More

    ಇತಿಹಾಸ ಸಂಶೋಧನೆಗೆ ಕಾಯುತ್ತಿದೆ ಚಿಕ್ಕಾತ್ತೂರು

    ಇತಿಹಾಸ ಸಂಶೋಧನೆಗೆ ಕಾಯುತ್ತಿದೆ ಚಿಕ್ಕಾತ್ತೂರು

    ತರೀಕೆರೆ: ತಾಲೂಕಿನ ಚಿಕ್ಕಾತ್ತೂರು ಗ್ರಾಮದ ಕೃಷಿ ಭೂಮಿಯಲ್ಲಿ ಜೈನ ಪರಂಪರೆಯ 24ನೇ ಪಾರ್ಶ್ವನಾಥನದ್ದು ಎಂದು ಹೇಳಲಾಗುತ್ತಿರುವ ವಿಗ್ರಹ ಪತ್ತೆಯಾಗಿದ್ದರೂ ಇಲ್ಲಿಯವರೆಗೆ ಆ ಪ್ರದೇಶದಲ್ಲಿ ಸಂಶೋಧನೆ ನಡೆಸದಿರುವುದರಿಂದ ವಿಗ್ರಹ, ಸುತ್ತಮುತ್ತ ಇರುವ ದೇವಸ್ಥಾನಗಳ ಇತಿಹಾಸ ಸಮಗ್ರವಾಗಿ ತಿಳಿಯದಂತಾಗಿದೆ.

    ತಾಲೂಕಿನಲ್ಲಿ ಜೈನರು ಆಳ್ವಿಕೆ ನಡೆಸಿರುವುದಕ್ಕೆ ಗೌರಾಪುರದ ಬಸದಿ ಸೇರಿ ಅನೇಕ ಕಡೆ ಪುರಾವೆಗಳು ಸಿಕ್ಕಿವೆ. ಸದ್ಯ ಚಿಕ್ಕಾತ್ತೂರಿನ ಕೃಷಿ ಭೂಮಿಯಲ್ಲಿರುವ ಜೈನ ವಿಗ್ರಹದ ಕುರಿತು ಅಧ್ಯಯನ ನಡೆಯಬೇಕಿದೆ. ಆದರೆ ಅಲ್ಲಿ ಈಶ್ವರನ ದೇವಾಲಯಗಳಿದ್ದು, ಅವುಗಳ ಬಗ್ಗೆಯೂ ಸಂಶೋಧನೆ ನಡೆಯಬೇಕಿದೆ.

    ಜೈನ ಪರಂಪರೆ ಬಿಂಬಿಸುವ ವಿಗ್ರಹ ದೊರೆತಿರುವುದು ಮಾತ್ರವಲ್ಲದೆ, ಅನತಿ ದೂರದ ಪೊದೆಯೊಂದರಲ್ಲಿ ಚದುರಿ ಬಿದ್ದಿರುವ ಬಸವನ ವಿಗ್ರಹ, ಅಳಿಸಿಹೋಗಿರುವ ಶಿಲಾಶಾಸನಗಳು, ವಿವಿಧ ದೇವರ ಆಲಯಗಳು ಗೊಂದಲಕ್ಕೀಡುಮಾಡಿವೆ. ಚಿಕ್ಕಾತ್ತೂರು ಗ್ರಾಮ ಜೈನರ ಆಳ್ವಿಕೆಗೆ ಒಳಪಟ್ಟಿತ್ತೇ ಅಥವಾ ಹಿಂದು ರಾಜವಂಶಸ್ಥರ ಅಧೀನದಲ್ಲಿತ್ತೇ ಎಂಬ ಅನುಮಾನ ಸಹಜವಾಗಿ ಮೂಡುತ್ತದೆ.

    ಈ ಹಿಂದೆ ಚಿಕ್ಕಾತ್ತೂರು, ಅಕ್ಕಪಕ್ಕಗಳ ಗ್ರಾಮದ ರೈತರು ಈಶ್ವರನ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿ ಉಳುಮೆ ಮಾಡುತ್ತಿದ್ದಾಗ ಸಾಕಷ್ಟು ಪ್ರಾಚೀನ ಕಾಲದ ನಾಣ್ಯಗಳು ಸಿಕ್ಕಿವೆ. ಗ್ರಾಮದ ಹತ್ತಾರು ಕಡೆ ಬೃಹತ್ ಗಾತ್ರದ ಹೊಳಕಲ್ಲು ಮತ್ತಿತರ ಅವಶೇಷಗಳು ಸಿಕ್ಕಿರುವುದು 12ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ್ದ ಗಂಗರ ಒಡೆತನಕ್ಕೆ ಚಿಕ್ಕಾತ್ತೂರು ಗ್ರಾಮ ಸೇರಿತ್ತೇ ಎಂಬ ಕುತೂಹಲ ಹೆಚ್ಚಿಸಿದೆ.

    ಪುರಾತತ್ವ ಇಲಾಖೆ ಉತ್ಖನನ ನಡೆಸಿ ಲಭ್ಯವಿರುವ ಅವಶೇಷ ಮತ್ತು ಕುರುಹುಗಳನ್ನು ಸಂಗ್ರಹಿಸಿ ಸಂಶೋಧನೆ ನಡೆಸಿದರೆ ಇತಿಹಾಸ ಸ್ಪಷ್ಟವಾಗಲಿದೆ ಎನ್ನುತ್ತಾರೆ ಗ್ರಾಮಸ್ಥ ಟಿ.ಆರ್.ಮಂಜುನಾಥ ಹಾಲ್ಕಂಬಿ.

    ಭೂಮಿ ಕೈಬಿಡುತ್ತದೆಂಬ ಆತಂಕದಿಂದ ಬಾಯ್ಬಿಟ್ಟಿಲ್ಲ: ಜೈನ ಪರಂಪರೆಯ 24ನೇ ಪಾರ್ಶ್ವನಾಥನ ವಿಗ್ರಹವೆಂದು ಅಂದಾಜಿಸಲಾಗುತ್ತಿರುವ 5 ಅಡಿ ಎತ್ತರದ ಭಗ್ನ ಮೂರ್ತಿ ಕೃಷಿ ಭೂಮಿಯಲ್ಲಿ ಅರ್ಧದಷ್ಟು ಹುದುಗಿಕೊಂಡಿದೆ. ಭಗ್ನ ಮೂರ್ತಿ 55 ವರ್ಷಗಳಿಂದ ಇದೇ ಸ್ಥಿತಿಯಲ್ಲಿದ್ದರೂ ಯಾರೂ ಸಂಶೋಧನೆಗೊಳಪಡಿಸುವ ಗೋಜಿಗೆ ಹೋಗಿಲ್ಲ. ಪುರಾತನ ಕಾಲದ ವಿಗ್ರಹ ಜಮೀನಿನಲ್ಲಿದೆ ಎಂಬ ಮಾಹಿತಿ ಸಂಬಂಧಪಟ್ಟ ಇಲಾಖೆಗೆ ಗೊತ್ತಾದರೆ ಭೂಮಿ ಕೈಬಿಟ್ಟು ಹೋಗುವುದೋ ಏನೋ ಎಂಬ ಭಯದಿಂದ ಭೂ ಮಾಲೀಕರು ಅದರ ಸುಳಿವು ಬಿಟ್ಟುಕೊಡದೆ ಸುಮ್ಮನಿದ್ದಾರೆ.

    ವಿಗ್ರಹದ ಸುತ್ತಮುತ್ತ ಹಲವು ಕುರುಹು: ಕೃಷಿ ಭೂಮಿಯೊಂದರಲ್ಲಿ ಪತ್ತೆಯಾಗಿರುವ ಪಾರ್ಶ್ವನಾಥನ ವಿಗ್ರಹದ ಎದುರು ದಟ್ಟವಾಗಿ ಬೆಳೆದ ಪೊದೆಯಿದೆ. ಅಲ್ಲಿ ಬಸವನ ಭಗ್ನ ಮೂರ್ತಿ, ಅವಶೇಷಗಳು ಕಾಣಸಿಗುತ್ತವೆ. ನಿಗೂಢ ಪ್ರದೇಶವೆಂದೇ ಭಾವಿಸಲಾಗುತ್ತಿರುವ ಪೊದೆ ಕಡೆ ಈವರೆಗೆ ಯಾರೂ ದೃಷ್ಟಿ ಹಾಯಿಸಿಲ್ಲ. ಪೊದೆಯಿಂದ 100 ಮೀಟರ್ ಅಂತರದಲ್ಲಿರುವ ಕೃಷಿ ಭೂಮಿಯಲ್ಲಿ ಪಾನು ಬಟ್ಟಲ ಶಿವಲಿಂಗ ಪ್ರತ್ಯಕ್ಷವಾಗಿದ್ದು, ಶಿವಲಿಂಗದ ಎದುರಿಗೆ ಈಶ್ವರನ ದೇಗುಲವಿದೆ.

    ದೇಗುಲಗಳ ಸಮುಚ್ಚಯ: ಜಮೀನಿನಲ್ಲಿ ಪತ್ತೆಯಾಗಿರುವ ಜೈನ ವಿಗ್ರಹದಿಂದ ಪ್ರತಿ 100 ಮೀಟರ್ ಅಂತರದಲ್ಲಿ ಈಶ್ವರ, ಆಂಜನೇಯ, ಚನ್ನಕೇಶವ ಹಾಗೂ ವೀರಭದ್ರೇಶ್ವರ ಸ್ವಾಮಿಯ ದೇಗುಲಗಳಿವೆ. ಎಲ್ಲ ದೇಗುಲಗಳೂ 10 ಅಡಿ ಎತ್ತರದಲ್ಲಿ ಸಮಾನಾಂತರವಾಗಿ ನಿರ್ವಣಗೊಂಡಿರುವುದು ವಿಶೇಷ.

    ಚಿಕ್ಕಾತ್ತೂರು ಗ್ರಾಮದ ಜಮೀನಲ್ಲಿ 24ನೇ ಪಾರ್ಶ್ವನಾಥರ ವಿಗ್ರಹ ಬಹು ವರ್ಷಗಳ ಹಿಂದೆಯೇ ಪತ್ತೆಯಾಗಿದ್ದು, ಅದನ್ನು ಸಂರಕ್ಷಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಇಚ್ಛಾಶಕ್ತಿ ಯಾರಲ್ಲೂ ಇಲ್ಲದಂತಾಗಿರುವುದು ದುರ್ದೈವ. ಪುರಾತತ್ವ ಇಲಾಖೆ ತಕ್ಷಣವೇ ವಿಗ್ರಹವನ್ನು ಸಂರಕ್ಷಿಸಿ ಸಂಶೋಧನೆಗೆ ಒಳಪಡಿಸಬೇಕು ಎನ್ನುತ್ತಾರೆ ತಾಲೂಕು ಕಸಾಪ ನಿಕಟಪೂರ್ವ ಕಾರ್ಯದರ್ಶಿ ನವೀನ್ ಪೆನ್ನಯ್ಯ.

    ಪತ್ತೆಯಾಗಿರುವ ವಿಗ್ರಹವನ್ನು ಮೊದಲು ಸಂರಕ್ಷಿಸಿ ಸಂಶೋಧನೆ ನಡೆಸಬೇಕಾದ ಕರ್ತವ್ಯ ಜಿಲ್ಲಾಧಿಕಾರಿ ಹಾಗೂ ರಾಜ್ಯ ಪುರಾತತ್ವ ಇಲಾಖೆಗಳದ್ದಾಗಿದೆ. ಒಂದು ವೇಳೆ ಅವರಿಂದಲೂ ಸಾಧ್ಯವಾಗದೆ ಡಿಸಿ ಪತ್ರ ಬರೆದಾಗ ಮುಂದಿನ ಹಂತದಲ್ಲಿ ಭಾರತೀಯ ಪುರಾತತ್ವ ಇಲಾಖೆ ನಿಗಾವಹಿಸಿ ಸಂಶೋಧನೆ ನಡೆಸಲಿದೆ ಎನ್ನುತ್ತಾರೆ ಪುರಾತತ್ವ ಇಲಾಖೆ ಸಂರಕ್ಷಣಾ ಸಹಾಯಕ ಗೌತಮ್ ಕೃಷ್ಣಮೂರ್ತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts