಹಾಗೂ ಯಬ್ಬಕವಾಡಿ ಶಾಖೆಯ ಉಪನಾಲೆಗಳಿಗೆ ಮೂರು ದಿನಗಳ ಕಾಲ ಸಮರ್ಪಕವಾಗಿ ನೀರು ಹರಿಸುವುದರ ಜತೆಗೆ ಆದ್ಯತೆಗೆ ಅನುಗುಣವಾಗಿ ಬೆಳೆ ಮತ್ತು ಕೆರೆ-ಕಟ್ಟೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣೇಗೌಡ ಒತ್ತಾಯಿಸಿದರು.

    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹನುಮಂತು ಮಾತನಾಡಿ, ಬರದಿಂದ ಗ್ರಾಮೀಣ ಭಾಗಗಳಲ್ಲಿ ಬೋರ್‌ವೆಲ್‌ಗಳು ಬತ್ತುತ್ತಿವೆ. ವಿಶ್ವೇಶ್ವರಯ್ಯ ನಾಲೆಯ ಯಬ್ಬಕವಾಡಿ ಶಾಖೆಯ ಉಪನಾಲೆಗಳಲ್ಲಿ ಸಮರ್ಪಕವಾಗಿ ಕೊನೆಯ ಭಾಗದವರೆಗೆ ನೀರು ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸಬೇಕು. ಇಲ್ಲದಿದ್ದರೆ ರೈತರ ಜತೆಗೆ ರಸ್ತೆ ತಡೆ ಹಾಗೂ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಈ ವೇಳೆ ಸ್ಥಳದಲ್ಲಿದ್ದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಭರತೇಶ್ ಕುಮಾರ್ ಮೇಲಧಿಕಾರಿಗಳ ಜತೆ ದೂರವಾಣಿ ಮೂಲಕ ಚರ್ಚಿಸಿ ರೈತರ ಬೇಡಿಕೆಗಳನ್ನು ತಿಳಿಸಿದರು. ನಂತರ ಮೇಲಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಕೈ ಬಿಟ್ಟರು. ಈ ವೇಳೆ ಎಇ ಮಾದೇಶ ಹಾಜರಿದ್ದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಟಿ.ಸಿ.ಚೌಡಯ್ಯ, ಆನಂದ, ನರಸನ ಹನುಮಂತು, ಕುಮಾರ, ಶಿವಲಿಂಗಯ್ಯ, ಮಧು, ಪ್ರಸನ್ನ ಸೇರಿದಂತೆ ದೇವಿಪುರ, ನೆಲ್ಲೂರು, ನೆಲಮಾಕನಹಳ್ಳಿ, ಎಂ.ಬಸವನಪುರ, ಕೋರೆಗಾಲ, ಮಾದಳ್ಳಿ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts