More

    ಟೀಮ್ ಇಂಡಿಯಾದ ತವರು ಋತುವಿಗೆ ಮುನ್ನ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ ನೀಡಿದ ಬಿಸಿಸಿಐ

    ನವದೆಹಲಿ: ಟೀಮ್ ಇಂಡಿಯಾ ಮುಂದಿನ ತವರು ಕ್ರಿಕೆಟ್ ಋತುವಿನಲ್ಲಿ 8 ತಿಂಗಳ ಅಂತರದಲ್ಲಿ ಆಡಲಿರುವ 21 ಪಂದ್ಯಗಳ ವೇಳಾಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದ್ದು, ಅದರ ಜತೆಯಲ್ಲೇ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿಯನ್ನೂ ನೀಡಿದೆ. ಈ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಪ್ರವೇಶ ನೀಡುವ ಆಶಾವಾದ ಹೊಂದಿರುವುದಾಗಿ ಬಿಸಿಸಿಐ ತಿಳಿಸಿದೆ. ಹಾಲಿ ನಡೆಯುತ್ತಿರುವ ವ್ಯಾಪಕ ವ್ಯಾಕ್ಸಿನೇಷನ್ ಪ್ರಕ್ರಿಯೆ ಇದಕ್ಕೆ ಪೂರಕ ವಾತಾವರಣ ನಿರ್ಮಿಸಿದೆ ಎಂದು ಮಂಡಳಿ ಕಾರ್ಯದರ್ಶಿ ಜಯ್ ಷಾ ಹೇಳಿದ್ದಾರೆ.

    ಭಾರತ ತಂಡ ಮುಂದಿನ ನವೆಂಬರ್‌ನಿಂದ 2022ರ ಜೂನ್ ನಡುವೆ ತವರಿನಲ್ಲಿ ಪ್ರವಾಸಿ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಒಟ್ಟು 14 ಟಿ20, 4 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳನ್ನು ಆಡಲಿದೆ. ವ್ಯಾಕ್ಸಿನೇಷನ್‌ನಿಂದ ಕೋವಿಡ್ ಭಯ ದೂರವಾಗುತ್ತಿದ್ದು, ತವರು ಋತುವಿನಲ್ಲಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ಮರಳಬಹುದು ಎಂದು ಜಯ್ ಷಾ ಹೇಳಿದ್ದಾರೆ. ಲಸಿಕೆ ಹಾಕಿಸಿಕೊಂಡ ಪ್ರೇಕ್ಷಕರಿಗೆ ಮಾತ್ರ ಸ್ಟೇಡಿಯಂಗೆ ಪ್ರವೇಶ ಲಭಿಸುವ ಸಾಧ್ಯತೆ ಇದೆ.

    ಈ ಮುನ್ನ ಫೆಬ್ರವರಿ-ಮಾರ್ಚ್‌ನಲ್ಲಿ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳೆ ಶೇ. 50 ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಪ್ರವೇಶ ನೀಡಲಾಗಿತ್ತು. ಆದರೆ ಬಳಿಕ ದೇಶದಲ್ಲಿ ಕರೊನಾ ಪ್ರಕರಣ ಏರಿಕೆಯಾದ ಕಾರಣ, ಏಪ್ರಿಲ್‌ನಲ್ಲಿ ನಡೆದ ಐಪಿಎಲ್ 14ನೇ ಆವೃತ್ತಿಯ ಮೊದಲ ಭಾಗಕ್ಕೆ ಪ್ರೇಕ್ಷಕರನ್ನು ನಿರ್ಬಂಧಿಸಲಾಗಿತ್ತು.

    ಟೀಮ್ ಇಂಡಿಯಾ ತವರು ವೇಳಾಪಟ್ಟಿ ಪ್ರಕಟ
    ಭಾರತ ತಂಡದ ತವರು ಋತುವಿನ ವೇಳಾಪಟ್ಟಿಯನ್ನು ಬಿಸಿಸಿಐ ಸೋಮವಾರವಷ್ಟೇ ಪ್ರಕಟಿಸಿತ್ತು. ಯುಎಇಯಲ್ಲಿ ಟಿ20 ವಿಶ್ವಕಪ್ ಮುಕ್ತಾಯಗೊಂಡ ಬೆನ್ನಲ್ಲೇ ಭಾರತ ತಂಡ ನವೆಂಬರ್-ಡಿಸೆಂಬರ್‌ನಲ್ಲಿ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 3 ಟಿ20, 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಬಳಿಕ ಡಿಸೆಂಬರ್-ಜನವರಿಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿಂದ ಮರಳಿದ ಬೆನ್ನಲ್ಲೇ ಫೆಬ್ರವರಿಯಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ 3 ಏಕದಿನ, 3 ಟಿ20 ಪಂದ್ಯಗಳನ್ನು ಆಡಲಿದೆ. ಬಳಿಕ ಫೆಬ್ರವರಿ-ಮಾರ್ಚ್‌ನಲ್ಲಿ ಶ್ರೀಲಂಕಾ ವಿರುದ್ಧ 2 ಟೆಸ್ಟ್, 3 ಏಕದಿನ ಆಡಲಿದೆ. ನಂತರ ಏಪ್ರಿಲ್-ಮೇನಲ್ಲಿ ಐಪಿಎಲ್ 15ನೇ ಆವೃತ್ತಿ ನಡೆದ ಬಳಿಕ ಜೂನ್‌ನಲ್ಲಿ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5 ಟಿ20 ಪಂದ್ಯ ಆಡುವ ಮೂಲಕ 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಲಿದೆ.

    ಬೆಂಗಳೂರಿನಲ್ಲಿ ಟೆಸ್ಟ್, ಟಿ20
    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2 ಪಂದ್ಯ ನಿಗದಿಯಾಗಿದೆ. ಫೆಬ್ರವರಿ 25ರಿಂದ ಮಾರ್ಚ್ 1ರವರೆಗೆ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯಲಿದೆ. ಜೂನ್ 12ರಂದು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯ 2ನೇ ಪಂದ್ಯ ನಡೆಯಲಿದೆ. ಇತರ ಪಂದ್ಯಗಳು ಜೈಪುರ, ಕೋಲ್ಕತ, ಕಾನ್ಪುರ, ಮುಂಬೈ, ಕಟಕ್, ವಿಶಾಖಪಟ್ಟಣ, ತಿರುವನಂತಪುರ, ಮೊಹಾಲಿ, ಧರ್ಮಶಾಲಾ, ಲಖನೌ, ಚೆನ್ನೈ, ನಾಗ್ಪುರ, ರಾಜ್‌ಕೋಟ್, ದೆಹಲಿಯಲ್ಲಿ ನಿಗದಿಯಾಗಿವೆ.

    ಭಾರತ ತಂಡದ 2021-22ರ ತವರಿನ ವೇಳಾಪಟ್ಟಿ:

    ನ್ಯೂಜಿಲೆಂಡ್ ವಿರುದ್ಧ: ನ. 17: ಮೊದಲ ಟಿ20 (ಜೈಪುರ); ನ. 19: 2ನೇ ಟಿ20 (ರಾಂಚಿ); ನ. 21: 3ನೇ ಟಿ20 (ಕೋಲ್ಕತ); ನ. 25-29: ಮೊದಲ ಟೆಸ್ಟ್ (ಕಾನ್ಪುರ); ಡಿ.3-7: 2ನೇ ಟೆಸ್ಟ್ (ಮುಂಬೈ).

    ವೆಸ್ಟ್ ಇಂಡೀಸ್ ವಿರುದ್ಧ: 2022, ಫೆ . 6: ಮೊದಲ ಏಕದಿನ (ಅಹಮದಾದ್ಬಾ ಫೆ. 9: 2ನೇ ಏಕದಿನ (ಜೈಪುರ); ಫೆ. 12: 3ನೇ ಏಕದಿನ (ಕೋಲ್ಕತ); ಫೆ. 15: ಮೊದಲ ಟಿ20 (ಕಟಕ್); ಫೆ. 18: 2ನೇ ಟಿ20 (ವಿಶಾಖಪಟ್ಟಣ); ಫೆ. 20: 3ನೇ ಟಿ20 (ತಿರುವನಂತಪುರ).

    ಶ್ರೀಲಂಕಾ ವಿರುದ್ಧ: ಫೆ. 25-ಮಾ.1: ಮೊದಲ ಟೆಸ್ಟ್ (ಬೆಂಗಳೂರು); ಮಾ.5-9: 2ನೇ ಟೆಸ್ಟ್ (ಮೊಹಾಲಿ); ಮಾ. 13: ಮೊದಲ ಟಿ20 (ಮೊಹಾಲಿ); ಮಾ. 15: 2ನೇ ಟಿ20 (ಧರ್ಮಶಾಲಾ); ಮಾ. 18: 3ನೇ ಟಿ20 (ಲಖನೌ).

    ದಕ್ಷಿಣ ಆಫ್ರಿಕಾ ವಿರುದ್ಧ: ಜೂ. 9: ಮೊದಲ ಟಿ20 (ಚೆನ್ನೈ); ಜೂ.12: 2ನೇ ಟಿ20 (ಬೆಂಗಳೂರು); ಜೂ. 14: 3ನೇ ಟಿ20 (ನಾಗ್ಪುರ); ಜೂ. 17: 4ನೇ ಟಿ20 (ರಾಜ್‌ಕೋಟ್); ಜೂ. 19: 5ನೇ ಟಿ20 (ದೆಹಲಿ).

    ಭಾರತ ತಂಡಕ್ಕೆ ಕಡೆಗಣನೆ, ಹೈಕೋರ್ಟ್ ಮೆಟ್ಟಿಲೇರಿದ ಟಿಟಿ ಆಟಗಾರ್ತಿ ಮನಿಕಾ ಬಾತ್ರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts