More

    ಇಂದು ಮುಂಬೈ ಇಂಡಿಯನ್ಸ್-ರಾಜಸ್ಥಾನ ರಾಯಲ್ಸ್ ಮಾಡು ಇಲ್ಲವೆ ಮಡಿ ಕದನ

    ಶಾರ್ಜಾ: ಐಪಿಎಲ್ 14ನೇ ಆವೃತ್ತಿಯಲ್ಲಿ ಪ್ಲೇಆಫ್​ಗೇರುವ 3 ತಂಡಗಳು ಈಗಾಗಲೆ ನಿರ್ಧಾರವಾಗಿದ್ದು, ಉಳಿದ ಒಂದು ಸ್ಥಾನದ ಪೈಪೋಟಿಯಲ್ಲಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡಗಳು ಮಂಗಳವಾರ ಮಹತ್ವದ ಪಂದ್ಯವಾಡಲಿವೆ. ಪ್ಲೇಆಫ್​ ರೇಸ್‌ನಲ್ಲಿ ಉಳಿದುಕೊಳ್ಳಲು ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಗೆಲುವು ಅನಿವಾರ‌್ಯವಾಗಿದ್ದು, ಸೋತ ತಂಡ ಹೊರಬೀಳಲಿದೆ.

    ಒಟ್ಟಾರೆ 5 ಬಾರಿಯ ಹಾಗೂ ಸತತ 2 ಬಾರಿಯ ಚಾಂಪಿಯನ್ ಮುಂಬೈ ತಂಡ ಈ ಬಾರಿ ಸಾಧಾರಣ ಬ್ಯಾಟಿಂಗ್ ನಿರ್ವಹಣೆಯಿಂದ ಹಿನ್ನಡೆ ಕಂಡಿದೆ. ಅರಬ್ ನಾಡಿನ ಚರಣದಲ್ಲಿ ಆಡಿದ 5 ಪಂದ್ಯಗಳಲ್ಲಿ ಮುಂಬೈ ಒಂದರಲ್ಲಷ್ಟೇ ಜಯಿಸಿದೆ. ಟೂರ್ನಿಯ ಇತಿಹಾಸದಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಜಯಿಸಿದ ಮೊದಲ ತಂಡವೆನಿಸುವ ಆಸೆ ಜೀವಂತವಿಡಲು ರೋಹಿತ್ ಶರ್ಮ ಪಡೆ ಗೆಲುವಿನ ಹಾದಿಗೆ ಮರಳುವುದು ಅನಿವಾರ‌್ಯವಾಗಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿಗೆ ಶರಣಾಗಿದ್ದ ಮುಂಬೈ ತಂಡ ರನ್‌ರೇಟ್ ಸುಧಾರಿಸಿಕೊಳ್ಳಲು ದೊಡ್ಡ ಗೆಲುವಿನ ಹಂಬಲದಲ್ಲಿದೆ.

    ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್‌ಗೆ ಆಘಾತ ನೀಡಿದ ವಿಶ್ವಾಸದಲ್ಲಿರುವ ರಾಜಸ್ಥಾನ ತಂಡ, ಮುಂಬೈ ವಿರುದ್ಧವೂ ಅಂಥದ್ದೇ ನಿರ್ವಹಣೆ ಪುನರಾವರ್ತಿಸಬೇಕಾಗಿದೆ. ಸಂಜು ಸ್ಯಾಮ್ಸನ್ ಬಳಗಕ್ಕೆ ಪ್ಲೇಆಫ್​ ಆಸೆ ಜೀವಂತವಿಡಲು ಈ ಪಂದ್ಯವೇ ನಿರ್ಣಾಯಕವೆನಿಸಿದೆ.

    ಪ್ಲೇಆಫ್​ ಲೆಕ್ಕಾಚಾರ
    ಇದುವರೆಗೆ ಆಡಿದ 12 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 7ರಲ್ಲಿ ಸೋತು 10 ಅಂಕ ಗಳಿಸಿರುವ ಮುಂಬೈ ಮತ್ತು ರಾಜಸ್ಥಾನ ತಂಡಗಳು ಒಂದೇ ಸ್ಥಿತಿಯಲ್ಲಿವೆ. ಆದರೆ ರನ್‌ರೇಟ್ ಲೆಕ್ಕಾಚಾರದಲ್ಲಿ ರಾಜಸ್ಥಾನ ತುಸು ಮೇಲುಗೈ ಹೊಂದಿದೆ. ಪ್ಲೇಆಫ್​ ರೇಸ್‌ನಲ್ಲಿ ತನಗೆ ನಿಕಟ ಪೈಪೋಟಿ ಒಡ್ಡುತ್ತಿರುವ ಮುಂಬೈ, ಕೆಕೆಆರ್ ವಿರುದ್ಧವೇ ರಾಜಸ್ಥಾನ ತನ್ನ ಕೊನೇ 2 ಪಂದ್ಯಗಳನ್ನು ಆಡುತ್ತಿದ್ದು, ಇವೆರಡರಲ್ಲೂ ಗೆದ್ದರೆ ಸುಲಭವಾಗಿ ಪ್ಲೇಆಫ್​​ಗೇರಬಹುದಾಗಿದೆ. ಈ ಪೈಕಿ ಒಂದರಲ್ಲಿ ಸೋತರೂ ರಾಜಸ್ಥಾನ ಹೊರಬೀಳಲಿದೆ. ಅಲ್ಲದೆ ಮುಂಬೈ ವಿರುದ್ಧ 1 ರನ್‌ನಿಂದ ಸೋತರೂ ರಾಜಸ್ಥಾನ ತಂಡ ಕೆಕೆಆರ್ ತಂಡವನ್ನು 75 ರನ್‌ಗೂ ಅಧಿಕ ಅಂತರದಿಂದ ಸೋಲಿಸಿದರಷ್ಟೇ ಅದರ ರನ್‌ರೇಟ್ ಹಿಂದಿಕ್ಕಲು ಸಾಧ್ಯವಿದೆ. ಇನ್ನು ಮುಂಬೈ ತಂಡ ಪ್ಲೇಆಫ್​ಗೇರಲು ಉಳಿದೆರಡು ಪಂದ್ಯಗಳಲ್ಲಿ ಬರೀ ಗೆದ್ದರಷ್ಟೇ ಸಾಲದು. ಮುಂಬೈ ಎರಡೂ ಪಂದ್ಯ ಜಯಿಸುವ ಜತೆಗೆ ಕೆಕೆಆರ್ ತಂಡ ಕೊನೇ ಲೀಗ್ ಪಂದ್ಯದಲ್ಲಿ ಸೋಲಲಿ ಎಂದೂ ಪ್ರಾರ್ಥಿಸಬೇಕಾಗಿದೆ. ಯಾಕೆಂದರೆ ಕೆಕೆಆರ್ ರನ್‌ರೇಟ್ ಉತ್ತಮವಾಗಿದೆ. ಕೆಕೆಆರ್ ಕೊನೇ ಪಂದ್ಯ ಗೆದ್ದರೂ ಮುಂಬೈ ಪ್ಲೇಆಫ್​ ಹಂತಕ್ಕೇರಬೇಕೆಂದರೆ, ಉಳಿದೆರಡೂ ಪಂದ್ಯಗಳಲ್ಲಿ ಭಾರಿ ಅಂತರದಿಂದ ಗೆದ್ದು ರನ್‌ರೇಟ್ ಲೆಕ್ಕಾಚಾರದಲ್ಲೂ ಅದನ್ನು ಹಿಂದಿಕ್ಕಬೇಕಾಗುತ್ತದೆ. ಅಂದರೆ ಕೆಕೆಆರ್ ಕೊನೇ ಪಂದ್ಯ ಗೆದ್ದರೆ ಮುಂಬೈ ಉಳಿದೆರಡೂ ಪಂದ್ಯಗಳನ್ನು ಒಟ್ಟಾರೆ 200 ರನ್ ಅಂತರದಲ್ಲಿ ಜಯಿಸಬೇಕಾಗುತ್ತದೆ.

    ಮುಖಾಮುಖಿ: 23
    ಮುಂಬೈ: 12
    ರಾಜಸ್ಥಾನ: 11
    ಹಿಂದಿನ ಮುಖಾಮುಖಿ: ದೆಹಲಿಯಲ್ಲಿ ಮುಂಬೈಗೆ 7 ವಿಕೆಟ್ ಜಯ
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಟೀಮ್ ನ್ಯೂಸ್:

    ಮುಂಬೈ ಇಂಡಿಯನ್ಸ್: ಸತತ ಸೋಲಿನ ನಡುವೆಯೂ ಮುಂಬೈ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷೆ ಇಲ್ಲ. ಆದರೆ ಜಯಂತ್ ಯಾದವ್ ಜಾಗಕ್ಕೆ ಮತ್ತೆ ರಾಹುಲ್ ಚಹರ್ ಮರಳಬಹುದು. ಸೌರಭ್ ತಿವಾರಿ ಗಾಯದ ಕಳವಳ ಹೊಂದಿದ್ದು, ಅವರು ಅಲಭ್ಯರಾದರೆ ಇಶಾನ್ ಕಿಶನ್ ತಂಡಕ್ಕೆ ಮರಳಬಹುದು.

    ರಾಜಸ್ಥಾನ ರಾಯಲ್ಸ್: ಕಳೆದ ಪಂದ್ಯದಲ್ಲಿ ಜಯ ಕಂಡ ನಡುವೆಯೂ ತಂಡವನ್ನು ಮತ್ತಷ್ಟು ಬಲಪಡಿಸಲು ಕೆಲ ಬದಲಾವಣೆಯ ನಿರೀಕ್ಷೆ ಇದೆ. ಮಯಾಂಕ್ ಮಾರ್ಕಂಡೆ ಮತ್ತು ಆಕಾಶ್ ಸಿಂಗ್ ಬದಲಿಗೆ ಕನ್ನಡಿಗ ಶ್ರೇಯಸ್ ಗೋಪಾಲ್ ಮತ್ತು ಕಾರ್ತಿಕ್ ತ್ಯಾಗಿ ತಂಡಕ್ಕೆ ಮರಳಬಹುದು.

    ಮಹಿಳಾ ಕ್ರಿಕೆಟರ್​ ಸ್ಮತಿ ಮಂದನಾ ಶತಕಕ್ಕಿಂತ ಮುಂಗುರುಳಿಗೆ ಫಿದಾ ಆದ್ರೂ ಫ್ಯಾನ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts