

ನವದೆಹಲಿ: ದೇಶಾದ್ಯಂತ ಭಾರೀ ಸಂಚಲನಕ್ಕೆ ಕಾರಣವಾಗಿದ್ದ ನಿಥಾರಿ ಹತ್ಯಾಕಾಂಡ ಪ್ರಕರಣದ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಪ್ರಮುಖ ಆರೋಪಿ ಸುರಿಂದರ್ ಕೋಲಿಯನ್ನು 12 ಪ್ರಕರಣಗಳಲ್ಲಿ ಖುಲಾಸೆಗೊಳಿಸಿದೆ. ಕೆಳ ನ್ಯಾಯಾಲಯ ಕೋಲಿಗೆ ಗಲ್ಲು ಶಿಕ್ಷೆ ವಿಧಿಸಿತ್ತು.
ಸಹ ಆರೋಪಿ ಮಣಿಂದರ್ ಸಿಂಗ್ ಪರಿಹಾರ್ ಸಹ 2 ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಾನೆ. ಹಲವು ಪ್ರಕರಣಗಳಲ್ಲಿ ಇಬ್ಬರೂ ಆರೋಪಿಗಳನ್ನು ಹೈಕೋರ್ಟ್ ದೋಷ ಮುಕ್ತರನ್ನಾಗಿಸಿರುವುದರಿಂದ ಇವರಿಗೆ ವಿಧಿಸಲಾಗಿದ್ದ ಮರಣ ದಂಡನೆ ಶಿಕ್ಷೆ ರದ್ದಾದಂತಾಗಿದೆ.
ಏನಿದು ಪ್ರಕರಣ: ಉತ್ತರ ಪ್ರದೇಶದ ನೋಯ್ಡಾದ ನಿಥಾರಿ ಎಂಬಲ್ಲಿ 17 ವರ್ಹಷದ ಹಿಂದೆ ಹಲವು ಮಕ್ಕಳು ನಾಪತ್ತೆಯಾಗಿದ್ದರು. ಈ ಪ್ರಕರಣ ಪೊಲೀಸರಿಗೆ ತಲೆ ನೋವಾಗಿತ್ತು. ಈ ನಡುವೆ ಬಾಲಕನೊಬ್ಬನ ಅಸ್ಥಿಪಂಜರ ಚರಂಡಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ದೇಶ ಹಿಂದೆಂದೂ ಕಂಡಿರದಂತಹ ಸರಣಿ ಹತ್ಯಾಕಾಂಡ ಪ್ರಕರಣವನ್ನು ಬಯಲಿಗೆ ಎಳೆದಿದ್ದರು. ಆದರೆ, ಇದೀಗ ಪ್ರಕರಣದ ಆರೋಪಿಗಳು ಸಾಕ್ಷಾಧಾರಗಳ ಕೊರತೆಯಿಂದಾಗಿ ಒಂದೊಂದೇ ಕೇಸ್‌ನಲ್ಲಿ ಖುಲಾಸೆ ಆಗುತ್ತಿದ್ದಾರೆ.
ನೋಯ್ಡಾದ ಮಣಿಂದರ್ ಸಿಂಗ್ ಪರಿಹಾರ್‌ನ ಮನೆಯಲ್ಲಿ 2005 ರಿಂದ 2006ರ ನಡುವೆ ಈ ಸರಣಿ ಹತ್ಯಾಕಾಂಡ ನಡೆದಿತ್ತು. ಮಣಿಂದರ್ ಸಿಂಗ್ ಪರಿಹಾರ್‌ನ ಮನೆಯಲ್ಲಿ ಸುರಿಂದರ್ ಕೋಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಈತ ಹಲವು ಮಕ್ಕಳನ್ನು ಮನೆಗೆ ಕರೆ ತಂದು ಅವರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಮನೆಯ ಸಮೀಪದಲ್ಲೇ ಇದ್ದ ಚರಂಡಿಯಲ್ಲಿ ಹಲವು ಮಕ್ಕಳ ದೇಹದ ಭಾಗಗಳು ಸಿಕ್ಕಿದ್ದವು. ಈ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಹಲವು ಮಕ್ಕಳು ಸುರಿಂದರ್ ಕೋಲಿಯಿಂದಲೇ ಹತ್ಯೆಗೀಡಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ಇನ್ನು ಮಣಿಂದರ್ ಸಿಂಗ್ ಪರಿಹಾರ್ ಹಾಗೂ ಸುರಿಂದರ್ ಕೋಲಿ ಇಬ್ಬರು ಸೇರಿ 20 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪ ಸಹ ಕೇಳಿ ಬಂದಿತ್ತು. ಈ ಪ್ರಕರಣದ ಪೊಲೀಸ್ ತನಿಖೆ ಬಳಿಕ ವಿಚಾರಣೆ ನಡೆಸಿದ್ದ ಕೆಳ ನ್ಯಾಯಾಲಯ, ಈ ಪ್ರಕರಣದಲ್ಲೂ ಇಬ್ಬರೂ ಆರೋಪಿಗಳನ್ನೂ ತಪ್ಪಿಸ್ಥರು ಎಂದು ಶಿಕ್ಷೆ ವಿಧಿಸಿತ್ತು. ಮಣಿಂದರ್ ಸಿಂಗ್ ಪರಿಹಾರ್ ಹಾಗೂ ಸುರಿಂದರ್ ಕೋಲಿ ವಿರುದ್ಧ ಒಟ್ಟು 16 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 12 ಪ್ರಕರಣಗಳಲ್ಲಿ ಇಬ್ಬರೂ ಮುಕ್ತರಾಗಿದ್ದು, ಗಲ್ಲು ಶಿಕ್ಷೆಯಿಂದಲೂ ಪಾರಾಗಿದ್ದಾರೆ. ಇನ್ನೂ 4 ಪ್ರಕರಣಗಳು ಆರೋಪಿಗಳ ವಿರುದ್ಧ ವಿಚಾರಣೆ ಹಂತದಲ್ಲಿವೆ.