More

    ಹಲವು ದೇಗುಲಗಳಲ್ಲಿ ವೈವಿಧ್ಯಮಯ ಅಲಂಕಾರ ಸೇವೆ

    ಹಲವು ದೇಗುಲಗಳಲ್ಲಿ ವೈವಿಧ್ಯಮಯ ಅಲಂಕಾರ ಸೇವೆಹಲವು ದೇಗುಲಗಳಲ್ಲಿ ವೈವಿಧ್ಯಮಯ ಅಲಂಕಾರ ಸೇವೆ
    ಚಿತ್ರದುರ್ಗ: ಜಿಲ್ಲಾದ್ಯಂತ ನವದುರ್ಗೆಯರ ಆರಾಧನೆಯೊಂದಿಗೆ ನವರಾತ್ರಿಯ ಒಂಬತ್ತು ದಿನ ವೈವಿಧ್ಯಮಯ ಅಲಂಕಾರ ಸೇವೆ ನಡೆದಿದ್ದು, ಪಟ್ಟಕ್ಕೆ ಕೂತಿದ್ದ ನಗರದ ಶಕ್ತಿದೇವತೆಗಳಿಗೆ ಹಬ್ಬದ ಕೊನೆಯ ದಿನವಾದ ವಿಜಯದಶಮಿಯಂದು ಬುಧವಾರ ವಿಶೇಷ ಪೂಜೆಗಳು ನೆರವೇರಿತು. ಬನ್ನಿ ಮುಡಿಯುವುದರೊಂದಿಗೆ ಈ ಬಾರಿಯ ಉತ್ಸವಕ್ಕೆ ತೆರೆ ಬಿದ್ದಿತು.

    ಸಂಜೆ ಬನ್ನಿ ಮುಡಿಯಲು ಹೊರಟ ಶಕ್ತಿದೇವತೆಗಳ ಮುಂಭಾಗ ಡೊಳ್ಳು, ಉರುಮೆ ಸೇರಿ ಮಂಗಳ ವಾದ್ಯಗಳ ಸದ್ದು ಮೊಳಗಿದವು. ದೇವತೆಗಳ ಮೂರ್ತಿ ಹೊತ್ತ ಅರ್ಚಕರು, ಭಕ್ತರು ನವೋಲ್ಲಾರ ಭರಿತರಾಗಿ ಕುಣಿಯುತ್ತ ಬನ್ನಿ ಮರದವರೆಗೂ ಸಾಗಿದರು. ಮುಂಜಾನೆಯಿಂದ ರಾತ್ರಿ 10ರವರೆಗೂ ಹಲವು ದೇಗುಲಕ್ಕೆ ಭೇಟಿ ನೀಡಿದ ಅಸಂಖ್ಯಾತ ಭಕ್ತಗಣ ಶ್ರದ್ಧಾಭಕ್ತಿಯಿಂದ ಇಷ್ಟಾರ್ಥ ಈಡೇರಿಕೆಗಾಗಿ ಪ್ರಾರ್ಥಿಸಿದರು.
    ದುರ್ಗದ ಅಧಿದೇವತೆ ಏಕನಾಥೇಶ್ವರಿ, ಕಣಿವೆಮಾರಮ್ಮ, ಚೌಡೇಶ್ವರಿ, ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಮಲೆನಾಡು ಚೌಡೇಶ್ವರಿ, ಸಿಂಗಧೂರು ಚೌಡೇಶ್ವರಿ, ಕೆಳಗೋಟೆಯ ಅಂಬಾಭವಾನಿ, ದಾನಮ್ಮ, ಗೋಪಾಲಪುರದ ದುರ್ಗಾಪರಮೇಶ್ವರಿ, ಕರುವಿನಕಟ್ಟೆ ವೃತ್ತದ ಅಂತರಘಟ್ಟಮ್ಮ, ಕೋಟೆಯಲ್ಲಿನ ಬನಶಂಕರಮ್ಮ, ಬುರುಜನಹಟ್ಟಿಯ ಬನಶಂಕರಿ, ರೇಣುಕಾಯಲ್ಲಮ್ಮ, ಕೊಲ್ಲಾಪುರದ ಮಹಾಲಕ್ಷ್ಮೀ ದೇಗುಲಗಳಲ್ಲಿ ದೇವಿಯ ಮೂರ್ತಿಗಳಿಗೆ ವಿವಿಧ ಬಗೆಯ ಪುಷ್ಪ, ಇತರೆ ವಸ್ತುಗಳಿಂದ ಅಲಂಕರಿಸಲಾಗಿತ್ತು.

    ಅ. 6ರಂದು ಬರಗೇರಮ್ಮ ದೇವಿ ಕೆಂಡೋತ್ಸವ
    ನಗರದ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿಗೆ ಆಯುಧಪೂಜೆ, ವಿಜಯದಶಮಿ ಹಬ್ಬದ ಅಂಗವಾಗಿ ಸಾವಿರಾರು ನಿಂಬೆಹಣ್ಣುಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ವಿಶೇಷವಾಗಿ ಅರ್ಚಕರು ಅಲಂಕರಿಸಿದ್ದರು. ಅ. 6ರಂದು ದೇವಿಯ ಕೆಂಡೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಲಿದೆ ಎಂದು ದೇಗುಲದ ಅರ್ಚಕ ಪೂಜಾರ್ ಸತ್ಯಪ್ಪ ತಿಳಿಸಿದ್ದಾರೆ.

    ದೇಗುಲಗಳು ಅಷ್ಟೇ ಅಲ್ಲದೆ, ಹಲವೆಡೆ ಪೆಂಡಾಲ್‌ ನಿರ್ಮಿಸಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಆ ಸ್ಥಳಗಳಲ್ಲೂ ಪೂಜೆ, ಅರ್ಚನೆ, ಪ್ರಾರ್ಥನೆ, ಸಹಸ್ರನಾಮ, ಮಹಾಮಂಗಳಾರತಿ ಜರುಗಿತು.

    ಕೆಂಡೋತ್ಸವ ಸಂಪನ್ನ
    ಪಾಳೆಗಾರರ ಆರಾಧ್ಯ ದೈವ ಉಚ್ಚಂಗಿಯಲ್ಲಮ್ಮ, ಬನ್ನಿ ಮಹಾಕಾಳಮ್ಮ ದೇವಿಯ ಕೆಂಡೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಸಂತೆಹೊಂಡ ಸಮೀಪ ಅದ್ದೂರಿಯಾಗಿ ನೆರವೇರಿತು. ಅರ್ಚಕರು ಕೆಂಡ ತುಳಿಯುವ ಮೂಲಕ ಭಕ್ತಿ ಸಮರ್ಪಿಸಿದರು. ಈ ವೇಳೆ ಉಧೋ ಉಧೋ ಎಂಬ ಹರ್ಷೋದ್ಘಾರ ಮುಗಿಲುಮುಟ್ಟಿತ್ತು. ಇದಕ್ಕೂ ಮುನ್ನ ‌ಸಿಹಿನೀರು ಹೊಂಡದಲ್ಲಿ ದೇವಿಗೆ ಗಂಗಾಪೂಜೆ ಜರುಗಿತು. ಕೆಂಡೋತ್ಸವದ ಅಂಗವಾಗಿ ಕೋಟೆರಸ್ತೆಯ ದೇವಿ ದೇಗುಲದ ಮೂಲ ಮೂರ್ತಿಗೆ ದೊಡ್ಡ ಭಂಡಾರದ ಪೂಜೆ ನೆರವೇರಿತು. ದೇವಿಯ ಪಲ್ಲಕ್ಕಿಯನ್ನು ಪುಷ್ಪ ಸೇರಿ ಇತರೆ ವಸ್ತುಗಳಿಂದ ಅಲಂಕರಿಸಲಾಗಿತ್ತು.

    ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರಿನ ಗ್ರಾಮದೇವತೆ ದ್ಯಾಮಲಾಂಬ ದೇವಿ ಹಾಗೂ ವೀರಭದ್ರೇಶ್ವರ ಸ್ವಾಮಿಯ ಕೆಂಡಾರ್ಚನೆ ಕೂಡ ಅನೇಕ ಭಕ್ತರ ಸಮ್ಮುಖದಲ್ಲಿ ಜರುಗಿತು. ದೇಗುಲದ ಅರ್ಚಕರು, ಚೌಡಿಕೆಯವರು ಕೆಂಡ ತುಳಿಯುವ ವೇಳೆ ಹಲವರು ಭಕ್ತಿಯ ಪರಕಾಷ್ಠೆಯಲ್ಲಿ ಮಿಂದೆದ್ದರು.

    4

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts