More

    ಕೊಳ್ಳೇಗಾಲದ ಎಲ್ಲ ರಸ್ತೆಗಳು ಭಣ ಭಣ

    ಕೊಳ್ಳೇಗಾಲ: ಜನತಾ ಕರ್ಫೂೃಗೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ಜನರ ಸಂಚಾರವಿಲ್ಲದೇ ರಸ್ತೆಗಳು ಬಿಕೋ ಎನ್ನುತ್ತಿದ್ದವು.

    ಶನಿವಾರ ಸಂಜೆಯಿಂದಲೇ ಸಿದ್ಧರಾಗಿದ್ದ ಜನತೆ ಭಾನುವಾರ ದಿನವಿಡೀ ಮನೆಯಲ್ಲಿಯೇ ಉಳಿದಿದ್ದರು. ಆ ಮೂಲಕ ಕರೊನಾ ವೈರಸ್ ನಿಯಂತ್ರಣಕ್ಕೆ ಬೆಂಬಲ ವ್ಯಕ್ತಪಡಿಸಿದರು. ಪಟ್ಟಣದ ಬಸ್ ನಿಲ್ದಾಣ, ಡಾ.ಅಂಬೇಡ್ಕರ್, ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್ ರಸ್ತೆ ಸೇರಿದಂತೆ ಎಲ್ಲ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು.

    ಬೆಳಗ್ಗೆ ಹಾಲು, ನ್ಯೂಸ್ ಪೇಪರ್ ಅಂಗಡಿಗಳು ಕೆಲಕಾಲ ತೆರದಿದ್ದವು. ಮೆಡಿಕಲ್ ಸ್ಟೋರ್ ಮತ್ತು ಸರ್ಕಾರಿ ಆಸ್ಪತ್ರೆ ದಿನವಿಡೀ ತೆರೆಯುವ ಮೂಲಕ ತುರ್ತು ಔಷಧ ಮತ್ತು ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿತ್ತು. ಉಳಿದಂತೆ ಪೆಟ್ರೊಲ್ ಬಂಕ್, ಆಟೋ, ಕಾರು, ಬೀದಿಬದಿ ವ್ಯಾಪಾರಿಗಳು, ವರ್ತಕರು, ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆ ಸಂಪೂರ್ಣ ಸ್ಥಗಿತಗೊಂಡಿತ್ತು.

    ಡಿವೈಎಸ್ಪಿ ನವೀನ್ ಕುಮಾರ್ ನೇತೃತ್ವದಲ್ಲಿ 3 ಪ್ರತ್ಯೇಕ ಪೊಲೀಸ್ ಅಧಿಕಾರಿಗಳ ತಂಡ ಪಟ್ಟಣದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಗಸ್ತು ತಿರುಗಿ ಕಾರ್ಯ ನಿರ್ವಹಿಸಿತು. ಇದೇ ವೇಳೆ ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿತ್ತು. ಶನಿವಾರದಿಂದ ಪಟ್ಟಣದ ವಿವಿಧ ಹೋಟೆಲ್ ವ್ಯಾಪಾರ ಸ್ಥಗಿತಗೊಂಡಿದ್ದವು. ಆದರೆ, ಜಿಲ್ಲಾಧಿಕಾರಿ ಆದೇಶದನ್ವಯ ಭಾನುವಾರ ಇಂದಿರಾ ಕ್ಯಾಂಟೀನ್ ಬಂದ್ ಆಗಿತ್ತು.

    ರೇಷ್ಮೆ ಮಾರಾಟ ಸ್ತಬ್ಧ: ನಿತ್ಯ ನೂರಾರು ರೇಷ್ಮೆ ಬೆಳೆಗಾರರು ಹಾಗೂ ರೇಷ್ಮೆ ನೂಲು ಬಿಚ್ಚಣಿಕೆಗಾರರಿಂದ ಗಿಜುಗುಡುತ್ತಿದ್ದ ಕೊಳ್ಳೇಗಾಲದ ಮುಡಿಗುಂಡ ಸರ್ಕಾರ ರೇಷ್ಮೆ ಗೂಡಿನ ಮಾರುಕಟ್ಟೆ ಭಾನುವಾರ ಸ್ತಬ್ಧಗೊಂಡಿತ್ತು.
    ಚನ್ನಪಟ್ಟಣ, ರಾಮನಗರ, ಕನಕಪುರ, ಮಳವಳ್ಳಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ರೇಷ್ಮೆ ಮಾರುಕಟ್ಟೆಗೆ ಆಗಮಿಸುತ್ತಿದ್ದ ರೈತರು ಸ್ವಯಂ ಪ್ರೇರಿತವಾಗಿ ತಮ್ಮ ವಹಿವಾಟನ್ನು ಸ್ಥಗಿತಗೊಳಿಸಿದ್ದರು. ಮಾಂಬಳ್ಳಿ, ಯಳಂದೂರು ಹಾಗೂ ಕೊಳ್ಳೇಗಾಲ ಭಾಗದಿಂದ ಬರುತ್ತಿದ್ದ ರೇಷ್ಮೆ ನೂಲು ಬಿಚ್ಚಣಿಕೆದಾರರು ಗೂಡು ಖರೀದಿಗೆ ಮುಂದಾಗಲಿಲ್ಲ. ಬೆಳೆಗಿನಿಂದಲೇ ವಿವಿಧ ದೇವಾಲಯ, ಚರ್ಚ್ ಹಾಗೂ ಮಸೀದಿಗಳು ಜನತಾ ಕರ್ಫ್ಯೂ ಬೆಂಬಲಿಸಿ ಬಂದ್ ಮಾಡಲಾಗಿತ್ತು.

    ಜನರಿಲ್ಲದೇ ನಡೆದ 4 ಮದುವೆ: ಪಟ್ಟಣದ 4 ಕಲ್ಯಾಣ ಮಂಟಪಗಳಲ್ಲಿ ಮಂಗಳವಾದ್ಯದ ಸದ್ದು ಮೊಳವಿಗಿದವು. ಶ್ರೀ ರಾಜರಾಜೇಶ್ವರಿ, ಎನ್.ಎಲ್.ಸಂಗೀತಾ ಹಾಗೂ ಎಸ್.ಶಿವಪ್ರಸಾದ್ ಅವರ ವಿವಾಹ ಕಾರ್ಯ ಎರಡೂ ಕುಟುಂಬದವರು ಹಾಗೂ ಕೆಲ ಬಂಧುಗಳು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಹೆಚ್ಚು ಜನರಿಲ್ಲದೇ ನಡೆಯಿತು. ವೆಂಕಟೇಶ್ವರ ಮಹಲ್‌ನಲ್ಲಿ ಲಿಂಗರಾಜು ಹಾಗೂ ಜಯಲಕ್ಷ್ಮೀ, ಉಮಾ ಶಂಕರ್ ಕಲ್ಯಾಣ ಮಂಟಪದಲ್ಲಿ ಪ್ರತಾಪ್ ಮತ್ತು ಶಿಲ್ಪಾ, ವಾಸವಿ ಮಹಲ್‌ನಲ್ಲಿ ಎಂ.ಪ್ರಸನ್ನಕುಮಾರ್ ಹಾಗೂ ಆರ್.ಜಯಲಕ್ಷ್ಮೀ ಅವರ ಮದುವೆ ಸರಳವಾಗಿ ನಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts