More

    ಅರಣ್ಯ ಬೆಳೆಗಳಲ್ಲಿ ಅಡಗಿದೆ ವರಮಾನದ ಗುಟ್ಟು, ಮಿಶ್ರ ತೋಟಗಾರಿಕೆಯಿಂದ ಆದಾಯ ದ್ವಿಗುಣ

    ಬಂಗಿ ದೊಡ್ಡಮಂಜುನಾಥ ಕಂಪ್ಲಿ
    ಮಿಶ್ರ ತೋಟಗಾರಿಕೆಯಿಂದ ಯಶ ಕಾಣಬಹುದು ಎಂದು ತಾಲೂಕಿನ ನಂ.10 ಮುದ್ದಾಪುರ ಗ್ರಾಮದ ರೈತ ಕಟ್ಟೆ ಶಂಕರ್ ಸಾಬೀತು ಪಡಿಸಿದ್ದಾರೆ.

    ಗೌರಮ್ಮ ಕೆರೆ ಪ್ರದೇಶದಲ್ಲಿ 3.82 ಎಕರೆ ಭೂಮಿಯಲ್ಲಿ 2000 ಯಾಲಕ್ಕಿ ಬಾಳೆ, 100 ನಿಂಬೆಗಿಡ, 500 ಅಡಿಕೆ, 60 ಸಫೋಟ, 60 ಸೀತಾಫಲ, 20 ತೆಂಗು, 5 ಚಕ್ಕೆ, 8 ನೇರಳೆ, 5 ಮಾವು, 5 ಪೇರಲ, 3 ಮೊಸಂಬಿ, 5 ಆ್ಯಪಲ್‌ಬೇರ್, 3 ಹಲಸು, 500 ಅರಿಶಿಣ, 50 ಗುಲಾಬಿ , 100 ಮೆಣಸಿನಬಳ್ಳಿಗಳನ್ನು ಸುಮಾರು 70 ರಕ್ತಚಂದನ, 80 ಟೀಕ್‌ವುಡ್, 25 ಸಿಲ್ವರ್‌ವುಡ್, 400 ಹೆಬ್ಬೇವು, 1000 ಮಹಾಗನಿ, 100 ಶ್ರೀಗಂಧ ಗಿಡಗಳನ್ನು ಬೆಳೆದು, ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

    ಇದೇ ತೋಟದಲ್ಲಿ ಮಳೆಗಾಲದಲ್ಲಿ ಎಲೆ ಬಳ್ಳಿ ಬೆಳೆಯುವ ಆಲೋಚನೆ ಹೊಂದಿರುವ ಇವರು, ಕೃಷಿಹೊಂಡ, ನೀರಿನ ತೊಟ್ಟಿ ಮೂಲಕ ಗಿಡ, ಮರ, ಬಳ್ಳಿಗಳಿಗೆ ಹನಿನೀರಾವರಿ ಪದ್ಧತಿಯಿಂದ ನೀರು ಹಾಯಿಸುತ್ತಿದ್ದಾರೆ. ತೋಟಕ್ಕೆ ಸಾವಯವ ಮತ್ತು ರಾಸಾಯನಿಕ ಗೊಬ್ಬರ ಬಳಿಸಲಾಗುತ್ತಿದ್ದು, ತೋಟದ ತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

    ಮೊದಲ ಪ್ರಯೋಗ

    ಅಡಕೆ ಸಸಿ ನಾಟಿ ಮಾಡಿ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬಯಲು ಸೀಮೆಯ 500 ಅಡಕೆ ಸಸಿಗಳನ್ನು ಚಿತ್ರದುರ್ಗದಿಂದ ತಂದಿದ್ದು, ಮೂರು ತಿಂಗಳ ಹಿಂದೆ ನಾಟಿ ಮಾಡಿದ್ದಾರೆ. ಅಡಕೆ ಸಸಿಗೆ ತೋಟದಲ್ಲಿ ಉದುರಿದ ಎಲೆ, ಕಸಕಡ್ಡಿ ತ್ಯಾಜ್ಯ ಗೊಬ್ಬರವನ್ನಾಗಿ ಮಾಡಿ ಹಾಕಿದ್ದಾರೆ.

    ಅಡಕೆಗೆ ನೆರಳಿನ ವಾತಾವರಣ ಬೇಕಿದ್ದು ಗಿಡದ ಬದಿ ಬೆಳೆದ ಹೆಬ್ಬೇವಿನಿಂದ ಉತ್ತಮ ನೆರಳು ನೀಡಿದ್ದಾರೆ. 3 ವರ್ಷಗಳ ಇದರ ಇಳುವರಿಯನ್ನೂ ಪಡೆಯಲಿದ್ದಾರೆ. ಮೂರು ವರ್ಷದ ಹೆಬ್ಬೇವು ಈಗ ಮರವಾಗಿದ್ದು, ಹುಬ್ಬಳ್ಳಿ, ಚಿತ್ರದುರ್ಗ ಸೇರಿ ಬೇರೆಡೆಗಳಿಂದ ಕೊಯ್ಲಿಗೆ ಬೇಡಿಕೆ ಬಂದಿವೆ. ಆದರೆ, 3 ವರ್ಷ ಬಿಟ್ಟರೆ ಇನ್ನಷ್ಟು ತೂಕ ಮತ್ತು ಉತ್ತಮ ದರ ಬರುವ ನಿರೀಕ್ಷೆಯಿದೆ.

    ನಿರಂತರ ಆದಾಯ

    ಋತುಮಾನಕ್ಕನುಸಾರವಾಗಿ ಲಿಂಬೆ, ಬಾಳೆ, ಸಫೋಟಾ, ಮೋಸಂಬಿ, ನೇರಳೆ, ಮಾವು, ಪೇರಲ, ಗುಲಾಬಿ ಬೆಳೆಯಿಂದ ನಿರಂತರ ಆದಾಯ ಬರುತ್ತಿದೆ. ಮುಖ್ಯವಾಗಿ ಯಾಲಕ್ಕಿ ಬಾಳೆ ಕೈ ಹಿಡಿದಿದ್ದು, ಇದರ ಆದಾಯವೇ ಸಿಂಹಪಾಲಾಗಿದೆ. ವಾರ್ಷಿಕ ತೋಟ ನಿರ್ವಹಣೆ ವೆಚ್ಚ ಒಂದೂವರೆ ಲಕ್ಷ ರೂಪಾಯಿಗಳಷ್ಟಾದರೆ, ಆದಾಯ ಎರಡೂವರೆಯಿಂದ ಮೂರು ಲಕ್ಷ ರೂ.ತನಕ ಬರುತ್ತದೆ.

    ಇದನ್ನೂ ಓದಿ: ಕಾಂಗ್ರೆಸ್​ ನಾಯಕಿ ನವ್ಯಶ್ರೀ ಪ್ರಕರಣಕ್ಕೆ ಟ್ವಿಸ್ಟ್​: ಬಂಧನದ ಭೀತಿಯಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ!

    ನಿರಂತರ ಆದಾಯಕ್ಕೆ ಮಿಶ್ರ ತೋಟಗಾರಿಕೆ ವರದಾನವಾಗಿದೆ. ನಿತ್ಯ ಆದಾಯ ತರುವ ತೋಟದ ಕೃಷಿಯೊಂದಿಗೆ ಭವಿಷ್ಯದಲ್ಲಿ ಆದಾಯ ತರುವ ಅರಣ್ಯ ತೋಟಗಾರಿಕೆಯನ್ನು ಅಳವಡಿಸಿಕೊಂಡಲ್ಲಿ ಜೇಬು ತುಂಬಾ ಹಣ ಕಾಣಬಹುದಾಗಿದೆ. ಹೆಬ್ಬೇವು, ರಕ್ತಚಂದನ, ಶ್ರೀಗಂಧ, ಮಹಾಗನಿಗಳು ಮುಂಬರುವ ವರ್ಷಗಳಲ್ಲಿ ಲಕ್ಷಾಂತರ ರೂ. ಲಾಭ ತರಲಿವೆ.

    ಅರಣ್ಯ ಬೆಳೆಗಳಲ್ಲಿ ಅಡಗಿದೆ ವರಮಾನದ ಗುಟ್ಟು, ಮಿಶ್ರ ತೋಟಗಾರಿಕೆಯಿಂದ ಆದಾಯ ದ್ವಿಗುಣ
    ನಂ.10ಮುದ್ದಾಪುರ ಗೌರಮ್ಮ ಕೆರೆ ಪ್ರದೇಶ ಬಳಿಯ ತೋಟದಲ್ಲಿ ಬೆಳೆದ ನಿಂಬೆಯೊಂದಿಗೆ ಅರಣ್ಯಮರಗಳು.

    ಕೇವಲ ಒಂದೇ ಬಗೆಯ ಬೆಳೆಯನ್ನು ಬೆಳೆಯಬಾರದು. ಮಿಶ್ರ ಕೃಷಿಯನ್ನು ಅನುಸರಿಸಿದಾಗ ಒಂದಲ್ಲ ಒಂದು ಬೆಳೆ ಕೈ ಹಿಡಿದು ಆದಾಯ ತಂದುಕೊಡುತ್ತದೆ. ಕೇವಲ ಸಾವಯವದಿಂದ ನಿರೀಕ್ಷಿತ ಇಳುವರಿ ಪಡೆಯಲು ಸಾಧ್ಯವಿಲ್ಲ. ರಾಸಾಯನಿಕ ಗೊಬ್ಬರವನ್ನೂ ಬಳಸಿದ್ದೇನೆ. ಉತ್ತಮ ಯೋಜನೆ ರೂಪಿಸಿಕೊಂಡು ಶ್ರಮವಹಿಸಿ ದುಡಿದರೆ ನಷ್ಟವಿಲ್ಲ. ತೋಟಗಾರಿಕೆ ಇಲಾಖೆಯ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು.
    ಕಟ್ಟೆ ಶಂಕರ್, ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ

    ಮಲೆನಾಡು ಅಡಕೆ, ಬಯಲು ಸೀಮೆ ಅಡಕೆ ವಿಧಗಳಿವೆ. ಭೀಮಸಮುದ್ರ, ಭರಮಸಾಗರ, ಚಿತ್ರದುರ್ಗ ಸೀಮೆಗಳಲ್ಲಿನ ಚನ್ನಗಿರಿ ಗೋಟ್ ತಳಿಯ ಬಯಲು ಸೀಮೆ ಅಡಕೆ ಸಸಿಗಳನ್ನು ಕಂಪ್ಲಿ ವಾತಾವರಣದಲ್ಲಿ ಬೆಳೆಸಬಹುದಾಗಿದೆ. ಅರಣ್ಯ ತೋಟಗಾರಿಕೆಗೆ ಭವಿಷ್ಯವಿದ್ದು, ರೈತರು ಮುನ್ನುಗ್ಗಬೇಕು. ಕಂಪ್ಲಿ ತಾಲೂಕಿನಲ್ಲಿ 15 ಎಕರೆ ಪ್ರದೇಶದಲ್ಲಿ ಅರಣ್ಯ ತೋಟಗಾರಿಕೆ ಬೆಳೆ ಇದೆ. ಇದು ಮತ್ತಷ್ಟು ಹೆಚ್ಚಳವಾಗಬೇಕಿದೆ. ಇದರೊಟ್ಟಿಗೆ ನಿರಂತರ ಆದಾಯ ತಂದುಕೊಡುವ ತರಕಾರಿ, ಹೂ, ಹಣ್ಣು ಬೆಳೆಯುವಲ್ಲಿ ರೈತರು ಜಾಗೃತಿವಹಿಸಬೇಕು.
    ಜೆ.ಶಂಕರ್, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ, ಹೊಸಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts