More

    ಸಿರಿಧಾನ್ಯ ರಫ್ತು ಪ್ರಮಾಣ ದುಪ್ಪಟ್ಟು ಗುರಿ: ಸಚಿವ ಚಲುವರಾಯಸ್ವಾಮಿ ಹೇಳಿಕೆ

    ಬೆಂಗಳೂರು: ರಾಜ್ಯದಲ್ಲಿ ಸಿರಿಧಾನ್ಯದ ಉತ್ಪಾದನೆ ಹೆಚ್ಚಿಸುವ ಜತೆಗೆ ರಫ್ತು ಪ್ರಮಾಣವನ್ನು ದುಪ್ಪಟ್ಟುಗೊಳಿಸಲು ಗುರಿಯನ್ನು ಸರ್ಕಾರ ಹೊಂದಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಹಿಂದಿನಿಂದಲೂ ಸಿರಿಧಾನ್ಯಗಳ ಬೆಳೆಗಳಿಗೆ ಪ್ರಸಿದ್ಧಿ ಪಡೆದಿದೆ. ಇದರಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಮಿಲೆಟ್ ಹೆಸರಿನಿಂದ ನಗರವಾಸಿಗಳಲ್ಲಿ ಜನಪ್ರಿಯವಾಗುತ್ತಿದೆ. 2022-23ನೇ ಸಾಲಿನಲ್ಲಿ ರಾಜ್ಯದಿಂದ 36 ಕೋಟಿ ರೂ. ಮೊತ್ತದ 7,764 ಮೆಟ್ರಿಕ್ ಟನ್ ಸಿರಿಧಾನ್ಯ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳು ರಫ್ತಾಗಿವೆ. ಇದನ್ನು ಎರಡೇ ವರ್ಷದಲ್ಲಿ 2-3 ಪಟ್ಟು ಹೆಚ್ಚಿಸಲು ಇಲಾಖೆ ಕ್ರಮ ಕೈಗೊಂಡಿದೆ ಎಂದರು.

    ರಾಜ್ಯದಲ್ಲಿ ಸದ್ಯ 15.61 ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದೆ. ಈ ಪ್ರಮಾಣವನ್ನು 25 ಹೆಕ್ಟೇರ್‌ಗೆ ಹಿಗ್ಗಿಸಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಜತೆಗೆ ಒಂದು ಹೆಕ್ಟೇರ್ ಉತ್ಪಾದನೆಗೆ 10 ಸಾವಿರ ರೂ. ಪ್ರೋತ್ಸಾಹಧನ ನೀಡುತ್ತಿದ್ದು, ಶೀಘ್ರವೇ ಇನ್ನಷ್ಟು ಮೊತ್ತ ಹೆಚ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.

    ಆಹಾರ ಸಂಸ್ಕರಣಾ ವಲಯದಲ್ಲಿ ಶೇ.26 ಪ್ರಗತಿ:

    ಆಹಾರ ಸಂಸ್ಕರಣೆ ಹಾಗೂ ಕಟಾವು ತಂತ್ರಜ್ಞಾನ ಇಲಾಖೆಯ ವಿಶೇಷ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಮಾತನಾಡಿ, ದೇಶದ ರ್ತು ಚಟುವಟಿಕೆ ಉತ್ತಮ ಸ್ಥಿತಿಯಲ್ಲಿದ್ದು, ಆಹಾರ ಸಂಸ್ಕರಣಾ ವಲಯದಲ್ಲಿ ಶೇ.26 ಪ್ರಗತಿ ಸಾಧಿಸಿದೆ. ಈ ವಲಯದಲ್ಲಿ ಇನ್ನಷ್ಟು ಪ್ರಗತಿ ಹೊಂದಲು ವಿುಲಾವಕಾಶ ಇದ್ದು, ಮುಂದಿನ ದಿನಗಳಲ್ಲಿ ರಫ್ತಿನಲ್ಲಿ ಅಗ್ರ ಪಾಲು ಹೊಂದುವ ಆಶಯ ಇದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಕೃಷಿ ಇಲಾಖಾ ಕಾರ್ಯದರ್ಶಿ ವಿ.ಅನ್ಬುಕುಮಾರ್, ಆಯುಕ್ತ ಎನ್.ವೈ. ಪಾಟೀಲ್, ನಿರ್ದೇಶಕರಾದ ಡಾ. ಜಿ.ಟಿ. ಪುತ್ರ, ಬಿ.ವೈ. ಶ್ರೀನಿವಾಸ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

    5ರಿಂದ ಸಿರಿಧಾನ್ಯ ಸಾವಯುವ ಮೇಳ:

    ನಾಗರಿಕರಲ್ಲಿ ಆರೋಗ್ಯ ದೃಷ್ಟಿಯಿಂದ ಮಿಲಟ್ ಬಳಕೆ ಕುರಿತು ಅರಿವು ಮೂಡಿಸಲು ಜ.5ರಿಂದ 7ರ ವರೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ‘ಸಿರಿಧಾನ್ಯ ಹಾಗೂ ಸಾವಯುವ-2024’ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಸಂಘಟಿಸಲಾಗಿದೆ. ಮೇಳಕ್ಕೆ ರಾಜ್ಯ ಕೃಷಿ ಇಲಾಖೆ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ (ಕೆಪೆಕ್) ಸಹಯೋಗ ಪಡೆಯಲಾಗಿದೆ.

    ಶುಕ್ರವಾರ (ಜ.5) ಬೆಳಗ್ಗೆ 11 ಗಂಟೆಗೆ ಮೇಳವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವರಾದ ನಿರ್ಮಲಾ ಸೀತರಾಮನ್, ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್ ಪಾಲ್ಗೊಳ್ಳಲಿದ್ದಾರೆ. ಜತೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಡಾ. ಸಿ.ಎನ್.ಅಶ್ವತ್ಥನಾರಾಯಣ ಭಾಗಿಯಾಗಲಿದ್ದಾರೆ. ಸಮಾರೋಪದಲ್ಲಿ (ಜ.7) ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಭಗವಂತ ಖೂಬಾ ಪಾಲ್ಗೊಳ್ಳಲಿದ್ದಾರೆ.

    300 ಮಳಿಗೆ, 1000 ಪ್ರತಿನಿಧಿ:

    ಸಿರಿಧಾನ್ಯ ಮೇಳಕ್ಕೆ ಭಾರತವು ಸೇರಿ ಜಪಾನ್, ಅರಬ್ ಸಹಿತ ಇತರ ದೇಶಗಳ ಕೃಷಿ ವಿಜ್ಞಾನಿಗಳು, ಪರಿಣಿತರು ಪಾಲ್ಗೊಳ್ಳಲಿದ್ದಾರೆ. ಜತೆಗೆ ಸಿರಿಧಾನ್ಯ ಬೆಳೆಯುವಲ್ಲಿ ಮುಂಚೂಣಿಯಲ್ಲಿರುವ ಓಡಿಶಾ, ಕೇರಳ, ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳಿಂದ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಉತ್ಪನ್ನಗಳ ಪ್ರದರ್ಶನಕ್ಕಾಗಿ 300ಕ್ಕೂ ಅಧಿಕ ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ. ಇದರಲ್ಲಿ ಕರ್ನಾಟಕದ ಸಿರಿಧಾನ್ಯ/ಸಾವಯವ ಉತ್ಪನ್ನಗಳ ಪ್ರದರ್ಶನಕ್ಕೆ 100 ಮಳಿಗೆ ಮೀಸಲಿಡಲಾಗಿದೆ. ಸಿರಿಧಾನ್ಯ ತಿನಿಸು ಪರಿಚಯಿಸುವುದಕ್ಕಾಗಿ ಪ್ರತ್ಯೇಕ ಆಹಾರ ಮಳಿಗೆಗಳನ್ನು ತೆರೆಯಲಾಗುತ್ತದೆ. ಮೇಳದಲ್ಲಿ ಉದ್ಯಮಿಗಳು ಸೇರಿದಂತೆ ಪ್ರಗತಿಪರ ರೈತರಿಗೂ ಕಾರ್ಯಗಾರ ನಿಗದಿ ಮಾಡಲಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts