More

    ಮದ್ಯದ ಬೆಲೆ ಏರಿಸಲು ತಯಾರಿ: ಅಬಕಾರಿ ಇಲಾಖೆಗೆ 27 ಸಾವಿರ ಕೋಟಿ ರೂ. ಟಾರ್ಗೆಟ್; ಬಜೆಟ್​ನಲ್ಲಿ ಘೋಷಣೆ?

    | ಹರೀಶ್ ಬೇಲೂರು ಬೆಂಗಳೂರು

    ಕರೊನಾದಿಂದ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಮುಂಬರುವ ಬಜೆಟ್​ನಲ್ಲಿ ಮದ್ಯದ ಬೆಲೆ ಹೆಚ್ಚಿಸಲು ಚಿಂತನೆ ನಡೆಸಿದೆ. ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಹಾಗೂ ಬಿಯರ್ ಮೇಲೆ ಶೇ.5ರಿಂದ 10ರವರೆಗೆ ಅಬಕಾರಿ ಸುಂಕ ವಿಧಿಸಲು ಆಲೋಚಿಸಿದ್ದು, ಫೆ.25ಕ್ಕೆ ನಡೆಯುವ ಸಭೆಯಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ರ್ಚಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.

    2019-20ರಲ್ಲಿ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.150ರಿಂದ ಶೇ.175ಕ್ಕೆ ಹೆಚ್ಚಿಸಲಾಗಿತ್ತು. ಡ್ರಾಟ್ ಬಿಯರ್ ಮೇಲೆ ಶೇ.115ರಿಂದ ಶೇ.150ಕ್ಕೆ, ಮೈಕ್ರೊ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಮೇಲೆ 5 ರೂ.ನಿಂದ 10 ರೂ. ಏರಿಸಲಾಯಿತು. ಜತೆಗೆ, ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ ಬಲ್ಕ್ ಲೀ.ಗೆ 12.50 ರೂ.ನಿಂದ 25 ರೂ.ಗೆ ಏರಿಸಲಾಗಿತ್ತು. ಐಎಂಎಲ್ ಮೇಲೆ ಅಬಕಾರಿ ಸುಂಕವನ್ನು ಶೇ.122ರಿಂದ ಶೇ.150ಕ್ಕೆ ಏರಿಸಲಾಗಿತ್ತು. 2020-21ರ ಬಜೆಟ್​ನಲ್ಲಿ ಮದ್ಯದ ಮೇಲೆ ಶೇ.6 ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿತ್ತು. ಆದರೆ, ಇದು ಲಾಕ್​ಡೌನ್​ನಿಂದಾಗಿ ಜಾರಿಗೆ ಬಂದಿರಲಿಲ್ಲ. 2021ರ ಮೇನಲ್ಲಿ ಬಿಯರ್ ಮತ್ತು ವೈನ್ ಹೊರತುಪಡಿಸಿ ಐಎಂಎಲ್ ಮೇಲೆ ಶೇ.17 ಅಬಕಾರಿ ಶುಂಕ ಹೆಚ್ಚಿಸಲಾಗಿತ್ತು. ಈ ಕ್ರಮದಿಂದ ಪ್ರತಿ ಬಲ್ಕ್ ಲೀಟರ್​ಗೆ 153 ರೂ.ನಿಂದ 179 ರೂ.ವರೆಗೆ ಏರಿಕೆಯಾಯಿತು. ಹೀಗಾಗಿ, ಕಳೆದ ಬಜೆಟ್​ನಲ್ಲಿ ಮದ್ಯ ದರ ಏರಿಕೆ ಮಾಡಿರಲಿಲ್ಲ

    27 ಸಾವಿರ ಕೋಟಿ ರೂ.ಗುರಿ: ಮದ್ಯ ಮಾರಾಟದಿಂದ ಬೊಕ್ಕಸಕ್ಕೆ ಹೆಚ್ಚು ಆದಾಯ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ, ಪ್ರತಿ ವರ್ಷ ಇಲಾಖೆಗೆ ಹೊಸ ಆದಾಯ ಸಂಗ್ರಹ ಗುರಿ ನೀಡಲಾಗುತ್ತಿದೆ. 2021-22ರಲ್ಲಿ 24,580 ಕೋಟಿ ರೂ. ಆದಾಯ ಸಂಗ್ರಹ ಗುರಿ ನೀಡಲಾಗಿತ್ತು. 2022-23 ಸಾಲಿನಲ್ಲಿ ಅಂದಾಜು 27 ಸಾವಿರ ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ನೀಡುವ ಸಾಧ್ಯತೆಯಿದೆ.

    ಬಿಯರ್​ ಬಾಟಲಿ ಮೇಲೂ ಲೇಬಲ್

    | ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

    ಮದ್ಯದ ಗುಣಮಟ್ಟ, ಆದಾಯ ಒಂದೆಡೆಯಾದರೆ, ಮತ್ತೊಂದೆಡೆ ಅಪರಾಧ ಪ್ರಕರಣಗಳ ಪತ್ತೆಗೂ ನೆರವಾಗುವ ನಿಟ್ಟಿನಲ್ಲಿ ನೆರವಾಗುವ ಹೈ ಆಂಡ್ ಸೆಕ್ಯೂರಿಟಿ ಅಂಶಗಳನ್ನು ಅಳವಡಿಸಿರುವ ಇಎಎಲ್ (excise adhesive labels)ಗಳನ್ನು ವಿಸ್ಕಿ, ರಮ್ ವೊಡ್ಕಾ, ಜಿನ್ ಇತ್ಯಾದಿ ಮದ್ಯದ ಬಾಟಲಿ, ಪೌಚ್​ಗಳ ಮೇಲೆ ಅಂಟಿಸಲು ಯೋಜನೆ ರೂಪಿಸಲಾಗುತ್ತಿದೆ.

    ಇದರಿಂದ ಲಾಭ ಏನು?: ಮದ್ಯದ ಬಾಟಲಿ ಮೇಲಿನ ಲೇಬಲ್ ಸ್ಕ್ಯಾನ್ ಮಾಡಿದರೆ ಎಲ್ಲಿ ಮದ್ಯವನ್ನು ಖರೀದಿಸಲಾಗಿದೆ ಎಂಬ ವಿವರ ಗೊತ್ತಾಗುತ್ತದೆ. ಮೈಸೂರು ಅತ್ಯಾಚಾರ ಆರೋಪಿಗಳು ಪೊಲೀಸರಿಗೆ ಸಿಕ್ಕಿಬೀಳಲು ಇದೇ ಲೇಬಲ್ ನೆರವಾಗಿದ್ದನ್ನು ಗಮನಿಸಬಹುದು. ಆದರೆ, ಈ ಕೃತ್ಯದ ಆರೋಪಿಗಳು ಬಿಯರ್ ಮಾತ್ರ ಖರೀದಿಸಿ ಖಾಲಿ ಬಾಟಲಿಗಳನ್ನು ಬಿಟ್ಟು ಹೋಗಿದ್ದರೂ ಅವರ ಪತ್ತೆ ಅಷ್ಟು ಸುಲಭವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಾಗೂ ಆದಾಯ ಹೆಚ್ಚಳಕ್ಕಾಗಿ ಇಲಾಖೆ ಬಿಯರ್ ಬಾಟಲಿಗಳ ಮೇಲೂ ಇಎಎಎಲ್​ಅಂಟಿಸಿ, ಪ್ರತಿ ಲೇಬಲ್​ಗೆ ಒಂದು ರೂ. ಶುಲ್ಕ ವಿಧಿಸಿದರೆ ತಿಂಗಳಿಗೆ 50-60 ಕೋಟಿ ರೂ. ಗಳಂತೆ ವಾರ್ಷಿಕ ಅಂದಾಜು 600 ಕೋಟಿ ರೂ. ಹೆಚ್ಚುವರಿ ಆದಾಯ ಸಂಗ್ರಹಿಸ ಬಹುದೆಂದು ಸರ್ಕಾರಕ್ಕೆ ಶಿಫಾರಸು ಮಾಡಿರುವ ಅಧ್ಯಯನ ತಂಡದ ಲೆಕ್ಕಾಚಾರ.

    9 ರಾಜ್ಯಗಳಲ್ಲಿ ಇದೆ: ದೇಶದ 9 ರಾಜ್ಯಗಳಲ್ಲಿ ಬಿಯರ್ ಬಾಟಲಿಗಳ ಮೇಲೆ ಇಎಎಲ್ ಅಂಟಿಸಲಾಗುತ್ತಿದೆ. ಕರ್ನಾಟಕದಲ್ಲೂ ಬಿಯರ್ ಬಾಟಲಿ ಮೇಲೂ ಇದನ್ನು ಅಂಟಿಸಲು ಇಲಾಖೆ ಜಂಟಿ ಆಯುಕ್ತರೊಬ್ಬರ ನೇತೃತ್ವದಲ್ಲಿ ನಾಲ್ವರು ಹಿರಿಯ ಅಧಿಕಾರಿಗಳ ಅಧ್ಯಯನ ತಂಡ ಓರಿಸ್ಸಾ, ಪಶ್ಚಿಮ ಬಂಗಾಲ ಇತ್ಯಾದಿ ರಾಜ್ಯಗಳಲ್ಲಿ ಕಳೆದ ಸೆಪ್ಟೆಂಬರ್-ಅಕ್ಟೋಬರ್​ನಲ್ಲಿ ಪ್ರವಾಸ ನಡೆಸಿತ್ತು. ಕರ್ನಾಟಕದಲ್ಲಿ ಖಾಸಗಿ ಪ್ರಿಂಟಿಗ್ ಪ್ರೆಸ್​ನಲ್ಲಿ ತಯಾರಿಸುತ್ತಿರುವ ಪೇಪರ್​ನ ಈ ಲೇಬಲ್​ವೊಂದಕ್ಕೆ 27 ಪೈಸೆ ಖರ್ಚಾಗುತ್ತಿದೆ. ಓರಿಸ್ಸಾದ ಅಬಕಾರಿ ಇಲಾಖೆ ಇಂಡಿಯಾ ಸೆಕ್ಯೂರಿಟಿ ಪ್ರೆಸ್​ನಲ್ಲಿ ಮುದ್ರಿಸುತ್ತಿದೆ. ಮತ್ತೊಂದು ರಾಜ್ಯದಲ್ಲಿ ಲೇಬಲ್​ಗೆ ಒಂದಕ್ಕೆ ಒಂದು ರೂ. ವಿಶೇಷ ಶುಲ್ಕವನ್ನು ನಿಗದಿಪಡಿಸಿದೆ ಹಾಗೂ ಕೆಲವು ರಾಜ್ಯಗಳಲ್ಲಿ ಇಎಎಲ್ ತಯಾರಿಸಲು ಪಾಲಿಸ್ಟರ್ ಬಳಸಲಾಗುತ್ತಿದೆ.

    ಇಎಎಲ್​ನಲ್ಲಿರುವ ಅಂಶಗಳು: ಕರ್ನಾಟಕ ಸರ್ಕಾರದ ಲೋಗೊ, 2ಡಿ ಬಾರ್​ಕೋಡ್, ತಿಂಗಳು ಮತ್ತು ವರ್ಷ, 10 ಅಂಕಿಗಳ ಸಿರಿಯಲ್ ನಂ., ಐಟಂ ಕೋಡ್, ಸ್ಟೇಟ್ ಕೋಡ್, ಚೆಕ್ ಡಿಜಿಟ್, ಸೆಕ್ಯೂರಿಟಿ ಡೈಮಂಡ್ ಕಟ್, ಕಮಿಷನರ್ ಸಹಿ ಇತ್ಯಾದಿ 14 ಅಂಶಗಳು ಲೇಬಲ್​ನಲ್ಲಿವೆ.

    ವಿವಿಧ ರಾಜ್ಯಗಳಿಗೆ ಭೇಟಿ ನೀಡಿದ ಬಳಿಕ ಬಿಯರ್​ಬಾಟಲಿಗಳ ಮೇಲೂ ಇಎಎಲ್ ಅಂಟಿಸಲು ಹಾಗೂ ಈ ಲೇಬಲ್​ವೊಂದಕ್ಕೆ ಒಂದು ರೂ.ಶುಲ್ಕ ವಿಧಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.

    | ಹೆಸರು ಹೇಳಲು ಬಯಸದ ಅಧ್ಯಯನ ತಂಡದ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts