More

    ಆಗುಂಬೆಯಲ್ಲಿ ಸೈನಿಕ ತರಬೇತಿ ಶಾಲೆ

    ರಿಪ್ಪನ್​ಪೇಟೆ: ಆಗುಂಬೆಯಲ್ಲಿ 100 ಎಕರೆ ಜಾಗದಲ್ಲಿ ಸೈನಿಕ ತರಬೇತಿ ಶಾಲೆ ಆರಂಭಿಸಲು ಯೋಜನೆ ರೂಪಿಸಿದ್ದು ಶೀಘ್ರ ಮಂಜೂರಾತಿ ದೊರೆಯಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ಹೆದ್ದಾರಿಪುರ ಮತ್ತು ಹುಂಚಾ ಗ್ರಾಪಂ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಇದರ ಜತೆಗೆ ಅಬ್ದುಲ್ ಕಲಾಂ ಅವರ ಕನಸಿನಂತೆ ವಿದ್ಯಾರ್ಥಿಗಳ ಮತ್ತು ಯುವ ವಿಜ್ಞಾನಿಗಳ ಅಧ್ಯಯನ, ಸಂಶೋಧನೆಗಾಗಿ ಶಿವಮೊಗ್ಗದ ರಾಗಿಗುಡ್ಡದಲ್ಲಿ ಸಂಶೋಧನಾ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದರು.

    ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ಜನರಿಗೆ ತಲುಪಿಸಬೇಕು ಎಂಬುದು ಧ್ಯೇಯೋದ್ದೇಶವಾಗಿದ್ದು ಪ್ರಸ್ತುತ ಇಂತಹ ಆಶಯಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈಡೇರಿಸುತ್ತಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

    ಜಿಲ್ಲೆಯ ಸಮಗ್ರ ಅಭಿವೃದ್ಧಿ ಪರ್ವ ಆರಂಭವಾಗಿದೆ. ರೈಲ್ವೆ ಯೋಜನೆ, ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದೆ. ಸಂಪರ್ಕ ರಸ್ತೆಗಳ ಅಭಿವೃದ್ಧಿಗಾಗಿ ಕೇಂದ್ರದಿಂದ 190 ಕಿಮೀ ರಸ್ತೆಗೆ 114 ಕೋಟಿ ರೂ. ಅನುದಾನ ಮಂಜೂರಾಗಿದ್ದು ಎಲ್ಲ ಕಾಮಗಾರಿಗಳು ಪ್ರಾರಂಭವಾಗಿವೆ. ನೂತನ ತಂತ್ರಜಾನದಿಂದ ದೇಶದ ಎರಡನೇ ದೊಡ್ಡ ಸೇತುವೆ ಸಿಗಂದೂರು ಸೇತುವೆ ಆಗಿರುವುದು ನಮ್ಮ ಭಾಗ್ಯ ಎಂದರು.

    ಶಾಸಕ ಹಾಗೂ ಗೃಹಮಂಡಳಿ ಅಧ್ಯಕ್ಷ ಆರಗ ಜ್ಞಾನೇಂದ್ರ ಮಾತನಾಡಿ, ಈ ಭಾಗದಲ್ಲಿ ಅನಾಥ ಸ್ಥಿತಿ ಬರಲು ಬಿಡುವುದಿಲ್ಲ ಎಂದು ಜನರಿಗೆ ಭರವಸೆ ನೀಡಿದ್ದೆ. ಅದರಂತೆ ನಡೆಯುತ್ತಿದ್ದೇನೆ. ಈ ಎರಡು ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ, ಸೇತುವೆ ಇನ್ನಿತರ ಅಭಿವೃದ್ಧಿಗಾಗಿ ಹತ್ತು ಕೋಟಿ ರೂ ಕಾಮಗಾರಿ ಆರಂಭ ಮಾಡಲಾಗಿದೆ. ಅಭಿವೃದ್ಧಿಯ ಮೂಲಕ ಜನರನ್ನು ಸಂತೋಷಪಡಿಸುವ ಅವಕಾಶ ಸಿಕ್ಕಿದೆ ಎಂದರು.

    6.47 ಕೋಟಿ ರೂ. ಕಗ್ಗಲಿಜೆಡ್ಡು, ಕಲ್ಲೂರು, ಬಿದರಹಳ್ಳಿ ಸಂಪರ್ಕ ರಸ್ತೆ, 1 ಕೋಟಿ ರೂ. ವೆಚ್ಚದಲ್ಲಿ ಹುಂಚದ ಎಮ್ಮೆಗುಂಡಿ ಸೇತುವೆ, ನಾಗರಹಳ್ಳಿ ನಾಗೇಂದ್ರಸ್ವಾಮಿ ದೇವಸ್ಥಾನದ ಸಭಾಭವನ, ಕಡಸೂರು ರಸ್ತೆ ನಿರ್ಮಾಣ ಇನ್ನಿತರೆ ಕಾಮಗಾರಿಗಳು ಶಂಕುಸ್ಥಾಪನೆ ನೆರವೇರಿಸಲಾಯಿತು. ಜಿಪಂ ಸದಸ್ಯೆ ಶ್ವೇತಾಬಂಡಿ, ತಾಪಂ ಅಧ್ಯಕ್ಷ ವೀರೇಶ ಆಲುವಳ್ಳಿ, ಸದಸ್ಯ ವಾಸಪ್ಪಗೌಡ, ಮುಖಂಡರಾದ ಬೇಗುವಳ್ಳಿ ಸತೀಶ್, ಎಂ.ಬಿ.ಮಂಜುನಾಥ್, ಕಲ್ಲೂರು ನಾಗೇಂದ್ರ, ದೇವಾನಂದ್, ಸಾಲೆಕೊಪ್ಪ ರಾಮಚಂದ್ರ, ಎ.ಟಿ.ನಾಗರತ್ನಮ್ಮ, ಗಿರೀಶ್ ಜಂಬಳ್ಳಿ, ಗುಂಡಣ್ಣ, ಗೇರುಗಲ್ಲು ಸತೀಶ್, ವರ್ತೆಶ್, ಸತೀಶ್ ಭಟ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts