More

    ಮುಂದಿನ ದಶಕದೊಳಗೆ ವಿಶ್ವದ ಶೇ.40 ಹಾಲು ಉತ್ಪಾದನೆಗೆ ಗುರಿ

    ಬೆಂಗಳೂರು: ಮುಂದಿನ ದಶಕದೊಳಗೆ ಭಾರತವು ವಿಶ್ವದ ಶೇ.40 ಪ್ರಮಾಣದ ಹಾಲು ಉತ್ಪಾದಿಸುವ ಗುರಿಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆಯತ್ತ ಲಕ್ಷ್ಯ ಹರಿಸಬೇಕಿದೆ ಎಂದು ಭಾರತೀಯ ಡೇರಿ ಸಂಘದ ಅಧ್ಯಕ್ಷ ಡಾ. ಆರ್.ಎಸ್.ಸೋದಿ ತಿಳಿಸಿದರು.

    ನಗರದ ಪಶುವೈದ್ಯಕೀಯ ಕಾಲೇಜಿನ ಆವರಣದಲ್ಲಿರುವ ಕೆವಿಸಿ ಸಭಾಂಗಣದಲ್ಲಿ ಭಾರತೀಯ ಡೇರಿ ಸಂಘ (ಐಡಿಎ) ಶನಿವಾರ ಆಯೋಜಿಸಿದ್ದ ‘ಅತ್ಯುತ್ತಮ ಮಹಿಳಾ ಹೈನುಗಾರ್ತಿ ಪ್ರಶಸ್ತಿ’ ವಿತರಣಾ ಸಮಾರಂಭದಲ್ಲಿ ಹೈನು ಸಾಧಕಿಯರನ್ನು ಸನ್ಮಾನಿಸಿ ಮಾತನಾಡಿದರು.

    ಡೇರಿ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡ ಕಾರಣ ದೇಶವು 60ರ ದಶಕದಲ್ಲಿದ್ದ ಹಾಲು ಕೊರತೆಯನ್ನು ನೀಗಿಸಿಕೊಂಡು ಪ್ರಸ್ತುತ ಸ್ವಾವಲಂಬನೆ ಸಾಧಿಸಲಾಗಿದೆ. ಇದರ ಪರಿಣಾಮ ಭಾರತದ ಜಿಡಿಪಿಗೆ ಡೇರಿ ಕ್ಷೇತ್ರವು ಶೇ.4 ಪ್ರಮಾಣದ ಕೊಡುಗೆ ನೀಡಿದೆ. ವಿಶ್ವದ ಹಾಲು ಉತ್ಪಾದನೆಯಲ್ಲಿ ಶೇ.25 ಪಾಲು ಹೊಂದಿದ್ದು, ಮುಂದಿನ ದಶಕದೊಳಗೆ ಶೇ.40ಕ್ಕೆ ಏರಿಸುವ ಗುರಿಯನ್ನು ದಾಟಬೇಕಿದೆ ಎಂದು ತಿಳಿಸಿದರು.

    ರೈತರ ಆದಾಯ ದುಪಟ್ಟಿಗೆ ಡೇರಿ ಕೊಡುಗೆ:

    ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಸಿ.ವೀರಣ್ಣ ಮಾತನಾಡಿ, ರೈತರ ಆದಾಯ ದುಪಟ್ಟುಗೊಳಿಸುವ ನಿಟ್ಟಿನಲ್ಲಿ ಡೇರಿ ವಲಯದ ಕೊಡುಗೆ ಸಾಕಷ್ಟಿದೆ. ರೈತರು ಹೈನುಗಾರಿಕೆಯಲ್ಲಿ ಹೊಸ ತಾಂತ್ರಿಕತೆಯನ್ನು ಅಳವಡಿಸಿಕೊಂಡಲ್ಲಿ ಹಾಲು ಉತ್ಪಾದನೆಯಲ್ಲಿ ಹೆಚ್ಚಳ ಹಾಗೂ ಗುಣಮಟ್ಟ ಹೆಚ್ಚಿಸುವಲ್ಲಿ ಇನ್ನಷ್ಟು ಸಾಧನೆ ಮಾಡಬಹುದಾಗಿದೆ ಎಂದು ಕಿವಿಮಾತು ಹೇಳಿದರು.

    ಕಾರ್ಯಕ್ರಮದಲ್ಲಿ ಭಾರತೀಯ ಡೇರಿ ಸಂಘದ (ದಕ್ಷಿಣ ವಲಯ) ಅಧ್ಯಕ್ಷ ಡಾ. ಸತೀಶ್ ಕುಲಕರ್ಣಿ, ಡಿಐಸಿ ಮಹಾಪ್ರಧಾನ ಕಾರ್ಯದರ್ಶಿ ಚಾರ್ಲ್ಸ್, ರಾಜೇಶ್ವರ ರಾವ್ ಹಾಗೂ ಇತರ ಅಧಿಕಾರಿಗಳಿದ್ದರು.

    ಐವರು ಹೈನುಗಾರ್ತಿಯರಿಗೆ ಪ್ರಶಸ್ತಿ:

    ಇದೇ ವೇಳೆ ಡೇರಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಎ.ಎನ್.ರಾಜೇಶ್ವರಿ (ಕರ್ನಾಟಕ), ಎ. ಶ್ರೀಪದ್ಮ (ಆಂಧ್ರಪ್ರದೇಶ), ಡಿ.ಪದ್ಮ (ತೆಲಂಗಾಣ), ಲೀಮಾ ಆರ್ (ಕೇರಳ) ಹಾಗೂ ಪರಿಮಳ ವಿಜಯರಮೇಶ್ (ತಮಿಳುನಾಡು) ಅವರಿಗೆ ‘ಅತ್ಯುತ್ತಮ ಮಹಿಳಾ ಹೈನುಗಾರ್ತಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts