More

    ಜೆಡಿಎಸ್ ಪಕ್ಷದ ಮಾನ, ಮರ್ಯಾದೆ ಹರಾಜಾಗಿ ಹೋಗಿದೆ:ಶಾಸಕ ಶಿವಲಿಂಗೇಗೌಡ ತಿರುಗೇಟು

    ಹಾಸನ: ಪ್ರಜ್ವಲ್ ರೇವಣ್ಣಗೆ ಉಗ್ರ ಶಿಕ್ಷೆಯಾಗಲಿ ಎಂದು ಪ್ರಧಾನಮಂತ್ರಿ ಹೇಳಿರುವುದನ್ನು ಸ್ವಾಗತ ಮಾಡುತ್ತೇವೆ. ಪ್ರಧಾನಿ ಮೋದಿಯವರು ಪ್ರಜ್ವಲ್ ರೇವಣ್ಣನನ್ನು ವಿದೇಶದಿಂದ ಕರೆಸಬೇಕು. ಕೇವಲ ಹೇಳಿಕೆ ಕೊಟ್ಟರೆ ಸಾಲದು. ಆತನೇ ಬಂದು ಶರಣಾಗತಿಯಾಗಬೇಕಿತ್ತು. ಆದರೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಆತನನ್ನು ಬಂಧಿಸಿ ಕರೆ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕ್ರಮ ಕೈಗೊಳ್ಳಬೇಕು ಎಂದು ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
    ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ, ಡಿಸಿಎಂ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಜೆಡಿಎಸ್ ಮಾನ, ಮರ್ಯಾದೆ ಹರಾಜಾಗಿ ಹೋಗಿದೆ. ಇಂತಹ ಪಕ್ಷ ಈ ರಾಜ್ಯಕ್ಕೆ ಬೇಡ ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಇದೀಗ ಡ್ಯಾಮೇಜ್ ಕಂಟ್ರೋಲ್‌ಗೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಎಚ್.ಡಿ. ರೇವಣ್ಣ ಅವರಿಗೆ ಎಸ್‌ಐಟಿ ಮೂರು ನೋಟಿಸ್ ನೀಡಿತ್ತು. ರೇವಣ್ಣ ಅವರು ವಿಚಾರಣೆಗೆ ಹೋಗಿ ಹೇಳಿಕೆ ಕೊಡಬೇಕಿತ್ತು. ಆದರೆ ವಿಚಾರಣೆಗೆ ಹೋಗಲಿಲ್ಲ. ವಿಧಿಯಿಲ್ಲದೆ ಬಂಧಿಸಿದರು. ಇದೀಗ ನ್ಯಾಯಾಲಯ ನ್ಯಾಯಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಇದರಲ್ಲಿ ಏನು ರಾಜಕೀಯ ಇದೆ ಎಂದು ಪ್ರಶ್ನಿಸಿ, ಇದೀಗ ಆರೋಪ-ಪ್ರತ್ಯಾರೋಪ ಮಾಡುತ್ತಿರುವುದು ಇಬ್ಬರೂ ಒಕ್ಕಲಿಗರೆ. ಇಬ್ಬರು ಒಕ್ಕಲಿಗರ ನಡುವೆ ಕಾಳಗ ನಡೆಯುತ್ತಿದೆ. ಒಬ್ಬರನ್ನೊಬ್ಬರು ಕೆಡವಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ತನಿಖೆಯಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಬಂದರೆ ಅನುಭವಿಸುತ್ತಾರೆ. ಅದನ್ನು ಬಿಟ್ಟು ದಿಕ್ಕು ತಪ್ಪಿಸಲು ಜೆಡಿಎಸ್‌ನವರು ಪ್ರತಿಭಟನೆ ಮಾಡುತ್ತಿದ್ದಾರೆ. ಸ್ವಲ್ಪ ಗೌರವ, ಮರ್ಯಾದೆಯಿಂದ ನಡೆದುಕೊಳ್ಳಬೇಕು. ಸ್ವಲ್ಪ ದಿನ ಕಾದು ನೋಡಬೇಕು ಎಂದು ತಿರುಗೇಟು ನೀಡಿದರು.
    ಬಿಜೆಪಿ ಮುಖಂಡ ದೇವರಾಜೇಗೌಡಗೆ ಮಾತ್ರ ನಾನು ಪೆನ್‌ಡ್ರೈವ್ ಕೊಟ್ಟಿದ್ದೆ ಅಂತ ಕಾರ್ತಿಕ್ ಹೇಳಿದ್ದಾನೆ. ದೇವೇಗೌಡರ ಕುಟುಂಬಕ್ಕೂ ದೇವರಾಜೇಗೌಡ ನಡುವೆ ಜಿದ್ದಾಜಿದ್ದಿ ನಡೆಯುತ್ತಿತ್ತು. ಇದನ್ನು ಸುಖಾಂತ್ಯ ಮಾಡಲು ದೇವರಾಜೇಗೌಡ ಯಾಕೆ ಮನಸ್ಸು ಮಾಡಲಿಲ್ಲ. ಕಾರ್ತಿಕ್‌ಗೆ ನ್ಯಾಯ ಕೊಡಿಸಲು ಆಗದಿದ್ದ ಮೇಲೆ ಪೆನ್‌ಡ್ರೈವ್ ಏಕೆ ತಮ್ಮ ಬಳಿ ಇಟ್ಟುಕೊಂಡಿದ್ದರು. ನೀವು ವಕೀಲರಾಗಿ ಆ ಪೆನ್‌ಡ್ರೈವ್‌ಅನ್ನು ಜಡ್ಜ್ ಅಥವಾ ಪೊಲೀಸರಿಗೆ ಕೊಟ್ಟಿದ್ದರೆ ಮಹಿಳೆಯರ ಮಾನಹರಣ ಆಗುತ್ತಿರಲಿಲ್ಲ. ನೀವು ಹಾಗೆ ಮಾಡಿದಿದ್ದರೆ ಇಡೀ ವಕೀಲರಿಗೆ ಗೌರವ ಬರುತ್ತಿತ್ತು, ನಿಮ್ಮ ಘನತೆ, ಗೌರವ ಹೆಚ್ಚುತ್ತಿತ್ತು. ದೇವರಾಜೇಗೌಡ ಈ ಪ್ರಕರಣದಲ್ಲಿ ನಿಜವಾದ ಅಪರಾಧಿ. ಆತ ಸಿಕ್ಕಿಹಾಕಿಕೊಳ್ಳುತ್ತಾನೆ ಎಂದು ಹೇಳಿದರು.
    ಎಸ್‌ಐಟಿ ತನಿಖೆಯೇ ಸರಿಯಿಲ್ಲ ಅಂತ ದೇವರಾಜೇಗೌಡ ಹೇಳ್ತಾರೆ. ಪೆನ್‌ಡ್ರೈವ್ ಹರಿಬಿಡಲು ಸರ್ಕಾರವೇ ಕಾರಣ ಅಂತನೂ ಹೇಳುತ್ತಾರೆ. ಈ ಹೇಳಿಕೆ ಮೇಲೆ ಜೆಡಿಎಸ್‌ನವರು ಏಕಾಏಕಿ ಪ್ರತಿಭಟನೆ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು. ಅವರಿಗೆ ಮಾತಿನಲ್ಲಿ ಹಿಡಿತ ಇರಬೇಕು. ಎಲ್ಲರನ್ನೂ ಏಕವಚನದಲ್ಲೇ ಬೈಯ್ಯುತ್ತಾರೆ. ಪೆನ್‌ಡ್ರೈವ್ ಹರಿಬಿಟ್ಟವರು ಯಾರು ಎನ್ನುವ ಸಮಸ್ಯೆ ಕಾಡುತ್ತಿದೆ. ಇದರಲ್ಲಿ ರಾಜಕಾರಣ ನಡೆಯುತ್ತಿದೆ. ಈಗ ಜಾತಿಯನ್ನು ಎಳೆದು ತಂದಿದ್ದಾರೆ ಎಂದು ಕಿಡಿಕಾರಿದರು.
    ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು. ನಮ್ಮ ಕುಟುಂಬವೇ ಬೇರೆ, ಅವರ ಕುಟುಂಬವೇ ಬೇರೆ ಅಂತ ಕುಮಾರಣ್ಣ ಮೊದಲು ಹೇಳಿದ್ದರು. ಈಗ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆರೋಪಿಯನ್ನು ಬಿಟ್ಟು ಪೆನ್‌ಡ್ರೈವ್ ಹಂಚಿದವರ ಬಗ್ಗೆ ಮಾತನಾಡುತ್ತಿದ್ದಾರೆ. ನೀವು ಹೇಗೆ ಒಕ್ಕಲಿಗ ಸಮುದಾಯದ ನಾಯಕರೋ ಹಾಗೆ ಡಿ.ಕೆ.ಶಿವಕುಮಾರ್ ಕೂಡ ಒಕ್ಕಲಿಗ ನಾಯಕರೇ. ಅವರು ನಿಮ್ಮಂತೆ ಬೆಳೆದು ಬಂದು ಒಕ್ಕಲಿಗ ನಾಯಕರಾಗಿದ್ದಾರೆ. ಡಿ.ಕೆ.ಶಿವಕುಮಾರ್ ಯಶಸ್ಸು ತಡೆಯಲಾರದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಇಂಥ ಕೃತ್ಯ ನಡೆದಿರುವುದಕ್ಕೆ ನೋವಿದೆ:
    ರಾಜ್ಯ, ದೇಶದಲ್ಲಿ ಎಂದೂ ನಡೆಯದೆ ಇರುವ ಲೈಂಗಿಕ ಹಗರಣ ಈ ಜಿಲ್ಲೆಯಲ್ಲಿ ನಡೆಯಿತ್ತಲಾ ಎನ್ನುವ ದು:ಖದಲ್ಲಿದ್ದೇವೆ. ಈ ದೇಶವನ್ನು ಆಳಿದ, ಜಿಲ್ಲೆಯ ಸಾರ್ವಭೌಮತ್ವ ಹೊಂದಿರುವ ಕುಟುಂಬದಿಂದ ಈ ರೀತಿಯ ಕೃತ್ಯ ಆಯ್ತಲ್ಲಾ ಎನ್ನುವ ನೋವು ನಮಗೆ ಆಗಿದೆ. ಇಡೀ ಪ್ರಪಂಚದಾದ್ಯಂತ ಸುದ್ದಿಯಾಗಿದೆ. ಇಡೀ ಹಾಸನ ಜಿಲ್ಲೆಗೆ ಕಳಂಕ ತಂದಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಬೇಸರ ವ್ಯಕ್ತಪಡಿಸಿದರು.
    ಇದು ನಾಗರೀಕ ಸಮಾಜ ತಲೆ ತಗ್ಗಿಸುವ ಹೀನ ಕೃತ್ಯ. ಅದರಲ್ಲೂ ಲೈಂಗಿಕ ದೌರ್ಜನ್ಯ ಎಸಗಿ ಆ ದೌರ್ಜನ್ಯದ ವಿಡಿಯೋಗಳನ್ನು ಅವರೇ ಚಿತ್ರೀಕರಿಸಿ ತಂದು ಇಡೀ ಪ್ರಪಂಚಕ್ಕೆ ಗೊತ್ತಾಗುವಂತೆ ಮಾಡಿದ್ದಾರೆ. ತಾನು ಮಾಡಿದಂತಹ ಹೀನ ಕೃತ್ಯವನ್ನು ತನ್ನ ಮೊಬೈಲ್‌ನಿಂದ ಹೊರಪ್ರಪಂಚಕ್ಕೆ ತಂದ ದುಷ್ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ನಾಲ್ಕು ಗೋಡೆ ಮಧ್ಯೆ ಕೆಲವು ಘಟನೆಗಳು ನಡೆದು ಹೋಗುತ್ತೇವೆ. ಅದನ್ನು ಸೆರೆ ಹಿಡಿಯದಿದ್ದರೆ ಹೊರ ಜಗತ್ತಿಗೆ ತಿಳಿಯುತ್ತಲೇ ಇರಲಿಲ್ಲ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts