More

    ಬೆಳಗಾವಿ ಮದ್ಯ ಮಾರಾಟದಲ್ಲೂ ದಾಖಲೆ

    ಬೆಳಗಾವಿ: 40 ದಿನಗಳ ಬಳಿಕದ ಲಾಕ್‌ಡೌನ್ ಸಡಿಲಿಕೆಯಿಂದಾಗಿ ಮೊದಲ ದಿನವೇ ಮದ್ಯಪ್ರಿಯರು ಅಬಕಾರಿ ಇಲಾಖೆಗೆ ಭರ್ಜರಿ ಆದಾಯ ತಂದುಕೊಟ್ಟಿದ್ದಾರೆ. ಜಿಲ್ಲಾದ್ಯಂತ ಸೋಮವಾರ 5.66 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದ್ದು, ಮದ್ಯ ಮಾರಾಟದಲ್ಲಿ ಜಿಲ್ಲೆ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.

    ಜಿಲ್ಲೆಯ 270 ಮದ್ಯದ ಅಂಗಡಿಗಳು, 67 ಎಂಎಸ್‌ಐಎಲ್ ಮಳಿಗೆಗಳಲ್ಲಿ ಸಾಮಾನ್ಯ ದಿನಗಳಲ್ಲಿ ದಿನಕ್ಕೆ 6 ರಿಂದ 8 ಸಾವಿರ ಬಾಕ್ಸ್ ಮದ್ಯ ಮಾರಾಟವಾಗುತ್ತಿತ್ತು. ಆದರೆ, ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಿತ್ತು. ಲಾಕ್‌ಡೌನ್ ಸಡಿಲಿಕೆಯ ಮೊದಲ ದಿನದಲ್ಲಿಯೇ ಬರೋಬ್ಬರಿ 1.9 ಲಕ್ಷ ಲೀಟರ್ ಮದ್ಯ ಹಾಗೂ 38 ಸಾವಿರ ಲೀಟರ್ ಬಿಯರ್ ಮಾರಾಟವಾಗಿದೆ. ಅಲ್ಲದೆ, ಕುಡುಕರ ಪ್ರಮಾಣದಲ್ಲಿ ಶೇ.32.3 ಏರಿಕೆ ಕಂಡಿರುವುದು ಎಂಬುದನ್ನು ಅಂಕಿ-ಅಂಶಗಳು ಸಾರಿ ಹೇಳುತ್ತಿವೆ.

    ಜಿಲ್ಲೆಯಲ್ಲಿ ನಿರ್ಬಂಧಿತ ವಲಯಗಳ ವ್ಯಾಪ್ತಿಯ 45 ಮದ್ಯದಂಗಡಿ, 7ಎಂಎಸ್‌ಐಎಲ್ ಮಳಿಗೆಗಳನ್ನು ಬಂದ್ ಮಾಡಲಾಗಿತ್ತು. ಉಳಿದ ಪ್ರದೇಶಗಳಲ್ಲಿ 225 ಮದ್ಯದಂಗಡಿ ಮತ್ತು 60 ಎಂಎಸ್‌ಐಎಲ್‌ಗಳು ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆಯವರೆ ಕಾರ್ಯನಿರ್ವಹಿಸಿದ್ದವು. ಕೆಲ ಮದ್ಯದಂಗಡಿಗಳಲ್ಲಿ ಬೇಡಿಕೆಗೆ ತಕ್ಕಂತೆ ಮದ್ಯ ಸಿಗದೆ ಮದ್ಯಪ್ರಿಯರು ಬೇಸರದಿಂದ ಮನೆಗೆ ಮರಳುವಂತಾಯಿತು.

    ಜಿಲ್ಲೆಯ 225 ಮದ್ಯದ ಅಂಗಡಿಗಳಲ್ಲಿ 4,30,29,000 ಮೌಲ್ಯದ 1.6 ಲಕ್ಷ ಲೀಟರ್ ಮದ್ಯ, 8.29 ಲಕ್ಷ ರೂ. ಮೌಲ್ಯದ 32 ಸಾವಿರ ಲೀಟರ್ ಬಿಯರ್ ಹಾಗೂ 60 ಎಂಎಸ್‌ಐಎಲ್ ಮಳಿಗೆಗಳಲ್ಲಿ 1.2 ಕೋಟಿ ರೂ. ಮೌಲ್ಯದ 29 ಸಾವಿರ ಲೀಟರ್ ಮದ್ಯ, 14 ಲಕ್ಷ ರೂ. ಮೌಲ್ಯದ 5,710 ಲೀಟರ್ ಬಿಯರ್ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಜಿಲ್ಲಾ ಉಪ ಆಯುಕ್ತ ಬಸವರಾಜ ತಿಳಿಸಿದ್ದಾರೆ.

    ಲಾಕ್‌ಡೌನ್ ಸಡಿಲಿಕೆಯ ಮೊದಲ ದಿನವೇ ಬೆಳಗಾವಿ ವಿಭಾಗದಲ್ಲಿ 3,79,757 ಲೀಟರ್ ಮದ್ಯ ಹಾಗೂ 99,857 ಲೀಟರ್ ಬಿಯರ್ ಮಾರಾಟವಾಗಿದೆ. ಇವುಗಳ ಒಟ್ಟಾರೆ ಅಂದಾಜು ಮೌಲ್ಯ 17.94 ಕೋಟಿ ರೂಪಾಯಿ ಆಗಿದೆ. ಸೋಮವಾರ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮದ್ಯ ಮಾರಾಟವಾಗಿದೆ. ಕೆಎಸ್‌ಬಿಸಿಆರ್ ಡಿಪೋಗಳಲ್ಲಿ ಸಾಕಷ್ಟು ಪ್ರಮಾಣದ ವಿವಿಧ ಬ್ರಾೃಂಡ್‌ಗಳ ಮದ್ಯ ಮಾರಾಟಕ್ಕೆ ದಾಸ್ತಾನಿದೆ.
    | ಡಾ.ವೈ.ಮಂಜುನಾಥ ಅಬಕಾರಿ ಜಂಟಿ ಆಯುಕ್ತ, ಬೆಳಗಾವಿ ವಿಭಾಗ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts