More

    ಆಗುಂಬೆ ಘಾಟಿ ರಸ್ತೆಗೆ ಗುಡ್ಡ ಕುಸಿತ

    ಉಡುಪಿ: ಜಿಲ್ಲೆಯಲ್ಲಿ ಮಳೆ ಪ್ರಮಾಣ ಕ್ಷೀಣಿಸಿದ್ದು, ಗುರುವಾರ ತಡರಾತ್ರಿ, ಶುಕ್ರವಾರ ಸಾಧಾರಣ ಮಳೆ ಸುರಿದಿದೆ. ಕೆಲವು ಪ್ರದೇಶಗಳಲ್ಲಿ ಗಾಳಿ, ಮಳೆ ಜೋರಾಗಿದ್ದು, ಉಡುಪಿ ಕಡೆಯಿಂದ ಸಾಗುವಾಗ ಆಗುಂಬೆ ಘಾಟಿ ಮೂರನೇ ತಿರುವಿನಲ್ಲಿ ಗುಡ್ಡ ಜರಿದಿದೆ.

    ಉಡುಪಿ ಕಡೆಯಿಂದ ಆಗುಂಬೆ ಘಾಟಿ ಮೂರನೇ ತಿರುವಿನಲ್ಲಿ ಗುಡ್ಡ ಜರಿದಿದ್ದು, ರಸ್ತೆ ಮೇಲೆ ಮಣ್ಣು ಹರಡಿಕೊಂಡಿದೆ, ಇನ್ನೂ ಹೆಚ್ಚಿನ ಭಾಗ ಜರಿಯುವ ಸಾಧ್ಯತೆ ದಟ್ಟವಾಗಿದೆ. ಉಡುಪಿ-ಶಿವಮೊಗ್ಗ ಜಿಲ್ಲಾಡಳಿತ ಆಗುಂಬೆ ಮಾರ್ಗದಲ್ಲಿ ಮೊದಲೇ ಭಾರಿ ವಾಹನ ಸಂಚಾರ ನಿಷೇಧಿಸಿರುವುದರಿಂದ ಅನಾಹುತ ಸಂಭವಿಸಿಲ್ಲ. ಸದ್ಯ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

    ತಗ್ಗು ಪ್ರದೇಶ ಜಲಾವೃತ: ಕುಂದಾಪುರ ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿದ್ದು, ಹಕ್ಲಾಡಿ ಗ್ರಾಮ ಪಂಚಾಯಿತಿ ತೊಪ್ಲು ಚಿಲ್ಲಾರೆಗುಡ್ಡ ಕುಸಿದಿದ್ದು, ತಗ್ಗು ಪ್ರದೇಶದಲ್ಲಿ ನೆರೆ ನೀರು ನುಗ್ಗಿದೆ. ಕಾಪು ತಾಲೂಕು ಶಿರ್ವ ಗ್ರಾಮದ ರಾಗು ಪೂಜಾರ್ತಿ ಎಂಬುವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ಉಡುಪಿ – 64, ಕುಂದಾಪುರ -83, ಕಾರ್ಕಳ-27 ಮಿ .ಮೀ ಮಳೆಯಾಗಿದ್ದು, ಜಿಲ್ಲೆಯಲ್ಲಿ 58ಮಿ .ಮೀ ಮಳೆ ಸುರಿದಿದೆ.

    ಮುನ್ಸೂಚನೆ ಇದ್ದರೂ ಭಾರಿ ಮಳೆ ಇಲ್ಲ: ಕರಾವಳಿಯಲ್ಲಿ ಭಾರಿ ಮಳೆಯ ಮುನ್ಸೂಚನೆ ಇತ್ತಾದರೂ, ದ.ಕ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗಿನಿಂದ ರಾತ್ರಿವರೆಗೆ ಮಳೆ ಬಿಡುವು ನೀಡಿತ್ತು. ಮೋಡ ಕವಿದ ವಾತಾವರಣದೊಂದಿಗೆ ಒಂದೆರಡು ಬಾರಿ ಸಾಮಾನ್ಯ ಮಳೆಯಷ್ಟೇ ಸುರಿದಿದೆ. ಶನಿವಾರ ಬೆಳಗ್ಗಿನವರೆಗೆ ಆರೆಂಜ್ ಅಲರ್ಟ್ ಬಳಿಕ ಎರಡು ದಿನ ಯೆಲ್ಲೋ ಅಲರ್ಟ್ ಮಂದುವರಿಯಲಿದೆ. ಶುಕ್ರವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಜಿಲ್ಲೆಯ ಬಂಟ್ವಾಳ 22.3, ಬೆಳ್ತಂಗಡಿ 12.7, ಮಂಗಳೂರು 40.2, ಪುತ್ತೂರು 21, ಸುಳ್ಯ 33.8 ಮಿ.ಮೀ ಸಹಿತ ಸರಾಸರಿ 26 ಮಿ.ಮೀ. ಮಳೆ ಸುರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts