More

    ಅಲ್ಕೆರೆ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಮೇಲೆ ಹಲ್ಲೆ

    ಕುಣಿಗಲ್: ಅಲ್ಕೆರೆ ಸಿದ್ಧಗಂಗಾ ಶಾಖಾ ಮಠದ ಜಮೀನು ಒತ್ತುವರಿ ಮಾಡಿಕೊಂಡಿರುವ ಕಿಡಿಗೇಡಿಗಳು ಭಾನುವಾರ ರಾತ್ರಿ ತಾಲೂಕಿನ ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಮೇಲೆ ಹಲ್ಲೆ ನಡೆಸಿ ಮಠಕ್ಕೆ ಕಲ್ಲು ತೂರಿ ಹಾನಿ ಮಾಡಿದ್ದಾರೆ.

    ಅಲ್ಕೆರೆ ಸಿದ್ಧಗಂಗಾ ಮಠದ ಹೆಸರಿನಲ್ಲಿ 20 ಎಕರೆ ಜಮೀನಿದ್ದು, ಈ ಪೈಕಿ ಗ್ರಾಮಸ್ಥರ ಮನವಿ ಮೇರೆಗೆ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ 2 ಎಕರೆ ಜಮೀನನ್ನು ದಾನವಾಗಿ ನೀಡಿದ್ದರು. ಉಳಿಕೆ ಜಮೀನಿನಲ್ಲಿ ಅಕ್ಕಪಕ್ಕದ ರೈತರು ಒತ್ತುವರಿ ಮಾಡಿಕೊಂಡಿದ್ದು, ಈ ಸಂಬಂಧ ಅಲ್ಕೆರೆ ಸಿದ್ಧಗಂಗಾ ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅಗತ್ಯ ದಾಖಲೆ ಸಿದ್ಧಪಡಿಸಿ ಸರ್ವೇ ಮಾಡಿಸಿ ಒತ್ತುವರಿ ತೆರವಿಗೆ ಮುಂದಾಗಿದ್ದರು. ಈ ಸಂಬಂಧ ಸರ್ವೇ ಕಾರ್ಯ ಮುಗಿದು ಒತ್ತುವರಿ ತೆರವು ಮಾಡಿಕೊಡಲು ಒತ್ತುವರಿದಾರರಿಗೂ ತಿಳಿಸಲಾಗಿತ್ತು. ಭಾನುವಾರ ಸಂಜೆ ಮಠದ ಜಮೀನು ಹದ್ದುಬಸ್ತು ಮಾಡಿಕೊಳ್ಳಲು ಸ್ವಾಮೀಜಿ ಕೆಲಸ ಮಾಡಿಸುತ್ತಿದ್ದಾಗ ಒತ್ತುವರಿದಾರರು ಏಕಾಏಕಿ ದಾಳಿ ಮಾಡಿ ಸ್ವಾಮೀಜಿ ಮೇಲೆ ಹಲ್ಲೆ ನಡೆಸಿ ಮಠದ ಮೇಲೆ ಕಲ್ಲು ತೂರಿ ಮಠದ ಕಿಟಕಿ ಗಾಜುಗಳಿಗೆ ಹಾನಿ ಮಾಡಿದ್ದಾರೆ. ಸ್ವಾಮೀಜಿಗೆ ಗಾಯವಾಗಿಲ್ಲ. ಈ ವೇಳೆ ಮಠಕ್ಕೆ ಜಮೀನು ನೀಡಲು ಈ ಹಿಂದೆ ಸಹಕಾರ ನೀಡಿದ್ದ ದಿ.ಪಟೇಲ್ ಗಂಗಪ್ಪ ಗೌಡ ಅವರ ಮಕ್ಕಳು ಮಠದ ಪರವಾಗಿ ನಿಂತು ಬೆಂಬಲ ನೀಡಿದರು.

    ಸ್ವಾಮೀಜಿ ಮೇಲೆ ಹಲ್ಲೆ ನಡೆಸಿದ ಒತ್ತುವರಿದಾರರಾದ ಗ್ರಾಮದ ಶಿವಣ್ಣ, ಗಂಗಾಧರ್. ಕೆಂಪಯ್ಯ, ನಾರಾಯಣ್, ರಂಗಮ್ಮ, ರಾಮಣ್ಣ, ರಂಗಸ್ವಾಮಿ, ರಾಮಕೃಷ್ಣ ಎಂಬುವವರ ಮೇಲೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
    ಸೋಮವಾರ ಸ್ಥಳೀಯ ಶಾಸಕರು, ಡಿವೈಎಸ್‌ಪಿ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಸ್ವಾಮೀಜಿ ಅವರೊಂದಿಗೆ ಗ್ರಾಮಸ್ಥರ ಸಭೆ ನಡೆಸಿ ಒತ್ತುವರಿಯಾದ ಮಠದ ಜಮೀನು ತೆರವು ಮಾಡಿಕೊಡಬೇಕೆಂದು ಸೂಚಿಸಿದ್ದಾರೆ.

    ಮಠದ ಜಮೀನು ಒತ್ತುವರಿಯಾಗಿದ್ದು, ಜಮೀನು ಸರ್ವೇ ಮಾಡಿಸಿ ಹದ್ದುಬಸ್ತು ಮಾಡಿಸುತ್ತಿರುವಾಗ ಒತ್ತುವರಿದಾರರು ಗಲಾಟೆ ಮಾಡಿ ಮಠಕ್ಕೆ ಹಾನಿ ಮಾಡಿ, ನನ್ನ ಮೇಲೂ ನೂಕಾಟ ನಡೆಸಿ ಹಲ್ಲೆ ಮಾಡಿದರು.
    ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಸಿದ್ದಗಂಗಾ ಶಾಖಾ ಮಠ

    ಒತ್ತುವರಿ ತೆರವು ಮಾಡಿಕೊಡಬೇಕೆಂದು ಕೇಳಿದ್ದಕ್ಕೆ ಮಠಕ್ಕೆ ಹಾನಿ, ಸ್ವಾಮೀಜಿ ಮೇಲೆ ಹಲ್ಲೆ ನಡೆಸಿರುವ ಒತ್ತುವರಿದಾರರ ವಿರುದ್ಧೆ ಪ್ರಕರಣ ದಾಖಲಿಸಲಾಗಿದೆ. ಗ್ರಾಮದಲ್ಲೇ ಸಭೆ ನಡೆಸಿ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಲಾಗಿದೆ.
    ಜಗದೀಶ್ ಡಿವೈಎಸ್‌ಪಿ. ಕುಣಿಗಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts