More

    ಜನಮತ|ಕೃಷಿಗೆ ಬೇಕು ಸೂಕ್ತ ಮಾರುಕಟ್ಟೆ

    ಅನ್ನದಾತನತ್ತ ಅನುಕಂಪವನ್ನೇನೋ ಧಾರಾಳವಾಗಿ ವ್ಯಕ್ತಪಡಿಸುತ್ತಾ ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಿರುವ ರಾಜಕೀಯ ನಾಯಕರನ್ನು ದಶಕಗಳಿಂದ ಸಹಿಸಿಕೊಂಡ ರೈತರ ಸಹನೆಯು ಕಟ್ಟೆಯೊಡೆದು, ರಾಷ್ಟ್ರರಾಜಧಾನಿಯಲ್ಲಿ ಕೋಲಾಹಲಕ್ಕೆ ಕಾರಣವಾಗಿ, ಎಲ್ಲರ ನಿದ್ದೆಗೆಡಿಸುತ್ತಿರುವುದು ಸದ್ಯದ ವಾಸ್ತವ ಚಿತ್ರಣ. ಸ್ವಾತಂತ್ರ್ಯದ ಜೊತೆಗೆ ಬಡತನವನ್ನು ಬಳುವಳಿಯಾಗಿ ಪಡೆದ ನಾವು ಇಂದು ಎಲ್ಲ ರಂಗಗಳಲ್ಲೂ ಉತ್ತುಂಗ ಸಾಧನೆಯೊಂದಿಗೆ ಗಣ್ಯ ರಾಷ್ಟ್ರಗಳ ಗುಂಪಿನಲ್ಲಿ ಗುರುತಿಸಿಕೊಂಡಿದ್ದೇವೆ. ಆದರೆ ನಮ್ಮ ಬಹುತೇಕ ರೈತರ ಬವಣೆಗಳು ಹಾಗೆಯೇ ಮುಂದುವರಿಯುತ್ತಿರುವುದು ಮಾತ್ರ ಸತ್ಯ. ದೇಶದ ಆರ್ಥಿಕತೆಯ ಸುಮಾರು ಅರ್ಧದಷ್ಟು ಪಸರಿಸಿ ಕೊಂಡಿರುವ ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರುವುದು ಸುಲಭದ ಮಾತಲ್ಲ. ಅಗಾಧ ಪ್ರಮಾಣದ ಬಂಡವಾಳ, ಪರಿಣತಿ, ಚಾಕಚಕ್ಯತೆ ಹೊಂದಿರುವ ಉದ್ದಿಮೆ ಕ್ಷೇತ್ರದ ದಿಗ್ಗಜರ ಸಹಯೋಗದಿಂದ ಮಾತ್ರ ಸಾಧನೆಯತ್ತ ಸಾಗಬಹುದು. ಅನೇಕ ಕೃಷಿ ಉತ್ಪನ್ನಗಳು, ವಿಶೇಷವಾಗಿ ತರಕಾರಿ, ಹಣ್ಣು ಹಂಪಲುಗಳು ಬೆಳೆದ ರೈತರಿಗೆ ಯಾವುದೇ ಆದಾಯ ತರದೆ ಹಾಳಾಗುತ್ತಿವೆ.

    ಮಾರುಕಟ್ಟೆಯ ಶಕ್ತಿ ಎಷ್ಟು ಅಗಾಧವಿದೆಯೆಂದು ತಿಳಿಯಲು ಕೋಕಾಕೋಲಾದಂತಹ ತಂಪು ಪಾನೀಯ ಕಂಪನಿಗಳ ಉದಾಹರಣೆಯೇ ಸಾಕು. ಆರೋಗ್ಯಕ್ಕೆ ಹಾನಿಕಾರಕ ಪಾನೀಯಗಳೇ ಈ ಪರಿ ಬಿಕರಿಯಾಗುವಾಗ, ಇನ್ನು ಜೀವಾಮೃತವಾದ ಎಳನೀರಿಗೆ (tender coconut) ಮಾರುಕಟ್ಟೆಯ ಮಾಂತ್ರಿಕಸ್ಪರ್ಶ ನೀಡಿದರೆ ಮಾರುಕಟ್ಟೆಯಲ್ಲಿ ಸಂಚಲನವಾಗಬಹುದಲ್ಲವೆ? ಇಂತಹ ಅದೆಷ್ಟೋ ಕೃಷಿ ಉತ್ಪನ್ನಗಳಿವೆ. ಅವಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ರೈತರ ಅಭ್ಯುದಯಕ್ಕೆ ಅಡಿಗಲ್ಲಾಗಬಹುದಲ್ಲವೇ? ಈ ನಿಟ್ಟಿನಲ್ಲಿ ದೂರಗಾಮಿ ದೃಷ್ಟಿಕೋನದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಮುದಾಯದ ಗುಂಪೊಂದು ಯಾವುದೇ ಸಮಜಾಯಿಶಿಗೆ ಕಿವಿಗೊಡದೆ ಹಠಸಾಧನೆಯಲ್ಲಿ ತೊಡಗಿರುವುದು ವಿಷಾದನೀಯ. ಈ ವಿಷಯ ಈಗಾಗಲೇ ಸವೋಚ್ಚ ನ್ಯಾಯಾಲಯದ ಅಂಗಳ ತಲುಪಿದೆ. ಸಮಗ್ರ ರೈತರ ಹಿತ ಕಾಪಾಡಲು ವೇದಿಕೆ ಸಜ್ಜಾಗಿದ್ದು, ಮೊಂಡು ವಾದ ಮಂಡಿಸುವವರ ಅಸಲಿಯತ್ತು ಅನಾವರಣಗೊಳ್ಳುವುದರಲ್ಲಿ ಅನುಮಾನವಿಲ್ಲ.

    | ಎಚ್.ರತ್ನಾಕರ ಶೆಟ್ಟಿ ಹಿರಿಯಡ್ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts