More

    ಅಕ್ರಮ ಸಕ್ರಮ ಅರ್ಜಿ ತಿರಸ್ಕಾರ, ಕಂದಾಯ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಅನ್ಯಾಯ

    ನಿಶಾಂತ ಬಿಲ್ಲಂಪದವು ವಿಟ್ಲ
    ಪಟ್ಟಣ ಪಂಚಾಯಿತಿ ಬಫರ್ ಪ್ರದೇಶದ ಹೆಸರಿನಲ್ಲಿ ವಿಟ್ಲದ ಆಸುಪಾಸಿನ ಗ್ರಾಮದ ರೈತರ ಅಕ್ರಮ ಸಕ್ರಮ ಅರ್ಜಿಗಳನ್ನು ತಿರಸ್ಕರಿಸುವ ಕಾರ್ಯ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಸದ್ದಿಲ್ಲದೆ ನಡೆಯುತ್ತಿದೆ. ಜತೆಗೆ ಕೃಷಿ ಜಮೀನುಗಳನ್ನು ದಾಖಲೆಗಳಲ್ಲಿ ಸ್ವಯಂಪ್ರೇರಿತವಾಗಿ ಕೃಷಿಯೇತರ ಜಮೀನು ಎಂದು ತಿದ್ದುವ ಕಾರ್ಯ ನಡೆಯುತ್ತಿದೆ.

    ಸ್ವಾತಂತ್ರೃಪೂರ್ವದಿಂದ ಒಂದೇ ಸ್ಥಳದಲ್ಲಿ ವಾಸವಾಗಿರುವ ರೈತರ ಸ್ವಾಧೀನದಲ್ಲಿರುವ ಜಮೀನುಗಳು ಇನ್ನೂ ಸರ್ಕಾರಿ ಹೆಸರಿನಲ್ಲಿ ಉಳಿದುಕೊಂಡಿವೆ. ಅದನ್ನು ಸಕ್ರಮ ಮಾಡಲು ಅವಕಾಶಗಳಿದ್ದರೂ ಸಮರ್ಪಕ ಮಾಹಿತಿ ಕೊರತೆಯಿಂದ ಇನ್ನೂ ದಾಖಲೆಯಲ್ಲಿ ಸರ್ಕಾರಿ ಭೂಮಿ ಎಂದು ಉಳಿದುಕೊಂಡಿದೆ. ಅದಕ್ಕಾಗಿ ಹಾಕಿದ ಅರ್ಜಿಗಳನ್ನು ವಿಲೇವಾರಿ ಮಾಡಿ ರೈತರಿಗೆ ನ್ಯಾಯ ಕೊಡಬೇಕಾದ ಅಧಿಕಾರಿಗಳು ಲಾಬಿಗಳಿಗೆ ಮಣಿದು ಕೃಷಿಕರಿಗೆ ಸಮಸ್ಯೆ ಮಾಡುತ್ತಿದ್ದಾರೆ.

    ರೈತರು ತಮ್ಮ ಸ್ವಾಧೀನದಲ್ಲಿರುವ ಕೃಷಿ ಭೂಮಿಗೆ ಅರ್ಜಿ ನಮೂನೆ 50, 53 ಮತ್ತು 57ರಲ್ಲಿ ಜಾಗ ಮಂಜೂರು ಮಾಡಿಕೊಡುವಂತೆ ಅರ್ಜಿಗಳನ್ನು ಹಾಕಿದ್ದು, ಹಲವು ಅರ್ಜಿಗಳು ಇನ್ನೂ ವಿಲೇವಾರಿಯಾಗಿಲ್ಲ. ಇದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ಮಾಡಿದ್ದು, ಅಧಿಕಾರಿಗಳು ಮಾತ್ರ ಕಾನೂನು ತೊಡಕುಗಳನ್ನು ಮುಂದಿಟ್ಟುಕೊಂಡು ಅರ್ಜಿ ತಿರಸ್ಕರಿಸುವ ಕಾರ್ಯ ಮಾಡುತ್ತಿದ್ದಾರೆ.

    ಪಟ್ಟಣ ಪಂಚಾಯಿತಿ ಬಫರ್ : ವಿಟ್ಲ ಪಟ್ಟಣ ಪಂಚಾಯಿತಿಗೆ ತಾಗಿಕೊಂಡಿರುವ ನೆಟ್ಲಮುಡ್ನೂರು, ಇಡ್ಕಿದು, ವಿಟ್ಲಮುಡ್ನೂರು, ಕೇಪು, ಅಳಿಕೆ, ವಿಟ್ಲಪಡ್ನೂರು, ವೀರಕಂಬ, ಅನಂತಾಡಿ ಸೇರಿ ಎಂಟು ಗ್ರಾಮ ಪಂಚಾಯಿತಿಗಳಿವೆ. ಈ ಎಲ್ಲ ಗ್ರಾಮಗಳಲ್ಲಿ ವಾಯು ಮಾರ್ಗದಲ್ಲಿ 3 ಕಿ.ಮೀ. ಪಟ್ಟಣ ಪಂಚಾಯಿತಿಯ ಬಫರ್ ಜೋನ್ ಆಗಿದೆ ಎಂಬುದನ್ನು ಹೇಳಲಾಗಿದೆ. ಹಾಗೆಂದು 1964ರ ಉಪಬಂಧಗಳಲ್ಲಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಿ ಎಂಬ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ.

    ಕೃಷಿಯೇತರ ಜಮೀನಾಗಿ ಪರಿವರ್ತನೆ : ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರುವ ಗ್ರಾಮಗಳ 10 ಸೆಂಟ್ಸ್ ಒಳಗಿನ ಸರ್ವೇ ನಂಬರ್‌ಗಳನ್ನು ಸ್ವಯಂಪ್ರೇರಿತವಾಗಿ ಕೃಷಿಯೇತರ ಜಮೀನು ಎಂದು ಪರಿವರ್ತನೆ ಮಾಡುವ ಕಾರ್ಯ ಕೋವಿಡ್-19 ಸಮಯದಲ್ಲಿ ನಡೆದಿದೆ. 2021-22ನೇ ಸಾಲಿನ ಬೆಳೆ ಸಮೀಕ್ಷೆ ಸಂದರ್ಭ ಹಲವು ಸರ್ವೇ ನಂಬರ್‌ಗಳು ಬೆಳೆ ಸಮೀಕ್ಷೆಗೆ ಸಿಗದೆ ಇರುವುದು ಇದಕ್ಕೆ ಪುಷ್ಟಿ ನೀಡುತ್ತವೆ. ಇದನ್ನು ರೈತರು ಪ್ರಶ್ನೆ ಮಾಡಿದರೂ ಸೂಕ್ತ ಉತ್ತರ ಕಂದಾಯ ಇಲಾಖೆ ಅಧಿಕಾರಿಗಳಿಂದ ಲಭಿಸಿಲ್ಲ. ಈ ಮೂಲಕ ಕೃಷಿ ಕಡಿಮೆಯಾಗಿದೆ ಎಂದು ದಾಖಲೆಯಲ್ಲಿ ತೋರಿಸಿ ಅದನ್ನು ಸುಲಭವಾಗಿ ನಗರ ಪ್ರದೇಶ ಎಂದು ಘೋಷಣೆ ಮಾಡುವ ಕಾರ್ಯ ಮಾಡಲಾಗುತ್ತದೆ.

    ಕುಮ್ಕಿ ಎಂಬುದು ಬ್ರಿಟಿಷರು ಇದ್ದ ಸಂದರ್ಭ ರೈತರಿಗೆ ನೀಡಿದ ವಿಶೇಷ ಹಕ್ಕು. ಅದನ್ನು ಮತ್ತೆ ಕದೀಂ ವರ್ಗಕ್ಕೆ ನೀಡುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಪಟ್ಟಣ ಪಂಚಾಯಿತಿ ಆಸುಪಾಸಿನ ಗ್ರಾಮದವರಿಗೆ ಅಕ್ರಮ ಸಕ್ರಮ ಅರ್ಜಿದಾರರಿಗೆ ಜಾಗ ಮಂಜೂರು ಮಾಡಿಕೊಳ್ಳಲು ಒಂದು ಅವಕಾಶ ನೀಡುವಂತೆ ಸರ್ಕಾರಕ್ಕೆ ಕೇಳಿಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳಿಂದಲೂ ಇದಕ್ಕೆ ಅಗತ್ಯ ಪತ್ರ ಸರ್ಕಾರಕ್ಕೆ ಹೋಗಿದೆ.
    – ಸಂಜೀವ ಮಠಂದೂರು ಶಾಸಕ

    ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಾಮಾನ್ಯ ಜನರ ಗುರುತು ಸಿಗುತ್ತಿಲ್ಲ. ಕೃಷಿ ಚಟುವಟಿಕೆ ನಡೆಸಿದ ಸರ್ಕಾರಿ ಜಮೀನಿಗೆ ಅಕ್ರಮ ಸಕ್ರಮ ಅರ್ಜಿ ಹಾಕಿ, ಜಾಗ ಮಂಜೂರು ಮಾಡುವುದಾಗಿ ಹೇಳಿಕೊಂಡು ಈಗ ತಿರಸ್ಕರಿಸುತ್ತಿರುವ ಕಾರ್ಯ ಮಾಡುವುದು ಸರಿಯಲ್ಲ. ಕೃಷಿಕರ ಜಮೀನಿಗೆ ಕೈ ಹಾಕುವ ಕಾರ್ಯ ಮಾಡಿದರೆ ರೈತ ಸಂಘ ಪ್ರತಿಭಟಿಸುವ ಕಾರ್ಯ ಮಾಡಬೇಕಾಗುತ್ತದೆ.
    -ಶ್ರೀಧರ ಶೆಟ್ಟಿ ಬೈಲುಗುತ್ತು, ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts