More

    ಅಕ್ಷಯ ತೃತೀಯಾ ರಾಜ್ಯದಲ್ಲಿ 2,050 ಕೆ.ಜಿ.ಗೂ ಅಧಿಕ ಚಿನ್ನ ಮಾರಾಟ

    ಬೆಂಗಳೂರು: ಅಕ್ಷಯ ತೃತೀಯಾ ಈ ಬಾರಿ ಬಸವ ಜಯಂತಿ ದಿನದಂದೇ ಬಂದಿದ್ದರಿಂದ ಶುಕ್ರವಾರ ಬೆಂಗಳೂರು ಸೇರಿ ರಾಜ್ಯಾದ್ಯಂತ ಚಿನ್ನಾಭರಣಗಳ ಮಳಿಗೆಗಳು ಜನರಿಂದ ಕಿಕ್ಕಿರಿದು ತುಂಬಿದ್ದವು. ದರ ಏರಿಕೆಯ ನಡುವೆಯೂ ನಿರೀಕ್ಷೆಗೂ ಮೀರಿದ ವ್ಯಾಪಾರ ಆಗಿದೆ ಎನ್ನುತ್ತಾರೆ ಆಭರಣ ಮಳಿಗೆಗಳ ಮಾಲೀಕರು.

    ರಾಜ್ಯಾದ್ಯಂತ ಶುಕ್ರವಾರ 2,050 ಕೆ.ಜಿ.ಗೂ ಅಧಿಕ ಚಿನ್ನ ಹಾಗೂ 1,900 ಕೆ.ಜಿ.ಗೂ ಹೆಚ್ಚು ಬೆಳ್ಳಿ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದರ ಹೆಚ್ಚಳದ ನಡುವೆಯೂ ಈ ಬಾರಿ ಶೇ.18 ಹೆಚ್ಚುವರಿ ವ್ಯಾಪಾರ ನಡೆದಿದೆ. ಒಂದೇ ದಿನದಲ್ಲಿ ಸಹಸ್ರ ಕೋಟಿ ಗೂ ಅಧಿಕ ವಹಿವಾಟು ಇದಾಗಿದೆ. ಈ ಬಾರಿ ಚಿನ್ನದ ಮೇಲೆ ಹೆಚ್ಚು ಹೂಡಿಕೆಯಾಗಿದ್ದು, ನಾಣ್ಯಗಳ ಮಾರಾಟ ಹೆಚ್ಚಾಗಿದೆ ಎಂದು ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟ ತಿಳಿಸಿದೆ.

    ಸಮೃದ್ಧಿಯ ಸಂಕೇತ ಎಂದೇ ಬಿಂಬಿತವಾಗಿರುವ ಅಕ್ಷಯ ತೃತೀಯಾ ವರ್ಷದಿಂದ ವರ್ಷಕ್ಕೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಈ ದಿನದಂದು ಬೆಳ್ಳಿ, ಬಂಗಾರ ಖರೀದಿ ಮಾಡಿದರೆ ಅಕ್ಷಯವಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಅಭರಣಗಳ ಅಂಗಡಿಗಳು ಬೆಳಗ್ಗೆಯಿಂದ ತಡರಾತ್ರಿವರೆಗೂ ಜನರಿಂದ ತುಂಬಿದ್ದವು. ಇದರಿಂದ ಕೆಲವೆಡೆ ಜನರು ಗಂಟೆಗಟ್ಟಲು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಸೇರಿದ್ದರಿಂದ ಕೆಲವೆಡೆ ಮಳಿಗೆಯ ಹೊರಗಡೆ ಪೆಂಡಾಲ್ ವ್ಯವಸ್ಥೆ ಮಾಡಿ ಚೇರ್‌ಗಳನ್ನು ಹಾಕಲಾಗಿತ್ತು. ಕುಡಿಯಲು ತಂಪು ಪಾನೀಯ, ಮಜ್ಜಿಗೆ ವಿತರಿಸಲಾಯಿತು. ನವರತನ್ ಜುವೆಲ್ಲರಿ ಗ್ರಾಹಕರಿಗಾಗಿ ಬೆಳಗ್ಗೆ ಉಪಾಹಾರದ ವ್ಯವಸ್ಥೆ ಮಾಡಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದರಿಂದ ದೊಡ್ಡ ದೊಡ್ಡ ಮಳಿಗೆಗಳಲ್ಲಿ ಅಕ್ಷಯ ತೃತೀಯಾಗಾಗಿಯೇ ವಿಶೇಷವಾಗಿ ಸಂಗ್ರಹಿಸಿದ್ದ ಆಭರಣಗಳನ್ನು ಪರದೆ ಮೇಲೆ ಪ್ರದರ್ಶನ ಮಾಡಲಾಗುತ್ತಿತ್ತು.

    ಜನರನ್ನು ನಿಯಂತ್ರಿಸಲು ಕಿವಿಯೋಲೆ, ಬಳೆ, ನೆಕ್ಲೆಸ್, ಬ್ರೇಸ್‌ಲೇಟ್, ಲಾಂಗ್‌ಚೈನ್, ಉಂಗುರ ಸೇರಿ ಪ್ರತಿ ಆಭರಣಗಳಿಗೂ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಮುಂಗಡವಾಗಿಯೇ ಆರ್ಡರ್ ನೀಡಿದ್ದ ಗ್ರಾಹಕರು ಸಿದ್ಧಗೊಂಡಿದ್ದ ಆಭರಣಗಳನ್ನು ಪರೀಕ್ಷಿಸಿ ಕೊಂಡೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

    ಚಿನ್ನದ ದರ ಏರಿಕೆ ಆಗುತ್ತಲೇ ಹೂಡಿಕೆದಾರರು ಚಿನ್ನದ ನಾಣ್ಯಗಳ ಖರೀದಿಯತ್ತ ಆಸಕ್ತಿ ತೋರುತ್ತಿದ್ದಾರೆ. ಅದರಂತೆ ಈ ಬಾರಿಯೂ ಅಕ್ಷಯ ತೃತೀಯಾಕ್ಕೆ ಚಿನ್ನಾಭರಣಗಳ ಖರೀದಿಗಿಂತ ಹೂಡಿಕೆ ಸಲುವಾಗಿ ಚಿನ್ನದ ನಾಣ್ಯಗಳು ಹೆಚ್ಚು ಮಾರಾಟವಾಗಿದೆ ಎನ್ನುತ್ತಾರೆ ಆಭರಣ ಮಳಿಗೆಗಳ ಮಾಲೀಕರು.

    2 ಸಾವಿರ ಗ್ರಾಹಕರ ಮನೆ ಸೇರಿದ ಬಾಲರಾಮ:
    ಅಕ್ಷಯ ತೃತೀಯಾಗೆ ಈ ಬಾರಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ವತಿಯಿಂದ 50 ಸಾವಿರ ರೂ. ಹಾಗೂ 2 ಲಕ್ಷ ರೂ.ಗಳಿಗೂ ಅಧಿಕ ಬೆಲೆಯ ಆಭರಣಗಳನ್ನು ಖರೀದಿಸಿದ ಗ್ರಾಹಕರಿಗೆ ಪ್ರತ್ಯೇಕವಾಗಿ ಬೆಳ್ಳಿಯ ಬಾಲರಾಮನ ವಿಗ್ರಹವನ್ನು ಕೊಡುಗೆಯಾಗಿ ನೀಡಲಾಯಿತು. ಈ ವಿಗ್ರಹಗಳನ್ನು ಆಯೋಧ್ಯೆಯ ರಾಮ ಮಂದಿರದಲ್ಲಿ ಪೂಜೆ ಮಾಡಿಸಿ ತರಿಸಲಾಗಿತ್ತು. ಇವನ್ನು ಅಕ್ಷತೆಯ ಜೊತೆಗೆ ಗ್ರಾಹಕರಿಗೆ ವಿತರಿಸಲಾಯಿತು. ದರ ಹೆಚ್ಚಳದ ನಡುವೆಯೂ ಕಳೆದ ವರ್ಷಕ್ಕಿಂತ ಈ ಬಾರಿ ಶೇ. 20 ಅಧಿಕ ಖರೀದಿಯಾಗಿದೆ. ಹೆಚ್ಚು ಮೊತ್ತದ ಖರೀದಿ ಮಾಡಿದ 2 ಸಾವಿರ ಗ್ರಾಹಕರು ಮನೆಗೆ ಬೆಳ್ಳಿಯ ಬಾಲರಾಮ ಸೇರಿದ್ದಾನೆ ಎಂದು ಮಳಿಗೆಯ ಮಾಲೀಕ ಟಿ.ಎ. ಶರವಣ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts