More

    ಉದ್ಯಾನಗಳು ಬಂದ್, ವ್ಯಾಪಾರಿಗಳ ಬದುಕು ದುಸ್ಥರ

    ಮಲ್ಲಿಕಾರ್ಜುನಯ್ಯ ತೋರಗಲ್ಲಮಠ ಆಲಮಟ್ಟಿ

    ಪ್ರವಾಸಿ ಸ್ಥಾನವಾಗಿರುವ ಆಲಮಟ್ಟಿ ಉದ್ಯಾನಗಳು ಹಚ್ಚಹಸುರಿನಿಂದ ಕಂಗೊಳಿಸುತ್ತಿದೆ. ಲಾಕ್‌ಡೌನ್ ಸಡಿಲಿಕೆಯಿಂದ ದೇಶಾದ್ಯಂತ ದೇವಸ್ಥಾನ, ಹೋಟೆಲ್, ರೆಸ್ಟೋರೆಂಟ್, ಮಾಲ್‌ಗಳು ಆರಂಭಗೊಂಡಿದ್ದರಿಂದ ಇಲ್ಲಿನ ವಿವಿಧ ಉದ್ಯಾನಗಳಿಗೆ ಹಾಕಿದ ನಿರ್ಬಂಧ ಸಡಿಲಿಕೆಗೋಸ್ಕರ ಪ್ರವಾಸಿಗರು, ವ್ಯಾಪಾರಿಗಳು ಜಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ.

    ಕರೊನಾ ಹಿನ್ನೆಲೆ ಮಾ.14 ರಿಂದ ಜಿಲ್ಲಾದ್ಯಂತ ಹೈಅಲರ್ಟ್ ಘೋಷಣೆಯಾಗಿದ್ದರಿಂದ ಈ ಉದ್ಯಾನಗಳು ಬಂದಾಗಿದ್ದವು. ರಾಕ್ ಗಾರ್ಡನ್, ಮೊಘಲ್ ಗಾರ್ಡನ್, ಸಂಗೀತ ನೃತ್ಯ ಕಾರಂಜಿ, ಲೇಸರ್ ಶೋ, ಲವಕುಶ ಉದ್ಯಾನ, ಕೃಷ್ಣಾ ಗಾರ್ಡನ್ ಸೇರಿ ವಿವಿಧ ಉದ್ಯಾನಗಳನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಪ್ರವಾಸಿಗರಿಗೆ ನಿಷೇಧಿಸಲಾಗಿದೆ.
    ಜಿಲ್ಲಾಡಳಿತ ಆದೇಶದಂತೆ ಮಾ.14 ರಿಂದ ಇಲ್ಲಿನ ಎಲ್ಲ ಉದ್ಯಾನಗಳನ್ನು ಬಂದ್ ಮಾಡಿದ್ದರಿಂದ ಕೆಬಿಜೆಎನ್‌ಎಲ್ ಆದಾಯಕ್ಕೂ ಕರೊನಾ ಕೊಕ್ಕೆ ಹಾಕಿದೆ. ಇಲ್ಲಿನ ಉದ್ಯಾನವನಗಳ ಪ್ರವೇಶಕ್ಕೆ ಮಕ್ಕಳಿಗೆ 5 ರೂ., ಹಿರಿಯರಿಗೆ 10 ರೂ., ಕ್ಯಾಮರಾಗೆ 25 ರೂ., ಬೋಟಿಂಗ್‌ಗೆ 50 ರೂ. ಮತ್ತು 100 ರೂ. ಗಳ ದರ ನಿಗದಿ ಪಡಿಸಲಾಗಿದೆ.
    ಕೆಬಿಜೆಎನ್‌ಎಲ್‌ನ ಅರಣ್ಯ ವಿಭಾಗದ ಉಸ್ತುವಾರಿಯಲ್ಲಿರುವ ಇಲ್ಲಿನ ರಾಕ್‌ಗಾರ್ಡನ್, ಕೃಷ್ಣ ಗಾರ್ಡನ್, ಲವಕುಶ ಉದ್ಯಾನಗಳಿಗೆ 2019ರ ಮಾರ್ಚ್‌ನಲ್ಲಿ 2.56 ಲಕ್ಷ ರೂ, ಏಪ್ರೀಲ್‌ನಲ್ಲಿ 3.45 ಲಕ್ಷ ರೂ. ಮೇನಲ್ಲಿ 3.54 ಲಕ್ಷ ರೂ.ಗಳ ಸಂಗ್ರಹವಾಗಿತ್ತು. ಆದರೆ, ಈ ಬಾರಿ ಮಾರ್ಚ್ ತಿಂಗಳಲ್ಲಿ ಶೇ.50ರಷ್ಟು ಸೇರಿ ಕಳೆದ ಮೂರು ತಿಂಗಳಲ್ಲಿ ಅಂದಾಜು 9 ಲಕ್ಷ ರೂ.ಗಳಿಗೂ ಅಧಿಕ ಆದಾಯ ಕೈಕೊಟ್ಟಂತಾಗಿದೆ. ಸಂಗೀತ ನೃತ್ಯ ಕಾರಂಜಿ, ಲೇಸರ್ ಶೋ, ಮೋಘಲ್, ಇಟಾಲಿಯನ್, ್ರೆಂಚ್ ಉದ್ಯಾನಗಳಿಗೆ ಪ್ರತಿ ತಿಂಗಳು 4.25 ಲಕ್ಷ ರೂ.ಗಳಂತೆ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ. ಆದರೆ, ಉದ್ಯಾನಗಳನ್ನು ಬಂದ್ ಮಾಡಿದ್ದರಿಂದ ಈ ಎಲ್ಲ ಉದ್ಯಾನಗಳಿಂದ ಕೆಬಿಜೆಎನ್‌ಎಲ್‌ಗೆ ಬರಬೇಕಿದ್ದ ಅಂದಾಜು 12.75 ಲಕ್ಷ ರೂ.ಗಳಷ್ಟು ಆದಾಯ ನಿಂತಿದೆ.

    ಸಂಕಷ್ಟದಲ್ಲಿ ವ್ಯಾಪಾರಿಗಳು

    ಇಲ್ಲಿನ ಉದ್ಯಾನಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಅನೇಕ ವ್ಯಾಪಾರಸ್ಥರಿಗೆ ಲಕ್ಷಾಂತರ ರೂ.ಗಳ ನಷ್ಟ ಉಂಟಾಗಿದೆ. ಕೋಲ್ಡ್ರಿಂಕ್ಸ್, ಹೋಟೆಲ್, ಐಸ್‌ಕ್ರೀಂ, ಕುರುಕಲು ತಿಂಡಿ ಸೇರಿ ವಿವಿಧ ಅಂಗಡಿಗಳು ನಿತ್ಯ ಸಾವಿರಾರು ರೂ.ಗಳ ವಹಿವಾಟು ನಡೆಸುತ್ತಿದ್ದವು. ಜತೆಗೆ ಉದ್ಯಾನಗಳ ಹೊರಗಡೆಗೆ ಕೆನೆಮೊಸರು, ಸೌತೆಕಾಯಿ, ಚಕ್ಕಲಿ, ಪಾಪಡಿ ಮಾರುತ್ತಿದ್ದ ಸಣ್ಣ ಪುಟ್ಟ ವ್ಯಾಪಾರಿಗಳ ಬದುಕು ಬೀದಿಗೆ ಬಿದ್ದಂತಾಗಿದೆ. ಅಂಗಡಿಕಾರರು ವ್ಯಾಪಾರವಿಲ್ಲದೆ ಚಿಂತಾಕ್ರಾಂತರಾಗಿದ್ದಾರೆ.
    ಕರೊನಾ ದೇಶಾದ್ಯಂತ ಮತ್ತಷ್ಟು ತಲ್ಲಣ ಮೂಡಿಸಿದೆ. ಮತ್ತೆ ಇನ್ನಷ್ಟು ದಿನಗಳವರೆಗೆ ಉದ್ಯಾನಗಳನ್ನು ಬಂದ್ ಮಾಡಿದರೆ ಇಲ್ಲಿನ ವ್ಯಾಪಾರಿಗಳ ಬದುಕು ಬರಡಾಗುತ್ತದೆ. ಬಂದ್ ಬದಲು ಪ್ರವಾಸಿಗರನ್ನು ತಪಾಸಣೆ ನಡೆಸಿ ಸ್ಯಾನಿಟೈಸರ್, ಮಾಸ್ಕ್ ಧರಿಸುವಂತೆ ಮಾಡಿ ಅವರಿಗೆ ಪ್ರವೇಶಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಉದ್ಯಾನಗಳಲ್ಲಿನ ಅಂಗಡಿಕಾರರು ಆಗ್ರಹಿಸಿದ್ದಾರೆ.

    ನಾವು ನಮ್ಮ ವಾಪಾರವನ್ನು ನೋಡುವುದಕ್ಕಿಂತ ನಮ್ಮ ಆರೋಗ್ಯವೇ ಮುಖ್ಯ. ಉದ್ಯಾನಗಳು ಆರಂಭವಾದರೆ ಪ್ರವಾಸಿಗರು ಎಲ್ಲಿಂದ ಆಗಮಿಸುತ್ತಾರೋ ಗೊತ್ತಿರುವುದಿಲ್ಲ. ನಮಗೆ ವೈರಸ್ ಹಚ್ಚಿ ಹೋದರೆ ಹೇಗೆ? ಸ್ವಲ್ಪ ಇದರ ಹಾವಳಿ ಕಡಿಮೆ ಆದ ಮೇಲೆ ಉದ್ಯಾನಗಳನ್ನು ಆರಂಭಿಸುವುದು ಸೂಕ್ತ.
    ಹೆಸರುಹೇಳಲಿಚ್ಚಿಸದ ಕೆಲ ಕೂಲಿಕಾರ್ಮಿಕರು ಮತ್ತು ವ್ಯಾಪಾರಸ್ಥರು

    ಇನ್ನೆರಡು ದಿನಗಳಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಉದ್ಯಾನಗಳನ್ನು ಆರಂಭಿಸುವ ಕುರಿತು ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
    ಆರ್.ಪಿ. ಕುಲಕರ್ಣಿ, ಮುಖ್ಯ ಇಂಜಿನಿಯರ್, ಆಲಮಟ್ಟಿ

    ಉದ್ಯಾನಗಳು ಬಂದ್, ವ್ಯಾಪಾರಿಗಳ ಬದುಕು ದುಸ್ಥರ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts