More

    ಕೃಷಿ ಮೇಳದಲ್ಲಿ ಕಣ್ಸೆಳೆಯಲಿದೆ ಕರುಗಳ ಪ್ರದರ್ಶನ: ರೈತರಿಗೆ ಸಿಗಲಿದೆ ಹೈನುಗಾರಿಕೆಯ ಸಮಗ್ರ ಮಾಹಿತಿ

    ಮೈಸೂರು: ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಹಾಗೂ ದಿಗ್ವಿಜಯ 24ಗಿ7 ನ್ಯೂಸ್ ಚಾನಲ್ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಫೆ.21 ರಿಂದ 23ರವರೆಗೆ ನಡೆಯಲಿರುವ ‘ಕೃಷಿ ಮೇಳ’ದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಯೋಗದೊಂದಿಗೆ ‘ಕರುಗಳ ಪ್ರದರ್ಶನ’ ಹಮ್ಮಿಕೊಳ್ಳಲಾಗಿದ್ದು, ಇದು ಕೃಷಿ ಮೇಳದ ಪ್ರಮುಖ ಆಕರ್ಷಣೆಯಾಗಲಿದೆ. ಕೃಷಿ ಮೇಳದ ಮೊದಲನೇ ದಿನವಾದ ಫೆ.21 ರಂದು ಕರುಗಳ ಪ್ರದರ್ಶನ ಇರಲಿದ್ದು, ಪ್ರದರ್ಶನಕ್ಕೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಚಿವ ಪ್ರಭು ಚವ್ಹಾಣ್ ಚಾಲನೆ ನೀಡಲಿದ್ದಾರೆ.

    ಹೈನುಗಾರಿಕೆಗೆ ಮತ್ತಷ್ಟು ಉತ್ತೇಜನ ನೀಡಲು ಹಾಗೂ ರೈತರಿಗೆ ಅಗತ್ಯ ಮಾರ್ಗದರ್ಶನ ನೀಡುವ ಸಲುವಾಗಿ ಕೃಷಿ ಮೇಳದಲ್ಲಿ ಕರುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಮೇಳದಲ್ಲಿ ಜರ್ಸಿ, ಎಚ್​ಎಫ್, ನಾಟಿ ತಳಿಯ ಕರುಗಳನ್ನು ಪ್ರದರ್ಶಿಸಲಾಗುವುದು. ಪ್ರತಿ ವಿಭಾಗದಲ್ಲಿ ತಲಾ ಮೂರು ಬಹುಮಾನಗಳಿದ್ದು, ಅತ್ಯುತ್ತಮ ಕರುಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು. ಇದೇ ವೇಳೆ ಪ್ರದರ್ಶನಕ್ಕೆ ಆಗಮಿಸುವ ರೈತರಿಗೆ ಹೈನುಗಾರಿಕೆಗೆ ಸಂಬಂಧಿಸಿದ ಮಾಹಿತಿ ನೀಡಲಾಗುತ್ತದೆ.

    ತಳಿಗಳ ವಿಶೇಷತೆ: ರೈತರು ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಎಚ್​ಎಫ್, ಜರ್ಸಿ ತಳಿಗಳನ್ನು ಸಾಕುತ್ತಿದ್ದಾರೆ. ಈ ಎರಡು ತಳಿಗಳಿಗೆ ಹೋಲಿಸಿದರೆ ನಾಟಿ ತಳಿಯ ಹಸುಗಳು ಹೆಚ್ಚು ಹಾಲು ನೀಡುವುದಿಲ್ಲ. ಆದರೆ, ಈ ಹಸುಗಳ ಹಾಲಿನಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿ ಇರುತ್ತದೆ. ಅಲ್ಲದೆ, ನಾಟಿ ತಳಿಯ ಹಸುವಿನ ಸಗಣಿ, ಗಂಜಲಕ್ಕೂ ಇತ್ತೀಚೆಗೆ ಹೆಚ್ಚಿನ ಬೇಡಿಕೆ ಪ್ರಾರಂಭವಾಗಿದೆ.

    ಎಚ್​ಎಫ್ ತಳಿಯ ಹಸು (ಕಪ್ಪು, ಬಿಳಿ ಪಟ್ಟೆ ಹೊಂದಿರುವ ಮೈಬಣ್ಣ) ಹೆಚ್ಚು ಹಾಲು ನೀಡುತ್ತದೆ. ಆದರೆ, ಈ ತಳಿಯಲ್ಲಿ ಫ್ಯಾಟ್, ಎಸ್​ಎನ್​ಎಸ್ ಹಾಗೂ ರೋಗ ನಿರೋಧಕ ಅಂಶ ಕಡಿಮೆ ಇರುತ್ತದೆ. ಜರ್ಸಿ ತಳಿ (ಕೆಂಪು ಮೈಬಣ್ಣ)ಯಲ್ಲಿ ಫ್ಯಾಟ್ ಹಾಗೂ ಎಸ್​ಎನ್ ಎಸ್ ಅಂಶ ಹೆಚ್ಚಾಗಿದ್ದು ಹಾಲು ಉತ್ಪಾದನೆ ಕಡಿಮೆ, ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ.

    ಹೈನುಗಾರಿಕೆ ನಂಬಿ ಬದುಕು: ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಹೈನುಗಾರಿಕೆ ನಂಬಿ ಬದುಕು ನಡೆಸುತ್ತಿದ್ದು, ಹೈನುಗಾರಿಕೆ ರೈತರ ಆರ್ಥಿಕ ಚಿತ್ರಣವನ್ನೇ ಬದಲಾಯಿಸುತ್ತಿದೆ. ಆರ್ಥಿಕ ಸಂಕಷ್ಟಗಳಿಂದ ಕುಟುಂಬಗಳನ್ನು ರಕ್ಷಿಸುವಲ್ಲಿ ಹೈನು ಗಾರಿಕೆ ಪ್ರಮುಖ ಪಾತ್ರ ವಹಿಸುತ್ತಿದೆ. ಇತ್ತೀಚೆಗೆ ನಗರ ಪ್ರದೇಶಗಳಲ್ಲೂ ಸಾಕಷ್ಟು ಜನ ಹೈನುಗಾರಿಕೆಯತ್ತ ಮುಖ ಮಾಡಿದ್ದಾರೆ. ಮನೆಯ ಮುಂದೆ ಇರುವ ಅಲ್ಪಸ್ವಲ್ಪ ಜಾಗ ದಲ್ಲಿಯೇ ಹಸುಗಳನ್ನು ಸಾಕಿ ಅದರಿಂದ ಉತ್ತಮ ಬದುಕು ರೂಪಿಸಿಕೊಳ್ಳುತ್ತಿದ್ದಾರೆ. ಹಸುಗಳ ಸಾಕಣೆಯಿಂದ ಉತ್ತಮ ಬದುಕು ರೂಪಿಸಿಕೊಳ್ಳಲು ಅವಕಾಶಗಳಿದ್ದು, ಕೃಷಿ ಮೇಳದ ಮೂಲಕ ರಾಜ್ಯದ ರೈತಾಪಿ ವರ್ಗದವರು, ಯುವ ಸಮುದಾಯ ಹೈನುಗಾರಿಕೆಯ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಖ ಮಾಡಲಿ ಎಂಬುದು ‘ವಿಜಯವಾಣಿ’ಯ ಆಶಯವಾಗಿದೆ.

    ರಾಜ್ಯ ಮುಂಚೂಣಿ: ಹಾಲು ಉತ್ಪಾದನೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ರಾಜ್ಯದ 22 ಸಾವಿರ ಹಳ್ಳಿಗಳಲ್ಲಿ 24.82 ಲಕ್ಷ ಹಾಲು ಉತ್ಪಾದಕರಿದ್ದು, 14 ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ನಿತ್ಯ 84 ಲಕ್ಷ ಕೆ.ಜಿ. ಹಾಲು ಉತ್ಪಾದನೆಯಾಗುತ್ತಿದೆ. ಪ್ರತಿನಿತ್ಯ ರೈತರಿಗೆ ಕೆಎಂಎಫ್ ಮೂಲಕ ಪಾವತಿಯಾಗುತ್ತಿರುವ ಮೊತ್ತ 17 ಕೋಟಿ ರೂ. ಈ ಅಂಕಿ ಅಂಶಗಳು ರೈತರು ಎಷ್ಟರ ಮಟ್ಟಿಗೆ ಹೈನುಗಾರಿಕೆಯಿಂದ ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.

    ಕೃಷಿ ಮೇಳದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಫೆ.21 ರಂದು ಕರುಗಳ ಪ್ರದರ್ಶನ ಹಮ್ಮಿಕೊಂಡಿದೆ. ಜರ್ಸಿ, ಎಚ್​ಎಫ್ ಮತ್ತು ನಾಟಿ ತಳಿ ವಿಭಾಗದಲ್ಲಿ ಕರುಗಳ ಸ್ಪರ್ಧೆ ನಡೆಯಲಿದ್ದು, ಉತ್ತಮ ತಳಿಗಳಿಗೆ ಬಹುಮಾನ ನೀಡಲಾಗುವುದು. ಕರುಗಳ ಪ್ರದರ್ಶನ ವೀಕ್ಷಣೆಗೆ ಆಗಮಿಸುವ ರೈತರಿಗೆ ಹೈನುಗಾರಿಕೆಗೆ ಸಂಬಂಧಿಸಿದ ಮಾಹಿತಿ ನೀಡಲಾಗುವುದು.

    | ಅಜಿತ್​ಕುಮಾರ್ ಉಪ ನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts