More

    ಕನ್ನಡ ನುಡಿ ಸಂಭ್ರಮಕ್ಕೆ ಅಕ್ಕಿಆಲೂರ ಸಜ್ಜು: ಮೂರು ದಿನ ವೈಭವದ ಸಾಂಸ್ಕೃತಿಕ ಹಬ್ಬ

    ಅಕ್ಕಿಆಲೂರ: ಕಲೆ, ಸಾಹಿತ್ಯ, ಸಂಸ್ಕೃತಿ, ಸಂಸ್ಕಾರ, ಸಾಮರಸ್ಯ, ಶಿಕ್ಷಣಕ್ಕೆ ಉತ್ತೇಜನ ನೀಡುವ ಅಕ್ಕಿಆಲೂರಿನ ಶ್ರೀ ದುಂಡಿ ಬಸವೇಶ್ವರ ಜನಪದ ಕಲಾ ಸಂಘದ ಆಶ್ರಯದಲ್ಲಿ ಫೆ. 1ರಿಂದ ಮೂರು ದಿನಗಳ ಕಾಲ ನಡೆಯುವ 32ನೇ ಕನ್ನಡ ನುಡಿ ಸಂಭ್ರಮಕ್ಕೆ ವಿಶ್ವದ ಮೊದಲ ರಕ್ತ ಸೈನಿಕರ ತವರೂರು ಅಕ್ಕಿಆಲೂರ ಸಜ್ಜಾಗಿದ್ದು, ವೈಭವದ ಸಾಂಸ್ಕೃತಿಕ ಹಬ್ಬ ಜರುಗಲಿದೆ.

    ಮೂರು ಜಿಲ್ಲೆಗಳ ಗಡಿಯಲ್ಲಿರುವ ಅರೆಮಲೆನಾಡು ಅಕ್ಕಿಆಲೂರನ್ನು ಸಾಹಿತ್ಯ, ಸಂಸ್ಕೃತಿ ಮತ್ತು ಸಾಹಿತ್ಯಭರಿತವಾಗಿ ಶ್ರೀಮಂತಗೊಳಿಸಿದ ಕೀರ್ತಿ ಶ್ರೀ ದುಂಡಿಬಸವೇಶ್ವರ ಜನಪದ ಕಲಾಸಂಘದ ಕನ್ನಡ ನುಡಿ ಸಂಭ್ರಮಕ್ಕೆ ಸಲ್ಲುತ್ತದೆ. ಕಳೆದ 3 ದಶಕಗಳ ಕಾಲ ಪ್ರತಿವರ್ಷ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆಯುವ ನುಡಿ ಸಂಭ್ರಮ, ರಾಜ್ಯಮಟ್ಟದ ಸಾಂಸ್ಕೃತಿಕ ಸಮಾರಂಭವನ್ನಾಗಿ ಆಚರಿಸಲಾಗುತ್ತಿದೆ. ಈ ಬಾರಿ ಫೆ. 1, 2 ಮತ್ತು 3ರಂದು ಜರುಗುವ ಸಮಾರಂಭಕ್ಕೆ ನಾಡಿನ ಪ್ರಸಿದ್ಧ ಕಲಾವಿದರು, ಅಧಿಕಾರಿಗಳು, ಜನಪ್ರನಿಧಿಗಳು ಸಾಕ್ಷಿಯಾಗುತ್ತಿದ್ದಾರೆ.

    ಅಕ್ಕಿಆಲೂರಿಗೆ ಆಗಮಿಸುವ ಎಲ್ಲ ರಸ್ತೆಗಳಲ್ಲಿ ಮಹಾನ್ ವ್ಯಕ್ತಿಗಳ ಹೆಸರಿನಲ್ಲಿ ದ್ವಾರಬಾಗಿಲು ನಿರ್ಮಾಣ ಮಾಡಲಾಗಿದೆ. ದುಂಡಿಬಸವೇಶ್ವರ ಓಣಿಯ ಎರಡೂ ಬದಿಯಲ್ಲಿ ಕೆಂಪು-ಹಳದಿ ಬಣ್ಣದ ಬಟಿಂಗ್ಸ್​ಗಳು, ಖ್ಯಾತ ಕವಿಗಳು, ಸಾಹಿತಿಗಳು, ಕನ್ನಡಪರ ಹೋರಾಟಗರರ ಭಾವಚಿತ್ರ, ಆಕಾಶ ಬುಟ್ಟಿಗಳಿಂದ ಶೃಂಗರಿಸಲಾಗಿದೆ. 3 ದಿನ ನುಡಿ ಸಂಭ್ರಮ ಜರುಗುವ ಪಟ್ಟಣದ ಮುತ್ತಿನಕಂತಿಮಠದ ಆವರಣದಲ್ಲಿ 30 ಅಡಿ ಅಗಲ ಮತ್ತು 60 ಅಡಿ ಉದ್ದದ ಬೃತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಈ ಬಾರಿಯ ನುಡಿಸಂಭ್ರಮದ ಸಂಚಾಲಕರಾಗಿ ಜ್ಞಾನ ಭಾರತಿ ಶಾಲೆಯನ್ನು ಆಯ್ಕೆ ಮಾಡಲಾಗಿದೆ.

    ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘದ ಹೆಜ್ಜೆ

    1990 ಕಾಲಘಟ್ಟದಲ್ಲಿ ಅಕ್ಕಿಆಲೂರಿನಲ್ಲಿ ಕ್ರಿಯಾಶೀಲ ಸಂಘಟನೆಯಾಗಿದ್ದ ಚಿಂತನ ಬಳಗದಿಂದ ಪ್ರೇರಣೆಗೊಂಡು ಹುಟ್ಟಿಕೊಂಡ ಸಂಘಟನೆಯೇ ಡಾ. ರಾಜಕುಮಾರ ಯುವಕ ಮಂಡಳಿ. ಪಟ್ಟಣದ ಹವ್ಯಾಸಿ ಕಲಾವಿದರಾಗಿ ಸಾಲುಸಂತೆಯಲ್ಲಿ ಬೀದಿ ಬದಿಯ ವ್ಯಾಪಾರಿಗಳು ಕಟ್ಟಿದ ಡಾ. ರಾಜಕುಮಾರ ಯುವಕ ಮಂಡಳಿ ಇಂದು ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘ ಎಂಬ ಹೆಮ್ಮರವಾಗಿ ಬೆಳೆದು ನಿಂತಿದೆ.

    ದಿನ ಬೆಳಗಾದರೆ ಸಾಲು ಸಂತೆಗೆ ತೆರಳಿ ವ್ಯಾಪಾರ ಮಾಡಿ ಬಂದು, ದೇವಸ್ಥಾನದ ಕಟ್ಟೆಯ ಮೇಲೆ ಕುಳಿತು, ರಾತ್ರಿಯಿಡೀ ಕನ್ನಡ ನಾಡಿನ ಭವಿಷ್ಯದ ಕುರಿತು ಚಿಂತಿಸುವ ಶ್ರೀ ದುಂಡಿಬಸವೇಶ್ವರ ಜನಪದ ಕಲಾಸಂಘದ ಪದಾಧಿಕಾರಿಗಳಲ್ಲಿರುವ ವಿಭಿನ್ನ ಆಲೋಚನೆ, ಅರ್ಧಪೂರ್ಣ ವಿಚಾರಧಾರೆಗಳು. ಸಾಹಿತ್ಯದ ಮನಸ್ಸು, ತರ್ಕಬದ್ಧ ಚಿಂತನೆಗಳು, ಪಾರದರ್ಶಕ ವ್ಯವಸ್ಥೆ ಎಲ್ಲರಿಗೂ ಮಾದರಿಯಾಗಿದೆ. ಗೋಕಾಕ್ ಚಳವಳಿಯಿಂದ ಹಿಡಿದು ಕನ್ನಡದ ನೆಲ, ಜಲ, ಭಾಷೆ ಮತ್ತು ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಬೀದಿಗಿಳಿದು ಹೋರಾಟ ಮಾಡಿದ ಅನೇಕ ನಿದರ್ಶನಗಳಿವೆ.

    ಕಾರ್ಯಕ್ರಮದಲ್ಲಿಂದು

    ಫೆ. 1ರಂದು ಬೆಳಗ್ಗೆ 10 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ ಹಾನಗಲ್ಲ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ ಕನ್ನಡ ಧ್ವಜಾರೋಹಣ ನೆರವೇರಿಸುವರು. ಮಧ್ಯಾಹ್ನ 3 ಗಂಟೆಗೆ ಭುವನೇಶ್ವರಿ ದೇವಿ ಭಾವಚಿತ್ರ ಮೆರವಣಿಗೆಗೆ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಸಿದ್ರಾಮಪ್ಪ ವಿರುಪಣ್ಣವರ ಚಾಲನೆ ನೀಡುವರು. ಸಂಜೆ 7 ಗಂಟೆಗೆ ಜರುಗಲಿರುವ ಉದ್ಘಾಟನೆಯನ್ನು ಇಳಕಲ್​ನ ಜನಪದ ವಿದ್ವಾಂಸ ಶಂಭು ಬಳಿಗಾರ ನೆರವೇರಿಸುವರು. ಸಾನ್ನಿಧ್ಯವನ್ನು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ವಹಿಸಿಕೊಳ್ಳಲಿದ್ದಾರೆ. ದುಂಡಿಬಸವೇಶ್ವರ ಜನಪದ ಕಲಾ ಸಂಘದ ಅಧ್ಯಕ್ಷ ಬಸವರಾಜ ಕೋರಿ ಅಧ್ಯಕ್ಷತೆ ವಹಿಸುವರು. ನಿವೃತ್ತ ಉಪನ್ಯಾಸಕ ವಿ. ಪಿ. ಗುರಪ್ಪನವರ ಅವರಿಗೆ ಗುರುವಂದನೆ ನೀಡಲಾಗುತ್ತದೆ. ಯುವ ವಾಗ್ಮಿ ಕಿರಣ ವಿವೇಕಾಂಶಿ ವಿಶೇಷ ನುಡಿ ನುಡಿಯಲ್ಲಿದ್ದಾರೆ. ಶಾಸಕ ಶ್ರೀನಿವಾಸ ಮಾನೆ ಸೇರಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.

    ಕನ್ನಡ ನಾಡಿನ ಅಸ್ಮಿತೆ ಹೇಗೆಲ್ಲ ಕಾಪಾಡಬಹುದು ಎಂಬುದಕ್ಕೆ ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘದ ಕನ್ನಡ ನುಡಿ ಸಂಭ್ರಮವೇ ನಿದರ್ಶನ. ಸಂಘದಿಂದ ಪಟ್ಟಣದ ಕೀರ್ತಿ ಮತ್ತು ಶ್ರೇಷ್ಠತೆ ಹೆಚ್ಚಾಗಿದೆ. ಪ್ರತಿಯೊಬ್ಬರೂ ನಾಡಾಭಿಮಾನಿಗಳಾಗಬೇಕು ಎಂದು ಸಾರಿ ಹೇಳುವ ನುಡಿ ಸಂಭ್ರಮವನ್ನು ಇಂದಿನಿಂದ ಮೂರು ದಿನಗಳ ಕಾಲ ಸಾಂಸ್ಕೃತಿಕ ವೈಭವ ಕಣ್ತುಂಬಿಕೊಳ್ಳುವುದೆ ಒಂದು ಸೌಭಾಗ್ಯ.

    | ರಾಜಶೇಖರ ಮಳಗಿ, ಮ್ಯಾನೇಜಿಂಗ್ ಪಾರ್ಟನರ್ ಪಿ.ಕೆ. ಮಳಗಿ ಆಗ್ರೋಟೆಕ್ ಇಂಡಸ್ಟ್ರೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts