More

    ಹೊಸ ವರ್ಷಾಚರಣೆಗೆ ರೆಸಾರ್ಟ್ ಫುಲ್

    ಮಲ್ಲಿಕಾರ್ಜುನಯ್ಯ ತೋರಗಲ್ಲಮಠ
    ಆಲಮಟ್ಟಿ: ಮೈದುಂಬಿ ಹರಿಯುವ ಕೃಷ್ಣೆ, ನಾನಾ ಉದ್ಯಾನಗಳಿಂದ ಹೆಸರಾಗಿರುವ ಆಲಮಟ್ಟಿಗೆ ನಿತ್ಯ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಾರೆ. ಅದರಲ್ಲೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ದ್ವಿಗುಣವಾಗುತ್ತದೆ. ಪ್ರಸಕ್ತ ವರ್ಷ ಎಲ್ಲ ವಸತಿಗೃಹಗಳು ವಾರ ಮೊದಲೇ ಬುಕ್ ಆಗಿವೆ.

    ಆಲಮಟ್ಟಿ ಜಲಾಶಯದ ಬಲಬದಿಯ ಸೀತಿಮನಿ ಗುಡ್ಡದಲ್ಲಿರುವ ಕೆಎಸ್‌ಟಿಡಿಸಿ ಉಸ್ತುವಾರಿಯ ವಸತಿ ಮಂದಿರದ ಎಲ್ಲ ರೂಮ್‌ಗಳು ಡಿ.24ರಂದೇ ಬುಕ್ ಆಗಿವೆ.
    ಈ ವಸತಿ ಗೃಹದಲ್ಲಿ 2 ಸ್ಯೂಟ್ ರೂಮ್‌ಗಳು, 7 ಕಾಟೇಜ್ ಹಾಗೂ 12 ಡಿಲಕ್ಸ್ ರೂಮ್‌ಗಳಿವೆ. ಈ ಎಲ್ಲ 21 ರೂಮ್‌ಗಳನ್ನು ಮುಂಬೈ, ಪುಣೆ, ಹೈದರಾಬಾದ್, ಬೆಂಗಳೂರು, ಮೈಸೂರು ಸೇರಿದಂತೆ ನಾನಾ ಕಡೆಯ ಪ್ರವಾಸಿಗರು ಆನ್‌ಲೈನ್ ಮೂಲಕ ಮುಂಗಡವಾಗಿ ಬುಕ್ ಮಾಡಿದ್ದಾರೆ.

    ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯುವ ಕುತೂಹಲದಿಂದ ಬುಕ್ ಮಾಡಲು ಪ್ರಯತ್ನಿಸಿದ ಪ್ರವಾಸಿಗರಿಗೆ ರೂಮ್‌ಗಳಿಲ್ಲದ ಕಾರಣ ನಿರಾಸೆಯಾಗಿದೆ. ನಾವು ಕೂಡ ವಾರ ಮೊದಲೇ ಬುಕ್ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ರೂಮ್ ಸಿಗದ ಪ್ರವಾಸಿಗರು ಹಳಹಳಿಸುತ್ತಿದ್ದಾರೆ.

    ಆಲಮಟ್ಟಿಯಲ್ಲಿ ಸಂಗೀತ ನೃತ್ಯ ಕಾರಂಜಿ, ರಾಕ್ ಉದ್ಯಾನ, ಮೊಘಲ್, ಲವಕುಶ, ಕೃಷ್ಣಾ ಸೇರಿದಂತೆ ನಾನಾ ಉದ್ಯಾನಗಳಿವೆ. ಅವುಗಳ ವೀಕ್ಷಣೆಗೆ ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ವರ್ಷಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಆಗಮಿಸುವ ನಿರೀಕ್ಷೆ ಇದೆ ಎನ್ನುತ್ತಾರೆ ಉದ್ಯಾನಗಳಲ್ಲಿನ ವ್ಯಾಪಾರಿಗಳು.

    ಆಲಮಟ್ಟಿ ಜಲಾಶಯದ ಭದ್ರತೆ ಹಿನ್ನೆಲೆಯಲ್ಲಿ ಕರ್ನಾಟಕ ಕೈಗಾರಿಕೆ ಭದ್ರತಾ ಪಡೆ ಹಾಗೂ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದು, ಹೊಸ ವರ್ಷಾಚರಣೆ ಹಿನ್ನೆಲೆೆಯಲ್ಲಿ ಮತ್ತಷ್ಟು ಬಿಗಿ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ದರ ಹೆಚ್ಚಳ: ಸ್ಯೂಟ್ ರೂಮ್ ಬಾಡಿಗೆ 5600 ರಿಂದ 7055 ರೂ.ಗೆ, ಕಾಟೇಜ್‌ಗೆ 2820ರಿಂದ 3400 ರೂ.ಗೆ ಹಾಗೂ ಡಿಲಕ್ಸ್‌ಗೆ 3300ರಿಂದ 3900 ರೂ.ಗೆ ಹೆಚ್ಚಳವಾಗಿದೆ

    ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ವರ್ಷಾಚರಣೆ ಮಾಡಿರಲಿಲ್ಲ. ಈ ಬಾರಿ ಉತ್ತರ ಕರ್ನಾಟಕ ಪ್ರಮುಖ ಪ್ರವಾಸಿ ತಾಣವಾಗಿರುವ ಆಲಮಟ್ಟಿಯಲ್ಲಿ ಆಚರಿಸಲು ನಿರ್ಧರಿಸಿ ಪ್ರವಾಸಿ ಮಂದಿರದಲ್ಲಿನ ರೂಮ್ ಬುಕ್ ಮಾಡಲು ಹೋದರೆ ಎಲ್ಲವೂ ಫುಲ್ ಆಗಿವೆ. ಹೀಗಾಗಿ ನಿರಾಸೆಯಾಗಿದ್ದು, ಮುಂದಿನ ಬಾರಿ ಮುಂಗಡವಾಗಿ ಬುಕ್ ಮಾಡಲು ಪ್ರಯತ್ನಿಸುತ್ತೇನೆ.
    ಶ್ರೀಮತಿ ಮಧು ಆನಂದ, ಮೈಸೂರು

    ರಾಜ್ಯ ಸರ್ಕಾರದ ಆದೇಶದಂತೆ ಇಲ್ಲಿನ ಎಲ್ಲ ಉದ್ಯಾನಗಳಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ನೈಟ್ ಕರ್ಫ್ಯೂ ವೇಳೆ ಎಲ್ಲ ಉದ್ಯಾನಗಳು ಬಂದ್ ಆಗುವುದರಿಂದ ಯಾವುದೇ ಸಮಸ್ಯೆಗಳು ಕಂಡು ಬರುವುದಿಲ್ಲ.
    ಎಚ್.ಸುರೇಶ, ಮುಖ್ಯ ಅಭಿಯಂತರ, ಕೆಬಿಜೆಎನ್‌ಎಲ್ ಆಲಮಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts