More

    ಉಡುಪಿಯಲ್ಲಿ ಎಲ್ಲ ಮೂರು ಪಾಸಿಟಿವ್ ಪ್ರಕರಣಗಳು ಗುಣಮುಖ

    ಉಡುಪಿ: ಜಿಲ್ಲೆಯ ಮೂರನೇ ಕರೊನಾ ಸೋಂಕಿತ ವ್ಯಕ್ತಿ ಗುಣಮುಖರಾಗಿ ಶನಿವಾರ ಮಧ್ಯಾಹ್ನ 2.55ಕ್ಕೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯ ಎಲ್ಲ ಮೂರು ಪಾಸಿಟಿವ್ ಪ್ರಕರಣಗಳು ಗುಣಮುಖರಾಗಿದ್ದು, ಜನತೆಯ ಆತಂಕ ದೂರವಾಗಿದೆ. 3ನೇ ಸೋಂಕಿತ ವ್ಯಕ್ತಿಯ ವರದಿ ಶನಿವಾರ ನೆಗೆಟಿವ್ ಬಂದಿದೆ.
    ಇಲೆಕ್ಟ್ರಿಶಿಯನ್ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಕೇರಳಕ್ಕೆ ಹೋಗಿದ್ದರು. ವಾಪಸ್ ಬರುವಾಗ ದಕ್ಷಿಣ ಕನ್ನಡ ಜಿಲ್ಲೆ ಗಡಿ ತಲಪಾಡಿಯಲ್ಲಿ ತಪಾಸಣೆಗೆ ಒಳಪಡಿಸಲಾಗಿದ್ದು, ಕರೊನಾ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ವಾಹನವೊಂದರಲ್ಲಿ ಆತ ಹಾಗೂ ಆತನ ಜತೆಗಿದ್ದ 31 ಜನರನ್ನು ಮಾ.27ರಂದು ಉಡುಪಿಗೆ ಕರೆತಂದು ಆಸ್ಪತ್ರೆ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಬಳಿಕ ಗಂಟಲ ದ್ರವ ಪರೀಕ್ಷೆ ವರದಿಯಲ್ಲಿ ಈ ವ್ಯಕ್ತಿಗೆ ಕರೊನಾ ಪಾಸಿಟಿವ್ ಬಂದಿತ್ತು. ಕೊವಿಡ್ ವಿಶೇಷ ಆಸ್ಪತ್ರೆಯಾಗಿರುವ ಡಾ.ಟಿ.ಎಂ.ಎ ಪೈ ಆಸ್ಪತ್ರೆ ಐಸೊಲೇಶನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗಿದ್ದು ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. 14 ದಿನ ಹೋಂ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆ ಎಂದು ಡಿಎಚ್‌ಒ ತಿಳಿಸಿದ್ದಾರೆ.

    ಜತೆಗಿದ್ದ 30 ಮಂದಿಯದು ನೆಗೆಟಿವ್: ಮುಂಜಾಗ್ರತಾ ಕ್ರಮವಾಗಿ ಗಡಿಯಲ್ಲಿ ತಪಾಸಣೆಗೆ ಒಳಪಡಿಸಿ ತಕ್ಷಣ ಆಸ್ಪತ್ರೆ ಕ್ವಾರಂಟೈನ್ ಮಾಡಿದ್ದರಿಂದ ಈ ವ್ಯಕ್ತಿ ಜಿಲ್ಲೆಯಲ್ಲಿ ಇನ್ನಿತರೆ ಮಂದಿಗೆ ಸಂಪರ್ಕವಾಗಲು ಸಾಧ್ಯವಾಗಿಲ್ಲ. ಈತನ ಜತೆಗಿದ್ದ ಎಲ್ಲ 30 ಮಂದಿಯ ವರದಿ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    29 ಮಂದಿಯ ಮಾದರಿ ಸಂಗ್ರಹ: ಜಿಲ್ಲಾಡಳಿತ ಶನಿವಾರ ಸ್ವೀಕರಿಸಿದ ಎಲ್ಲ 44 ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. ಉಸಿರಾಟದ ತೊಂದರೆ 7, ಇಲ್‌ನೆಸ್‌ಗೆ ಸಂಬಂಧಿಸಿ 4 ಇತರೆ ಹಾಟ್‌ಸ್ಪಾಟ್‌ಗಳಿಂದ ಬಂದವರು 18 ಮಂದಿ ಸೇರಿದಂತೆ ಒಟ್ಟು 29 ಮಂದಿಯ ಮಾದರಿಯನ್ನು ಶನಿವಾರ ಸಂಗ್ರಹಿಸಲಾಗಿದ್ದು, 8 ಮಂದಿ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 187 ಮಂದಿಯ ವರದಿ ಬರಲು ಬಾಕಿ ಇದೆ. ಶನಿವಾರಕ್ಕೆ 116 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೊಲೇಶನ್ ವಾರ್ಡ್‌ನಿಂದ 9 ಮಂದಿ. ಆಸ್ಪತ್ರೆ ಕ್ವಾರಂಟೈನ್‌ನಿಂದ ಒಬ್ಬರು ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts