More

    ಮುರ್ಲಾಪುರ ಸಂಪರ್ಕ ರಸ್ತೆ ಸಂಪೂರ್ಣ ಹಾಳು; ಮುಂಡರಗಿಗೆ ಹೋಗಲು 25 ಕಿಮೀ ಪ್ರಯಾಣ

    ಕೊಪ್ಪಳ ತಾಲೂಕಿನ ಕಟ್ಟಕಡೆಯ ಹಳ್ಳಿ ಮುರ್ಲಾಪುರಕ್ಕೆ ಬಸ್ ಸಂಚಾರವಿಲ್ಲ. ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಸಂಪೂರ್ಣ ಹದಗೆಟ್ಟಿದ್ದು, ಗ್ರಾಮಸ್ಥರು ತೊಂದರೆ ನರಕಯಾತನೆ ಅನುಭವಿಸುತ್ತಿದ್ದಾರೆ.

    ಹಟ್ಟಿ ಗ್ರಾಪಂಗೆ ಒಳಪಡುವ ಗ್ರಾಮ 800 ಜನಸಂಖ್ಯೆ ಹೊಂದಿದೆ. ಇಬ್ಬರು ಗ್ರಾಪಂ ಸದಸ್ಯರಿದ್ದಾರೆ. ಗದಗ ಜಿಲ್ಲೆ ಮುಂಡರಗಿಗೆ 7 ಕಿಮೀ ಮೀಟರ ಅಂತರದಲ್ಲಿದೆ. ಆದರೆ, ಕೊಪ್ಪಳದಿಂದ 40 ಕಿಮೀ ದೂರದಲ್ಲಿದೆ. ಹೀಗಾಗಿ ಗ್ರಾಮಸ್ಥರು ವಾಣಿಜ್ಯ, ಶಿಕ್ಷಣ, ಆಸ್ಪತ್ರೆ ಮುಂತಾದ ಕೆಲಸಗಳಿಗೆ ಮುಂಡರಗಿಯನ್ನೇ ನೆಚ್ಚಿಕೊಂಡಿದ್ದಾರೆ. ಏಳು ಕಿಮೀ ರಸ್ತೆಯಲ್ಲಿ 4 ಕಿಮೀ ಮುಂಡರಗಿ ವ್ಯಾಪ್ತಿಗೆ ಬರುತ್ತಿದ್ದು ಪ್ರತಿ ವರ್ಷ ದುರಸ್ತಿ ಕಾಣುತ್ತಿದೆ. ಇದೀಗ ಡಬಲ್ ರೋಡ್ ಆಗಿ ಡಾಂಬರೀಕರಣ ಕಂಡಿದೆ. ಉಳಿದ 3 ಕಿಮೀ ಕೊಪ್ಪಳ ತಾಲೂಕಿಗೆ ಸೇರಿದ್ದು, ಗ್ರಾಮದ ಹಿರೇಹಳ್ಳದ ಹತ್ತಿರ ಸುಮಾರು 100 ಮೀಟರ್ ರಸ್ತೆ ಜಮೀನು ಮಾಲೀಕರ ತಕರಾರಿನಿಂದ ದುರಸ್ತಿಯಾಗಿಲ್ಲ. ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದ ಹಿರೇಹಳ್ಳ ಪ್ರವಾಹಕ್ಕೆ ಇಡೀ ರಸ್ತೆ ಕೊಚ್ಚಿಕೊಂಡು ಹೋಗಿದ್ದು ಭಾರಿ ಪ್ರಮಾಣದ ಮಣ್ಣು ಸೇರಿದೆ. ಹೀಗಾಗಿ ವಾಹನ ಸಂಚಾರ ದುಸ್ತರವಾಗಿದೆ.

    ಸ್ವಲ್ವ ಮಳೆಯಾದರೂ ಜನ ಓಡಾಡದಷ್ಟು ರಸ್ತೆ ಕೆಸರುಮಯವಾಗಿರುತ್ತದೆ. ಸೂಕ್ತ ರಸ್ತೆ ಇಲ್ಲದ್ದರಿಂದ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಪರಿಣಾಮ 7 ಕಿಮೀ ಅಂತರದಲ್ಲಿರುವ ಮುಂಡರಗಿಗೆ ತೆರಳಲು ಗ್ರಾಮಸ್ಥರು ಕವಲೂರು, ಅಳವಂಡಿ ಮಾರ್ಗವಾಗಿ ಸುಮಾರು 25 ಕಿಮೀ ಸುತ್ತುವರಿದು ಹೋಗಬೇಕಾಗಿದೆ. ಪ್ರೌಢಶಾಲೆ, ಕಾಲೇಜಿಗೆ ಹೋಗುವ ಮಕ್ಕಳನ್ನು ಬೈಕ್ ಇಲ್ಲವೆ ಖಾಸಗಿ ವಾಹನದಲ್ಲಿ ಕಳಿಸಬೇಕು. ಮತ್ತೆ ಕರೆತರಬೇಕಾಗಿದೆ. ಇದಕ್ಕಾಗಿ ಮನೆಯ ಒಬ್ಬರನ್ನು ನಿಯೋಜಿಸಬೇಕಾಗಿದೆ. ಪ್ರತಿ ಸಲ ಮಳೆ ಬಂದು ರಸ್ತೆ ಕೊಚ್ಚಿಕೊಂಡು ಹೋದಾಗ ಭೇಟಿ ನೀಡುವ ಸಂಸದರು, ಶಾಸಕರು, ಅಧಿಕಾರಿಗಳು ಸರಿಪಡಿಸುವ ವಾಗ್ದಾನ ಮಾಡುತ್ತಾರೆ. ಆದರೆ, ನಂತರ ಮರೆತು ಬಿಡುತ್ತಾರೆ. ಅವರ ನಿರ್ಲಕ್ಷೃಧೋರಣೆಯಿಂದ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

    ಹದಗೆಟ್ಟ ರಸ್ತೆಯಲ್ಲಿ ಸಂಚರಿಸಲು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ವಾಹನ ಸಂಚಾರ ಬಂದ್ ಆಗಿರುವುದರಿಂದ ಸಮಸ್ಯೆ ಇದೆ. ಮುಂಡರಗಿಗೆ ಹೋಗಲು 25 ಕಿಮೀ ಸುತ್ತುವರಿದು ತೆರಳಬೇಕಿದೆ. ರಸ್ತೆ ದುರಸ್ತಿಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಗ್ರಾಮದ ಜನರ ಕೂಗು ಯಾರೂ ಕಿವಿಗೆ ಹಾಕಿಕೊಳುತ್ತಿಲ್ಲ. ಮಕ್ಕಳ ಶಿಕ್ಷಣದ ಮೇಲೂ ಪರಿಣಾಮ ಬೀರುತ್ತಿದ್ದು, ಸಂಬಂಧಿಸಿದವರು ಕೂಡಲೇ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು.
    ಅಂದಾನಗೌಡ ಪೊಲೀಸ್‌ಪಾಟೀಲ್
    ಗ್ರಾಮಸ್ಥ, ಮುರ್ಲಾಪುರ


    ಮುರ್ಲಾಪುರ ಗ್ರಾಮದ ಸಂಪರ್ಕ ರಸ್ತೆ ಹದಗೆಟ್ಟಿರುವುದು ಗಮನಕ್ಕಿದೆ. ಮಳೆಯಿಂದ ಹಾಳಾಗಿದ್ದು, ಹಾನಿಯ ವರದಿಯಲ್ಲಿ ಸೇರಿಸಲಾಗಿದೆ. ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
    ಶ್ಯಾಮಣ್ಣ ನಾರಿನಾಳ
    ಎಇಇ, ಪಿಡಬ್ಲುೃಡಿ, ಉಪವಿಭಾಗ, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts