More

    ಎಲ್ಲ ಗ್ರಾಪಂಗಳಿಗೂ ಎಸ್‌ಎಲ್‌ಆರ್‌ಎಂ

    ಉಡುಪಿ: ಜಿಲ್ಲೆಯಲ್ಲಿ 2017ರಲ್ಲಿ ಪ್ರಾರಂಭವಾದ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕ ಪ್ರಸ್ತುತ 70 ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಡಿಸೆಂಬರ್ ಅಂತ್ಯದೊಳಗೆ ಎಲ್ಲ 158 ಪಂಚಾಯಿತಿಗಳಿಗೂ ವಿಸ್ತರಿಸಲು ಜಿಲ್ಲಾ ಪಂಚಾಯಿತಿ ಸಜ್ಜಾಗಿದೆ.

    ಎಸ್.ಎಲ್.ಆರ್.ಎಂ ಘಟಕ ಆರಂಭಿಸಲಾದ ಗ್ರಾಪಂಗಳು ಕಸ ವಿಲೇವಾರಿಯಲ್ಲಿ ಬರುವ ಆದಾಯದಿಂದಲೇ ಸಂಪೂರ್ಣ ಖರ್ಚು ವೆಚ್ಚಗಳನ್ನು ಭರಿಸಿಕೊಂಡು ಸಂಪೂರ್ಣ ಸ್ವಾವಲಂಬನೆ ಸಾಧಿಸಿವೆ. ಇದನ್ನೇ ಮಾದರಿಯಾಗಿಟ್ಟುಕೊಂಡು ಉಳಿದೆಡೆಯೂ ಯೋಜನೆ ಜಾರಿಗೊಳಿಸಲಾಗುತ್ತಿದೆ. ಘಟಕ ಸ್ಥಾಪನೆಗೆ ಈಗಾಗಲೇ 110 ಪಂಚಾಯಿತಿಗಳಿಗೆ ಕಂದಾಯ ಇಲಾಖೆ ಮೂಲಕ ಜಾಗ ನೀಡಲಾಗುತ್ತಿದೆ. ಉಳಿದ ಪಂಚಾಯಿತಿಗಳಿಗೆ ಜಾಗ ನೀಡುವ ಪ್ರಕ್ರಿಯೆ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ.

    ಗ್ರಾಪಂ ವ್ಯಾಪ್ತಿಯ ಪ್ರತಿ ಮನೆಗಳಿಂದ ಒಣ ಕಸ ಸಂಗ್ರಹಿಸಲಾಗುತ್ತಿದ್ದು, ಇದಕ್ಕಾಗಿ ಆಯಾ ಪಂಚಾಯಿತಿಗಳು ಮಾಸಿಕ 60 ರೂ. ಶುಲ್ಕ ನಿಗದಿಪಡಿಸಿವೆ. ಸ್ವಚ್ಛತಾ ಕಾರ್ಮಿಕರೂ ಸೇರಿ ಸುಮಾರು 500 ಮಂದಿ ನೌಕರರು ಎಸ್‌ಎಲ್‌ಆರ್‌ಎಂ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಶೇಷವೆಂದರೆ ನಿರುದ್ಯೋಗಿ ಪದವೀಧರರು, ಸ್ನಾತಕೋತ್ತರ ಪದವೀಧರರೂ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲ ಗ್ರಾ.ಪಂ.ಗಳಲ್ಲಿ ಘಟಕ ಆರಂಭವಾದ ಬಳಿಕ ಇನ್ನೂ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿಯಾಗಲಿದೆ.

    ರಸ್ತೆ ನಿರ್ಮಾಣಕ್ಕೆ ಪ್ಲಾಸ್ಟಿಕ್ ಬಳಕೆ: ಎಸ್.ಎಲ್.ಆರ್.ಎಂ ಘಟಕದಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಅನ್ನು ರಸ್ತೆ ನಿರ್ಮಾಣಕ್ಕೆ ಬಳಸುವ ಯೋಜನೆೆ ಪ್ರಾಯೋಗಿಕವಾಗಿ ಜಾರಿಯಾಗಿದೆ. ಅಲೆವೂರು ಮತ್ತು ಮರವಂತೆ ಗ್ರಾಪಂ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಸಿ 300 ಮೀಟರ್ ರಸ್ತೆ ನಿರ್ಮಿಸಲಾಗಿದೆ. ಜಿಲ್ಲೆಯ ಪ್ರತಿಯಿಂದು ಗ್ರಾಮ ಪಂಚಾಯಿತಿಯಲ್ಲೂ ಇಂಥ ರಸ್ತೆ ನಿರ್ಮಾಣ ಆದ್ಯತೆ ನೀಡಲಾಗುತ್ತಿದೆ. ಇದಕ್ಕಾಗಿ ಪ್ಲಾಸ್ಟಿಕ್ ಪುಡಿ ಮಾಡುವ ಯಂತ್ರವನ್ನೂ ಖರೀದಿಸಲಾಗಿದೆ. \

    ಕಸ ನಿರ್ವಹಣೆಯಲ್ಲಿ ಸ್ವಾವಲಂಬನೆ: ವಂಡ್ಸೆ, ಹಂಗಳೂರು, ಸಿದ್ದಾಪುರ, ಮರವಂತೆ, ಕಾಡೂರು, 80 ಬಡಗಬೆಟ್ಟು, ಹೆಜಮಾಡಿ, ವರಂಗ, ಎರ್ಲಪಾಡಿ, ನಿಟ್ಟೆ, ಮುಂಡ್ಕೂರು, ಮುಡೂರು ಗ್ರಾ.ಪಂ.ಗಳಲ್ಲಿ ಕಸ ನಿರ್ವಹಣೆ ಖರ್ಚು ತೆಗೆದು ಹಣ ಉಳಿಕೆಯಾಗುತ್ತಿದೆ. ಕೊಕ್ಕರ್ಣೆ, ಪಡುಬಿದ್ರಿ, ಬಸ್ರೂರು ಗ್ರಾ.ಪಂ.ಗಳು ಕಸ ವಿಲೇವಾರಿಯಲ್ಲಿ ಸ್ವಾವಲಂಬನೆ ಸಾಧಿಸಿವೆ.

    ಆದಾಯ ಮೂಲ: ಗ್ರಾಪಂಗಳಿಗೆ ಎಸ್‌ಎಲ್‌ಆರ್‌ಎಂ ಘಟಕ ಆದಾಯದ ಮೂಲವಾಗಿದೆ. ಬಸ್ರೂರಿನಲ್ಲಿ 4.64 ಲಕ್ಷ ರೂ ವಾರ್ಷಿಕ ಆದಾಯ ಬರುತ್ತಿದ್ದು, 3.37 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ವಂಡ್ಸೆಯಲ್ಲಿ 8 ಸಿಬ್ಬಂದಿಯಿದ್ದು, ತಿಂಗಳ ಆದಾಯ 1.15 ಲಕ್ಷ ರೂ. ಹಾಗೂ 1 ಲಕ್ಷ ರೂ. ಖರ್ಚು ಬರುತ್ತಿದೆ. ಕಾಡೂರಿನಲ್ಲಿ 2.52 ಲಕ್ಷ, ಸಿದ್ದಾಪುರದಲ್ಲಿ 4.66 ಲಕ್ಷ, ಹಂಗಳೂರಿನಲ್ಲಿ 2.24 ಲಕ್ಷ, ಹೆಜಮಾಡಿಯಲ್ಲಿ 11.49 ಲಕ್ಷ ರೂ. ವಾರ್ಷಿಕ ವ್ಯವಹಾರ ಇದೆ. 80 ಬಡಗಬೆಟ್ಟು ಗ್ರಾ.ಪಂ.ನಲ್ಲಿ 10 ರಿಂದ 12 ಮಂದಿ ಕೆಲಸಗಾರರಿದ್ದು, 12 ಲಕ್ಷ ರೂ. ಬಳಕೆದಾರರ ಶುಲ್ಕದಿಂದ, 5.65 ಲಕ್ಷ ರೂ. ಕಸ ಮಾರಾಟದಿಂದ ಆದಾಯ ಬರುತ್ತಿದೆ. ಸಿದ್ದಾಪುರದಲ್ಲಿ ಗ್ರಾಪಂ ಶುಲ್ಕದಿಂದ 3.63 ಲಕ್ಷ ಹಾಗೂ ಕಸ ಮಾರಾಟದಿಂದ 70 ಸಾವಿರ ರೂ. ಆದಾಯ ಸಂಗ್ರಹವಾಗುತ್ತಿದೆ.

    ಸಮರ್ಪಕ ತ್ಯಾಜ್ಯ ಸಂಗ್ರಹಣ ಮತ್ತು ವಿಲೇವಾರಿಗೆ ರಾಜ್ಯದಲ್ಲಿ ಉಡುಪಿ ಜಿಲ್ಲೆ ಮಾದರಿಯಾಗಿದ್ದು, ಜಿಲ್ಲೆಯಲ್ಲಿ ಡಿಸೆಂಬರ್ ಅಂತ್ಯದೊಳಗೆೆ ಜಿಲ್ಲೆಯ ಎಲ್ಲ 158 ಗ್ರಾಮ ಪಂಚಾಯಿತಿಗಳಲ್ಲಿ ಎಸ್.ಎಲ್.ಆರ್.ಎಂ ಘಟಕಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಘಟಕಗಳಲ್ಲಿ ಒಣಕಸ ಮಾತ್ರ ಸಂಗ್ರಹವಾಗುತ್ತಿದ್ದು, ಘಟಕ ಸ್ಥಾಪನೆಯಿಂದ ಸ್ಥಳೀಯರಿಗೆ ಯಾವುದೇ ದುರ್ವಾಸನೆ ಅಥವಾ ಆರೋಗ್ಯಕ್ಕೆ ತೊಂದರೆಯಿಲ್ಲ.
    ಪ್ರೀತಿ ಗೆಹ್ಲೋಟ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ , ಜಿಲ್ಲಾ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts