More

    ದೂರವಾದ ಕರೊನಾ ಕಾರ್ಮೋಡ, ಇಂದಿನಿಂದ ಭಾರತ-ಇಂಗ್ಲೆಂಡ್ ಫೈನಲ್ ಟೆಸ್ಟ್

    ಮ್ಯಾಂಚೆಸ್ಟರ್: ಓವಲ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ಬೀಗಿರುವ ಭಾರತ ತಂಡ, 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದೆ. ಟೀಮ್ ಇಂಡಿಯಾದ ಸಹಾಯಕ ಫಿಸಿಯೋ ಕೂಡ ಪಾಸಿಟಿವ್ ಆದ ಬೆನ್ನಲ್ಲೇ ಪಂದ್ಯಕ್ಕೆ ಕರೊನಾ ಕಾರ್ಮೋಡ ಹರಡಿತ್ತು. ಆದರೆ ಭಾರತ ತಂಡದ ಎಲ್ಲ ಆಟಗಾರರ ಕೋವಿಡ್-19 ವರದಿ ನೆಗೆಟಿವ್ ಬರುವುದರೊಂದಿಗೆ, ಆತಿಥೇಯ ಇಂಗ್ಲೆಂಡ್ ತಂಡದ ವಿರುದ್ಧ ಓಲ್ಡ್ ಟಾ್ರೆೆರ್ಡ್ ಮೈದಾನದಲ್ಲಿ ಶುಕ್ರವಾರದಿಂದ ನಿರ್ಣಾಯಕ ಪಂದ್ಯ ನಿಗದಿಯಂತೆಯೇ ನಡೆಯುವುದು ಖಚಿತಗೊಂಡಿದೆ. ವಿರಾಟ್ ಕೊಹ್ಲಿ ಪಡೆ ಕನಿಷ್ಠ ಡ್ರಾ ಸಾಧಿಸಿದರೂ ಸರಣಿ ವಶಪಡಿಸಿಕೊಳ್ಳುವ ಅವಕಾಶ ಹೊಂದಿದೆ. ಲಾರ್ಡ್ಸ್‌ನಲ್ಲೂ ಜಯಿಸಿದ್ದ ಭಾರತ ಸದ್ಯ ಸರಣಿಯಲ್ಲಿ 2-1 ಮುನ್ನಡೆಯಲ್ಲಿದೆ.

    ಸಹಾಯಕ ಫಿಸಿಯೋ ಪಾಸಿಟಿವ್ ಆದ ಕಾರಣದಿಂದಾಗಿ ಗುರುವಾರ ಭಾರತ ತಂಡದ ಆಟಗಾರರಿಗೆ ಅಭ್ಯಾಸಕ್ಕೂ ಅವಕಾಶ ಲಭಿಸಲಿಲ್ಲ. ಆರ್‌ಟಿ-ಪಿಸಿಆರ್ ವರದಿ ಬರುವವರೆಗೆ ಹೋಟೆಲ್ ಕೋಣೆಯಲ್ಲೇ ಉಳಿದುಕೊಳ್ಳಲು ಆಟಗಾರರಿಗೆ ಸೂಚಿಸಲಾಗಿತ್ತು. ಇದರಿಂದ ತಂಡದ ಸಿದ್ಧತೆಗೆ ಹೊಡೆತ ಬಿದ್ದಿತು.

    ಕರೊನಾ ಸೋಂಕಿತರಾಗಿ ಐಸೋಲೇಷನ್‌ನಲ್ಲಿರುವ ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ಮಾರ್ಗದರ್ಶನವನ್ನು ಭಾರತ ತಂಡ ಮಿಸ್ ಮಾಡಿಕೊಳ್ಳಲಿದ್ದು, ನಾಯಕ ವಿರಾಟ್ ಕೊಹ್ಲಿ ಅವರೊಬ್ಬರೇ ವಾತಾವರಣವನ್ನು ಅವಲೋಕಿಸಿ ಆಡುವ 11ರ ಬಳಗವನ್ನು ನಿರ್ಧರಿಸಬೇಕಾದ ಸವಾಲು ಹೊಂದಿದ್ದಾರೆ.

    ಲಾರ್ಡ್ಸ್ ಗೆಲುವಿನ ಬಳಿಕ ಲೀಡ್ಸ್‌ನಲ್ಲೂ ಅದೇ ತಂಡವನ್ನು ಕಣಕ್ಕಿಳಿಸಿ ಕೈಸುಟ್ಟುಕೊಂಡಿದ್ದ ಭಾರತ, ಓವಲ್‌ನಲ್ಲಿ ಮಾಡಿದ್ದ ಕೆಲ ಬದಲಾವಣೆ ಭರ್ಜರಿ ಫಲ ನೀಡಿತ್ತು. ಶಾರ್ದೂಲ್ ಠಾಕೂರ್ (3 ವಿಕೆಟ್, 117 ರನ್) ಆಲ್ರೌಂಡ್ ನಿರ್ವಹಣೆ ತೋರಿದ್ದರೆ, ವೇಗಿ ಉಮೇಶ್ ಯಾದವ್ (6 ವಿಕೆಟ್) ಅಮೂಲ್ಯ ವಿಕೆಟ್‌ಗಳನ್ನು ಕಬಳಿಸಿದ್ದರು. ಇದೀಗ, ಅಂತಿಮ ಟೆಸ್ಟ್‌ಗೆ ಮತ್ತೆ ಭಾರತ ತಂಡ ಮತ್ತೆ ಬದಲಾವಣೆ ಮಾಡಿಕೊಳ್ಳುವುದೇ ಎಂಬ ಕುತೂಹಲ ಮೂಡಿದೆ.

    *ಆರಂಭ: ಮಧ್ಯಾಹ್ನ 3.30
    *ನೇರಪ್ರಸಾರ: ಸೋನಿ ಸಿಕ್ಸ್

    ರಹಾನೆ ಫಾರ್ಮ್ ಕಳವಳ
    ಉಪನಾಯಕ ಅಜಿಂಕ್ಯ ರಹಾನೆ ರನ್‌ಬರ ಭಾರತಕ್ಕೆ ಅಂತಿಮ ಟೆಸ್ಟ್‌ಗೆ ಮುನ್ನ ಎದುರಾಗಿರುವ ಏಕೈಕ ಕಳವಳವಾಗಿದೆ. ತಂಡದ ಇತರೆಲ್ಲ ಆಟಗಾರರು ಉಪಯುಕ್ತ ಕೊಡುಗೆ ನೀಡುತ್ತಿರುವ ನಡುವೆ ರಹಾನೆ, ಸರಣಿಯ 7 ಇನಿಂಗ್ಸ್‌ಗಳಲ್ಲಿ 1ರಲ್ಲಿ ಮಾತ್ರ ಅರ್ಧಶತಕ ಬಾರಿಸಿದ್ದು, ಉಳಿದ 6 ಇನಿಂಗ್ಸ್‌ಗಳಲ್ಲಿ ವೈಫಲ್ಯ ಕಂಡಿದ್ದಾರೆ. 33 ವರ್ಷದ ರಹಾನೆ ಮತ್ತೊಮ್ಮೆ ಅವಕಾಶ ಪಡೆಯುವ ಸಾಧ್ಯತೆ ಇದ್ದರೂ, ಅವರ ಸ್ಥಾನವನ್ನು ತುಂಬಲು ಸೂರ್ಯಕುಮಾರ್ ಮತ್ತು ಹನುಮ ವಿಹಾರಿ ಈಗಾಗಲೆ ಪೈಪೋಟಿಯಲ್ಲಿ ನಿಂತಿದ್ದಾರೆ.

    ಬುಮ್ರಾಗೆ ವಿಶ್ರಾಂತಿ ಸಾಧ್ಯತೆ
    ಹಾಲಿ ಸರಣಿ ಮುಗಿದ ಬೆನ್ನಲ್ಲೇ ಭಾರತ ತಂಡದ ಆಟಗಾರರು ಐಪಿಎಲ್‌ನಲ್ಲಿ ಆಡಲಿದ್ದು, ಅದಾದ ಕೂಡಲೆ ಟಿ20 ವಿಶ್ವಕಪ್ ಶುರುವಾಗಲಿದೆ. ಹೀಗಾಗಿ ಈ ಬಿಡುವಿಲ್ಲದ ವೇಳಾಪಟ್ಟಿಯ ಹಿನ್ನೆಲೆಯಲ್ಲಿ ತಂಡದ ಪ್ರಮುಖ ವೇಗಿ ಜಸ್‌ಪ್ರೀತ್ ಬುಮ್ರಾಗೆ ಅಂತಿಮ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಸರಣಿಯಲ್ಲಿ 18 ವಿಕೆಟ್ ಕಬಳಿಸಿ ಮಿಂಚಿರುವ ಬುಮ್ರಾಗೆ ಕಾರ್ಯದೊತ್ತಡ ತಗ್ಗಿಸುವ ಅಗತ್ಯವಿದೆ. ಕಳೆದೊಂದು ತಿಂಗಳಲ್ಲಿ ಅವರು 151 ಓವರ್ ಎಸೆದಿದ್ದಾರೆ. ಬುಮ್ರಾ ವಿಶ್ರಾಂತಿ ಪಡೆದರೆ, ಕಳೆದ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಮೊಹಮದ್ ಶಮಿ ಮರಳಿ ಕಣಕ್ಕಿಳಿಯಲಿದ್ದಾರೆ.

    ಅಶ್ವಿನ್‌ಗೆ ಸಿಗುವುದೇ ಅವಕಾಶ?
    ಭಾರತ ಟೆಸ್ಟ್ ತಂಡದ ಅಗ್ರ ಸ್ಪಿನ್ನರ್ ಎನಿಸಿದ್ದ ಆರ್. ಅಶ್ವಿನ್, ಸರಣಿಯ ಮೊದಲ 4 ಪಂದ್ಯಗಳಿಂದಲೂ ಹೊರಗುಳಿದಿದ್ದರು. ಈ ನಡುವೆ ಟಿ20 ವಿಶ್ವಕಪ್ ತಂಡಕ್ಕೆ ಅಚ್ಚರಿಯ ರೀತಿಯಲ್ಲಿ ಪುನರಾಗಮನ ಕಂಡಿದ್ದಾರೆ. ಇದರ ಜತೆಯಲ್ಲೇ ಈಗ ಕೊನೇ ಟೆಸ್ಟ್‌ನಲ್ಲೂ ಅವರಿಗೆ ಆಡುವ ಅವಕಾಶ ಸಿಗುವುದೇ ಎಂಬ ಕುತೂಹಲವಿದೆ. ಹಿಂದಿನ ಟೆಸ್ಟ್‌ಗಳಲ್ಲಿ ಸ್ಪಿನ್ ಬೌಲಿಂಗ್ ಆಲ್ರೌಂಡರ್ ರವೀಂದ್ರ ಜಡೇಜಾಗೆ ಆದ್ಯತೆ ನೀಡಿದ್ದ ನಾಯಕ ಕೊಹ್ಲಿ, ಶಾರ್ದೂಲ್ ಆಲ್ರೌಂಡ್ ನಿರ್ವಹಣೆಯ ಬಳಿಕ ಮತ್ತೆ ಅಶ್ವಿನ್‌ಗೆ ಮಣೆ ಹಾಕುವ ಸಾಧ್ಯತೆ ಇದೆ. ಬೌಲಿಂಗ್ ವಿಭಾಗವನ್ನು ಬಲಪಡಿಸಲು ಅಶ್ವಿನ್ ಸೇರ್ಪಡೆ ನೆರವಾಗಲಿದೆ.

    ಮಳೆ ಅಡಚಣೆ ಭೀತಿ
    ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಮೊದಲ 2 ದಿನದಾಟಕ್ಕೆ ಮಳೆ ಅಡಚಣೆ ತರುವ ಭೀತಿ ಇದೆ. ಆದರೆ ಇದು ಭಾರತಕ್ಕೆ ಸಿಹಿ ಸುದ್ದಿಯೇ ಆಗಿದೆ. ಯಾಕೆಂದರೆ ಈ ಪಂದ್ಯ ಡ್ರಾದಲ್ಲಿ ಕೊನೆಗೊಂಡರೂ ಸರಣಿ ವಶಪಡಿಸಿಕೊಳ್ಳುವ ಅವಕಾಶ ಭಾರತಕ್ಕಿದೆ.

    *1: ಭಾರತ ಸರಣಿ ಜಯಿಸಿದರೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ (2018-19) ಮತ್ತು ಇಂಗ್ಲೆಂಡ್ ಎರಡೂ ದೇಶಗಳಲ್ಲಿ ಟೆಸ್ಟ್ ಸರಣಿ ಜಯಿಸಿದ ಭಾರತದ ಮೊದಲ ನಾಯಕ ಎನಿಸಲಿದ್ದಾರೆ.

    *4: ಭಾರತ ಸರಣಿ ಜಯಿಸಿದರೆ ಇಂಗ್ಲೆಂಡ್‌ನಲ್ಲಿ 4ನೇ ಬಾರಿ ಹಾಗೂ 14 ವರ್ಷಗಳ ಬಳಿಕ ಈ ಸಾಧನೆ ಮಾಡಿದಂತಾಗಲಿದೆ. ಈ ಮುನ್ನ 1971 (1-0), 1986 (2-0) ಮತ್ತು 2007ರಲ್ಲಿ (1-0) ಭಾರತ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಜಯಿಸಿತ್ತು.

    *9: ಭಾರತ ಓಲ್ಡ್ ಟಾ್ರೆೆರ್ಡ್ ಮೈದಾನದಲ್ಲಿ ಇದುವರೆಗೆ 9 ಟೆಸ್ಟ್ ಆಡಿದ್ದು, ಒಂದರಲ್ಲೂ ಜಯಿಸಿಲ್ಲ. 4ರಲ್ಲಿ ಇಂಗ್ಲೆಂಡ್ ಗೆದ್ದಿದ್ದರೆ, 5 ಪಂದ್ಯ ಡ್ರಾಗೊಂಡಿದೆ. 2014ರಲ್ಲಿ ಕೊನೆಯದಾಗಿ ಆಡಿದಾಗ ಭಾರತ ಇನಿಂಗ್ಸ್ ಸೋಲು ಕಂಡಿತ್ತು.

    ಟೀಮ್ ನ್ಯೂಸ್:
    ಭಾರತ: ಓವಲ್‌ನಲ್ಲಿ ಗಾಯಗೊಂಡಿದ್ದ ರೋಹಿತ್ ಶರ್ಮ, ಚೇತೇಶ್ವರ ಪೂಜಾರ ಅಂತಿಮ ಟೆಸ್ಟ್ ಆಡಲು ಫಿಟ್ ಆಗಿದ್ದಾರೆ ಎನ್ನಲಾಗಿದೆ. ಇಲ್ಲದಿದ್ದರೆ ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತು ಹನುಮ ವಿಹಾರಿ ಬದಲಿಗರಾಗಿ ಆಡಲಿದ್ದಾರೆ. ಬುಮ್ರಾಗೆ ವಿಶ್ರಾಂತಿ ನೀಡಬೇಕೇ, ಬೇಡವೆ ಎಂಬ ಬಗ್ಗೆ ಗೊಂದಲವಿದೆ. ಶಮಿ ಫಿಟ್ ಆಗಿದ್ದು, ಬುಮ್ರಾ ಅಥವಾ ಸಿರಾಜ್ ಬದಲಿಗೆ ಕಣಕ್ಕಿಳಿಯಬಹುದು. ಜಡೇಜಾ ಬದಲಿಗೆ ಅಶ್ವಿನ್ ಕಣಕ್ಕಿಳಿದರೂ ಅಚ್ಚರಿ ಇಲ್ಲ. ಕೆಟ್ಟ ಫಾರ್ಮ್ ನಡುವೆಯೂ ಉಪನಾಯಕ ಅಜಿಂಕ್ಯ ರಹಾನೆ ಪಂದ್ಯದಿಂದ ಕೊಕ್ ಪಡೆಯುವ ಸಾಧ್ಯತೆ ಕಡಿಮೆ ಇದೆ.

    ಇಂಗ್ಲೆಂಡ್: ಸರಣಿ ಸಮಬಲದ ಸಮಾಧಾನವನ್ನು ಕಾಣಲು ಗೆಲ್ಲಲೇಬೇಕಾಗಿರುವ ಇಂಗ್ಲೆಂಡ್ ತಂಡದಲ್ಲಿ ಕೆಲ ಬದಲಾವಣೆ ನಿರೀಕ್ಷಿತವೆನಿಸಿದೆ. 2ನೇ ಮಗುವಿನ ಅಪ್ಪನಾದ ಬಳಿಕ ಉಪನಾಯಕ ಜೋಸ್ ಬಟ್ಲರ್ ತಂಡಕ್ಕೆ ಮರಳಿದ್ದು, ಅವರಿಗೆ ಜಾನಿ ಬೇರ್‌ಸ್ಟೋ ಸ್ಥಾನ ಬಿಟ್ಟುಕೊಡುವ ನಿರೀಕ್ಷೆ ಇದೆ. ಇನ್ನು ಕ್ರಿಸ್ ವೋಕ್ಸ್ ಜತೆಗೆ ಮಾರ್ಕ್ ವುಡ್ ಹೊಸ ಚೆಂಡು ಹಂಚಿಕೊಳ್ಳುವ ಸಾಧ್ಯತೆ ಇದ್ದು, ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್ ಜತೆಗೆ ಕ್ರೇಗ್ ಓವರ್‌ಟನ್ ಕೂಡ ಹೊರಗುಳಿಯಬಹುದು. ಯಾಕೆಂದರೆ ಓಲ್ಡ್ ಟಾ್ರೆೆರ್ಡ್ ಪಿಚ್ ಸ್ಪಿನ್ ಸ್ನೇಹಿಯಾಗಿಯೂ ವರ್ತಿಸುವ ಲಕ್ಷಣ ಕಾಣಿಸಿದರೆ ಜಾಕ್ ಲೀಚ್ ಕೂಡ ಕಣಕ್ಕಿಳಿಬಹುದು.

    ವಾಕ್‌ಓವರ್ ಕೇಳಿದ್ದ ಇಂಗ್ಲೆಂಡ್!
    ಕರೊನಾ ಹಾವಳಿಯಿಂದಾಗಿ ಅಂತಿಮ ಟೆಸ್ಟ್ ಪಂದ್ಯ ರದ್ದಾಗುವ ಭೀತಿ ಹರಡಿದ್ದ ನಡುವೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ), ಪಂದ್ಯವನ್ನು ಬಿಟ್ಟುಕೊಡುವಂತೆ (ವಾಕ್‌ಓವರ್ ರೀತಿ ಫಾರ್‌ಫಿಟ್) ಕೇಳಿಕೊಂಡಿದ್ದರೂ, ಬಿಸಿಸಿಐ ಅದಕ್ಕೆ ಒಪ್ಪಿರಲಿಲ್ಲ. ಇದಕ್ಕೆ ಮುನ್ನ ಭಾರತ ತಂಡದ ಆಟಗಾರರ ಆರ್‌ಟಿ-ಪಿಸಿಆರ್ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಪಂದ್ಯದ ಭವಿಷ್ಯ ನಿರ್ಧಾರವಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದರೆ, ಪಂದ್ಯ ನಡೆಯುವ ಖಚಿತತೆ ತಮಗೂ ಇಲ್ಲ ಎಂದು ಬಿಸಿಸಿಐ ಅಧ್ಯಕ್ಷ ಗಂಗೂಳಿ ಹೇಳಿದ್ದರು. ಎಲ್ಲ ಕ್ರಿಕೆಟಿಗರ ವರದಿ ನೆಗೆಟಿವ್ ಬಂದ ಬೆನ್ನಲ್ಲೇ ಇಸಿಬಿ, ನಿಗದಿಯಂತೆ ಪಂದ್ಯ ನಡೆಸಲು ತೀರ್ಮಾನಿಸಿದೆ.

    ಜೂನಿಯರ್ ಫಿಸಿಯೋ ಪಾಸಿಟಿವ್
    ಟೀಮ್ ಇಂಡಿಯಾದ ಜೂನಿಯರ್ ಫಿಸಿಯೋ ಯೋಗೇಶ್ ಪಾರ್ಮರ್ ಕರೊನಾ ಪಾಸಿಟಿವ್ ಆಗಿದ್ದಾರೆ. ಇದರಿಂದ ಟೀಮ್ ಇಂಡಿಯಾದ ಸಿಬ್ಬಂದಿ ಬಳಗದಲ್ಲಿ ಕರೊನಾ ಸೋಂಕಿತರ ಈಗ ಸಂಖ್ಯೆ 4ಕ್ಕೇರಿದೆ. ಈ ಮುನ್ನ ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಕೂಡ ಪಾಸಿಟಿವ್ ಆಗಿದ್ದರು. ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅಂತಿಮ ಟೆಸ್ಟ್ ಪಂದ್ಯಕ್ಕೆ ಲಭ್ಯರಿರುವ ಏಕೈಕ ತರಬೇತಿ ಸಿಬ್ಬಂದಿಯಾಗಿದ್ದಾರೆ. ಪಾರ್ಮರ್ ಕೂಡ ಈಗ ಐಸೋಲೇಷನ್‌ಗೆ ತೆರಳಿದ್ದರಿಂದ ಟೀಮ್ ಇಂಡಿಯಾಗೆ ಫಿಸಿಯೋ ಇಲ್ಲದಂತಾಗಿದೆ. ರವಿಶಾಸ್ತ್ರಿ ಜತೆಗಿನ ನಿಕಟ ಸಂಪರ್ಕದಿಂದಾಗಿ ಪ್ರಧಾನ ಫಿಸಿಯೋ ನಿತಿನ್ ಪಟೇಲ್ ಓವಲ್ ಟೆಸ್ಟ್‌ನಿಂದಲೇ ಐಸೋಲೇಷನ್‌ನಲ್ಲಿದ್ದಾರೆ. ಇದರಿಂದಾಗಿ ಬಿಸಿಸಿಐ, ತಂಡಕ್ಕೆ ಬದಲಿ ಫಿಸಿಯೋ ವ್ಯವಸ್ಥೆ ಮಾಡಿಕೊಡುವಂತೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯನ್ನು ಕೇಳಿಕೊಂಡಿದೆ. ಓವಲ್ ಟೆಸ್ಟ್‌ಗೆ ಮುನ್ನ ರವಿಶಾಸ್ತ್ರಿ ತಮ್ಮ ಪುಸ್ತಕ ಅನಾವರಣ ಸಮಾರಂಭದಲ್ಲಿ ತಮ್ಮ ಬಳಗದೊಂದಿಗೆ ಭಾಗವಹಿಸಿದ್ದರು. ಅಲ್ಲಿಂದಲೇ ಸೋಂಕು ಹರಡಿದೆ ಎನ್ನಲಾಗುತ್ತಿದೆ. ನಾಯಕ ವಿರಾಟ್ ಕೊಹ್ಲಿ ಕೂಡ ಈ ಸಮಾರಂಭದಲ್ಲಿ ಹಾಜರಿದ್ದರು.

    ಟಿ20 ವಿಶ್ವಕಪ್‌ಗೆ ಇಂಗ್ಲೆಂಡ್ ತಂಡ ಪ್ರಕಟ, ಆಲ್ರೌಂಡರ್ ಬೆನ್ ಸ್ಟೋಕ್ಸ್ ಗೈರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts