More

    ಸಿದ್ಧವಾಗದ ಸಮೀಕ್ಷೆ ವರದಿ, ಸಮಸ್ಯೆ ಪರಿಹಾರ ನಿರೀಕ್ಷೆಯಲ್ಲಿ ಬೆಳೆಗಾರರು

    – ಹರೀಶ್ ಮೋಟುಕಾನ ಮಂಗಳೂರು

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹಾಗೂ ಪುತ್ತೂರು ತಾಲೂಕಿನ 20 ಗ್ರಾಮಗಳಲ್ಲಿ ಅಡಕೆ ಹಳದಿ ಎಲೆ ರೋಗದ ಸಮೀಕ್ಷೆ ನಡೆದು ಏಳು ತಿಂಗಳಾದರೂ, ವರದಿ ಇನ್ನೂ ಪೂರ್ಣಗೊಂಡಿಲ್ಲ. ಅಡಕೆ ಧಾರಣೆ 360ರೂ.ತಲುಪಿರುವ ಈ ಕಾಲಘಟ್ಟದಲ್ಲಿ ರೋಗದಿಂದ ತೋಟ ಕಳೆದುಕೊಂಡ ಕೃಷಿಕರು ತಮ್ಮ ಆದಾಯದ ಮೂಲ ಕಳೆದುಕೊಂಡು ಕೊರಗುತ್ತಿದ್ದಾರೆ.

    ಅಡಕೆ ಕೃಷಿಕರು ಹಳದಿ ಎಲೆ ರೋಗದಿಂದ ಕಂಗಾಲಾಗಿ ಭವಿಷ್ಯ ಮಂಕಾಗಿ ತಲೆ ಮೇಲೆ ಕೈ ಹೊತ್ತು ಕುಳಿತು ಹಲವು ವರ್ಷಗಳಾದವು. ಈ ನಿಟ್ಟಿನಲ್ಲಿ ಸರ್ಕಾರ ಏನಾದರೂ ಮಾಡಬೇಕು. ಕೃಷಿಕರ ನೆರವಿಗೆ ನಿಲ್ಲಬೇಕು ಎಂದು ರೈತ ಸಂಘ ಮತ್ತು ಅಡಕೆ ಬೆಳೆಗಾರರು ಕಳೆದ ವರ್ಷ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದರು. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ಕೃಷಿಕರೊಂದಿಗೆ ಸಮಾಲೋಚನೆ ನಡೆಸಿದ್ದರು. ಬಳಿಕ ತೋಟಗಾರಿಕೆ, ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖಾಧಿಕಾರಿಗಳಿಂದ ಸರ್ವೇ ನಡೆದಿತ್ತು.

    ಅಡಕೆ ಹಳದಿ ಎಲೆ ರೋಗಕ್ಕೆ ಎಷ್ಟು ಪ್ರದೇಶ ತುತ್ತಾಗಿವೆ ಎನ್ನುವ ಸಮೀಕ್ಷೆ ನಡೆಸಿ ವರದಿಯನ್ನು ಮತ್ತು ಕೃಷಿಕರ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ. ಕೃಷಿಕರಿಗೆ ಪರ್ಯಾಯ ಬೆಳೆ ಬೆಳೆಯಲು ಸಹಕಾರ ನೀಡುವಂತೆ ಪ್ರಯತ್ನಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದರು.

    ಪ್ರಸ್ತುತ ಈ ಸಮೀಕ್ಷೆ ಮಾಹಿತಿ ದಕ್ಷಿಣ ಕನ್ನಡ ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕರ ಕಚೇರಿಯಲ್ಲಿದೆ. ತೋಟಗಾರಿಕಾ ಇಲಾಖೆ ಉಪನಿರ್ದೇಶಕರು ಸಮೀಕ್ಷಾ ವರದಿ ತಯಾರಿಸಿ, ಜಿಲ್ಲಾಧಿಕಾರಿಯವರ ಶಿಫಾರಸಿನೊಂದಿಗೆ ಸರ್ಕಾರಕ್ಕೆ ಸಲ್ಲಿಸಬೇಕು. ಸರ್ಕಾರ ಯಾವ ರೀತಿ ಅಡಕೆ ಬೆಳೆಗಾರರಿಗೆ ನೆರವು ನೀಡಲು ಸಾಧ್ಯ ಎನ್ನುವ ಬಗ್ಗೆ ಶಾಸಕರ ಸಲಹೆಯೂ ಅಗತ್ಯ. ಸಮೀಕ್ಷೆ ನಡೆದು ಏಳು ತಿಂಗಳು ಕಳೆದರೂ ವರದಿ ಸರ್ಕಾರಕ್ಕೆ ತಲುಪದೆ ಇರುವುದರಿಂದ ಕೃಷಿಕರು ಫಲಿತಾಂಶಕ್ಕೆ ಕಾಯುವಂತಾಗಿದೆ.

    1,200 ಹೆಕ್ಟೇರ್ ತೋಟ ನಾಶ: ಕಳೆದ ವರ್ಷ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಸಂಪಾಜೆ, ಅರಂತೋಡು, ತೊಡಿಕಾನ, ಮರ್ಕಂಜ, ಉಬರಡ್ಕ, ಆಲೆಟ್ಟಿ, ಕಲ್ಮಕಾರು, ಕೊಲ್ಲಮೊಗರು, ಮಡಪ್ಪಾಡಿ, ನೆಲ್ಲೂರು ಕೆಮ್ರಾಜೆ, ಹರಿಹರ ಪಲ್ಲತ್ತಡ್ಕ, ಕೊಡಿಯಾಲ, ಅಮರ ಪಡ್ನೂರು, ಪುತ್ತೂರು ತಾಲೂಕಿನ ನೆಲ್ಯಾಡಿ, ಕಾಣಿಯೂರು ಗ್ರಾಮಗಳ ಸುಮಾರು 10 ಸಾವಿರ ಕೃಷಿಕರನ್ನು ಸಂಪರ್ಕಿಸಿ ಸಮೀಕ್ಷೆ ನಡೆಸಲಾಗಿತ್ತು. 1200 ಹೆಕ್ಟೇರ್ ಅಡಕೆ ತೋಟ ಹಳದಿ ಎಲೆ ರೋಗದಿಂದ ನಾಶವಾಗಿರುವುದು ಗೊತ್ತಾಗಿದೆ.

    ಅಡಕೆ ಎಲೆ ಹಳದಿ ರೋಗ ಪೀಡಿತ ಪ್ರದೇಶಗಳಲ್ಲಿ ಪರ್ಯಾಯ ಬೆಳೆ ಬೆಳೆಯುವ ಮತ್ತು ಅದಕ್ಕೆ ಸರ್ಕಾರದ ನೆರವಿನ ಬಗ್ಗೆ ವಿಚಾರ ಸಂಕಿರಣ ಮತ್ತು ಅಹವಾಲು ಸ್ವೀಕಾರ ಮಾಡಿ ಸಮೀಕ್ಷೆ ನಡೆಸಲಾಗಿದೆ. ತೋಟಗಾರಿಕಾ ಇಲಾಖೆ ಉಪನಿರ್ದೇಶಕರು ಅದರ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸುವರು. ಅವರು ಪರಿಶೀಲಿಸಿ ಸರ್ಕಾರಕ್ಕೆ ಕಳುಹಿಸಿ ಕೊಡಲಿದ್ದಾರೆ.
    – ಡಾ.ಸೆಲ್ವಮಣಿ ಆರ್, ಸಿಇಒ, ಜಿಪಂ ದ.ಕ.

    ಅಡಕೆ ಎಲೆ ಹಳದಿ ರೋಗದ ಸಮೀಕ್ಷೆ ಪೂರ್ಣಗೊಂಡಿದೆ. ಇನ್ನು ವಿಶ್ಲೇಷಣೆ ಮಾಡಿ ವರದಿ ತಯಾರಿಸಬೇಕಾಗಿದೆ. ಪ್ರಸ್ತುತ ಈ ಪ್ರಕ್ರಿಯೆ ನಡೆಯುತ್ತಿದೆ. ಕರೊನಾದಿಂದಾಗಿ ಒಂದಷ್ಟು ವಿಳಂಬವಾಗಿದೆ. ಶೀಘ್ರದಲ್ಲೇ ವರದಿ ತಯಾರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು. ಅವರು ಪರಿಶೀಲಿಸಿ ಸರ್ಕಾರಕ್ಕೆ ತಲುಪಿಸುವರು.
    – ಎಚ್.ಆರ್.ನಾಯ್ಕ, ಉಪನಿರ್ದೇಶಕರು, ತೋಟಗಾರಿಕಾ ಇಲಾಖೆ, ದ.ಕ.

    ಸಮೀಕ್ಷೆ ನಡೆದು ವರ್ಷವಾಗುತ್ತ ಬಂದರೂ ವರದಿ ತಯಾರಿಸಲು ಸಾಧ್ಯವಾಗದೆ ಇರುವುದು ರೈತರ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಇರುವ ಕಾಳಜಿಯನ್ನು ತೋರ್ಪಡಿಸುತ್ತದೆ. ಆದಷ್ಟು ಶೀಘ್ರವಾಗಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಸರ್ಕಾರ ಪರ್ಯಾಯ ಬೆಳೆಗೆ ಅವಕಾಶ ಕಲ್ಪಿಸಬೇಕು. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಬೇಕು.
    – ರವಿಕಿರಣ ಪುಣಚ, ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts