More

    ಹಡಿಲು ಗದ್ದೆಯೀಗ ಹಸಿರು ಹಸಿರು

    ಗಣೇಶ್ ಮಾವಂಜಿ ಸುಳ್ಯ

    ಹಲವು ವರ್ಷಗಳಿಂದ ಮೊಳಗದಿದ್ದ ಪಾಡ್ದನದ ಧ್ವನಿ ಕೇಳಿದಾಗ ಹಿರಿಯರು ಗದ್ದೆ ಬೇಸಾಯದ ಗತ ಜೀವನವನ್ನು ಮೆಲುಕು ಹಾಕಿದರೆ ಕಿರಿಯರಿಗೆ ಹೊಸತೊಂದು ಲೋಕಕ್ಕೆ ಹೋದ ಅನುಭವ. ಬ್ಯಾಗ್ ಹೆಗಲೇರಿಸಿ ಶಾಲೆಗೆ ಹೋಗುವ ಸುತ್ತುಮುತ್ತಲಿನ ಮಕ್ಕಳೆಲ್ಲ ಕರೊನಾ ಭಯದಿಂದ ಮನೆಯಲ್ಲೇ ಇರುವಂತಾದ್ದರಿಂದ ಈಗ ಬೇಸಾಯದ ಈ ಗದ್ದೆಯೇ ಅವರ ಸೆಲ್ಫಿಸ್ಪಾಟ್.

    ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಪೆರ್ದೋಡಿಯ ನಾರಾಯಣ ಶಿಬರೂರಾಯರ ಸುಮಾರು ಮೂರು ಎಕರೆ ಹೊಲ ಹಲವು ವರ್ಷಗಳಿಂದ ಹಡಿಲು ಬಿದ್ದಿತ್ತು. ಕೃಷಿ ಕಾಯಕಕ್ಕೆ ಅನುಭವಸ್ಥ ಕೂಲಿ ಕಾರ್ಮಿಕರ ಕೊರತೆ, ಭತ್ತ ಬೆಳೆಯಲು ತಗಲುವ ದುಬಾರಿ ವೆಚ್ಚ, ಆನೆ ದಾಳಿ, ಮಂಗಗಳ ಹಾವಳಿ ಜೊತೆಗೆ ಇತ್ತೀಚೆಗೆ ಹೆಚ್ಚಾಗುತ್ತಿರುವ ನವಿಲುಗಳ ಕಾಟವೂ ಗದ್ದೆ ಬೇಸಾಯಕ್ಕೆ ಮನ ಮಾಡದಂತೆ ಮಾಡಿತ್ತು. ಆದರೆ ಕಳೆದ ಬಾರಿ ಲಾಕ್‌ಡೌನ್ ವೇಳೆ ಇದೇ ಊರಿನ ಜನಾರ್ದನ ನಾಯ್ಕ ಎಂಬುವರು ಹಡಿಲು ಬಿದ್ದ ಗದ್ದೆಯಲ್ಲಿ ಬೇಸಾಯ ಮಾಡುವ ಬಯಕೆ ವ್ಯಕ್ತಪಡಿಸಿದಾಗ ಶಿಬರೂರಾಯರು ಒಪ್ಪಿಗೆ ನೀಡಿದ ಪರಿಣಾಮ ಈಗ ಎರಡನೇ ಬಾರಿ ಹಸಿರು ಬಸಿರೊಡೆಯುವಂತಾಗಿದೆ.

    ಪುರುಷರಿಗೆ ಗದ್ದೆ ಹುಣಿ ಕೆತ್ತುವ, ಕೆಸರು ಗದ್ದೆ ಹದ ಹದ ಮಾಡುವ ಸಂಭ್ರಮವಾದರೆ, ಮಹಿಳೆಯರಿಗೆ ಹಸುರಸುರಾಗಿ ನಳನಳಿಯುವ ನೇಜಿ ತೆಗೆದು ಅದನ್ನು ಮತ್ತೆ ನಾಜೂಕಾಗಿ ಗದ್ದೆಯಲ್ಲಿ ನೆಡುವ ಖುಷಿ. ಹೀಗೆ ಹಲವು ವರ್ಷಗಳಿಂದ ಮಾಡದ ಬೇಸಾಯ ಕೆಲಸದಲ್ಲಿ ಸಂಭ್ರಮದಿಂದ ಪುರುಷರು ಹಾಗೂ ಮಹಿಳೆಯರು ಸಂತಸದಿಂದಲೇ ತೊಡಗಿಕೊಂಡರು. ಸದಾ ಮೊಬೈಲ್ ಫೋನ್ ಒತ್ತಿಕೊಂಡು ವೃಥಾ ಕಾಲಹರಣ ಮಾಡುವ ಮಕ್ಕಳು ಕೆಸರು ಗದ್ದೆಯಲ್ಲಿ ಕಾಲೂರಿ ಸೆಲ್ಫಿ ಫೋಟೊಗೆ ಮುಖವೊಡ್ಡಿ ತಮ್ಮ ಖುಷಿಯನ್ನು ಸೆರೆಯಾಗಿಸಿದರು. ಹಲವು ವರ್ಷಗಳಿಂದ ಗದ್ದೆ ಹಡಿಲು ಬಿಟ್ಟ ಪರಿಣಾಮ ಕಳೆದ ಬಾರಿ ಇಳುವರಿ ನಿರೀಕ್ಷೆಯಷ್ಟು ಸಿಗದೆ ನಿರಾಸೆಯಾಗಿತ್ತು. ಆದರೆ ಈ ಬಾರಿ ಹಾಗಾಗದು ಎಂಬ ಆಶಾವಾದದಲ್ಲಿ ಇದ್ದೇನೆ ಎನ್ನುತ್ತಾರೆ ಬೇಸಾಯದ ಜವಾಬ್ದಾರಿ ಹೊತ್ತ ಜನಾರ್ದನ ನಾಯ್ಕರು.

    ನೇಜಿ ತೆಗೆಯುವ, ನೆಡುವ, ಭತ್ತ ಕೊಯ್ಲಿನಲ್ಲಿ ಸಿಗುವ ಆನಂದ ತೋಟದ ಕೆಲಸದಲ್ಲಿ ಸಿಗುವುದಿಲ್ಲ. ಆದರೆ ಇತ್ತೀಚೆಗೆ ಭತ್ತ ಬೆಳೆಯುವ ಗದ್ದೆಗಳು ಅಡಕೆ ಬೆಳೆಯುವ ತೋಟಗಳಾಗಿ ಪರಿವರ್ತನೆಗೊಂಡಿರುವುದರಿಂದ ಬೇಸಾಯದ ಕೆಲಸ ಸಿಗುತ್ತಿಲ್ಲ. ಕೆಲವೆಡೆ ಗದ್ದೆ ಬೇಸಾಯ ಇದ್ದರೂ ಯಂತ್ರಗಳ ಬಳಕೆಯೇ ಅಧಿಕ. ಹಾಗಾಗಿ ಪಾಡ್ದನ ಹೇಳಿಕೊಂಡು ಹಿಂದಿನಂತೆ ನಾಟಿ ಮಾಡುವ ಆ ಸಂಭ್ರಮ ಈಗಿಲ್ಲ. ಇಂದು ನಾಟಿ ಕೆಲಸ ಮಾಡಿ ಪಾಡ್ದನ ಹೇಳಿದಾಗ ಮನಸ್ಸಿಗೆ ಆದ ಸಂತಸ ವರ್ಣಿಸಲು ಅಸಾಧ್ಯ.
    -ಕಮಲ ಬೂಡು, ಪಾಡ್ದನ ಪ್ರವೀಣೆ

    ಗದ್ದೆ ಬೇಸಾಯ ಎಂಬುದೊಂದು ಅದ್ಭುತ ಅನುಭವ ನೀಡುವ ಕಾಯಕ. ಆದರೆ ಇತ್ತೀಚೆಗೆ ಕಾರ್ಮಿಕರ ಕೊರತೆ ಹಾಗೂ ಮಿತಿಮೀರಿದ ಉತ್ಪಾದನಾ ವೆಚ್ಚದ ಕಾರಣದಿಂದಾಗಿ ಬೇಸಾಯ ಕೆಲಸದಿಂದ ವಿಮುಖವಾಗುವಂತೆ ಮಾಡಿತ್ತು. ಆದರೆ, ಕರೊನಾ ಕಾರಣದಿಂದ ಹಡಿಲು ಬಿಟ್ಟ ಜಾಗದಲ್ಲಿ ಇದೀಗ ಹಸಿರು ನಳನಳಿಸುತ್ತಿರುವುದು ಕಂಡಾಗ ಸಿಗುವ ಆನಂದಕ್ಕೆ ಪಾರವೇ ಇಲ್ಲ.
    -ನಾರಾಯಣ ಶಿಬರೂರಾಯ, ಪೆರ್ದೋಡಿ, ಜಮೀನ್ದಾರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts