More

    ವಾಯುಮಾಲಿನ್ಯ ಮಾಪನ ಕೇಂದ್ರ ನಿರರ್ಥಕ

    ಗೋಪಾಲಕೃಷ್ಣ ಪಾದೂರು

    ಉಡುಪಿ: ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಸ್ಥಾಪಿಸಲಾಗಿರುವ ನಿರಂತರ ಪರಿವೇಷ್ಟಕ ವಾಯು ಗುಣಮಟ್ಟ ಮಾಪನ ಕೇಂದ್ರ ಒಂದು ವರ್ಷದಿಂದ ನಿರ್ವಹಣೆ ಇಲ್ಲದೇ ಬಾಗಿಲು ಮುಚ್ಚಿದೆ. ಗುತ್ತಿಗೆ ಸಂಸ್ಥೆಯ ಅಸಡ್ಡೆಗೆ ವ್ಯರ್ಥವಾಗಿರುವ ಮೊತ್ತ 1.36 ಕೋಟಿ ರೂ!
    ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 2018ರಲ್ಲಿ 1.36 ಕೋಟಿ ರೂ. ವೆಚ್ಚದಲ್ಲಿ ಈ ಕೇಂದ್ರವನ್ನು ಸ್ಥಾಪಿಸಿದ್ದು, ಮುಂಬೈ ಮೂಲದ ಕೆಮ್ಟ್ರೋಲ್ ಸಂಸ್ಥೆ 5 ವರ್ಷಗಳ ಗುತ್ತಿಗೆ ಪಡೆದುಕೊಂಡಿತ್ತು.

    ಸಾರ್ವಜನಿಕರ ಮಾಹಿತಿಗಾಗಿ ಕೇಂದ್ರದ ಹೊರಭಾಗದಲ್ಲಿ ಅಳವಡಿಸಿದ್ದ ಡಿಸ್‌ಪ್ಲೇ ಬೋರ್ಡ್ ವರ್ಷದ ಹಿಂದೆ ಹಾಳಾಗಿತ್ತು. ಈಗ ಸೆನ್ಸಾರ್, ಎಸಿ ಎಲ್ಲವೂ ನಾದುರಸ್ತಿಯಲ್ಲಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ ಪ್ರಾದೇಶಿಕ ಕೇಂದ್ರದಿಂದ ದುರಸ್ತಿ ಮಾಡಲು ಸೂಚನೆ ನೀಡಿದರೂ ಪ್ರಯೋಜನವಾಗಿಲ್ಲ.

    ಕೇಂದ್ರ ಯಾಕೆ? ಏನಿದರ ಅನುಕೂಲ?: ಉಡುಪಿ ನಗರ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ವಾಹನಗಳ ಸಂಖ್ಯೆಯೂ ಏರುಗತಿಯಲ್ಲಿದೆ. ಕೈಗಾರೀಕರಣದಿಂದ ವಾಯುಮಾಲಿನ್ಯವೂ ಹೆಚ್ಚುತ್ತಿದೆ. ಈ ಸಂದರ್ಭ ಮಾಪನ ಕೇಂದ್ರ ನಗರಕ್ಕೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಾಯು ಮಾಲಿನ್ಯದ ಮಟ್ಟವನ್ನು ನಿಖರವಾಗಿ ತಿಳಿಯಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಿದ ಅತ್ಯಾಧುನಿಕ ಉಪಕರಣಗಳನ್ನೊಳಗೊಂಡ ಮಾಪನ ಕೇಂದ್ರ ನಿರರ್ಥಕವಾಗುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

    ಏನೆಲ್ಲ ಮಾಪನ?: ಈ ಕೇಂದ್ರದಲ್ಲಿ ಧೂಳಿನ ಕಣಗಳು, ಗಂಧಕದ ಡೈ ಆಕ್ಸೈಡ್, ಸಾರಜನಕದ ಡೈ ಆಕ್ಸೈಡ್, ಅಮೋನಿಯ, ಕಾರ್ಬನ್ ಮೊನಾಕ್ಸೈಡ್, ಓಜೋನ್ ಮಾನಕಗಳನ್ನು ನಿರಂತರವಾಗಿ ಮಾಪನ ಮಾಡಲು ಉಪಕರಣಗಳನ್ನು ಅಳವಡಿಸಲಾಗಿದೆ. ಗಾಳಿಯ ವೇಗ, ದಿಕ್ಕು, ಒತ್ತಡ, ವಾತಾವರಣದ ತೇವಾಂಶ, ಉಷ್ಣತೆಗಳನ್ನು ಮಾಪನ ಮಾಡುವ ವ್ಯವಸ್ಥೆಯೂ ಇದೆ. ಮಾಪನ ಮಾಡಿದ ಅಂಕಿ ಅಂಶಗಳನ್ನು ಕೇಂದ್ರ ರಾಜ್ಯ ಮಂಡಳಿಯ ವೆಬ್‌ಸೈಟ್‌ಗೆ ರವಾನಿಸಲಾಗುತ್ತಿತ್ತು. ಈ ವ್ಯವಸ್ಥೆಯಿಂದ ಉಡುಪಿ ನಗರದ ಪ್ರತಿ ನಿಮಿಷದ ವಾಯುಮಾಲಿನ್ಯದ ಗುಣಮಟ್ಟವನ್ನು ಪ್ರದರ್ಶನ ಲಕದಿಂದ ಸಾರ್ವಜನಿಕರು ತಿಳಿಯಬಹುದಾಗಿತ್ತು. ಕೇಂದ್ರ ಸತತ 24 ತಾಸು ವಾಯು ಗುಣಮಟ್ಟ ಮಾಪನ ಮಾಡುವುದರಿಂದ ಜನರಿಗೆ ಪ್ರಯೋಜನವಾಗುತ್ತಿತ್ತು.

    ಗುಣಮಟ್ಟ ಮಾಪನ ಕೇಂದ್ರ ಸ್ಥಾಪನೆ ಮಾಡಿರುವ ಸಂಸ್ಥೆಗೇ ನಿರ್ವಹಣೆಯ ಗುತ್ತಿಗೆಯನ್ನೂ ನೀಡಲಾಗಿದೆ. ನಿರ್ವಹಣೆ ಸಮರ್ಪಕವಾಗಿಲ್ಲ ಎಂಬ ಕಾರಣಕ್ಕೆ ಹಣ ಬಿಡುಗಡೆ ಮಾಡದಂತೆ ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ. ನಿರ್ವಹಣೆ ವೆಚ್ಚದ ಬಿಲ್ ನೀಡುತ್ತಾರೆ. ಆದರೆ ಮಂಜೂರು ಮಾಡುತ್ತಿಲ್ಲ. ನಿರ್ವಹಣೆ ಮಾಡದಿದ್ದರೆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.

    ವಿಜಯಾ ಹೆಗಡೆ
    ಜಿಲ್ಲಾ ಪರಿಸರ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts