More

    ಹವಾಮಾನ ವೈಪರೀತ್ಯ, ತರಕಾರಿಗೆ ಸಂಚಕಾರ

    ಧನಂಜಯ ಗುರುಪುರ
    ಅಕಾಲಿಕ ಮಳೆ, ಹವಾಮಾನ ವೈಪರೀತ್ಯ ತರಕಾರಿ ಕೃಷಿಗೆ ಹೊಡೆತ ನೀಡಿದೆ. ಅಕಾಲಿಕ ಮಳೆ- ಮೋಡದ ವಾತಾವರಣ ಹಾಗಲಕಾಯಿ, ಹೀರೆ, ಸೋರೆಕಾಯಿ ಮುಂತಾದ ಬೆಳೆಗಳಿಗೆ ಪ್ರತಿಕೂಲವಾಗಿ ಪರಿಣಮಿಸಿದೆ. ಇದರಿಂದ ತರಕಾರಿ ಬೆಳೆಯುತ್ತಿರುವ ಕೃಷಿಕರು ನಷ್ಟ ಅನುಭವಿಸುವಂತಾಗಿದೆ.

    ಗುರುಪುರ ಏತಮೊಗರು ಪ್ರದೇಶದಲ್ಲಿ ಹಡೀಲು ಬಿದ್ದಿರುವ 30 ಎಕರೆ ಗುತ್ತಿಗೆ ಭೂಮಿಯಲ್ಲಿ ತರಕಾರಿ ಬೆಳೆಸುತ್ತಿರುವ ಕೊಲ್ಕತಾ ಮೂಲದ ಜಾಬೇದ್ ಅಲಿ ಪ್ರತಿಕೂಲ ಹವಾಮಾನದಿಂದ ನಷ್ಟ ಅನುಭವಿಸಿದ್ದಾರೆ. ಸೋರೆಕಾಯಿ, ಹೀರೆಕಾಯಿ, ಹಾಗಲಕಾಯಿ ಬೆಳೆದು ಫಸಲು ಕೊಡಬೇಕಾದ ಸಮಯದಲ್ಲಿ ಬಳ್ಳಿ ಕರಟಿ ಸಾಯುತ್ತಿವೆ.

    ಜಾಬೇದ್ ಆರು ವರ್ಷಗಳಿಂದ ಗುತ್ತಿಗೆ ಪಡೆದ ಗದ್ದೆಗಳಲ್ಲಿ ತರಕಾರಿ ಬೆಳೆಸುತ್ತಿದ್ದಾರೆ. ಈ ಬಾರಿ ಪಡವಲಕಾಯಿ, 4 ಎಕರೆ ಪ್ರದೇಶದಲ್ಲಿ ಹೀರೆ, 6 ಎಕರೆ ಕೊಲ್ಕತಾ ಬದನೆ, 4 ಎಕರೆಯಲ್ಲಿ ಸೋರೆಕಾಯಿ, ಹಸಿಮೆಣಸು, ಎಲೆಕೋಸು ಇತ್ಯಾದಿ ವೈವಿಧ್ಯಮಯ ತರಕಾರಿ ಬೆಳೆಸುತ್ತಿದ್ದಾರೆ. ಈ ಪೈಕಿ ಹಸಿಮೆಣಸು, ಬದನೆ ಬೆಳೆ ಉತ್ತಮವಾಗಿದ್ದರೂ, ಹೀರೆಕಾಯಿ, ಸೋರೆಕಾಯಿ ನೆಲಕಚ್ಚಿದೆ. ಮೋಡ, ಮಂಜಿನ ವಾತಾವರಣ, ಮಳೆಯಿಂದಾಗಿ ಬಳ್ಳಿಗಳು ಒಣಗಿವೆ.
    ಪ್ರತಿನಿತ್ಯ 20 ಕೆಲಸದಾಳುಗಳು, ಗೊಬ್ಬರ ಸೇರಿದಂತೆ ಲಕ್ಷಾಂತರ ರೂ. ವೆಚ್ಚ ಮಾಡಿದ್ದರೂ, ಹವಾಮಾನ ವೈಪರೀತ್ಯದಿಂತ ನಿರೀಕ್ಷಿತ ಫಸಲು ಕೈಸೇರಿಲ್ಲ.

    ಕೊಲ್ಕತಾದಿಂದಲೇ ಕೃಷಿ ಕಾರ್ಮಿಕರನ್ನು ಕರೆತಂದಿರುವ ಅವರು ಊಟ, ವಸತಿ ಸೇರಿದಂತೆ ಕಾರ್ಮಿಕರ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. ಈ ಮೊದಲು ಮಧ್ಯಪ್ರದೇಶ, ಛತ್ತೀಸ್‌ಘಡ ಮೊದಲಾದ ಪ್ರದೇಶಗಳಿಂದ ಕಾರ್ಮಿಕರನ್ನು ಕರೆತರುತ್ತಿದ್ದರು. ಕೆಲವು ಸ್ಥಳೀಯ ಕಾರ್ಮಿಕರನ್ನೂ ಕೃಷಿ ಕಾರ್ಯಕ್ಕೆ ಬಳಸಿಕೊಳ್ಳುತ್ತಾರೆ. ಉಳುಮೆಗೆ 2 ಟ್ರ್ಯಾಕ್ಟರ್ ಬಳಸುತ್ತಿದ್ದು, ಕರಾವಳಿಯಲ್ಲಿ ತರಕಾರಿ ಕೃಷಿ ವಿರಳವಾಗಿರುವ ಪ್ರಸ್ತುತ ಸಮಯದಲ್ಲಿ 30 ಎಕರೆ ವಿಶಾಲ ಪ್ರದೇಶದಲ್ಲಿ ಕೃಷಿ ಮಾಡಿರುವುದು ಇಲ್ಲಿಯ ವಾತಾವರಣಕ್ಕೆ ಅಪೂರ್ವ.

    ಅಂಡಮಾನ್‌ನಲ್ಲಿ ಕೃಷಿ ಭೂಮಿ: ಈ ಮೊದಲು ಜಾಬೇದ್ ಅಲಿ ಅಂಡಮಾನ್‌ನಲ್ಲೂ ಕೃಷಿ ಭೂಮಿ ಪಡೆದು ತರಕಾರಿ ಬೆಳೆಸುತ್ತಿದ್ದರು. ಅಲ್ಲಿನ ಸರ್ಕಾರ ಜಾಬೇದ್ ಅಲಿ ಸಾಹಸ ಮೆಚ್ಚಿ ಭೂಮಿ ಒದಗಿಸಿತ್ತು. ಆದರೆ ಸ್ಥಳೀಯರಿಗೆ ಈ ಭೂಮಿ ದಾನ ಮಾಡುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಲಾಕ್‌ಡೌನ್‌ನಲ್ಲಿ ತರಕಾರಿ ಹಂಚಿಕೆ: ಕೋವಿಡ್ ಲಾಕ್‌ಡೌನ್‌ನಿಂದ ದೇಶವೇ ತತ್ತರಿಸಿತ್ತು. ತರಕಾರಿ, ಆಹಾರ ಪದಾರ್ಥ ಲಭ್ಯವಿಲ್ಲದೆ ಸಂಕಷ್ಟ ಉಂಟಾಗಿತ್ತು. ಈ ಸಂದರ್ಭ ಜಾಬೇದ್ ಅಲಿಯವರು ಸುಮಾರು 30 ಟನ್ ತರಕಾರಿ ಉಚಿತವಾಗಿ ಹಂಚಿದ್ದಾರೆ.

    ಕೃಷಿ ಕೂಲಿಯಾಳು, ಗೊಬ್ಬರ, ನಿರ್ವಹಣೆ ಸೇರಿದಂತೆ ತರಕಾರಿ ಶ್ರಮ ಬೇಡುವ ಬೆಳೆ. ಆದರೆ ಈ ಬಾರಿ ಹವಾಮಾನ ಏರಿಳಿತದಿಂದಾಗಿ ಸೋರೆಕಾಯಿ, ಹೀರೆ ಸೇರಿದಂತೆ ವಿವಿಧ ಬೆಳೆ ನೀರಿಕ್ಷಿತ ಮಟ್ಟದಲ್ಲಿಲ್ಲ. ಅಲ್ಲದೆ ಕೆಲ ಅಂಗಡಿಗಳಲ್ಲಿ ದೊರೆಯುವ ಗೊಬ್ಬರ ಸೇರಿದಂತೆ ವಿವಿಧ ಕೃಷಿ ಪರಿಕರಗಳು ಕಳಪೆಯಾಗಿರುವುದು ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
    -ಜಾಬೇದ್ ಅಲಿ, ತರಕಾರಿ ಕೃಷಿಕ, ಗುರುಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts