More

    ಮತದಾನ ಪ್ರಮಾಣ ಹೆಚ್ಚಳಕ್ಕೆ ಸಹಕರಿಸಿ

    ಅಳವಂಡಿ: ಮತದಾನವನ್ನು ಹಬ್ಬ-ಜಾತ್ರೆಯಂತೆ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ನಲೀನ ಅತುಲ್ ತಿಳಿಸಿದರು.

    ಗ್ರಾಮದ ಸಿದ್ದೇಶ್ವರ ಕಾಲೇಜ ಮೈದಾನದಲ್ಲಿ ಜಿಲ್ಲಾಡಳಿತ, ಸ್ವೀಪ್ ಸಮಿತಿ ಗುರುವಾರ ಆಯೋಜಿಸಿದ್ದ ಜಾನಪದ ಎತ್ತನಬಂಡಿ ಅಭಿಯಾನ ಮತ್ತು ಮತದಾನ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ದಕ್ಷಿಣ ಕರ್ನಾಟಕದಲ್ಲಿ ಏ.26ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಆಗಿದೆ. ಅದರಲ್ಲೂ ಮಂಡ್ಯ ಕ್ಷೇತ್ರದಲ್ಲಿ ಶೇ.80ಕ್ಕೂ ಹೆಚ್ಚು ಮತದಾನ ಆಗಿದೆ. ಈ ಬಾರಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಅದಕ್ಕಿಂತ ಹೆಚ್ಚಿನ ಮತದಾನ ಆಗಬೇಕು. ಎಲ್ಲರೂ ಕಡ್ಡಾಯ ಮತದಾನ ಮಾಡಬೇಕು ಎಂದರು.

    ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ಮತದಾನದಿಂದ ವಂಚಿತರಾಗಬೇಡಿ. ಮತಗಟ್ಟೆಯಲ್ಲಿ ನೀರು, ನೆರಳು ಇತರ ಸೌಕರ್ಯ ಕಲ್ಪಿಸಲಾಗಿದೆ. ಮತದಾನ ಪ್ರಮಾಣ ಹೆಚ್ಚಾಗಲು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

    ಎಸ್‌ಪಿ ಯಶೋದಾ ವಂಟಗೋಡಿ, ಚುನಾವಣಾ ರಾಯಭಾರಿ ಶಿವಕುಮಾರ ಮಾಲಿಪಾಟೀಲ, ಲಿಂಗತ್ವ ಅಲ್ಪಸಂಖ್ಯಾತರ ಪ್ರತಿನಿಧಿ ಹಾಗೂ ಮತದಾನ ರಾಯಭಾರಿ ರಮ್ಯಾ ಮಾತನಾಡಿದರು. ಮಹಿಳೆಯರಿಂದ ಕಳಸ, ಕುಂಭ ಮೆರವಣಿಗೆ, ತಳಿರು ತೋರಣಗಳಿಂದ ಅಲಂಕೃತ ಹಾಗೂ ಮತದಾನ ಜಾಗೃತಿ ಬಿತ್ತಿ ಪತ್ರಗಳನ್ನು ಒಳಗೊಂಡ 20 ಎತ್ತಿನ ಬಂಡಿಗಳ ಮೆರವಣಿಗೆ, ಡೊಳ್ಳಿನ ಮೇಳದೊಂದಿಗೆ ಜಾಗೃತಿ ಜಾಥಾ ಸಿದ್ದೇಶ್ವರ ಕಾಲೇಜಿನಿಂದ ಆರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬನ್ನಿಕಟ್ಟೆಯವರೆಗೆ ನಡೆಯಿತು.

    ಅಲಂಕೃತ ಚಕ್ಕಡಿಯಲ್ಲಿ ಜಿಲ್ಲಾಧಿಕಾರಿ, ಸಿಇಒ, ಎಸ್‌ಪಿ ಇದ್ದರು. ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ತಿಪ್ಪಣ್ಣ ಶಿರಸಗಿ, ತಹಸೀಲ್ದಾರ್ ವಿಠ್ಠಲ ಚೌಗಲೆ, ತಾಪಂ ಇಒ ದುಂಡೇಶ ತುರಾದಿ ಇತರ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts