More

    ನದಿ ಒಡಲು ಸೇರುತ್ತಿದೆ ಕೃಷಿ ಭೂಮಿ

    ಬಂಡೀಮಠ ಶಿವರಾಮ ಆಚಾರ್ಯ
    ಪಶ್ಚಿಮ ಘಟ್ಟದಿಂದ ಹರಿದು ಬರುವ ಸೀತಾನದಿ ಅನೇಕ ತಿರುವುಗಳನ್ನು ಕಂಡು ಬಾರಕೂರು ಬಳಿ ನೀಲಾವರದ ಬಾವಲಿ ಕುದ್ರು, ಕೂರಾಡಿ, ಬಂಡೀಮಠ, ಹನೆಹಳ್ಳಿ ತನಕ ನದಿಯ ಉತ್ತರ ಭಾಗ ಕೊಚ್ಚಿ ಹೋಗಿ ನೂರಾರು ಎಕರೆ ಕೃಷಿ ಭೂಮಿ ನದಿಯ ಒಡಲು ಸೇರಿ ರೈತರು ಆತಂಕದಲ್ಲಿದಾರೆ. ನದಿ ತೀರದಲ್ಲಿ ಇದ್ದ ಹಲವಾರು ಭೂಪ್ರದೇಶ ಈ ಹಿಂದೆ ದನಗಳು ಮೇಯುತ್ತಿದ್ದ ಜಾಗಗಳು ಈಗ ನದಿ ಪಾಲಾಗಿವೆ. ನದಿ ತಟದಲ್ಲಿ ಜನ ಜಾನುವಾರು ನೀರು ಕುಡಿಯುತ್ತಿದ್ದ ಸ್ಥಳ ಈಗ ಪ್ರಪಾತವಾಗಿದೆ. ನದಿಗೆ ಮಾಡಲಾದ ನೀಲಾವರ ಸೇತುವೆ ಮತ್ತು ಉಪ್ಪು ನೀರು ತಡೆಗೆ ಕಿಂಡಿ ಅಣೆಕಟ್ಟುಗಳಿಗೆ ಮಣ್ಣು ತುಂಬಿಸಿದ್ದು ಬಳಿಕ ಮಣ್ಣು ತೆಗೆಯದ ಕಾರಣ ಮಳೆಗಾಲದಲ್ಲಿ ಬರುವ ಪ್ರವಾಹದ ರಭಸಕ್ಕೆ ನದಿ ದಂಡೆ ಕೊಚ್ಚಿ ಹೋಗಲು ಕಾರಣವಾಗಿದೆ. ನದಿ ದಂಡೆ ಸವೆತಕ್ಕೆ ಕೃಷಿಕರು ಬೆಳೆಸಿದ ಮರಗಳು ಪ್ರವಾಹಕ್ಕೆ ಕೊಚ್ಚಿ ಹೋಗಿ ಮರದ ಬೇರುಗಳು ಬಲ ಕಳೆದುಕೊಂಡ ಅವಶೇಷ ಕಾಣುತ್ತವೆ. ಜಲಾನಯನ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆ ಸಮಸ್ಯೆ ಪರಿಹರಿಸುವ ಜತೆಗೆ ಜಲ ಮೂಲಗಳ ರಕ್ಷಣೆ ಮಾಡುವ ಕೆಲಸದ ಬಗ್ಗೆಯೂ ಗಮನಿಸಬೇಕು. ಸಣ್ಣ ನೀರಾವರಿ ಇಲಾಖೆ ನದಿ ದಂಡೆ ಸವೆತ ತಡೆಯಲು ಸೂಕ್ತ ವ್ಯವಸ್ಥೆ ಮಾಡಿ ಅನ್ನದಾತನಿಗೆ ಸಹಕಾರ ನೀಡಬೇಕು.

    ತರಕಾರಿ ಬೆಳೆ ನಾಶ ಭೀತಿ: ಈ ಹಿಂದೆ ನದಿ ದಂಡೆಯಲ್ಲಿ ಬೆಳೆಯುತ್ತಿದ್ದ ತರಕಾರಿ ಬೆಳೆಗಳು, ಬೆಂಡೆ, ಅಲಸಂಡೆ, ಬದನೆ ಮಾಡುತ್ತಿದ್ದ ಜಾಗವೆಲ್ಲ ನದಿ ಪಾಲಾಗಿದೆ. ಈಗ ಭತ್ತ ಬೆಳೆಯುವ ಕೃಷಿ ಜಾಗಕ್ಕೆ ಕೂಡ ತತ್ವಾರ ಬಂದು ರೈತರು ಚಿಂತಾಕ್ರಾಂತರಾಗಿದ್ದಾರೆ. ಇಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿದ ಬಳಿಕ ಸೀತಾನದಿಯಲ್ಲಿ ಸಿಹಿನೀರು ಶೇಖರಣೆಯಾಗಿ ಕೃಷಿಕರು 2ನೇ ಬೆಳೆಯಾಗಿ ಭತ್ತ, ತರಕಾರಿ ಬೆಳೆಯುತ್ತಿದ್ದು ಈಗ ನದಿ ದಂಡೆಯ ಕೊರೆತದಿಂದ ರೈತರು ಭಯಬೀತರಾಗಿದ್ದಾರೆ.

    ನೀಲಾವರ ದೇವಸ್ಥಾನದ ಉತ್ತರ ಭಾಗ ಸೀತಾ ನದಿ ದಂಡೆ ಕಿಂಡಿ ಅಣೆಕಟ್ಟಿನ ತನಕ ನದಿಯ ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗಿ ಇನ್ನುಳಿದ ಕೃಷಿ ಭೂಮಿಗೆ ಆತಂಕ ಕಾದಿದೆ. ಅತಿ ಶೀಘ್ರದಲ್ಲಿ ಭೂ ಸವೆತ ಆಗದಂತೆ ಇಲಾಖೆ ಸ್ಪಂದಿಸಬೇಕಾಗಿದೆ.
    ಲಕ್ಷ್ಮಣ ನಾಯ್ಕ, ಕೃಷಿಕರು ಬಂಡೀಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts